ದೇವರೇನು ನಮ್ಮ ಕಾವಲುಗಾರನೇ? :
ಗುರುಕುಲವೊಂದರಲ್ಲಿ ಗುರುಗಳು ತಮ್ಮ ಶಿಷ್ಯರಿಗೆ, ‘ಪ್ರತಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ. ಅವನು ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಾನೆ’ ಎಂದು ಬೋಧಿಸಿದರು. ಶಿಷ್ಯನೊಬ್ಬ ಅದನ್ನು ಮತ್ತೆ ಮತ್ತೆ ಉಚ್ಚರಿಸುತ್ತಾ ಮನದಟ್ಟು ಮಾಡಿಕೊಂಡ. ಮಾರನೇ ದಿನ ಆ ಶಿಷ್ಯ ಕಾಡಿಗೆ ಕಟ್ಟಿಗೆ ತರಲು ಹೋದಾಗ ಮದ್ದಾನೆಯೊಂದು ಧಾವಿಸಿ ಬರುತ್ತಿತ್ತು. ಅದರ ಬೆನ್ನತ್ತಿದ ಮಾವುತ, ‘ಓಡಿ, ಓಡಿ ತಪ್ಪಿಸಿಕೊಳ್ಳಿ’ ಎಂದು ಕೂಗುತ್ತಿದ್ದ. ಅಲ್ಲಿದ್ದವರೆಲ್ಲ ಸುರಕ್ಷಿತ ಜಾಗಕ್ಕೆ ತೆರಳಿ ಅಡಗಿಕೊಂಡರೆ, ಈ ಶಿಷ್ಯನೊಬ್ಬ ಆನೆ ಬರುತ್ತಿದ್ದ ದಾರಿಗೆ ಮುಖ ಹಾಕಿ, ಕೈಮುಗಿದು ನಿಂತ. ‘ದೂರ ಸರಿ, ಈ ಆನೆಗೆ ಮತ್ತೇರಿದೆ’ ಎಂದು ಎಚ್ಚರಿಸಿದ. ಆದರೆ ಶಿಷ್ಯ ಹತ್ತಿರ ಬರುತ್ತಿದ್ದ ಆನೆಯನ್ನು ನೊಡುತ್ತಾ, ‘ಈ ಆನೆಯಲ್ಲೂ ನಾರಾಯಣ ಇದ್ದಾನೆ, ಅವನು ನನಗೇನೂ ಅಪಾಯ ಮಾಡುವುದಿಲ್ಲ, ನನ್ನನ್ನು ಕಾಪಾಡುತ್ತಾನೆ’ ಅನ್ನುತ್ತಿರುವಾಗಲೇ ಅದು ಸಮೀಪಿಸಿ, ಅವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿತು. ಅವನು ತುಸು ದೂರವಿದ್ದ ಕೊಳದ ಬದಿಯ ಹುಲ್ಲು ಜೊಂಡಿನ ಮೇಲೆ ಬಿದ್ದ. ಮೈಕೈ ತರಚಿತು. ಅದಕ್ಕಿಂತ ಹೆಚ್ಚಾಗಿ, ಅವನು ಆಘಾತಗೊಂಡಿದ್ದ.
