#📜ಪ್ರಚಲಿತ ವಿದ್ಯಮಾನ📜
SC ST ವರ್ಗದ ಮೂತ್ರಪಿಂಡ ಕಾಯಿಲೆಯ ನೆರವಿನ ಯೋಜನೆ ಪುನರಾರಂಭಿಸಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿಶೇಷ ಯೋಜನೆಯ ಅನುದಾನದಲ್ಲಿನ ಮೂತ್ರಪಿಂಡ ಕಾಯಿಲೆಯ ನೆರವಿನ ಯೋಜನೆಯನ್ನು ಮತ್ತೆ ಮುಂದುವರಿಸುವ ಅಗತ್ಯವಿದೆ.
ಕರ್ನಾಟಕ ರಾಜ್ಯದಲ್ಲಿ 2004ರಲ್ಲಿ ಅಂದಿನ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮುಂಗಡಪತ್ರದಲ್ಲಿ ಮೀಸಲಿಟ್ಟ ವಿಶೇಷ ಯೋಜನೆಯ ಅನುದಾನದಲ್ಲಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಯ ಜನರಲ್ಲಿ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಂಡವರೆಗೆ ಎರಡು ಲಕ್ಷ ರೂಪಾಯಿಗಳನ್ನು ಮತ್ತು ತಮ್ಮ ಸ್ವಂತ ಖರ್ಚಿನಲ್ಲಿ ಮೂತ್ರಪಿಂಡದ ಕಸಿ ಮಾಡಿಸಿಕೊಂಡವರಿಗೆ ಪ್ರತಿ ತಿಂಗಳು ಔಷಧಿಗಾಗಿ 10,000 ರೂ.ಗಳನ್ನ ನೀಡುವಂತಹ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆ ಕೇವಲ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಮಾತ್ರ ಅನ್ವಯವಾಗುತ್ತಿತ್ತು.
ಈ ಯೋಜನೆಯಿಂದ ಈ ವರ್ಗದ ಬಡವರು ತಮ್ಮ ರಕ್ತ ಸಂಬಂಧಿಗಳ ಮೂಲಕ ಮೂತ್ರಪಿಂಡವನ್ನು ಪಡೆದುಕೊಂಡು ಜೀವನ ನಡೆಸುತ್ತಿದ್ದರು ಮತ್ತು ತಮ್ಮ ಸ್ವಂತ ಖರ್ಚಿನಲ್ಲಿ ಮೂತ್ರಪಿಂಡ ಕಸಿ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ನೀಡುತ್ತಿದ್ದ ಸಹಾಯಧನದಿಂದ ಔಷಧಿಗಳನ್ನ ಪಡೆದುಕೊಳ್ಳುತ್ತಿದ್ದರು.
ಮೂತ್ರಪಿಂಡದ ಕಾಯಿಲೆ ಮತ್ತು ಮೂತ್ರಪಿಂಡದ ಚಿಕಿತ್ಸೆ ಹಾಗೂ ಔಷಧಿಗಳ ಬೆಲೆ ತುಂಬಾ ದುಬಾರಿಯಾಗಿರುವುದರಿಂದ ಸರ್ಕಾರದ ನೆರವಿನ ಅವಶ್ಯಕತೆ ಈ ವರ್ಗದ ಬಡವರಿಗೆ ಹೆಚ್ಚಾಗಿ ಇರುತ್ತದೆ ಮತ್ತು ವಿಶೇಷವಾಗಿ ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ದೊರಕುವುದಿಲ್ಲ.
ಈಗ ರಾಜ್ಯ ಸರ್ಕಾರ ಈ ಯೋಜನೆಯನ್ನು ರದ್ದುಪಡಿಸಿದೆ. ಇದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಬಡವರು ಮೂತ್ರಪಿಂಡದ ಸಮಸ್ಯೆಯಿಂದ ನರಳುತ್ತಿರುವವರಿಗೆ ತಮ್ಮ ಚಿಕಿತ್ಸಾ ವೆಚ್ಚವನ್ನು ಮತ್ತು ಔಷಧಿಗಳನ್ನ ಖರೀದಿಸಲು ಕಷ್ಟವಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮುಂಗಡಪತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿಶೇಷ ಯೋಜನೆಗಾಗಿ ಎಲ್ಲ ಸರ್ಕಾರಗಳಿಗಿಂತ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿದ್ದಾರೆ. ಈ ಹಣವನ್ನು ಕೆಲವು ನಿರುಪಯುಕ್ತ ಯೋಜನೆಗಳಿಗೆ ಕೇವಲ ಹಣವನ್ನು ಖರ್ಚು ಮಾಡಬೇಕು ಎನ್ನುವ ಕಾರಣಕ್ಕೆ ಆತುರ ಆತುರವಾಗಿ ಬಳಸುತ್ತಾರೆ. ಇದರ ಬದಲಿಗೆ ಅಮೂಲ್ಯವಾದ ಮಾನವ ಜೀವಗಳ ರಕ್ಷಣೆಗೆ ರೂಪಿತವಾಗಿರುವ ಯೋಜನೆಗಳನ್ನು ಪುನರ್ ಆರಂಭಿಸಿ.
ಮಾನ್ಯ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಈ ಸಂಬಂಧದಲ್ಲಿ ಇರುವಂತಹ ಸಮಸ್ಯೆಗಳನ್ನು ಅರಿತು ಮತ್ತಷ್ಟು ಜನ ಪರವಾದಂತಹ ನಿಟ್ಟಿನಲ್ಲಿ ಈ ಯೋಜನೆಯನ್ನು ಕೂಡಲೇ ಜಾರಿಗೊಳಿಸಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಜನರ ರಕ್ಷಣೆಗೆ ನಿಲ್ಲಬೇಕೆಂದು ಕೋರಿಕೊಳ್ಳುತ್ತೇನೆ.
- ಕೆ ಎಸ್ ನಾಗರಾಜ್, ಬೆಂಗಳೂರು
#Resume #SC #ST #category #kidney #disease #relief #scheme #ksnagaraj #malgudiexpress #malgudinews #news #TopNews
