ShareChat
click to see wallet page
#📜ಪ್ರಚಲಿತ ವಿದ್ಯಮಾನ📜 ಕನ್ನಡಪರ ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾದ ಜಾಮಿಯಾ ಮಸೀದಿ ಮದ್ರಸಾಗಳಲ್ಲಿ ಕನ್ನಡ ಕಲಿಸುವ ನಿಟ್ಟಿನಲ್ಲಿ ತಾವೇ ಮುಂದೆ ನಿಂತು ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ಮೌಲಾನ ಡಾ.ಇಮ್ರಾನ್ ಮಸೂದ್ ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿರುವ ಜಾಮಿಯಾ ಮಸೀದಿ ಇಂದು ವಿಶಿಷ್ಟವಾದ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎಂ ನಾರಾಯಣಗೌಡ ಇಂದು ಸುಧಾರಣಾ ಪರ ಧರ್ಮಗುರು ಮೌಲಾನ ಡಾ.ಇಮ್ರಾನ್ ಮಸೂದ್ ಅವರನ್ನು ಜಾಮಿಯಾ ಮಸೀದಿಯಲ್ಲಿ ಭೇಟಿ ಮಾಡಿ, ಕನ್ನಡಪರ ವಾತಾವರಣ ನಿರ್ಮಿಸುವ ಬಗ್ಗೆ ಸುದೀರ್ಘ ಸಮಾಲೋಚನೆ ಮಾಡಿದರು. ಮಸೀದಿಗಳ ಪ್ರವಚನಗಳಲ್ಲಿ ಕನ್ನಡದ ಬಳಕೆ ಆಗಬೇಕು. ಈ ಬಳಕೆಯ ಮೂಲಕ ಭಾಷೆ ಅಷ್ಟೇ ಅಲ್ಲ ಬದುಕು ಬೆಳಗುತ್ತದೆ. ಹಾಗೆ ಧರ್ಮದ ಸಂದೇಶಗಳು ಹೆಚ್ಚು ಅರ್ಥ ಪಡೆಯುತ್ತವೆ. ಧರ್ಮವನ್ನು, ಉಪದೇಶಗಳನ್ನು, ಪ್ರವಚನಗಳನ್ನು ಹೆಚ್ಚು ಜನ ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಮುಸ್ಲಿಂ ಸಮುದಾಯ ಮುಖ್ಯ ವಾಹಿನಿಗೆ ಬರುವ ಅಗತ್ಯವಿದೆ ಎಂದು ಟಿ.ಎ.ನಾರಾಯಣಗೌಡ ಮನವಿ ಮಾಡಿದರು. ಇಲ್ಲಿ ಒತ್ತಾಯ, ಆಗ್ರಹದ ಪ್ರಶ್ನೆ ಇಲ್ಲ. ಹಂತಹಂತವಾಗಿ ನಿಧಾನವಾಗಿ ಕನ್ನಡ ಬಳಕೆ ಆರಂಭವಾಗಲಿ ಎಂದು ಧರ್ಮಗುರು ಇಮ್ರಾನ್ ಮಸೂದ್ ಅವರಿಗೆ ಮನವಿ ಮಾಡಿದರು. ಅತ್ಯಂತ ಸೌಹಾರ್ದಯುತ, ಆಶಾದಾಯಕ ವಾತಾವರಣದಲ್ಲಿ ನಡೆದ ಸಭೆಯಲ್ಲಿ ನಾರಾಯಣ ಗೌಡ ಅವರು ಕನ್ನಡ ಸುಪ್ರಸಿದ್ಧ ಬರಹಗಾರರಾದ ಡಾ.ಎಸ್ಕೆ ಕರೀಂ ಖಾನ್, ನಿಸಾರ್ ಅಹಮದ್, ಏಜಾಸುದ್ದೀನ್, ರಮಜಾನ್ ದರ್ಗಾ, ಕನ್ನಡದ ಕಟ್ಟಾಳು ರೆಹಮಾನ್ ಖಾನ್, ಕರ್ನಾಟಕ ಏಕೀಕರಣದ ಹುತಾತ್ಮ ರಂಜಾನ್ ಖಾನ್ ಎಲ್ಲರನ್ನು ಸ್ಮರಿಸಿ, ಈ ನಾಡು ಕಟ್ಟುವಲ್ಲಿ, ಭಾಷೆ ಬೆಳಗುವಲ್ಲಿ ಅಲ್ಪಸಂಖ್ಯಾತರ ಕೊಡುಗೆ ದೊಡ್ದದು ಎಂದು ಬಣ್ಣಿಸಿದರು. ನಾರಾಯಣಗೌಡರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಧರ್ಮಗುರು ಮೌಲಾನಾ ಇಮ್ರಾನ್ ಮಸೂದ್ ಎಲ್ಲ ಹಂತದಲ್ಲಿ ಕನ್ನಡ ಜಾರಿಗೆ ತಾವೂ ಬದ್ಧ ಎಂದು ಘೋಷಿಸಿದರು. ಸರಕಾರ ಆನ್ ಲೈನ್ ಕನ್ನಡ ಕಲಿಕೆ ಜಾರಿಗೆ ತರಲಿ. ಆಫ್ ಲೈನ್ ಕನ್ನಡ ಕಲಿಕೆಯನ್ನೂ ತರಲಿ ಎಂದು ವಿನಂತಿಸಿದರು. ಆಫ್ ಲೈನ್ ಕನ್ನಡ ಕಲಿಕೆಗೂ ತಾವು ಸಿದ್ಧರಿದ್ದು, ಎಲ್ಲ ಮಸೀದಿ, ಮದ್ರಸಾಗಳಲ್ಲಿ ಕನ್ನಡ ಕಲಿಸುವ ನಿಟ್ಟಿನಲ್ಲಿ ತಾವೇ ಮುಂದೆ ನಿಂತು ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಮೌಲಾನ ಘೋಷಿಸಿದರು. ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ರಾಜ್ಯಾಧ್ಯಕ್ಷ ಸಮೀವುಲ್ಲಾ ಖಾನ್ ಈ ಸಂದರ್ಭದಲ್ಲಿ ಕನ್ನಡದ ಸೇನಾನಿ ಹುತಾತ್ಮ ರಂಜಾನ್ ಸಾಬ್ ಹೆಸರಲ್ಲಿ ಸರಕಾರವೇ ಪ್ರಶಸ್ತಿ ಘೋಷಿಸಬೇಕು. ನಾಡಿಗಾಗಿ ದುಡಿಯುವ ಹೋರಾಟಗಾರರನ್ನು, ಬರಹಗಾರರನ್ನು ಗುರುತಿಸಿ ಈ ಪ್ರಶಸ್ತಿ ಕೊಡಬೇಕು. ಇದನ್ನು ದೊಡ್ಡ ಪ್ರಶಸ್ತಿಯಾಗಿ ಪ್ರಕಟಿಸಿ, ನೆಲಜಲಕ್ಕೆ ಕೊಡುಗೆ ನೀಡಿದ ಅಲ್ಪಸಂಖ್ಯಾತರನ್ನು ಗೌರವಿಸಬೇಕು ಎಂದು ಮನವಿ ಮಾಡಿದರು. ಮೌಲಾನಾ ಮತ್ತು ಸಮೀವುಲ್ಲಾ ಖಾನ್ ಅವರ ಮನವಿಯನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ, ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಒತ್ತಡ ಹೇರುವುದಾಗಿ ನಾರಾಯಣಗೌಡ ಭರವಸೆ ಕೊಟ್ಟರು. ಮಸೀದಿಗಳ ಪ್ರವಚನಗಳಲ್ಲಿ, ಮದ್ರಸಾಗಳಲ್ಲಿ , ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಪರ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ವ್ಯಕ್ತಿಗತವಾಗಿ ಖುದ್ದು ಆಸಕ್ತಿಯನ್ನು ಧರ್ಮಗುರುಗಳು ಪ್ರಕಟಿಸಿದ್ದು ಇಂದಿನ ಮತ್ತೊಂದು ವಿಶೇಷ. ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ ಉಪಸ್ಥಿತರಿದ್ದು, ಕರ್ನಾಟಕದ ಸೌಹಾರ್ದ ಪರಂಪರೆಯನ್ನು ನೆನಪಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಯಾತ್ ಕಾರ್ಗಲ್, ರಾಜ್ಯ ಪ್ರಧಾನ ಸಂಚಾಲಕ ಮೋಹನ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸೇರಿದಂತೆ ಪ್ರಮುಖ ನಾಯಕರು ಹಾಜರಿದ್ದರು. #JamiaMasjid #witnesses #unique #proKannada #phenomenon #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat

More like this