ಇದು ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದ ದೃಷ್ಟಾಂತ ಕತೆ. ನಂಬಿಕೆಯ ಹೆಸರಲ್ಲಿ ನಾವು ನಮ್ಮ ಜವಾಬ್ದಾರಿಗಳನ್ನು ಹೇಗೆ ಮರೆಯುತ್ತೇವೆ ಅನ್ನುವುದನ್ನು ಇದು ಸಮರ್ಥವಾಗಿ ಬಿಂಬಿಸುತ್ತದೆ. ನಂಬಿಕೆ ಅಥವಾ ಶ್ರದ್ಧೆ ಯಾವತ್ತೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ನೆವ ಆಗಬಾರದು. ನಮ್ಮ ಸೋಲು, ವೈಫಲ್ಯಗಳನ್ನು ಹೊರಲು ಏನಾದರೊಂದು ಬೇಕೆಂದು ನಾವು ಅವನ್ನು ಅವಲಂಬಿಸಿರುತ್ತೇವೆ. ನಾವು ಗೆದ್ದಾಗಲೂ ಆ ಗೆಲುವನ್ನು ನಿಭಾಯಿಸಲು ಅದರ ಕ್ರೆಡಿಟ್ ಅತೀಂದ್ರಿಯ ಶಕ್ತಿಗೆ ಬಿಟ್ಟುಕೊಡುತ್ತೇವೆ. ನಾವು ಪ್ರಯತ್ನ ಹಾಕಿಲ್ಲವಾದರೆ, ಅದು ನಮ್ಮದೇ ತಪ್ಪು ಮತ್ತು, ನಾವು ಪ್ರಯತ್ನ ಹಾಕಿದ್ದರೆ ಅದು ನಮ್ಮದೇ ಸಾಧನೆ- ಇಷ್ಟು ಮನದಟ್ಟು ಮಾಡಿಕೊಂಡರೆ ಮಾತ್ರ ಸೋಲು – ಗೆಲುವುಗಳನ್ನು ನಮ್ಮಿಂದ ನಿಭಾಯಿಸಲು ಸಾಧ್ಯ. ದೈವವೇ ಆಗಲಿ, ವಿಧಿಯೇ ಆಗಲಿ, ಅವನ್ನು ಯಾವತ್ತೂ ನಮ್ಮ ಊರುಗೋಲಿನಂತೆ ಬಳಸಬಾರದು. ನಾವು ಏನೆಲ್ಲ ಮಾಡಬೇಕೋ ಅವಲ್ಲೆವನ್ನೂ ಮಾಡಿ, ಆಮೇಲೆ ಗೆದ್ದರೆ ಅಹಂಕಾರ, ಸೋತರೆ ಕೀಳರಿಮೆಗೆ ಪಕ್ಕಾಗದಿರಲು ಮಾತ್ರ ಅವುಗಳನ್ನು ಆತುಕೊಳ್ಳಬೇಕೇ ಹೊರತು. ಸೋಲು – ಗೆಲುವಿಗೆ ಅವನ್ನು ಕಾರಣವಾಗಿಸಬಾರದು.
*
ಇಲ್ಲೊಂದು ಸೂಫಿ ಕತೆ ನೆನಪಾಗುತ್ತಿದೆ.
ಒಂಟೆಯನ್ನು ಸಾಕಿದ್ದ ವ್ಯಾಪಾರಿಯೊಬ್ಬ ಒಂದು ದಿನ ಬಾಜಾರಿನಲ್ಲಿ ವ್ಯಾಪಾರ ಮುಗಿಸಿ ಊರಿಗೆ ವಾಪಸಾಗುತ್ತಿದ್ದ. ಅವತ್ತು ಭರ್ಜರಿ ಲಾಭ ಸಿಕ್ಕ ಖುಷಿಯಲ್ಲಿ ಆತ ಹಾಡು ಗುನುಗುತ್ತ ಒಂಟೆಯ ಮೇಲೆ ಸಾಗುತ್ತಿದ್ದ. ಅವನು ಸಾಗುತ್ತಿದ್ದ ರಸ್ತೆಯ ಒಂದು ಬದಿಯಲ್ಲಿ ಮಸೀದಿ ಕಾಣಿಸಿತು. ಅವನು ಒಳಗೆ ಹೋಗಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿ ಕೃತಜ್ಞತೆ ಸಮರ್ಪಿಸಲು ಬಯಸಿದ. ಮಸೀದಿಯ ಹೊರಗೊಂದು ಮರವಿತ್ತು. ಅದಕ್ಕೆ ಒಂಟೆಯನ್ನು ಕಟ್ಟಿದ. ಒಳಗೆ ಹೋಗಿ ಪ್ರಾರ್ಥನೆಗೆ ಕುಳಿತವನು ಜಗತ್ತನ್ನೇ ಮರೆತುಬಿಟ್ಟ. ಅಲ್ಲಾನ ಧ್ಯಾನದಲ್ಲಿ ಮುಳುಗಿದ್ದ ಆತನಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.
