ChatGPT ಹೆಲ್ತ್ ಮೋಡ್ ಪರಿಚಯ: ಇನ್ನು ಸುಲಭವಾಗಿ ಲ್ಯಾಬ್ ರಿಪೋರ್ಟ್ ತಿಳಿಯಿರಿ!
ಸಂಕೀರ್ಣವಾದ ಲ್ಯಾಬ್ ವರದಿಯನ್ನು ಓದಿ ಅರ್ಥಮಾಡಿಕೊಳ್ಳುವುದು ಅನೇಕರಿಗೆ ದೊಡ್ಡ ಸವಾಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ
ಆರೋಗ್ಯ ಮಾಹಿತಿಯನ್ನು ಸರಳವಾಗಿ ವಿವರಿಸುವ ಉದ್ದೇಶದಿಂದ OpenAI ಹೊಸದಾಗಿ ChatGPT Health ಎಂಬ ವಿಶೇಷ ಮೋಡ್ ಅನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ವೈದ್ಯಕೀಯ ಪ್ರಶ್ನೆಗಳನ್ನು ಇತರೆ ಸಾಮಾನ್ಯ ಚಾಟ್‌ಗಳಿಂದ ಪ್ರತ್ಯೇಕವಾಗಿ ನಿರ್ವಹಿಸಿ, ಬಳಕೆದಾರರಿಗೆ ಹೆಚ್ಚು ಸ್ಪಷ್ಟತೆ ಮತ್ತು ಗೌಪ್ಯತೆಯನ್ನು ಒದಗಿಸುತ್ತದೆ.
ಹಾಗಾದರೆ, ಏನಿದು ಹೊಸ ChatGPT Health ಎಂಬ ವಿಶೇಷ ಮೋಡ್ ಎಂಬುದನ್ನು ನೋಡೋಣ ಬನ್ನಿ.
ChatGPT ಹೆಲ್ತ್ ಎಂದರೇನು.?
ChatGPT ಒಳಗೆ ಇರುವ ಈ ಹೊಸ ಹೆಲ್ತ್ ಮೋಡ್ ಅನ್ನು ಒಂದು ರೀತಿಯ "ಆರೋಗ್ಯ ಪ್ರೈವಸಿ ಸ್ಪೇಸ್" ಎಂದು ಕರೆಯಬಹುದು. ಇಲ್ಲಿ ನೀವು ಜ್ವರ, ರಕ್ತ ಪರೀಕ್ಷೆ, ಜೀವನಶೈಲಿ ಅಥವಾ ಫಿಟ್‌ನೆಸ್ ಕುರಿತು ಕೇಳುವ ಪ್ರಶ್ನೆಗಳು ಇದೇ ಸ್ಪೇಸ್‌ನಲ್ಲೇ ಉಳಿಯುತ್ತವೆ. ಹಿಂದಿನ ಆರೋಗ್ಯ ಸಂಬಂಧಿತ ಸಂಭಾಷಣೆಗಳನ್ನು ಇದು ನೆನಪಿಟ್ಟುಕೊಳ್ಳುತ್ತದೆ, ಆದರೆ ಅವುಗಳನ್ನು ಇತರೆ ಚಾಟ್‌ಗಳಿಗೆ ಮಿಶ್ರಣ ಮಾಡುವುದಿಲ್ಲ. ಇದರಿಂದ ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಅನುಭವ ಸಿಗುತ್ತದೆ.
ಡೇಟಾ ಆಧಾರಿತ ಉತ್ತರಗಳು:
ಬಳಕೆದಾರರು ಅನುಮತಿ ನೀಡಿದರೆ, ChatGPT Health ಫಿಟ್‌ನೆಸ್ ಟ್ರ್ಯಾಕರ್ ಮತ್ತು ಆರೋಗ್ಯ ಆಪ್‌ಗಳೊಂದಿಗೆ ಸಂಪರ್ಕ ಸಾಧಿಸಬಹುದು. ನಿಮ್ಮ ನಿದ್ರೆ, ದೈಹಿಕ ಚಟುವಟಿಕೆ ಅಥವಾ ದೈನಂದಿನ ಅಭ್ಯಾಸಗಳನ್ನು ಆಧರಿಸಿ, ಸಾಮಾನ್ಯ ಸಲಹೆಗಳಿಗಿಂತ ನಿಮ್ಮ ಪರಿಸ್ಥಿತಿಗೆ ಹೊಂದಿಕೊಳ್ಳುವ ಮಾಹಿತಿಯನ್ನು ನೀಡಲು ಇದು ಪ್ರಯತ್ನಿಸುತ್ತದೆ. ಇದರಿಂದ ಆರೋಗ್ಯದ ಬಗ್ಗೆ ಹೆಚ್ಚು ಸ್ಪಷ್ಟ ಚಿತ್ರಣ ದೊರೆಯುತ್ತದೆ.
ಈ ವೈಶಿಷ್ಟ್ಯ ಈಗ ಏಕೆ ಮಹತ್ವದ್ದು.?
