ಪರ್ವ
ವಿರೋಧ ಕಟ್ಟಿಕೊಂಡು, ಎಂದ. ಮಳೆಗಾಲ ಮುಗಿದು ಸಂಚಾರ ಸುಗಮವಾದ ಮೇಲೆ ಅವನ ಗೂಢಚಾರರೂ ಸುದ್ದಿ ತರತೊಡಗಿದರು. ಯುದ್ಧವಾಗುವುದು ಖಚಿತ. ಭೀಷ್ಮ ದ್ರೋಣರು ದುರ್ಯೋಧನನ ಪರ ನಿಂತು ಕಾದುತ್ತಾರಂತೆ. ಆರ್ಯಾವರ್ತದ ಬಹುತೇಕ ಇತರ ರಾಜರು ಕೂಡ. ಯಾದವರ ಕೃಷ್ಣನೊಬ್ಬ ಪಾಂಡವರ ಕಡೆಗಂತೆ. ಉಳಿದವರೆಲ್ಲ, ಕೃಷ್ಣನ ಅಣ್ಣ ಬಲರಾಮ ಕೂಡ, ದುರ್ಯೋಧನನಿಗೆ ಸಹಾಯ ಮಾಡಲು ದೂರದ ದ್ವಾರಕೆಯಿಂದ ಹೊರಟಿ ದ್ದಾರೆ. 'ಅಪ್ಪ, ಭೀಷ್ಮನಿಗಿಂತ ಧರ್ಮವನ್ನು ಬಲ್ಲವರಿಲ್ಲ ಅಂತ ನೀನೇ ದಿನಕ್ಕೆ ಹತ್ತು ಬಾರಿ ಅನ್‌ತೀಯ. ಈಗ ಅವನೇ ದುರ್ಯೋಧನನ ಪರ ಅಂದರೆ ಧರ್ಮ. ಎತ್ತ ಇದೆ ಅರ್ಥ ಮಾಡಿಕೊ.'
'ಪಾಂಡವರಿಗೆ ಮಾತು ಕೊಟ್ಟಾಯಿತಲ್ಲ ನಾನು.'
ಅಪ್ಪನ ಮನಸ್ಸ ಫಜೀತಿಯಲ್ಲಿದೆ ಎಂಬುದು ಮಗನಿಗೆ ಗೊತ್ತು. ವಜ್ರ ಮತ್ತು ಅಜಯರು ಒಂದು ಪರಿಹಾರ ಸೂಚಿಸಿದರು: 'ಅವರೇನು ನಮ್ಮನ್ನು ಕೇಳಿ ಜೂಜಾಡಲಿಲ್ಲ. ಈಗ ನಮ್ಮನ್ನು ಕೇಳಿ ಯುದ್ದ ನಿಶ್ಚಯ ಮಾಡಲಿಲ್ಲ. ನಾವು ಯಾರ ಪರ ಸೇರುವುದೂ ಬೇಡ. ತಟಸ್ಥರಾಗಿದ್ದು ಬಿಡೋಣ.' ಆ ಕ್ಷಣಕ್ಕೆ ಅದೇ ಸರಿ ಎಂದು ರುಕ್ಷ್ಮರಥನಿಗೂ ಕಂಡಿತು. ಶಲ್ಯನೂ ಒಪ್ಪಿಕೊಂಡ. ಎಲ್ಲರಿಗೂ ಮನಸ್ಸು ಹಗುರವಾಯಿತು.
ಕೃಷಿಕರು ಬಿಲ್ಲುಬಾಣಗಳ ಅಭ್ಯಾಸಕ್ಕೆ ಬರಬೇಕಿಲ್ಲವೆಂದು ರುಸ್ಮರಥನು ಹಳ್ಳಿಹಳ್ಳಿಗೆಲ್ಲ ಸುದ್ದಿ ಕಳಿಸಿದ. ಜನರು ಸಮಾಧಾನದ ನಿಟ್ಟುಸಿರಿಟ್ಟರು. ಆ ಬಾರಿಯ ಮೊಳಕೆ ಚೆನ್ನಾಗಿ ಒಡೆದಿತ್ತು. ಕಳೆ ಕೀಳುವುದು ಬೇಲಿ ಹಾಕುವುದು ದನಕರುಗಳ ಪೋಷಣೆಗಳಲ್ಲಿ ಎಲ್ಲರೂ ನಿರತ ರಾದರು. ರುಕ್ಷ್ಮರಥನಿಗಂತೂ ಆಡಳಿತದಲ್ಲಿ ಹೊತ್ತು ಕಳೆಯುತ್ತಿತ್ತು, ಸೈನಿಕರ ಸಿದ್ಧತೆಯ ಹೊಣೆ ಬಿದ್ದಿದ್ದ ವಜ್ರ ಅಜಯರಿಗೆ ಈಗ ಅದೂ ತಪ್ಪಿತು. ಸಮೃದ್ಧವಾಗಿ ಅಕ್ಕಿಯ ಮದ್ಯ ವಿತ್ತು. ಹಾಸಿಗೆಯಲ್ಲಿ ಮೇಲೆ ಬಿದ್ದು ಸೆಣೆಸುವ ಸುಂದರಿಯರಾದ ರಸಿಕ ದಾಸಿಯರಿದ್ದರು. ಆದರೆ ನಾಲ್ಕಾರು ದಿನಗಳಲ್ಲಿಯೇ ಅವರಿಗೆ ಲಂಪಟತೆಯು ಬೇಸರ ತಂದಿತು. ಬಿಲ್ಲುಹುರಿಯನ್ನು ಠೇಂಕರಿಸುತ್ತಾ, ಓಡುವುದು, ಓಡುವ ರಥದಿಂದ ಗುರಿಯಿಟ್ಟು ಹೊಡೆಯುವುದು, ಆನೆಯ ಮೇಲೆ ಕುಳಿತು ಕಾಡುಗಳ ಮುಳ್ಳು ಗಂಟುಗಳನ್ನು ಸವರಿ ನುಗ್ಗಿ ದುಷ್ಟ ಮೃಗಗಳಿಗೆ ಗುರಿ ಇಟ್ಟು ಕೊಲ್ಲುವ ರೋಮಾಂಚದ ಮುಂದೆ ಹಾಸಿಗೆಯದು ಸಪ್ಪೆ ಸುಖವೆನಿಸಿತು. ಒಂದು ದಿನ ಇಬ್ಬರೂ ಎದ್ದು ಮಾತನಾಡಿಕೊಂಡು ರಥ ಹತ್ತಿ ಅಭ್ಯಾಸದ ಬಯಲಿಗೆ ಹೋದರು. ಆದರೆ ಅಲ್ಲಿ ಯಾರೂ ಇಲ್ಲ. ಕ್ಷತ್ರಿಯರು ಕೂಡ. ಸಿಟ್ಟಿನಿಂದ ಯೋಧರಿಗೆ ಹೇಳಿಕಳಿಸಿದರು. ಒಬ್ಬೊಬ್ಬರಾಗಿ ಬಂದ ಸೈನಿಕರು ಗೌರವದಿಂದ ಕೈ ಮುಗಿದು ಬಿನ್ನವಿಸಿಕೊಂಡರು:
'ಯುದ್ದವೇ ಇಲ್ಲದ ಮೇಲೆ ಬರೀ ಅಭ್ಯಾಸವನ್ನ ಎಷ್ಟು ದಿನ ಮಾಡಿದರೂ ಅಷ್ಟೆಯೇ ಬೇಟೆಗೀಟೆಯಾದರೆ ಆಡಬಹುದು.'
ಅವರ ಮಾತು ನಿಜವೆನ್ನಿಸಿತು. ಆನೆಗಳನ್ನು ಕರೆದುಕೊಂಡು ಬಿಲ್ಲು ಬಾಣ, ಭರ್ಜಿ ಕತ್ತಿ. ಬಲೆಗಳೊಡನೆ ಕಾಡಿಗೆ ನುಗ್ಗಿದರು. ಮಳೆಯನ್ನು ತುಂಬಿಕೊಂಡ ಕಾಡು, ಹಸುರಿನಿಂದ ಸಮೃದ್ಧವಾಗಿತ್ತು. ಜಿಂಕೆ ಮೊಲ ಮೊದಲಾಗಿ ಮಾಂಸದ ಪ್ರಾಣಿಗಳೂ ಸಿಕ್ಕಿದವು. ಎರಡು. ಚಿರತೆ, ಒಂದು ಹುಲಿಯೂ ಬಿದ್ದವು. ಎಲ್ಲರಿಗೂ ರೋಮಾಂಚದ ಸುಖ ಸಿಕ್ಕಿತು. ಮರುದಿನ ಮುಂದಿನ ಕಾಡು, ಇನ್ನೊಂದು ದಿನ ಅದರ ಪಕ್ಕದ್ದು, ಹೀಗೆ ಹದಿನೈದು ದಿನದಲ್ಲಿ ಮದ್ರ
ದೇಶಕ್ಕೆ ಸೇರಿದ ಕಾಡುಗಳನ್ನೆಲ್ಲ ಶೋಧಿಸಿಯಾಯಿತು. ಇನ್ನು ಮುಂದೆ ಒಂದು ತಿಂಗಳಾದರೂ ಯಾವ ಬೇಟೆಯೂ ಸಿಕ್ಕುವುದಿಲ್ಲ. ಮುಂದೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಸೈನಿಕರು ಕೂಡ ಮರದಿಂದ ಇಳುಕಿದ ಹೆಂಡ ಮತ್ತು ತಮಗಾಗಿಯೇ ನಿಯೋಜಿತರಾಗಿದ್ದ ಹೆಂಗಸರಲ್ಲಿ ಮಗ್ನರಾದರು. ವಜ್ರ ಅಜಯರಂತೂ ಸರಿಯೇ ಸರಿ. ಆದರೆ ಮತ್ತೆ ಬೇಸರ. ಕಸುಬಿನ ಬೇಸರ ಕಳೆದುಕೊಳ್ಳಲು ಹೆಂಗಸರಿದ್ದರೆ ಚನ್ನ; ಹೆಂಗಸರೇ ಕಸುಬಿನ ಕೇಂದ್ರವಾದರೆ ಅದಕ್ಕಿಂತ ಹೆಚ್ಚಿನ ಬೇಸರವಿಲ್ಲವೆಂದು ಅವರು ಬಹುಬೇಗ ಅರ್ಥಮಾಡಿಕೊಂಡರು. ಮತ್ತೆ ಬೇಟೆಗೆ ನುಗ್ಗಿದರು. ಬೇರೆ ದೇಶಗಳ ದೂರದ ಕಾಡುಗಳಿಗೆ ಓಡಿಹೋಗಿರುವ ಮೃಗಾದಿಗಳು ಇನ್ನೂ ಹಿಂತಿರುಗಿಲ್ಲವೆಂಬುದು ಗೊತ್ತಿದ್ದರೂ ನಿರಾಶರಾಗಿ ಹಿಂತಿರುಗಿದರು.
ಅಜಯ ವಜ್ರನಿಗೆ ಹೇಳಿದ: 'ಅಣ್ಣ, ಶಸ್ತ್ರಾಭ್ಯಾಸ ಮಾಡಿ ಉಳಿದಂತೆ ನಮಗೂ ಕೃಷಿ ಕೆಲಸವಿದ್ದರೆ ಚನ್ನ ಅಲ್ಲವೆ?'
