#😏ಇದೇ ಪ್ರಪಂಚ *ಬದುಕಿನ ಸರಿಯಾದ ಉಪಕರಣಗಳು*
ಅಡುಗೆ ಮನೆಯ ನಲ್ಲಿ ಮತ್ತೆ ಸೋರುತ್ತಿತ್ತು. ಇನ್ನೇನು ಮಾಡುವುದು ಎಂದುಕೊಂಡು ಒಬ್ಬ ಪ್ಲಂಬರ್ ಅನ್ನು ಫೋನ್ ಮಾಡಿ ಕರೆದೆ.
ಸ್ವಲ್ಪ ಹೊತ್ತಿನ ನಂತರ ಮಧ್ಯ ವಯಸ್ಸಿನ ಒಬ್ಬ ಮನುಷ್ಯ ಬಂದ. ಮಾಸಲಾದ ಹರಿದ ಒಂದು ಟೂಲ್ ಕಿಟ್ ಹಿಡಿದು ಅವನು ಶಾಂತವಾಗಿ ದೃಢ ಹೆಜ್ಜೆಗಳಿಂದ ಒಳಗೆ ಬಂದ.
ಅವನು ಕೆಲಸ ಮಾಡುವುದನ್ನೇ ನಾನು ನೋಡುತ್ತಿದ್ದೆ. ತನ್ನ ಟೂಲ್ ಕಿಟ್ ನಿಂದ ಅವನು ಒಂದು ಸ್ಪಾನರ್ ಹೊರ ತೆಗೆದ. ಅದರ ಹಿಡಿ ಸೀಳು ಬಿಟ್ಟಿತ್ತು.
"ಇಂತಹ ಸ್ಪಾನರ್ ನಿಂದ ಅವನು ಹೇಗೆ ಸರಿ ಮಾಡಬಹುದು ?" ನಾನು ನಿ:ಶಬ್ದವಾಗಿ ಯೋಚಿಸುತ್ತಾ ನಿಂತೆ.
ಸ್ಪಾನರ್ ಸರಿ ಇಲ್ಲ ಎಂದು ಅವನು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ ! ಅವನು ತದೇಕಚಿತ್ತದಿಂದ ಕೆಲಸ ಮಾಡುತ್ತಾ ನಲ್ಲಿಯನ್ನು ತಿರುಗಿಸಿ ಅದನ್ನು ಬಿಡಿಸಿದ. ತುಕ್ಕು ಹಿಡಿದ ಒಂದು ಭಾಗವನ್ನು ಕತ್ತರಿಸಬೇಕಾಗಿತ್ತು. ಅವನು ತನ್ನ ಬ್ಯಾಗನ್ನು ತಡಕಾಡಿ, ಗರಗಸವನ್ನು ಹೊರ ತೆಗೆದ. ಅದರ ಅರ್ಧದಷ್ಟು ಭಾಗ ಕಟ್ ಆಗಿತ್ತು.
ಈಗ ನನಗೆ ಅನುಮಾನ ಬರಲಾರಂಬಿಸಿತು. ನಾನೇನಾದರೂ ತಪ್ಪಾದ ಮನುಷ್ಯನನ್ನು ಕರೆದಿದ್ದೀನಾ ? ಎಂದು. ಆದರೆ 10 ನಿಮಿಷದಲ್ಲಿ ಸೋರುತ್ತಿದ್ದ ನಲ್ಲಿಯಲ್ಲಿ ಸೋರಿಕೆ ಸಂಪೂರ್ಣ ನಿಂತಿತು. ಒಂದು ಹನಿ ನೀರೂ ತೊಟ್ಟಿಕ್ಕುತ್ತಿರಲಿಲ್ಲ ! ನಲ್ಲಿಗೆ ಕಟ್ಟಿಕೊಂಡಿದ್ದ ಕೊಳಕನ್ನು ತೆಗೆದು, ಅದು ಹೊಳೆಯುವಂತೆ ಮಾಡಿದ್ದ ಅವನು.
