#📜ಪ್ರಚಲಿತ ವಿದ್ಯಮಾನ📜
ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯ ಬಹಳ ಅವಶ್ಯಕ: ಶೈಲ ಬಿ.ಎಂ
ಹಾಸನ: ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯ ಬಹಳ ಅವಶ್ಯಕವಾಗಿದ್ದು, ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನವಹಿಸಬೇಕು ಎಂದು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮಾನಸಿಕ ಆರೋಗ್ಯ ವಿಮರ್ಶನಾ ಮಂಡಳಿಯ ಅಧ್ಯಕ್ಷ ಶೈಲ ಬಿ.ಎಂ ತಿಳಿಸಿದ್ದಾರೆ.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಹಾಸನ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಹಾಗೂ ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ, ಹಾಸನ, ಮನೋವೈದ್ಯಕೀಯ ವಿಭಾಗ, ಹಿಮ್ಸ್, ಹಾಸನ ಜಿಲ್ಲಾ ಮಾನಸಿಕ ಆರೋಗ್ಯ ವಿಮರ್ಶನಾ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಹಾಸನ ವೈದೈಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಹದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ಯೋಗ, ಪ್ರಾಣಯಾಮ, ಧ್ಯಾನವನ್ನು ಮಾಡಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಮಾತನಾಡಿ, ಮಾನಸಿಕ ಅಸ್ವಸ್ಥರಿಗೆ ಆರೈಕೆದಾರರು ಯಾರೂ ಇಲ್ಲದಂತಹ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಾಮನಿರ್ದೇಶಿತ ಆರೈಕೆದಾರರು ಸದರಿ ಅಸ್ವಸ್ಥರನ್ನು ಆರೈಕೆ ಮಾಡಬೇಕಾಗಿರುತ್ತದೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ನಾಗೇಶ್ ಪಿ.ಆರಾಧ್ಯ ಅವರು ಮಾತನಾಡಿ ಮಾನಸಿಕ ಖಾಯಿಲೆಗಳು ಯಾರಿಗೆ ಬೇಕಾದರು ಬರಬಹುದು, ಬಂದಂತಹ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಅಥವಾ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ ಟೆಲಿಮನಸ್ 14416ಕ್ಕೆ ಕರೆಮಾಡಿ ಮಾತನಾಡಬಹುದು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗಪ್ಪ ಜಿ.ಎಸ್ ಮಾತನಾಡಿ ನೈಸರ್ಗಿಕ ವಿಕೋಪಗಳು ಹಾಗೂ ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ತೊಂದರೆಗೊಳಗಾದವರಿಗೆ ಮಾನಸಿಕ ಬೆಂಬಲ ಅತ್ಯವಶ್ಯಕವಾಗಿರುತ್ತದೆ ಎಂದರು.
ಹಿಮ್ಸ್ ಪ್ರಾಂಶುಪಾಲ ಡಾ.ರವಿಕುಮಾರ್ ಬಿ.ಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದರಲ್ಲಿ ಕೇವಲ ಶೇ.30ರಷ್ಟು ಜನ ಚಿಕಿತ್ಸೆಯನ್ನು ಪಡೆಯುತ್ತಿದ್ದು ಉಳಿದವರು ಇದನ್ನು ಕಡೆಗಣಿಸುತ್ತಿದ್ದಾರೆ. ಹಾಗಾಗಿ ಜನರಿಗೆ ಇದರ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಹಾಸನ ಮನೋವೈದ್ಯಕೀಯ ವಿಭಾಗದ ಮನೋರೋಗ್ಯ ತಜ್ಞ ಡಾ.ಸಂತೋಷ್ ಮಾತನಾಡಿ, ಆಗಮಿಸಿ ಸಾರ್ವಜನಿಕರು ಕೇವಲ ದೈಹಿಕ ಖಾಯಿಲೆಗಳ ಬಗ್ಗೆ ಗಮನ ನೀಡುತ್ತಾರೆ. ಅವರ ಮನಸ್ಸಿಗೆ ಸಂಬಂಧಿಸಿದ ಸಾಮಾನ್ಯ ಮಾನಸಿಕ ಖಾಯಿಲೆಗಳಾದ ಖಿನ್ನತೆ, ಆತಂಕ, ಗೀಳು ಖಾಯಿಲೆಗಳು ಇವುಗಳ ಬಗ್ಗೆ ಗಮನ ನೀಡುವುದಿಲ್ಲ. ತದನಂತರದಲ್ಲಿ ಇದು ಉಲ್ಬಣಗೊಂಡು ತೀವ್ರತರಹದ ಮಾನಸಿಕ ಖಾಯಿಲೆಗಳಾದ ಸ್ಕೀಜೋಫ್ರೇನಿಯಾ, ಅತಿಯಾದ ಸಂತೋಷ, ಅತಿಯಾದ ಸಂಶಯ, ವಿಚಿತ್ರವಾಗಿ ವರ್ತಿಸುವುದು ಹಾಗೂ ಉನ್ಮಾದಕ್ಕೆ (ಮೇನಿಯಾ) ಒಳಗಾಗುತ್ತಾರೆ, ಈ ಎಲ್ಲಾ ಖಾಯಿಲೆಗಳಿಗೂ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮಾನಸಿಕ ಆರೊಗ್ಯ ವಿಮರ್ಶನಾ ಮಂಡಳಿ ಕಚೇರಿ ಉದ್ಘಾಟನೆ: ಇದೇ ವೇಳೆ ಹಿಮ್ಸ್ ಬೋಧಕ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದಲ್ಲಿ ನೂತನವಾಗಿ ಆರಂಭಗೊಂಡಿರುವ ಮಾನಸಿಕ ಆರೊಗ್ಯ ವಿಮರ್ಶನಾ ಮಂಡಳಿಯ ಕಚೇರಿಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮಾನಸಿಕ ಆರೋಗ್ಯ ವಿಮರ್ಶನಾ ಮಂಡಳಿಯ ಅಧ್ಯಕ್ಷರಾದ ಶೈಲ ಬಿ.ಎಂ ಅವರು ಉದ್ಘಾಟಿಸಿದರು.
#Mentalhealth #important #physicalhealth #ShailaBM #malgudiexpress #malgudinews #news #TopNews
