ಹಳ್ಳಿಬದುಕು : ಕೋಳಿ ಕಳ್ಳ ನಾಯಿ
ತುಳುನಾಡಿನಲ್ಲಿ ಪ್ರತಿಯೊಂದಕ್ಕೂ ಒಂದು ಹಿನ್ನೆಲೆ, ಒಂದು ಪರಂಪರೆ ಇದೆ. ಕೋಳಿ ಎಂಬುದಕ್ಕೆ ನಮ್ಮ ಊರಿನ ಜನರಿಗೆ ವಿಶೇಷ ಪ್ರೀತಿನೀರ್ದೋಸೆ ಜೊತೆ ಕೋಳಿಸುಕ್ಕ ಎಂದರೆ ಬಾಯಲ್ಲಿ ನೀರೂರದವರು ವಿರಳ. ದೈವಗಳ ನೇಮ, ಹರಕೆ, ಸಾಂಪ್ರದಾಯಿಕ ಆಚರಣೆ… ಎಲ್ಲದಲ್ಲಿಯೂ ಕೋಳಿಯ ಸ್ಥಾನ ವಿಶಿಷ್ಟ.
ಹಳ್ಳಿಗಳಲ್ಲಿ ಹಲವರು ತಮ್ಮ ಮನೆಬಾಗಿಲಲ್ಲೇ ಸಣ್ಣ ಗುಡಿಸಲು ಕಟ್ಟಿಕೊಂಡು ಕೋಳಿಗಳನ್ನು ಸಾಕುವುದು ಸಾಮಾನ್ಯ. ನೇಮೊತ್ಸವ, ಕೊಳಿಯಂಕಗಳುಈ ಎಲ್ಲಾ ಸಂದರ್ಭದಲ್ಲಿ ಬೇಡಿಕೆ ಹೆಚ್ಚು. ಒಮ್ಮೆ ಕಾಲದಲ್ಲಿ ಮನೆಯಲ್ಲೇ ಬೆಳೆದ ಕೋಳಿಗಳು “ಒಳ್ಳೆಯ ರೇಟಿಗೆ ಹೋಗುತ್ತವೆ” ಎಂದು ರೈತರು ನಂಬುತ್ತಿದ್ದರು.
ಕೋಳಿ ಸಾಕಿದ್ದ ಯಜಮಾನ ತನ್ನ ಕೊಳಿಗಳನ್ನು ಕಟ್ಟಿಯೊ ಅಥವಾ ಗೂಡಿನಲ್ಳಿಟ್ಟು ಸಾಕುವ ವ್ಯವಧಾನ ಅವನಲ್ಲೂ ಇಲ್ಲಾ
ಅದೇ ಹಳ್ಳಿಯಲ್ಲಿ ಪಕ್ಕದ ಮನೆಯ ರೈತನೊಬ್ಬನ ಬಳಿ ನಿಷ್ಟಾವಂತ ನಾಯಿ ಇತ್ತು. ಅದು ಮನೆಯವರ ಮಾತಿಗೆ ನಿಷ್ಟೆ ತೋರುತಿತ್ತು, ಗದ್ದೆಯ ಕಾಯುವ ಕೆಲಸದಲ್ಲಿ ಚಾಕಚಕ್ಯ. ಯಾರೆ ಬಂದರೂ, ಯಾರೆ ದಾಟಿದರೂ ತನ್ನ ಸೀಮಾ ವ್ಯಾಪ್ತಿಯವರೆಗೆ ಹಿಂಬಾಲಿಸಿ ಬೊಗಳುವುದು ಅದರ ಸ್ವಭಾವ. ತನ್ನ ಮನೆಯನ್ನೆ ಕಾಪಾಡಬೇಕು ಎಂಬ ಅರಿವು ಅದಕ್ಕಿತ್ತು.
ಒಮ್ಮೆ ರೈತನ ತರಕಾರಿ ಗದ್ದೆಗೆ ಪಕ್ಕದ ಮನೆಯ ಕೋಳಿಗಳ ಹಿಂಡು ನುಗ್ಗಿತು. ತರಕಾರಿ ಗಿಡ ಬಳ್ಳಿಗಳ ಬುಡದ ಗೊಬ್ಬರದ ಬಳಿ ಕಾಲಿನಿಂದ ಅಗೆದು ಎರೆಹುಳ ಹುಡುಕುತ್ತಿದ್ದವು. ಇದನ್ನು ನೋಡಿದ ನಾಯಿ, ಅದನ್ನು ‘ಬೇರೆ ಮನೆಯ ಕೋಳಿ’ ಎನ್ನುವ ಭೇದವಿಲ್ಲದೆ, ತನ್ನ ಜವಾಬ್ದಾರಿಯಂತೆ ಕಂಡು ಒಂದು ಕೋಳಿಯನ್ನು ಕೊಂದು ಹಾಕಿತು. ಹೀಗೆ ದಿನಗಳು ಕಳೆದಂತೆ, ನಾಯಿಯ ದಾಳಿ ಹೆಚ್ಚಿತು.
ಕೋಳಿ ಸಾಕುತ್ತಿದ್ದ ಪಕ್ಕದ ಮನೆಯ ಯಜಮಾನನಿಗೆ ನೋವಾಯಿತು. ಕೋಳಿ ಬೆಳೆದು, ಮೊಟ್ಟೆ ಇಟ್ಟು, ಮನೆಯವರೊಂದಿಗೆ ಬೆರೆತು, “ಕುಟುಂಬದ ಹಿತ್ತಲಿನ ಮತ್ತೊಬ್ಬ ಸದಸ್ಯ” ಆಗುವಷ್ಟರಲ್ಲೇ ಅದು ಬಲಿಯಾಗುವುದೆಂದರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ?
ಆದರೂ ಅವರು ಇಬ್ಬರೂ ಒಳ್ಳೆಯ ಸ್ನೇಹಿತರು. ನೋವು ಇದ್ದರೂ, ಪರಸ್ಪರದ ಮನಸ್ಸು ನೋಯಬಾರದೆಂದು ಮೌನವಾಗಿದ್ದರು. ಆದರೆ ನೋವಿನ ಮೇಲೆ ನೋವು ಕೋಳಿಗಳು ಪುನಃ ಪುನಃ ಬಲಿಯಾಗುತ್ತಿದ್ದಂತೆ, ಆತನ ಮನಸ್ಸೇ ಮುರಿದು, ಕೊನೆಗೆ ಕೋಳಿ ಸಾಕುವುದನ್ನೇ ಬಿಟ್ಟುಬಿಟ್ಟ.
ಕಾಲ ಬದಲಾಯಿತು. ನೋವು ನಲಿವು ಮಸುಕಾಯಿತು. ಆದರೆ ಒಮ್ಮೆ ಆ ನಾಯಿ ಊರಿನ ಕೋಳಿ ಪಾರ್ಮ್‌ಗೂ ನುಗ್ಗಿ ಕೋಳಿಗಳನ್ನು ಬೇಟೆಯಾಡತೊಡಗಿತು. ಮನೆಯಲ್ಲೂ ಗಿಡಗಳ ಬೇರು ಕಿತ್ತು ತಿನ್ನುವುದರ ಮೇಲೆ ದಾಳಿ ಇತ್ತು. ಕೋಳಿಗಳು ಕಾಟ ಕೊಡುತ್ತಿವೆ ಎನ್ನುವುದು ಅದರ ಕಣ್ಣುಗಳಲ್ಲಿ ‘ಕಾರಣ’, ಆದರೆ ಮನುಷ್ಯರ ಮನಸ್ಸಿನಲ್ಲಿ ಅದು ‘ಕೋಳಿ ಕಳ್ಳ ನಾಯಿ’.
ಹೀಗೆ ಊರಿನಲ್ಲೆಲ್ಲಾ ಆ ನಾಯಿಗೆ ಕೆಟ್ಟ ಹೆಸರು ಬಂತು. ಕೊನೆಗೆ ಜನರು ಸೇರಿ, ದೊಣ್ಣೆ ಹಿಡಿದು ಕಾದು ಕೂತು, ಮನೆಗೆ ಆಹಾರಕ್ಕಾಗಿ ಬಂದಾಗ ಹಿಡಿದು ಕೊಂದುಹಾಕಿದರು.
ಆ ನಾಯಿ ಮಾನವನ ಸಂಗದಿಂದಲೇ ಬೇಟೆಯ ಕೌಶಲ್ಯ ಕಲಿತುಕೊಂಡಿತ್ತು. ಇಲ್ಲಿ ಕೋಳಿಗಳು ಕರಗಿದವು… ಗಿಡಗಳು ಹಾಳಾದವು… ಕೊನೆಗೆ ನಾಯಿ ಜೀವವನ್ನೇ ಕಳೆದುಕೊಂಡಿತು.
ನಾಯಿಯಲ್ಲಿ ನಿಷ್ಠೆ ಇತ್ತು, ತನ್ನ ಮನೆಯನ್ನೇ ಕಾಪಾಡಬೇಕೆಂಬ ಸ್ವಭಾವ ಮಾತ್ರ. ಬುದ್ದಿ ಕಲಿಸಬೇಕಾಗಿರುವುದು ಮನುಷ್ಯನೇ. ಯಾಕಂದರೆ ಮನುಷ್ಯನು ತಪ್ಪು ಮಾಡಿದಾಗ ಊರಿಡೀ ಹೆಸರು ಹಾಳಾಗುತ್ತದೆ; ಕೊನೆಗೂ ಜೈಲು ಗತಿಯವರೆಗೆ ತಲುಪುತ್ತಾನೆ. ಆದರೆ ಪ್ರಾಣಿಗೆ ಅದೆಲ್ಲ ಅರಿವಿಲ್ಲ—ಅದು ನೋಡಿದಂತೆ, ಕಲಿತಂತೆ, ಬದುಕಿನ ಹಾದಿಯಲ್ಲಿ ನಡೆದಂತೆಯೇ ನಡೆದುಕೊಳ್ಳುತ್ತದೆ.
ರಾಂ ಅಜೆಕಾರು ಕಾರ್ಕಳ
http://ramajekar.travel.blog/2025/12/02/dailystories-10/
#ದಿನಕ್ಕೊಂದು ನುಡಿಮುತ್ತು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭
http://ramajekar.travel.blog/2025/12/02/dailystories-10/