OpenAI ಪ್ರಕಾರ, ಪ್ರತಿ ವಾರ ಲಕ್ಷಾಂತರ ಬಳಕೆದಾರರು ಆರೋಗ್ಯ ಸಂಬಂಧಿತ ಪ್ರಶ್ನೆಗಳನ್ನು ChatGPTಗೆ ಕೇಳುತ್ತಿದ್ದಾರೆ. ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಉತ್ತರಗಳು ಹೆಚ್ಚು ಜವಾಬ್ದಾರಿಯುತವಾಗಿರಲೆಂದು 60ಕ್ಕೂ ಹೆಚ್ಚು ದೇಶಗಳ 260ಕ್ಕೂ ಅಧಿಕ ವೈದ್ಯರೊಂದಿಗೆ ಸಹಕಾರ ನಡೆಸಲಾಗಿದೆ. ಯಾವ ಹಂತದಲ್ಲಿ AI ಮಾಹಿತಿ ನೀಡಬೇಕು ಮತ್ತು ಯಾವ ಹಂತದಲ್ಲಿ ವೈದ್ಯರನ್ನು ಸಂಪರ್ಕಿಸಲು ಸೂಚಿಸಬೇಕು ಎಂಬುದರ ಮೇಲೆ ವಿಶೇಷ ಗಮನ ನೀಡಲಾಗಿದೆ.
ChatGPT Health ಅನ್ನು ಬಳಸುವ ವಿಧಾನ:
ChatGPT ಸೈಡ್‌ಬಾರ್‌ನಲ್ಲಿ 'Health' ಆಯ್ಕೆಯನ್ನು ಆಯ್ಕೆ ಮಾಡಿದ ಬಳಿಕ, ನೀವು ಲ್ಯಾಬ್ ಟೆಸ್ಟ್ ವರದಿಗಳ PDF ಫೈಲ್‌ಗಳನ್ನು ಅಪ್‌ಲೋಡ್ ಮಾಡಬಹುದು. ಉದಾಹರಣೆಗೆ, "ಹೆಮೋಗ್ಲೋಬಿನ್ ಕಡಿಮೆಯಾಗಿದೆ ಎಂದರೆ ಅದರ ಪರಿಣಾಮವೇನು?" ಎಂಬ ಪ್ರಶ್ನೆಗೆ ಇದು ಸರಳ ಕನ್ನಡದಲ್ಲಿ ಉತ್ತರ ನೀಡುತ್ತದೆ. ಜೊತೆಗೆ, ಫಿಟ್‌ನೆಸ್ ಆಪ್‌ಗಳನ್ನು ಕನೆಕ್ಟ್ ಮಾಡಿದರೆ, ಒಟ್ಟಾರೆ ಆರೋಗ್ಯದ ಅವಲೋಕನವನ್ನು ಪಡೆಯಬಹುದು. ಪ್ರಸ್ತುತ ಈ ವೈಶಿಷ್ಟ್ಯ ಅಮೆರಿಕದಲ್ಲಿ ಸೀಮಿತ ಬಳಕೆದಾರರಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರೆ ದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.
ಪೂರ್ಣವಾಗಿ ನಂಬಬಹುದೇ.?
ChatGPT Health ಆರೋಗ್ಯ ಮಾಹಿತಿ ಅರ್ಥಮಾಡಿಕೊಳ್ಳಲು ಮತ್ತು ವೈದ್ಯರನ್ನು ಭೇಟಿ ಮಾಡುವ ಮೊದಲು ತಯಾರಾಗಲು ಸಹಾಯಕ ಸಾಧನವಾಗಿದೆ. ಇದು ರೋಗನಿರ್ಣಯ ಅಥವಾ ಚಿಕಿತ್ಸೆ ನೀಡುವ ವೈದ್ಯರ ಪರ್ಯಾಯವಲ್ಲ. ಆದ್ದರಿಂದ, ಗಂಭೀರ ಆರೋಗ್ಯ ಸಮಸ್ಯೆಗಳಿಗಾಗಿ ಮಾನವ ವೈದ್ಯರ ಸಲಹೆ ಅತ್ಯಗತ್ಯ. ಸರಿಯಾದ ಮಾಹಿತಿ ಮತ್ತು ತಂತ್ರಜ್ಞಾನವನ್ನು ಜಾಣ್ಮೆಯಿಂದ ಬಳಸಿದರೆ, ಆರೋಗ್ಯ ನಿರ್ಧಾರಗಳಲ್ಲಿ ಹೆಚ್ಚು ಆತ್ಮವಿಶ್ವಾಸ ಹೊಂದಲು ಸಾಧ್ಯ. ಹಾಗಾಗಿ, ದಯವಿಟ್ಟು ChatGPT Health ಮೂಡ್ ಅನ್ನು ಸಹಾಯಕನನ್ನಾಗಿ ಬಳಸಿ, ಸ್ವಯಂ ಡಾಕ್ಟರ್ ಆಗಿ ಉಪಯೋಗಿಸಬೇಡಿ.
#LATEST #TECHNOLOGY #INTRODUCINGCHATGPTHEALTHMODE #OPENAI #HEALTHTRACKER