'ಕೃಷಿ ಮಾಡುವುದಾದರೆ ನಾವು ಸೈನಿಕರು ಹೇಗಾದೇವು? ಶಸ್ತ್ರಾಭ್ಯಾಸ, ಯುದ್ಧ, ಉಳಿ ದಂತೆ ಸುಖ, ಇವಿಷ್ಟೇ ಸೈನಿಕನಿಗೆ ಇರಬೇಕಾದುದು.'
'ಯುದ್ಧ ನಡೆಯುತ್ತಿದ್ದರೆ ಸರಿ, ಇಲ್ಲದಿದ್ದರೆ, ಮೈ ಪರಚಿಕೊಳ್ಳುವ ಹಾಗಾಗುತ್ತೆ ನೋಡು.'
'ಅದಕ್ಕೆ ಯುದ್ಧ ಆಗುವ ಹಾಗೆ ಮಾಡಬೇಕು. ಇಲ್ಲದಿದ್ದರೆ ನಮಗೆ ಸುಖವೂ ಇಲ್ಲ. ಇನ್ನೊಂದು ವಿಷಯ ನೋಡು: ಆಗಾಗ್ಗೆ ಯುದ್ಧ ಆಗದೆ ಇದ್ದರೆ ರಾಜನು ನಮ್ಮನ್ನು ಯಾಕೆ ಸುಖವಾಗಿ ಸಾಕಿಯಾನು? ನಿಮ್ಮದೇನು ಹೆಚ್ಚು, ನೀವೂ ಕೃಷಿಕರ್ಮ ಮಾಡಿ ಅಂತ ಇಳಿಸಿ ಕಳಿಸುತಾನೆ. ಮಣ್ಣು ಮುಟ್ಟಿ ನಾವು ಕೂಡ, ಅಷ್ಟೇ ಅಲ್ಲ, ಯೋಧ ಅನ್ನೂ ಗೌರವ ಕೂಡ ಇಲ್ಲದ ಹಾಗಾಗುತ್ತೆ.'
ಅಜಯ ಸುಮ್ಮನಾದ: ಅಣ್ಣನ ಮಾತನ್ನು ಒಪ್ಪಿಕೊಂಡ. ಇದಕ್ಕೆ ಬೇರೆ ಏನು ದಾರಿ ಎಂದು ಇಬ್ಬರೂ ಮೌನವಾಗಿ ಯೋಚಿಸತೊಡಗಿದರು. ವಜ್ರ ಹೊಸತೊಂದನ್ನು ಕಂಡು ಹಿಡಿದವನಂತೆ ಧ್ವನಿ ತಗ್ಗಿಸಿ ಹೇಳಿದ: 'ಮಿತವಾಗಿದ್ದರೆ ಹೆಂಗಸರನ್ನು ಸೋಲಿಸುತ್ತಿರಬಹುದು. ಅತಿಗೆ ಹೋದರೆ ನಾವೇ ಸೋಲಬೇಕಾಗುತ್ತೆ. ವೀರನಿಗೆ ಈ ಅವಮಾನಕ್ಕಿಂತ ಯುದ್ಧದಲ್ಲಿ ಸಾಯುವುದು ಮೇಲು ಅಲ್ಲವೆ?'
ಅಜಯ ಸೂಕ್ಷ್ಮವಾಗಿ ಕತ್ತು ಹಾಕಿ ಎಂದ: 'ಸೈನಿಕರೂ ಇದೇ ಹೇಳುತ್ತಾರೆ.'
ರುಕ್ಷ್ಮರಥನಿಗೆ ಈ ತೆರನಾದ ಸಮಸ್ಯೆ ಇರಲಿಲ್ಲ. ಆಡಳಿತವೇ ಸಾಕಷ್ಟು ಸಮಯವನ್ನು ತಿನ್ನುತ್ತಿತ್ತು. ತೀರ ಕೆಲಸವೇ ಇಲ್ಲದಾಗ ಬೇಟೆಗೆ ಹೋಗುತ್ತಿದ್ದ. ನೆರೆಯ ಯಾವುದಾದರೂ ರಾಜರೊಡನೆ ಜೂಜಾಡುತ್ತಿದ್ದ. ಹೆಂಗಸರ ಕಡೆಗೆ ಮನಸ್ಸು ಹರಿಯುವ ವ್ಯವಧಾನವೇ ಕಡಿಮೆ. ಅಲ್ಲದೆ ಅವನಿಗಾಗಲೇ ಐವತ್ತಕ್ಕೆ ಹತ್ತಿರ ಹತ್ತಿರದ ವಯಸ್ಸು, ಯುದ್ಧದಲ್ಲಿ ತಟಸ್ಥರಾಗಿರು ವುದೆಂದು ತಂದೆ ಮಗ ತಮ್ಮಂದಿರು ತೀರ್ಮಾನಿಸಿದ್ದರೂ ರುಕ್ಷ್ಮರಥನ ಮನಸ್ಸು ಅಲಿಪ್ತ ವಾಗಿರಲಿಲ್ಲ. ರಾಜನಾಗಿದ್ದುದರಿಂದ ದೇಶದೇಶಗಳ ಸುದ್ದಿಯನ್ನು ಸಂಗ್ರಹಿಸುವುದು ಅವನಿಗೆ ಅಗತ್ಯವಾಗಿತ್ತು. ಗೂಢಚಾರರು ಒಬ್ಬರಾದ ಮೇಲೆ ಒಬ್ಬರಂತೆ ಸುದ್ದಿ ತರುತ್ತಲೇ ಇದ್ದರು. -: ಬೇಸಗೆಯಲ್ಲಿ ಹೊರಗೆ ಹೋದ ಎಷ್ಟೋ ಜನ ಮಳೆಗಾಲದಲ್ಲಿ ಹೊರಗೆ ಉಳಿದಿದ್ದರು. ಈಗ ಒಬ್ಬೊಬ್ಬರಾಗಿ ಹಿಂತಿರುಗುತ್ತಿದ್ದಾರೆ. ಹಸ್ತಿನಾವತಿಯಿಂದಲೂ ಬಂದಿದ್ದಾರೆ. ಪಾಂಡವರು ಅಭಿವೃದ್ಧಿ ಪಡಿಸಿಕೊಂಡು ಬದುಕಿ ಎಂದು ಧೃತರಾಷ್ಟ್ರನು ಪಾಂಡವರಿಗೆ
