#📜ಪ್ರಚಲಿತ ವಿದ್ಯಮಾನ📜
ಕುತೂಹಲಕ್ಕೆ ಕಾರಣವಾದ ಸಿಎಂ ಸಿದ್ದರಾಮಯ್ಯ ನಡೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆ ವಿಚಾರ ಪರ - ವಿರೋಧದ ಚರ್ಚೆಯಲ್ಲಿ ವಿವಾದವಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಗಣತಿ ಕಾರ್ಯ ಸೇರಿದಂತೆ ಇತರೆ ವಿಚಾರಗಳ ಕುರಿತು ತಮ್ಮ ನಿವಾಸದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು ಅಧಿಕಾರಿಗಳಿಗೆ ನೀಡಿದ ಸಂದೇಶ ಈ ಕುರಿತಾದ ಚರ್ಚೆಗೆ ಉತ್ತರ ನೀಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ ಮತ್ತು ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಜರಿದ್ದ ಈ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ತಾವು ರಾಜ್ಯದಲ್ಲಿ ಎರಡುವರೆ ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿದ್ದೇನೆ. ಉಳಿದ ಎರಡೂವರೆ ವರ್ಷ ಅಧಿಕಾರದಲ್ಲಿ ರಾಜ್ಯದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ನೀಲ ನಕಾಶೆ ಸಿದ್ಧಪಡಿಸಿ ತರುವಂತೆ ಸೂಚನೆ ನೀಡಿದ್ದಾರೆ.
ಮುಗಿದಿರುವ ಎರಡೂವರೆ ವರ್ಷಗಳ ಅಧಿಕಾರ ಅವಧಿಯಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳಲ್ಲಿ ಸಾಕಷ್ಟು ತಪ್ಪುಗಳಾಗಿವೆ. ಇನ್ನು ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ ರಾಜ್ಯದ ಅಭಿವೃದ್ಧಿಯ ಚಿತ್ರಣ ಬದಲಿಸಬೇಕಿದೆ. ಅದಕ್ಕಾಗಿ ನಿಮ್ಮ ಎಲ್ಲರ ಸಹಕಾರ ಬೇಕು. ಎಲ್ಲರೂ ಕುಳಿತು ಚರ್ಚಿಸಿ ನೀಲ ನಕ್ಷೆಯನ್ನು ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಮೂಲಕ ಎರಡೂವರೆ ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಿದ ನಂತರ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡಲಿದ್ದಾರೆ ಎಂದು ಭಾವಿಸಿದ್ದ ವರ್ಗಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಅಧಿಕಾರ ಬದಲಾವಣೆಯಾಗಲಿದೆ ಎಂದು ರಾಜ್ಯ ಸರ್ಕಾರದ ಕೆಲವು ಉನ್ನತ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿಗಳ ಸೂಚನೆಯನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳಿಗೆ ಉತ್ತರ ನೀಡುವ ರೀತಿಯಲ್ಲಿ ಸಿದ್ದರಾಮಯ್ಯ ಈ ಸಂದೇಶ ನೀಡಿದ್ದಾರೆ ಎಂದು ಅವರ ಆಪ್ತ ವಲಯಗಳು ತಿಳಿಸಿವೆ.
ಇದು ಮಾತ್ರವಲ್ಲದೆ ರಾಜಕೀಯ ವಲಯದಲ್ಲೂ ಕೂಡ ಎರಡೂವರೆ ವರ್ಷಗಳ ಅಧಿಕಾರವಧಿ ಪೂರ್ಣಗೊಳಿಸಿದ ಸಿದ್ದರಾಮಯ್ಯ ತಮ್ಮ ಸ್ಥಾನ ತೊರೆಯಲಿದ್ದಾರೆ ಎಂದು ಚರ್ಚೆಗಳು ನಡೆದಿದ್ದವು. ಈ ಎಲ್ಲಾ ಚರ್ಚೆಗಳಿಗೆ ಸಿದ್ದರಾಮಯ್ಯ ಅವರು ಹಿರಿಯ ಅಧಿಕಾರಿಗಳಿಗೆ ಇಂತಹ ಸೂಚನೆ ನೀಡುವ ಮೂಲಕ ಸ್ಪಷ್ಟ ರಾಜಕೀಯ ಸಂದೇಶ ರವಾನಿಸಿದ್ದಾರೆ.
ಪ್ರಮುಖವಾಗಿ ಬೆಂಗಳೂರಿನ ಅಭಿವೃದ್ಧಿ ಮತ್ತು ರಸ್ತೆಗಳ ಅವ್ಯವಸ್ಥೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಇಲ್ಲಿಯವರೆಗೆ ನಗರದ ಅಭಿವೃದ್ಧಿ ದೃಷ್ಟಿಯಿಂದ ಸ್ಪಷ್ಟ ನಿರ್ಧಾರಗಳು ಕೈಗೊಳ್ಳಲು ಸಾಧ್ಯವಾಗಿಲ್ಲ. ಇನ್ನು ಮುಂದೆ ತಾವೇ ನೇರವಾಗಿ ಬೆಂಗಳೂರು ನಗರದ ಉಸ್ತುವಾರಿ ನೋಡಿಕೊಳ್ಳುವ ಮೂಲಕ ಎಲ್ಲಾ ಲೋಪಗಳನ್ನು ಸರಿಪಡಿಸುತ್ತೇನೆ. ಅದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಹೇಳಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.
#CM #Siddaramaiah #move #caused #curiosity #malgudiexpress #malgudinews #news #TopNews
