ಅಂಕುಡೊಂಕು ದಾರಿಯಲ್ಲಿ ಸಾಗಿದ ಮನಸ್ಸು.....
ಅದೊಂದು ದಾರಿ… ಹೋದಷ್ಟು ತಿರುವು ಮುರುವು ಪಡೆದುಕೊಳ್ಳುತ್ತಾ, ಮೌನವಾಗಿ ಸಾಗುತ್ತಿತ್ತು . ಟಾರ್ ರಸ್ತೆ ಬಿಟ್ಟು ಕಾಂಕ್ರೀಟ್ ಹಾಕಿದ್ದ ಆ ದಾರಿಯ ಮೇಲೆ ಮನುಜ ಮಾತ್ರ ನಡೆದು ಹೋಗುತ್ತಿದ್ದ. ರಸ್ತೆ ಹಾಳಾಗಬಾರದೆಂದು ಹಾಕಿದ ಕಾಂಕ್ರೀಟ್, ..
ದಾರಿಯ ಅಂಚಿನಲ್ಲಿ ನಿಂತಿದ್ದ ದೊಡ್ಡ ಮರವೊಂದು, ಅದೆಷ್ಟೋ ಹುಳುಹುಪ್ಪಟೆಗಳಿಗೆ ಆಶ್ರಯವಾಗಿತ್ತು. ಹಕ್ಕಿಗಳು ಅದರ ಕೊಂಬೆಗಳ ಮಧ್ಯೆ ಗೂಡು ಕಟ್ಟಿಕೊಂಡಿದ್ದವು.ಚಿಲಿಪಿಲಿ ಗುಟ್ಟುತ್ತ ಅತ್ತಿಂದತ್ತ ಹಾರಾಡುತ್ತ ಕುಪ್ಪಳಿಸುತಿದ್ದವು. ಬಿಸಿಲಲ್ಲಿ ದಣಿದ ಹಸುಎಮ್ಮೆಗಳು ಅದರ ನೆರಳಲ್ಲಿ ನಿಂತು ತುಸು ವಿಶ್ರಾಂತಿ ಪಡೆಯುತ್ತಿದ್ದವು. ಆ ಮರ ಯಾರನ್ನೂ ಪ್ರಶ್ನಿಸಲಿಲ್ಲ;
ಯಾರ ಬದುಕೂ ಅದು ತೀರ್ಮಾನಿಸಲಿಲ್ಲ. ತನ್ನ ನೆರಳನ್ನು ಎಲ್ಲರಿಗೂ ಸಮವಾಗಿ ಹಂಚುತ್ತಿತ್ತು. ಎಲ್ಲಿಯು ವಂಚನೆ ಮಾಡಿಲ್ಲ.
ಆ ದಾರಿಯಲ್ಲಿ ಇಬ್ಬರು ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದರು. ಒಬ್ಬಳು ಯುವತಿ, ಇನ್ನೊಬ್ಬಳು ಮದುವೆಯಾದ ಮಹಿಳೆ. ಅವರ ಹೆಜ್ಜೆಗಳು ಒಂದೇ ದಾರಿಯಲ್ಲಿ ಇದ್ದರೂ, ಅವರ ಮನಸ್ಸುಗಳು ಎರಡು ವಿಭಿನ್ನ ಲೋಕಗಳಲ್ಲಿ ತೇಲುತ್ತಿದ್ದವು. ಕಾಲ್ಪನಿಕ ವಾಗಿಯು ಕಾಡಿತು .
ಮದುವೆಯಾದ ಮಹಿಳೆಯ ಮುಖದಲ್ಲಿ ದಣಿವಿತ್ತು. ಕಣ್ಣಲ್ಲಿ ನಿದ್ರೆಯ ಕೊರತೆ, ಮನಸ್ಸಿನಲ್ಲಿ ನೊಂದ ನೋವು. ಆಕೆಯ ಮಾತುಗಳು ಯುವತಿಗೆ ತಲುಪುತ್ತಿದ್ದವು “ಈ ಜೀವನವೇ ಬೇಡ ಅಂತೆನಿಸುತ್ತೆ. ಸದಾ ಖುಷಿಯೇ ಇಲ್ಲ. ಮದುವೆ ಜೀವನ ಅಂದ್ರೆ ಮರದ ಕೊರಡಿನ ಮೇಲೆ ನಡೆಯುವಂತಿದೆ. ಸ್ವಾತಂತ್ರ್ಯವಿಲ್ಲ, ಉಸಿರಾಡೋಕೆ ಜಾಗವಿಲ್ಲ. ಹೆಂಡತಿಯಾದ್ಮೇಲೆ ನಾನು ನಾನು ಆಗಿರೋಕೆ ಅವಕಾಶವೇ ಇಲ್ಲ.”
ಅವಳ ಮಾತುಗಳಲ್ಲಿ ಗಂಡನ ಮೇಲೆ ಕೋಪಕ್ಕಿಂತಲೂ, ಬದುಕಿನ ಮೇಲೆ ಹತಾಶೆಯೇ ಹೆಚ್ಚು ಕಾಣಿಸುತ್ತಿತ್ತು. ಆಕೆ ನೆನಪಿಸಿಕೊಳ್ಳುತ್ತಿದ್ದಳು ತಾನೂ ಒಮ್ಮೆ ಕನಸುಗಳಿದ್ದ ಹುಡುಗಿಯಾಗಿದ್ದೆ, ನಗುತ್ತಿದ್ದೆ, ಇಷ್ಟದಂತೆ ಮಾತನಾಡುತ್ತಿದ್ದೆ. ಆದರೆ ಈಗ ಎಲ್ಲವೂ ಹೊಣೆಗಾರಿಕೆ, ಹೊಂದಾಣಿಕೆ, ಮೌನದ ಒತ್ತಡ.ಕಂಡಂತಿತ್ತು.
ಅದಕ್ಕೆ ವಿರುದ್ಧವಾಗಿ ಯುವತಿ ಅವಳ ಮನಸ್ಸು ಹೊಸ ಹೂವಿನಂತೆ ಅರಳಿತ್ತು. ಮೊನ್ನೆಯಷ್ಟೇ ಪ್ರೀತಿಯಾದ ಹುಡುಗನ ನೆನಪು ಅವಳ ಹೃದಯ ತುಂಬಿಕೊಂಡಿತ್ತು. ಅವನ ಮಾತು, ಅವನ ನಗು, ಅವನ ಉಸಿರಿನ ಸುಖ ಸ್ಪರ್ಶ ಎಲ್ಲವೂ ಅವಳನ್ನು ತಡಕಾಡಿಸುತ್ತಿತ್ತು. ಅವಳಿಗೆ ಬದುಕು ಎಂದರೆ ನೂರಾರು ಬಯಕೆಗಳಂತೆ. ಒಟ್ಟಿಗೆ ಸುತ್ತಾಟ, ಕೈ ಹಿಡಿದು ನಡೆಯುವ ಕನಸು, ಪ್ರೀತಿಯಲ್ಲಿ ಕರಗುವ ಕ್ಷಣಗಳು. ಅವಳಿಗೆ ಮದುವೆ ಭಯವಾಗಿರಲಿಲ್ಲ; ಅದು ಪ್ರೀತಿಯ ಮುಂದುವರಿಕೆಯಂತೆ ಕಾಣಿಸುತ್ತಿತ್ತು .
ಯುವತಿ ಮದುವೆಯಾದ ಮಹಿಳೆಯ ಮಾತುಗಳನ್ನು ಕೇಳುತ್ತಾ ಮೌನವಾಗಿದ್ದಳು.
ಹಕ್ಕಿಗಳು ಹಸುಗಳು ಸೂರು, ಆಹಾರ, ಸಂತಾನ. ನಾಳೆಯ ಚಿಂತೆಯಿಲ್ಲ. . ಅವುಗಳಿಗೆ ಹಣ, ಆಸೆ, ಅಕಾಂಕ್ಷೆಗಳಿಲ್ಲ. ಬದುಕು ಸರಳ.
ಮನುಜ ಮಾತ್ರ ವಿಭಿನ್ನ. ಅವನ ಜೊತೆ ಸದಾ ಚಿಂತೆ. ಹಣ, ಸ್ಥಾನ, ಗೌರವ, ಸಂಬಂಧ, ಸ್ವಾತಂತ್ರ್ಯ ಎಲ್ಲವೂ ಅವನನ್ನು ಕಟ್ಟಿಹಾಕುವ ದಾರಗಳು. ಬದುಕಿನುದ್ದಕ್ಕೂ ಅವು ಅವನ ಸಂಗಡವೇ ಸಾಗುತ್ತವೆ. ತಿರುವು ಮುರುವುಗಳ ದಾರಿಯಂತೆ, ಮನುಜರ ಜೀವನವೂ ನೇರವಾಗಿರದು.
. ಒಬ್ಬಳಿಗೆ ಹಿನ್ನೋಟದ ನೋವು, ಇನ್ನೊಬ್ಬಳಿಗೆ ಮುಂದಿನ ಕನಸು.... ಭಾವಗಳು ಮಾತ್ರ ಬದಲಾಗುತಿತ್ತು.ಮರ ಮಾತ್ರ ಬಿಸಿಲಿಗೆ ಮೈ ಒಡ್ಡಿ ತನ್ನವರಿಗಾಗಿ ತಂಪು ನೆರಳನ್ನು ನೀಡಿತ್ತು.
ರಾಂ ಅಜೆಕಾರು ಕಾರ್ಕಳ
#dailyquots #dailystories #udupikarkala #coorg #udupimanipal #karkalaudupi #trendingstories
#🙏🏻🌺☘️5 ನೇ ದಿನ ದೇವಿ ಸ್ಕಂದ ಮಾತಾ 🌅 ಶುಭೋದಯ ಶುಭ ಗುರುವಾರ #🎊 2️⃣0️⃣2️⃣6️⃣ ಹೊಸ ವರ್ಷಕ್ಕೆ 2 ದಿನ ಬಾಕಿ🤩 #👋 ಬೈ ಬೈ 2025😊 #🎥 2025ರ ಸವಿ ನೆನಪುಗಳು⏪