ಬಿಡಾರ ಹೂಡಿ ಯುದ್ಧಸಿದ್ಧತೆಯ ಕೇಂದ್ರ ಮಾಡಿಕೊಂಡಿದ್ದ ಉಪಪ್ಲಾವ್ಯದಿಂದಲೂ ಹಿಂತಿರುಗಿದ್ದಾರೆ. ದೂರದ ಕಾಶಿಯತನಕ ಹೋಗಿ ಬಂದವರಿದ್ದಾರೆ. ಕೆಲವರು ಆ ಕಡೆಗೆ ಕೆಲವರು ಈ ಕಡೆಗೆ ಇರಬಹುದು. ಆದರೆ ಈ ಯುದ್ಧದಲ್ಲಿ ಯಾವ ಕಡೆಗೂ ಸೇರದೆ ತಟಸ್ಥ ವಾಗಿರುವ ಯಾವ ರಾಜ್ಯವೂ ಇಲ್ಲ. ಕಿರಾತ, ರಾಕ್ಷಸ, ನಾಗ ಮುಂತಾದ ಎಷ್ಟೋ ಆರ್ಯೇತರ ಜನಗಳು ಕೂಡ ಈ ಯುದ್ಧಕ್ಕೆ ಧುಮುಕುತ್ತಾರಂತೆ. ಬಕ, ಹಿಡಿಂಬ ಮೊದಲಾಗಿ ಭೀಮನು ಕೆಲವು ರಾಕ್ಷಸರನ್ನು ಕೊಂದಿದ್ದನಂತೆ. ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಇಬ್ಬರ ಸಂಬಂಧಿಗಳು ಈಗ ದುರ್ಯೋಧನನ ಕಡೆಗೆ ಬಂದಿದ್ದಾರಂತೆ. ನೀವು ಸೊಗೆ ಿಹಾದರೂ ಹಳ್ಳಿಯ ಪ್ರದೇಶವನ್ನು ಕೊಟ್ಟು ಕಳಿಸಿದ್ದನಲ್ಲ, ಅದರ ಸುತ್ತಿನ ಕೆ. ಕೃಷಿಯ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳುವಾಗ ಆ ಕಾಡುಗಳಲ್ಲಿದ್ದ ನಾಗರು ವಿರೋಧಿಸಿ ದ್ದರಂತೆ. ಸಿಟ್ಟಿನಿಂದ ಅರ್ಜುನನು ಬೇಸಗೆಯಲ್ಲಿ ಆ ಕಾಡುಗಳಿಗೆಲ್ಲ ಸುತ್ತಲೂ ಒಂದೇ ಸಲಕ್ಕೆ ಬೆಂಕಿ ಹಾಕಿಸಿದ್ದನಂತೆ. ಎಷ್ಟೋ ನಾಗರು ಸತ್ತು, ಉಳಿದವರು ತಪ್ಪಿಸಿಕೊಂಡು ಹೋಗಿದ್ದರು. ಈಗ ಅವರನ್ನು, ಇತ್ತ ತ್ರಿಗರ್ತ, ಗಾಂಧಾರಗಳ ಕಡೆಯ ನಾಗರುಗಳನ್ನೆಲ್ಲ ಕರೆಸಿ, ಅರ್ಜುನ ನನ್ನು ಕೊಲ್ಲಲು ನಿಮಗೆ ಸುಸಂಧಿ ಎಂದು ದುರ್ಯೋಧನನು ಹೇಳಿದನಂತೆ. ಅವರೆಲ್ಲ ತಮ್ಮದೇ ಆದ ಒಂದು ಸೈನ್ಯ ರಚಿಸಿಕೊಂಡು ದುರ್ಯೋಧನನ ಪರ ಬೀಡುಬಿಟ್ಟಿದ್ದಾರಂತೆ. ಹಿಡಿಂಬನ ತಂಗಿಯ ಹೊಟ್ಟೆಯಲ್ಲಿ ಭೀಮನಿಗೆ ಹುಟ್ಟಿದ ಘಟೋತ್ಕಚ ಎಂಬ ರಾಕ್ಷಸನಿದ್ದಾನಂತೆ. ಅವನ ಸಹಾಯ ಕೇಳಲು ಪಾಂಡವರು ಭೀಮನನ್ನೇ ಕಳಿಸಿದ್ದರಂತೆ. ಒಂದೇ ವರ್ಷ ತನ್ನೊಡನಿದ್ದು ಬಿಟ್ಟು ಹೋಗಿದ್ದರೂ ಹಿಡಿಂಬೆಗೆ ಭೀಮನ ಮೇಲಿನ ಮಮತೆ ಹೋಗಿಲ್ಲವಂತೆ, ತನ್ನ ರಾಕ್ಷಸ ಅನುಯಾಯಿಗಳೊಡನೆ ಘಟೋತ್ಕಚನು ಬಂದಿದ್ದಾನಂತೆ. ಬಕ ಹಿಡಿಂಬರ ಸಾವಿನ ಸೇಡಿಗೆ ದುರ್ಯೋಧನನ ಕಡೆ ಬಂದ ರಾಕ್ಷಸರಿಗೆ ಪ್ರತಿಯಾಗಿ ಪಾಂಡವರು ಈ ಘಟೋತ್ಕಚನನ್ನು ತಂದು ನಿಲ್ಲಿಸಿದ್ದಾರೆ.