ಮಸೀದಿಯಿಂದ ಹೊರಗೆ ಬರುವಾಗ ಕತ್ತಲಾಗಿತ್ತು. ಒಂಟೆಯನ್ನು ಬಿಡಿಸಲೆಂದು ಮರದ ಬಳಿ ಬಂದರೆ ಅಲ್ಲಿ ಅದು ನಾಪತ್ತೆ! ಸುತ್ತಮುತ್ತ ಹುಡುಕಾಡಿದ. ಎಲ್ಲೂ ಅದರ ಸುಳಿವಿಲ್ಲ. ಅವನಿಗೆ ಅಲ್ಲಾನ ಮೇಲೆ ಸಿಟ್ಟೇ ಬಂದಿತು. “ನಿನ್ನ ಪ್ರಾರ್ಥನೆಗಾಗಿ ಒಂಟೆಯನ್ನು ಹೊರಗೆ ಬಿಟ್ಟು ಬಂದಿದ್ದಕ್ಕೆ ಇದೇ ಬಹುಮಾನವೇ” ಎಂದು ಸಿಡುಕಿದ. ಎರಡೂ ಕೈಗಳನ್ನು ಮೇಲಕ್ಕೆತ್ತಿ, ಆಕಾಶದತ್ತ ಮುಖ ಮಾಡಿ “ನೀನೊಬ್ಬ ಮೋಸಗಾರ! ನಿನ್ನನ್ನು ನಂಬಿದ್ದಕ್ಕೆ ಸರಿಯಾಗಿಯೇ ಚೂರಿ ಹಾಕಿದ್ದೀಯ. ಇದೆಲ್ಲಿಯ ನ್ಯಾಯ!?” ಎಂದು ಕೂಗಾಡಿದ.
ಅದೇ ದಾರಿಯಲ್ಲಿ ಹೋಗುತ್ತಿದ್ದ ಸೂಫಿಯೊಬ್ಬನಿಗೆ ಈ ಕೂಗಾಟ ಕೇಳಿಸಿತು. ನಗುತ್ತಾ ವ್ಯಾಪಾರಿಯ ಬಳಿ ಬಂದು ವಿಷಯ ಏನೆಂದು ಕೇಳಿದ. ವ್ಯಾಪಾರಿ ಎಲ್ಲವನ್ನೂ ತಿಳಿಸಲು, ಸೂಫಿ “ಅಲ್ಲಯ್ಯಾ… ಅಲ್ಲಾನ ಮೇಲೆ ಭರವಸೆ ಇಡುವುದು ಬೇರೆ ವಿಷಯ, ಒಂಟೆಯನ್ನು ಹೀಗೆ ಎಲ್ಲೆಂದರಲ್ಲಿ ಕಟ್ಟಿ ಹಾಕುವುದು ಬೇರೆ ವಿಷಯ. ಜೇನಿನ ಜಾಡಿಯನ್ನು ಮುಚ್ಚಳ ಹಾಕದೆ ಬಿಟ್ಟರೆ ಇರುವೆ ಮುತ್ತಿಕೊಳ್ಳುವುದು ಸಹಜ. ಅದಕ್ಕೆ ಅಲ್ಲಾ ತಾನೆ ಏನು ಮಾಡಿಯಾನು!? ಅಲ್ಲಾನನ್ನು ನಂಬುವುದು ಬೇರೆ ವಿಷಯ, ನಿನ್ನ ಜವಾಬ್ದಾರಿಯನ್ನು ನೀನು ನಡೆಸುವುದು ಬೇರೆ ವಿಷಯ” ಎಂದು ತಿಳಿ ಹೇಳಿದ.
ವಿಷಯ ಇಷ್ಟೇ. ನಮ್ಮಲ್ಲಿ ತಪ್ಪು ಇಟ್ಟುಕೊಂಡು ದೇವರನ್ನು ಪ್ರಶ್ನಿಸಬಾರದು. ಪ್ರಶ್ನಿಸುವುದೇ ಆದರೆ, ದೇವರನ್ನು ನಂಬಬಾರದು!
❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️
#👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್