ನಾನು 200 ರೂಪಾಯಿಯ ನೋಟನ್ನು ಅವನ ಕೈಗಿಟ್ಟೆ. ಅವನು ಬೇಡ ಎಂಬಂತೆ ತಲೆಯಾಡಿಸಿ ಹೇಳಿದ " ಬೇಡ ಸರ್, ಇದರ ಅರ್ಧದಷ್ಟು ಹಣ ಸಾಕು".
ಈಗ ನನ್ನ ಆಶ್ಚರ್ಯ ಮಿತಿಮೀರಿತು. ಅವನನ್ನೇ ದಿಟ್ಟಿಸುತ್ತಾ ಕೇಳಿದೆ "ಈಗಿನ ಕಾಲದಲ್ಲಿ ಯಾರು ತಾನೇ ಹೆಚ್ಚಿನ ಹಣವನ್ನು ನಿರಾಕರಿಸುತ್ತಾರೆ ?"
ನನ್ನ ಮಾತಿಗೆ ಅವನ ನಸುನಗೆಯೇ ಪ್ರತಿಕ್ರಿಯೆ ಆಗಿತ್ತು. ಅವನದು ಶಾಂತ ಮುಖ ಮತ್ತು ಸ್ಥಿರವಾದ ನಗೆ.
"ಸರ್, ಪ್ರತಿಯೊಂದು ಕೆಲಸಕ್ಕೂ ಒಂದು ನಿರ್ದಿಷ್ಟ ಬೆಲೆ ಇರುತ್ತದೆ. ಇವತ್ತು ನಾನು ಹೆಚ್ಚಿನ ಹಣವನ್ನು ತೆಗೆದುಕೊಂಡರೆ ನಾಳೆ ಇನ್ನೂ ಹೆಚ್ಚಿನ ಹಣವನ್ನು ನಿರೀಕ್ಷಿಸುತ್ತೇನೆ. ಅದು ಸಿಗದಿದ್ದಾಗ ನನಗೆ ದುಃಖವಾಗುತ್ತದೆ. ಆದ್ದರಿಂದ ಸರಿಯಾದ ಬೆಲೆಯನ್ನೇ ನಾನು ಯಾವಾಗಲೂ ತೆಗೆದುಕೊಳ್ಳುತ್ತೇನೆ. ಇದು ನನಗೆ ತೃಪ್ತಿ ನೀಡುತ್ತದೆ".
ಅವನ ಮಾತನ್ನು ಸಮ್ಮತಿಸುತ್ತ ನಾನು ಹೇಳಿದೆ : "ಕೂಲಿ ಅಂತ ಅಲ್ಲದಿದ್ದರೂ ನಿನ್ನ ಸೀಳಿದ ಸ್ಪಾನರ್ ಮತ್ತು ಮುರಿದ ಗರಗಸ ಕೊಳ್ಳಲಾದರೂ ಇದನ್ನು ತಗೋ. ಆಗ ನಿನ್ನ ಕೆಲಸವಾದರೂ ಸುಲಭವಾಗುತ್ತೆ".
ಅವನು ಕೊಕ್ ಎಂದು ನಕ್ಕು ಹೇಳಿದ "ಓಹೋ ಸರ್, ಈ ಉಪಕರಣಗಳು ಎಂದಿದ್ದರೂ ಹಾಳಾಗುವುದೇ. ಅವುಗಳ ಗತಿಯೇ ಅಷ್ಟು. ಆದರೆ ಅವು ಮುರಿದಿದ್ದರೂ, ಸೀಳಿದ್ದರೂ ತಮ್ಮ ಕೆಲಸವನ್ನು ಮಾಡುತ್ತವೆ - ಹಿರಿಯ ನಾಗರಿಕರಂತೆ. ನಮ್ಮ ಮೈ ಮೇಲಿನ ಕೆಲವು ಕಲೆಗಳು ನಮ್ಮನ್ನು ವೇಸ್ಟ್ ಬಾಡಿ ಯನ್ನಾಗಿ ಮಾಡುವುದಿಲ್ಲ".