ಒಬ್ಬೊಬ್ಬರೂ ತಂದ ಸುದ್ದಿಗಳನ್ನು ಜೋಡಿಸಿ ರುಕ್ಷ್ಮರಥನು ಕಟ್ಟುವ ಚಿತ್ರ ದೊಡ್ಡದಾಗಿ ಬೆಳೆಯುತ್ತಿದೆ. ವಿವರಗಳು ಸ್ಪುಟಗೊಂಡು ಅವುಗಳ ಒಳಸಂದುಗಳು ಕಲ್ಪನೆಗೆ ಹೊಳೆಯುತ್ತವೆ. ಒಟ್ಟಿನಲ್ಲಿ ಇದುವರೆಗೆ ಇಷ್ಟು ದೊಡ್ಡ ಪ್ರಮಾಣದ ಯುದ್ದವು ಎಂದೂ ನಡೆದಿಲ್ಲ. ಎಲ್ಲಿಯೂ ಕೇಳಿದ ನೆನಪು ಯಾರಿಗೂ ಇಲ್ಲ. ರುಕ್ಷ್ಮರಥನಿಗೆ ಈ ಚಿತ್ರದಲ್ಲಿ ಆಸಕ್ತಿ ಹುಟ್ಟಿದೆ. ಎಷ್ಟೊಂದು ಸೈನಿಕರು, ಎಷ್ಟು ರಥಗಳು, ಎಷ್ಟು ಕುದುರೆಗಳು, ಎಂತೆಂತಹ ಕೈಚಳಕ, ಯುದ್ಧವ್ಯೂಹಗಳು. ಅಲ್ಲಿ, ಕುದುರೆಯ ಮೇಲೆ ಕೂತು ಓಡಿಸಿದರೆ ಐದು ಪಯಣದ ಹತ್ತಿರದಲ್ಲಿ ಇಂತಹ ಭಾರಿ ಯುದ್ಧ, ಸಮಸ್ತ ಆರ್ಯರು ಹಲವು ಆರ್ಯೇತರರು ಸೇರಿ ಮಾಡುವ ಯುದ್ಧ ನಡೆಯು ವಾಗ ತಾನು ತಟಸ್ಥನಾಗಿ ಬಾಗಿಲು ಬಡಿದುಕೊಂಡು ಕೂರುವುದೆಂದರೆ ಏನು ಸಾರ್ಥಕ? ಈ ಯುದ್ಧ ಹೀಗೆ ನಡೆಯಿತಂತೆ ಎಂದು ಮುದಿವಯಸ್ಸಿನಲ್ಲಿ ಮರಿಮಕ್ಕಳಿಗೆ ಹೇಳುವಾಗ ನೀನೇಕೆ ಹೋಗಲಿಲ್ಲ ಎಂದು ಅವು ಕೇಳಿದರೆ ಏನು ಉತ್ತರ ಕೊಡುವುದು ಎನ್ನಿಸಿತು, ತಾನು ಭಾಗ ವಹಿಸುವುದಿಲ್ಲವೆಂದು ಅಪ್ಪನೊಡನೆ ಮಾತಾಗಿದೆ. ಬರೀ ನೋಟ ನೋಡುವ ಜಾಗವಲ್ಲ ರಣರಂಗ. ಪ್ರೇಕ್ಷಕನಿಗೆ ಅಲ್ಲಿ ಮರ್ಯಾದೆಯೂ ಇರುವುದಿಲ್ಲ ಎಂಬ ಪುನಃಪುನಃ ಆಲೋಚನೆ ಯಿಂದ ಉತ್ಸುಕತೆಯನ್ನು ಕಡಿಮೆ ಮಾಡಿಕೊಂಡ.
ಒಂದು ದಿನ ಸಭೆಯಲ್ಲಿ ಕುಳಿತು ಆಡಳಿತ ಕಾರ್ಯ ಮಾಡುತ್ತಿರುವಾಗ ಬಡಗಿಗಳ ಮುಖ್ಯ ನಾದ ನಂದಕ ಬಂದ: 'ಯುದ್ಧಕ್ಕೆ ಅಂತ ಸಡಿಲಾದ ರಥಗಳನ್ನೆಲ್ಲ ಸರಿ ಮಾಡಬೇಕು, ಹೊಸ ತಾಗಿ ಇನ್ನೂರು ಯುದ್ಧದ್ದರಥ ಮಾಡಬೇಕು, ಸಾಮಾನು ಸಾಗಿಸುವ ಐನೂರು ಹೊಸ ಗಾಡಿ-ಬೇಕು ಎಂದು ಅಪ್ಪಣೆಯಾಗಿತ್ತು. ಹಳ್ಳಿಹಳ್ಳಿಗಳಿಂದ ಬಡಗಿಗಳನ್ನು ಕರೆಸಿದ್ದ. ಈಗ ಯುದ್ಧಕ್ಕೆ ಹೋಗುವುದೇ ಇಲ್ಲ, ಸುಮ್ಮನೆ ಅವೆಲ್ಲ ಯಾಕೆ ಅಂತ ಮಂತ್ರಿಗಳು ಹೇಳಿದರು. ಹಳ್ಳಿಗಳಲ್ಲಿ ಸಿಕ್ಕುವ ಬೇರೆ ಕೆಲಸವನ್ನೆಲ್ಲ ಬಿಟ್ಟು ಬಂದಿದೀವಿ. ಇಡೀ ವರ್ಷದ ಕೆಲಸದ ಕಾಲ ನಷ್ಟವಾಗಿದೆ. ನೀವು ಕೆಲಸ ಮಾಡಿಸದಿದ್ದರೂ ನಮ್ಮ ಕೂಲಿ ಕೊಡಿ ಅಂತ ಅವರೆಲ್ಲ ಕೇಳುತ್ತಿದ್ದಾರೆ.'
