#📜ಪ್ರಚಲಿತ ವಿದ್ಯಮಾನ📜
ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಅಧಿಕಾರ ಹಸ್ತಾಂತರ ವಿಚಾರ
ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಸ್ತಾಂತರ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಮುಂದಿನ ಎರಡೂವರೆ ವರ್ಷಗಳ ಕಾಲ ತಾವೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಿಸಿದ್ದು, ಅವರ ಬೆಂಬಲಕ್ಕೆ ಅನೇಕ ಮಂದಿ ಮಂತ್ರಿಗಳು ಧಾವಿಸಿದ್ದಾರೆ.
ಮತ್ತೊಂದೆಡೆ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಮನವಿ ಮಾಡಿದ್ದು, ಶಿಸ್ತು ಉಲ್ಲಂಘನೆ ಆರೋಪದ ಹೆಸರಿನಲ್ಲಿ ಇವರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ಜಾರಿಗೊಳಿಸಿದೆ.
ವಿಜಯದಶಮಿ ವೇಳೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದಿಲ್ಲ ಎಂದು ಬಿಜೆಪಿ ನಾಯಕರು ಈ ಹಿಂದೆ ಮಾಡಿದ್ದ ಆರೋಪಗಳಿಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಈ ವಿಜಯದಶಮಿ ಮಾತ್ರವಲ್ಲ ಮುಂದಿನ ವಿಜಯದಶಮಿಗೂ ತಾವೇ ಮುಖ್ಯಮಂತ್ರಿಯಾಗಿದ್ದು ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುವುದಾಗಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್ ಅವರ ಆಪ್ತ ಶಾಸಕ ಡಾ. ರಂಗನಾಥ್ ಮತ್ತು ಮಾಜಿ ಸಂಸದ ಶಿವರಾಮೇಗೌಡ ಅವರು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಡಿ ಕೆ ಶಿವಕುಮಾರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ಹೈಕಮಾಂಡ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದರು.
ನಾಯಕತ್ವ ವಿಚಾರ ಕುರಿತಂತೆ ಯಾರೂ ಕೂಡ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಹೈಕಮಾಂಡ್ ಕಟ್ಟಾಜ್ಞೆ ವಿಧಿಸಿದ್ದರೂ ಈ ಇಬ್ಬರೂ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇಬ್ಬರ ಹೇಳಿಕೆಯ ನಂತರ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಸಚಿವರ ದಂಡೇ ನಿಂತಿದೆ. ಸಿದ್ದರಾಮಯ್ಯ ಆಪ್ತರಾದ ಜಮೀರ್ ಅಹ್ಮದ್ ಖಾನ್, ಡಾ. ಜಿ ಪರಮೇಶ್ವರ್, ಎಚ್ ಸಿ ಮಹದೇವಪ್ಪ, ಎಂ ಬಿ ಪಾಟೀಲ್ ದಿನೇಶ್ ಗುಂಡೂರಾವ್ ಮಾತ್ರವಲ್ಲ, ಯಾವುದೇ ಬಣಗಳಲ್ಲಿ ಗುರುತಿಸಿಕೊಳ್ಳದ ರಾಮಲಿಂಗಾ ರೆಡ್ಡಿ ಕೂಡಾ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಈ ಮೊದಲಿನಿಂದಲೂ ಯಾವುದೇ ಬಹಿರಂಗ ಹೇಳಿಕೆ ನೀಡದೆ ಅಂತರ ಕಾಯ್ದುಕೊಂಡು ಬಂದಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇದೇ ಮೊದಲ ಬಾರಿಗೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ನವೆಂಬರ್ ಕ್ರಾಂತಿ ಎಂಬುದು ಭ್ರಾಂತಿ. ಅಧಿಕಾರ ಹಂಚಿಕೆ ಮಾತು ಪಕ್ಷ ವಿರೋಧಿ. ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ.
ಇವರಷ್ಟೇ ಅಲ್ಲ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡಾ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ಕ್ರಾಂತಿ ಇಲ್ಲ. ಕೇವಲ ಶಾಂತಿ. ಸಿಎಂ ಬದಲಾವಣೆ ಚರ್ಚೆಯೇ ಇಲ್ಲ. ಇದನ್ನು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ಎರಡುವರೆ ವರ್ಷಗಳ ಕಾಲ ಅವರೇ ಸಿಎಂ ಆಗಿ ಇರುತ್ತಾರೆ ಎಂದು ಅಂದುಕೊಂಡಿದ್ದೇವೆ ಎನ್ನುವ ಮೂಲಕ ನಾಯಕತ್ವ ಬದಲಾವಣೆ ಅಲ್ಲಗಳೆದಿದ್ದಾರೆ.
ಮಂತ್ರಿಗಳಾದ ಎಂ ಬಿ ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ವಿಷಯ ಚರ್ಚೆ ಮಾಡುವಂತಿಲ್ಲ. ಈ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ನಾಯಕತ್ವ ಬದಲಾವಣೆ ಕುರಿತ ಹೇಳಿಕೆ ನೀಡಿದ ಉಪ ಮುಖ್ಯಮಂತ್ರಿ ಆಪ್ತರಿಗೆ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಶಾಸಕ ಡಾ. ರಂಗನಾಥ್ ಅವರು ಡಿ ಕೆ ಶಿವಕುಮಾರ್ ಅವರು ಸಿಎಂ ಆಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಕಾರಕ್ಕೆ ಬರುವಲ್ಲಿ ಡಿಕೆ ಪಾತ್ರ ಇದೆ. ಹಾಗಾಗಿ ಅವರು ಇಂದಲ್ಲ ನಾಳೆ ಸಿಎಂ ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ಅವರಷ್ಟೇ ಅಲ್ಲ, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಕೂಡಾ ಡಿ ಕೆ ಶಿವಕುಮಾರ್ ಪರವಾಗಿ ಹೇಳಿಕೆ ನೀಡಿದ್ದರು. ಡಿಕೆಶಿ ರಾಜ್ಯದ ಸಿಎಂ ಆಗಬೇಕು ಎಂದು ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ಅವರಿಗೆ ಕೂಡಾ ನೋಟಿಸ್ ನೀಡಲಾಗಿದೆ. ಒಂದು ವಾರದೊಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಿಲಾಗಿದೆ.
#transfer #power #issue #once #again #made #big #splash #malgudiexpress #malgudinews #news #TopNews
