ಒಂದು ನೀರಿನ ಹನಿ
ಅದೊಂದು ನೀರಿನ ಹನಿ ಮಳೆ ನಿಂತುಹೋಗಿದ್ದರೂ, ಆ ಹನಿಯು ಮರದ ಎಲೆಗಳಿಂದ ಜಾರಿಕೊಂಡು ಫಠಕ್ ಎಂದು ಮನೆಯ ಹಂಚಿನ ಛಾವಣಿಯ ಮೇಲೆ ಬಿತ್ತು.
ಮಳೆ ನಿಂತರೂ ಮತ್ತೆ ಸುರಿಯುವ ಆಸೆಯ ಮಳೆಹನಿ ಇನ್ನೊಂದು ಹನಿಯನ್ನು ಹಾಳು ಮಾಡದೆ ಭೂಮಿಗೆ ಸೇರಲು ತವಕಿಸುತ್ತಿತ್ತು.
ಸಾಗರವೆಂಬುದು ನೀರಿನ ಹನಿಗಳಿಂದಲೇ ಆಗಿದೆ. ಸಮುದ್ರ, ಕೆರೆ, ನದಿ ಎಲ್ಲವು ನೀರಿನ ಮೂಲಗಳೇ. ಸಕಲ ಪ್ರಾಣಿ–ಪಕ್ಷಿಗಳ ಬದುಕಿಗೆ ಒಂದೇ ಹನಿ ನೀರು ಸಾಕಷ್ಟೆ.
ಬದುಕಿನ ವ್ಯತ್ಯಾಸಗಳೂ ಹಾಗೆಯೇ — ನೀರಿನ ಹನಿಗಳಂತೆ. ಒಮ್ಮೆ ಬಿತ್ತು ಹೋದರೆ ಮತ್ತೆ ಮರಳಿ ಬರುವುದಿಲ್ಲ. ಸಮಯ ಕಳೆದುಹೋದರೆ ಸಿಗುವುದಿಲ್ಲ; ಹಾಗೆಯೇ ಬದುಕು ಕೂಡ.
ಒಮ್ಮೆ ಯಾವುದೋ ಸನ್ನಿವೇಶದಲ್ಲಿ ತುಂಬಾ ಬಾವುಕನಾಗಿದ್ದೆ. ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. “ಸೋತೆಯಾ?” ಎಂಬ ಪ್ರಶ್ನೆಗೆ ಕಣ್ಣೀರು ಉತ್ತರಿಸಿತ್ತು. ಆದರೆ ಆಗ ಬಂದ ಮಳೆ, ಕಣ್ಣೀರನ್ನು ತೊಳೆದು ತನ್ನ ಹನಿಯೊಂದಿಗೆ ಕಳೆದುಹೋದಿತು. “ಕಣ್ಣೀರಿನ ಜೊತೆ ನಾನಿದ್ದೀನಿ” ಎಂದು ಮಳೆ ಹನಿ ಭರವಸೆ ನೀಡಿದಾಗ, ಹೃದಯದಲ್ಲಿ ಹೊಸ ಖುಷಿ ಭರವಸೆ ಮೂಡಿತ್ತು. ನೋವಿನೊಂದಿಗೆ ಬಂದ ನಾಳೆಯ ಭರವಸೆಗಳು ನಮ್ಮನ್ನು ಇನ್ನಷ್ಟು ಗಟ್ಟಿಯನ್ನಾಗಿಸಿವೆ.
ಒಮ್ಮೆ ಬಟ್ಟೆ ಒಗೆದು ಒಣಗಿಸಲು ಸರಿಗೆಯ ಮೇಲೆ ಹಾಕುತ್ತಿದ್ದೆ. ಭಾರಿ ಬಿಸಿಲು ಮೇ ತಿಂಗಳ ಎರಡನೇ ವಾರ. ಬಿಸಿಯ ಕಾವಿನಲ್ಲಿ ಕೆಂಪಿರುವೆಗಳೊಂದು ಸರಿಗೆಯ ಮೇಲಿನಿಂದ ಸಾಗುತ್ತಿದ್ದವು. ಬಿಸಿಗೆ ಬಸವಳಿದಿರಬೇಕು.ನೆಲಕ್ಕೆ ಬಿದ್ದವು. ಆದರೂ ಒಗೆದ ಬಟ್ಟೆಯ ಮೇಲಿನ ನೀರಿನ ಹನಿಗಳು ಕೆಂಪಿರುವೆಗಳ ಮೇಲೆ ಬಿದ್ದು ಅವುಗಳಿಗೆ ಜೀವ ನೀಡಿದವು.
ಒಂದು ಹನಿ ನೀರು ಬಿದ್ದಾಗ, “ಅಬ್ಬಾ, ಬದುಕಿದೆ ಬಡ ಜೀವ!” ಎಂದು ಅನಿಸಿದಂತಾಯಿತು. ಅದು ಕೂಡ ಒಂದು ಹನಿ ನೀರು.
ಕಣ್ಣೀರಾದರೂ ಅದರಲ್ಲಿದೆ ನೋವಿನ ಮೌಲ್ಯ; ಮಳೆಯಾದರೂ ಅದರಲ್ಲಿದೆ ಪ್ರೀತಿಯ ಮೌಲ್ಯ. ಬಟ್ಟೆ ಒಗೆದ ನೀರಿನ ಹನಿಯೂ ಕೆಂಪಿರುವೆಗೆ ಜೀವ ಉಳಿಸಿದ ಮೌಲ್ಯವಿತ್ತು. .
ರಾಂ ಅಜೆಕಾರು ಕಾರ್ಕಳ
#ಸ್ಪೂರ್ತಿ ದಾಯಕ ಮಾತು ಗಳು👌👍 #ಶುಕ್ರವಾರ #ಶುಭ ಶುಕ್ರ ವಾರ 🌸🌸🌸🌸 #ಶುಕ್ರ ಗೌರೀ ಶುಭಾಶಯ #ಶುಭ ಶುಕ್ರ ವಾರ 🙏🏻