ಕೊಡುವುದಿಲ್ಲವೆನ್ನುವಂತಿಲ್ಲ. ಕೊಟ್ಟ ಮೇಲೆ ಕೆಲಸ ಮಾಡಿಸಿಡಬೇಕು. ಮಾಡಿಸಿಟ್ಟರೆ ಹಳೆಯದಾಗಿ ಕುಟ್ಟಿ ಹಿಡಿಯುತ್ತವೆ. ಅವರ ಕೂಲಿ ಎಂದು ಭಂಡಾರದ ದಿನಸಿ ಕಂಬಳಿಗಳನ್ನು ಹಂಚಿದರೆ ಕೃಷಿಕರಿಗೆ ಇನ್ನಷ್ಟು ತೆರಿಗೆ ಹಾಕಬೇಕು. ನಾಳೆ ತೀರ್ಮಾನ ಹೇಳುವುದಾಗಿ ಅವನಿಗೆ ಹೇಳಿಕಳಿಸಿದ. ಅದೇ ದಿನ ಮಧ್ಯಾಹ್ನ ಕಮ್ಮಾರ ಬಂದ. ಅವನದೂ ಇದೇ ಸಮಸ್ಯೆ, ಬಾಣಕ್ಕೆ ಲೋಹದ ಚುಚ್ಚುಮೂತಿ, ಖಡ್ಗ, ಭರ್ಜಿಯ ಮೊನೆ, ಮೊದಲಾದ ಕೆಲಸ ಆರಂಭವಾಗಿದೆ. ಎಷ್ಟು ಮಾಡಿಸಬೇಕು, ಇನ್ನಷ್ಟು ಜನ ಕಮ್ಮಾರರನ್ನು ಕರೆಸಲೆ, ಎಂದು ಕೇಳುತ್ತಿದ್ದಾನೆ. ಅವನಿಗೆ ಕೂಡ ನಾಳೆ ಬರುವಂತೆ ಹೇಳಿ ಕಳಿಸಿದ.
ಭೂಮಿಯಲ್ಲಿ ಚೆನ್ನಾದ ಬೆಳೆ ಬಂದಿದೆ. ಭತ್ತದ ಸಸಿಗಳು ತೆನೆಯೊಡೆದಿವೆ. ಇತರ ಕಾಳು. ಗಿಡಗಳೂ ಹೂಬಿಟ್ಟಿವೆ. ಹೊಲಗಳಲ್ಲೆಲ್ಲ ಸುಂಕು, ನೀಳವಾಗಿ ಉಸಿರೆಳೆದುಕೊಳ್ಳುವ ಬಯಕೆ ಯಾಗುವ ಸುಂಕು. ಧಾನ್ಯವು ಬಲಿಯುವ ಚುರುಕು ಬಿಸಿಲು. ಶಲ್ಯರಾಜ ಕುದುರೆ ಏರಿ ಪಟ್ಟಣದ ಹೊರಗೆ ಹೋಗುತ್ತಾನೆ. ಜೊತೆಗೆ ನಾಲ್ವರು ಬೆಂಗಾವಲಿನವರು. ಯಾವುದೋ ಒಂದು ಹೊಲದ ಬದುವಿನ ಹುಲ್ಲಿನ ಮೇಲೆ ಕಾಲು ನೀಡಿ ಕೂರುತ್ತಾನೆ. ಚಿಕ್ಕ ಹುಡುಗನಿಂದ ತಾನು ಪ್ರೀತಿಸಿರುವ ಸುಂಕು ಹಸಿರುವಾಸನೆ ಇದು. ಹಸಿದವನಂತೆ ಅದನ್ನು ಮೂಸಿ ಮೂಸಿ ಎಳೆದುಕೊಳ್ಳುತ್ತಾನೆ. ಹೀಗೆ ಎಷ್ಟು ಸಂವತ್ಸರ ಕಳೆದಿದೆಯೋ! ಒಂದು ತೆರನಾದ ಆಕರ್ಷಣೆ - ಒಂದು ತೆರನಾದ ವಿಕರ್ಷಣೆ. ಈ ಹಸಿರು ವಾಸನೆಯನ್ನು ಮೂಸುವಾಗ ಎಷ್ಟು ವರ್ಷ ವಾದರೂ ಬದುಕಬೇಕೆನಿಸುತ್ತದೆ. ಆದರೆ ಅದಕ್ಕೆ ಹೊಂದಿಕೊಂಡೇ ತಾನು ಬದುಕಿರುವ ಇಷ್ಟು ವರ್ಷದ ನೆನಪಾಗುತ್ತದೆ. ಸುಂಕು ವಾಸನೆಯು ನಿಂತ ನೀರಿನ ನೆನಪು ತರಿಸುತ್ತದೆ. ಯಾಕೆಂಬುದು ತಿಳಿಯುತ್ತಿಲ್ಲ. ಉತ್ಸಾಹವೇ ಹೊರಟುಹೋಗಿದೆ. ಅರಮನೆ, ರುಚಿಯಾದ ಭೋಜನ, ಸೇವೆ ಮಾಡುವ ದಾಸಿಯರು, ಮಕ್ಕಳು ಮೊಮ್ಮಕ್ಕಳು- ಇವೆಲ್ಲ ನಿಂತ ನೀರಾಗಿ ಭಾಸವಾಗುತ್ತವೆ, ಇನ್ನೆಷ್ಟು ವರ್ಷ ಬದುಕಬಹುದು ತಾನು? ಭೀಷ್ಮನಿಗೆ ನೂರ ಇಪ್ಪತ್ತಂತೆ. ತಾನೂ ಅಷ್ಟು ವರ್ಷ ಬದುಕಬಹುದು. ಆದರೆ ಅವನು ಆಜನ್ಮ ಬ್ರಹ್ಮಚಾರಿ. ಬ್ರಹ್ಮಚಾರಿಗೆ ಆಯುಷ್ಯ ಹೆಚ್ಚೆ? ಎಂದು ತನ್ನನ್ನು ತಾನೇ ಕೇಳಿಕೊಳ್ಳುತ್ತಾನೆ. ಆಯುಷ್ಯ ಹೆಚ್ಚಾಗಲಿ ಅಂತಲೇನೂ ಅವನು ಬ್ರಹ್ಮಚರ್ಯದ ಶಪಥ ಮಾಡಲಿಲ್ಲವಂತೆ. ತಾನೂ ಅಷ್ಟು ವರ್ಷ ಬದುಕಬಹುದು.