ಸ್ವಲ್ಪ ತಡೆದು, ಅವನು ಮುಂದುವರೆಸಿದ : " ಸರ್, ನೀವು ಆಫೀಸಿನಲ್ಲಿ ಬರೆಯುವಾಗ, ಬರೆಯುವ ಪೆನ್ ಯಾವುದು ಎಂಬುದು ಮುಖ್ಯವೇ ? ನಿಮಗೆ ಬರೆಯುವುದು ಗೊತ್ತಿದ್ದರೆ ಅದು ದುಬಾರಿ ಪೆನ್ನೋ ಸಾಧಾರಣ ಪೆನ್ನೋ ಎಂಬುದು ಮುಖ್ಯವಾಗುವುದಿಲ್ಲ. ನೀವು ಯಾವುದೇ ಪೆನ್ನಿನಿಂದ ಆದರೂ ಚೆನ್ನಾಗಿಯೇ ಬರೆಯುತ್ತಿರಿ. ಆದರೆ, ನಿಮಗೆ ಬರೆಯುವುದೇ ಗೊತ್ತಿಲ್ಲದಿದ್ದರೆ, ದುಬಾರಿ ಪೆನ್ನು ಇಟ್ಟುಕೊಂಡಿದ್ದರೂ ಏನು ಉಪಯೋಗ ? ಕೌಶಲ್ಯವು ನಿಮ್ಮ ಕೈಗಳಲ್ಲಿ ಇದೆಯೇ ಹೊರತು ಉಪಕರಣಗಳಲ್ಲಿಲ್ಲ".
ನಾನು ಮೂಕನಾಗಿ ಅಲ್ಲಿ ನಿಂತಿದ್ದೆ. ಅವನ ಮಾತುಗಳು ನನ್ನ ಮನಸ್ಸಿನ ಆಳಕ್ಕೆ ಇಳಿದವು. ಸುಕ್ಕಾಗಿದ್ದ ಅವನ ಮುಖದಲ್ಲಿದ್ದ ತೃಪ್ತಿ ಅಸಾಧಾರಣವಾದದ್ದು. ಅದು ದುಡ್ಡು ಕೊಟ್ಟು ಕೊಳ್ಳುವಂತದ್ದಲ್ಲ".
ಅವನ ವಿಚಾರವೇ ಒಂದು ಸಂಪತ್ತು. ಎಷ್ಟೋ ಸಾರಿ ನಾವು ಐಶ್ವರ್ಯ ಮತ್ತು ಸೌಕರ್ಯ - ಇವುಗಳನ್ನ ಗಳಿಸಲು ನುಗ್ಗುತ್ತಿರುತ್ತೇವೆ. ನಾವು ಬದುಕಿನ ನಿಜವಾದ ಉಪಕರಣಗಳನ್ನು ಮರೆತಿರುತ್ತೇವೆ --
*ಪ್ರಾಮಾಣಿಕತೆ*
*ಕಠಿಣ ಪರಿಶ್ರಮ*
*ಕೃತಜ್ಞತೆ ಮತ್ತು*
*ತೃಪ್ತಿ*
ಎಲ್ಲಿಯವರೆಗೆ ಈ ಉಪಕರಣಗಳು ಭದ್ರವಾಗಿರುತ್ತವೆಯೋ, ಅವು ಮುರಿದಿದ್ದರೂ ಪವಾಡವನ್ನು ನಿರ್ಮಿಸಬಲ್ಲವು.
ಆದರೆ ಇವುಗಳೇ ಕಾಣೆಯಾದಾಗ, ಪ್ರಪಂಚದಲ್ಲಿ ಎಷ್ಟೇ ಸಂಪತ್ತಿದ್ದರೂ ನಮ್ಮೊಳಗಿನ ಸೋರಿಕೆಯನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ.
ಜಿ ಕೆ ವೆಂಕಟೇಶಮೂರ್ತಿ
(ಮೂಲ ಇಂಗ್ಲೀಷ್ ನಿಂದ ಭಾವಾನುವಾದ )