ಬದುಕಿ ಮಾಡುವುದೇನು? ರಾಜ್ಯದ ಹೊಣೆ ಹೊರುವ ಅಗತ್ಯವಿಲ್ಲ, ಮನಸೂ ಇಲ್ಲ. ಮದ್ಯದ ಎಳೆತವಿಲ್ಲ. ಹೆಂಗಸಿನ ಆಕರ್ಷಣೆ, ಆಕರ್ಷಣೆಗೆ ಬೇಕಾದ ಮೂಲ ಶಕ್ತಿ ಬತ್ತಿ ಎಷ್ಟೋ ವರ್ಷಗಳಾದುವು. ಈ ನಡುವೆ ಯುದ್ಧದ ಉತ್ಸುಕತೆ ಹುಟ್ಟಿತ್ತು. ಅದಕ್ಕೆ ಹೋಗಕೂಡದೆಂದು ತೀರ್ಮಾನವೂ ಆಯಿತಲ್ಲ. ಕಾಳು ಒಡೆಯುವ ಚುರುಕು ಬಿಸಿಲಿನ ಸುಂಕುವಾಸನೆಯನ್ನು ದೀರ್ಘವಾಗಿ ಎಳೆದುಕೊಳ್ಳುತ್ತಾನೆ. ಕುದುರೆ ಹತ್ತಿ ಖಡ್ಗ ಹಿಡಿದು, ರಥ ಏರಿ ಬಿಲ್ಲು ಹೊಡೆದು, ಕ್ಷತ್ರಿಯನಿಗೆ ಧಾನ್ಯ ಬಲಿಯುವ ವಾಸನೆ ಎಂಥದು ಎಂದುಕೊಂಡು ಹಾಗೆಯೇ ಬದುವಿನ ಮೇಲೆ ಅಂಗಾತ ಮಲಗುತ್ತಾನೆ. ಬೆಂಗಾವಲಿನ ಸೇವಕರು ವಸ್ತ್ರ ಹಾಸಲು ಬರು ತ್ತಾರೆ. ಬೇಡವೆಂದು ಅವರಿಗೆ ಸನ್ನೆ ಮಾಡಿ ಹಾಗೆಯೇ ಮಲಗುತ್ತಾನೆ ನಿಂತ ಬಿಸಿಲಿಗೆ ಮುಖ ಕೊಟ್ಟು, ಭೀಷ್ಮನೇ ದುರ್ಯೋಧನನ ಕಡೆಯ ಸೇನಾಪತಿಯಂತೆ. ವೀರ ಅಂದರೆ ವೀರ. ಎಷ್ಟು ವಿಶಾಲವಾದ ಎದೆಕಟ್ಟು. ಈ ವಯಸ್ಸಿನ ನನಗೆಂಥ ಸೇನಾಪತ್ಯ, ಕಾಡಿಗೆ ಹೋಗಿ ತಪಸ್ಸು ಮಾಡುತ್ತೇನೆ ಅಂತ ಯಾಕೆ ಅನ್ನಲಿಲ್ಲ? ತಪಸ್ಸಿಗೂ ಪ್ರಸಿದ್ಧವಾದ ವಂಶ ಅದು. ಹಾಗೆಯೇ ಕಣ್ಣು ಮುಚ್ಚುತ್ತಾನೆ. ಪ್ರಪಂಚವೆಲ್ಲ ನಸುಕೆಂಪು ಬಣ್ಣದ ಮಬ್ಬಾಗುತ್ತದೆ. ರೆಪ್ಪೆಯ ಸಂದು ತೆರೆದಾಗ ಏಳು ಬಣ್ಣದ ಬೆಳಕಿನ ಕಿರಣಗಳು ಯುದ್ಧದ ಬಾಣಗಳಂತೆ ಓಡಿ ಬಂದು ಚುಚ್ಚುತ್ತವೆ. ಶಲ್ಯರಾಜ ತಕ್ಷಣ ಎದ್ದು ಕೂರುತ್ತಾನೆ. ಎದ್ದು ನಡೆದು ದಾರಿಯ ಹತ್ತಿರವಿರುವ ತನ್ನ ಕುದುರೆಯನ್ನು ಸಮೀಪಿಸುತ್ತಾನೆ. ಬೆಂಗಾವಲಿನ ಆಳುಗಳು ಕುದುರೆ ಯನ್ನು ಸರಿಯಾಗಿ ಹಿಡಿದುಕೊಳ್ಳುತ್ತಾರೆ. ನಿಧಾನವಾಗಿ ಹತ್ತಿ ಸರಿಯಾಗಿ ಕುಳಿತು ಊರ ಹೊರದಿಕ್ಕಿಗೆ ಓಡಿಸುತ್ತಾನೆ. ಆಳುಗಳ ಕುದುರೆಗಳನ್ನು ಹಿಂದೆ ಹಾಕಿ ಓಡುತ್ತದೆ ಅವನ ಬಿಳಿಗುದುರೆ. ಹಿಡಿತ ತಪ್ಪದೆ, ಬೀಳದೆ, ಅಯಾಸವೂ ಆಗದೆ ಓಡಿಸುತ್ತಾನೆ. ಆಳುಗಳಿಗೆ ಧೂಳು ಮಾತ್ರ ಕಾಣುತ್ತದೆ. ಕುದುರೆ ಕಾಣುವುದಿಲ್ಲ. ರಾಜನಿಗೆ ಉತ್ಸಾಹ ಹುಟ್ಟುತ್ತದೆ. ಸ್ವಲ್ಪ ಹೊತ್ತಿಗೆ ಕುದುರೆಯೂ ಬೆವರುತ್ತದೆ, ಅವನೂ ಬೆವರುತ್ತಾನೆ. ಬೇಸರ ನೀಗುತ್ತದೆ.
ರುಕ್ಷ್ಮರಥ ಜೂಜಾದರೂ ಆಡೋಣವೆಂದು ಯೋಚಿಸುತ್ತಾನೆ. ತಮ್ಮಂದಿರಾದ ವಜ್ರ ಅಜಯರೊಡನೆ ಆಡಿದರೆ ತೃಪ್ತಿ ಸಿಗುವುದಿಲ್ಲ. ತನ್ನದೇ ವಸ್ತುಗಳನ್ನು ತಮ್ಮಂದಿರಿಂದ ಗೆದ್ದು ಕೊಂಡರೂ ಅಷ್ಟೆ, ತನ್ನ ಮನೆಯವರಾದ ಅವರಿಗೆ ಸೋತರೂ ಅಷ್ಟೆ. ತನ್ನದೇ ಆದ ಕಾಡು ಗಳಲ್ಲಿ ಬೇಟೆಯಾಡಹೊರಟರೂ ಉತ್ಸಾಹ ಹುಟ್ಟುವುದಿಲ್ಲ. ಆಡಳಿತದ ಮೇಲ್ವಿಚಾರಣೆ ಕಳೆದ ಹತ್ತು ವರ್ಷದಿಂದ ಮಾಡುತ್ತಿದೇನೆ. ಅದಕ್ಕೆ ಮುನ್ನ ಅಪ್ಪನ ಸಹಾಯಕನಾಗಿ ಮಾಡಿ ದ್ದೇನೆ. ಉತ್ಸಾಹವಿಲ್ಲ. ಸ್ನೇಹದ ನೆರೆ ರಾಜರೊಡನೆ ಜೂಜಾಡಿದರೆ ಆಟದ ರುಚಿ ಹತ್ತುತ್ತದೆ. ದಾಳಗಳು ಉರುಳಿ ನಿಂತಾಗ ಉಸಿರು ಹಿಡಿದು ನೋಡುವಂತಾಗುತ್ತದೆ. ಆದರೆ ಈಗ ಎಲ್ಲರೂ ಯುದ್ಧಸಿದ್ಧತೆಯಲ್ಲಿದ್ದಾರೆ. ಯುದ್ಧದ ಮಾತೇ ಆಡುತ್ತಾರೆ. ಯಾರಿಗೂ ಜೂಜಿನಲ್ಲಿ ಲಹರಿ ಇಲ್ಲ. ತಾವು ದುರ್ಯೋಧನನ ಪರವೋ ಪಾಂಡವರ ಪರವೋ ಎಂಬುದರ ಮೇಲೆ ಎಲ್ಲ ರಾಜರೂ ಪರಸ್ಪರ ಶತ್ರು ಅಥವಾ ಮಿತ್ರರಾಗಿ ವಿಂಗಡಿಸಿಹೋಗಿದ್ದಾರೆ. ಶತ್ರುವೂ ಅಲ್ಲದೆ ಮಿತ್ರನೂ ಅಲ್ಲದೆ ಸಂಬಂಧ ಇಟ್ಟುಕೊಳ್ಳುವುದು ಕ್ಷತ್ರಿಯನಿಗೆ ಸಾಧ್ಯವಿಲ್ಲವೆಂದು ತನಗೆ ತಾನೆ ಹೇಳಿಕೊಳ್ಳುತ್ತಾನೆ. ಸುಶರ್ಮನೊಡನೆ ವಿರೋಧವನ್ನು ತಪ್ಪಿಸಿಕೊಂಡಂತಾಯಿತು. ಆದರೆ ಮೊದಲಿನ ನಿಕಟ ಸ್ನೇಹವು ಈಗ ಒಣಗುತ್ತಿದೆ ಎಂದು ಅವನ ಮನಸ್ಸೇ ಹೇಳುತ್ತಿದೆ. ಕೊನೆಗೆ ಪಾಂಡವರ ಕಡೆಯೇ ಆಗಲಿ, ಯುದ್ಧಕ್ಕೆ ಹೋಗಿಬಿಡಬೇಕೆಂದು ಮನಸ್ಸಿನ ಆಳದ ಒಂದು ಮೂಲೆಯು ಸೂಚಿಸುತ್ತದೆ.
ಒಂದು ದಿನ ದುರ್ಯೋಧನ ಚಕ್ರವರ್ತಿಯ ತಮ್ಮ ದುಶ್ಯಾಸನನೇ ಬಂದ. ಪಟ್ಟಣದ ಹೊರಗೆ ಇಳಿದು ತನ್ನ ಆಗಮನವನ್ನು ದೂತರ ಸಂಗಡ ಹೇಳಿಕಳಿಸಿದ. ರುಕ್ಷ್ಮರಥನು ತಮ್ಮ ವಜ್ರನನ್ನು ರಥದೊಡನೆ ಕಳಿಸಿ ರಾಜಗೌರವದಿಂದ ಸ್ವಾಗತಿಸಿ ಸತ್ಕರಿಸಿದ. ಮೊದಲು ಶಲ್ಯ ರಾಜನ ಪಾದ ಮುಟ್ಟಿ ನಮಸ್ಕರಿಸಿ ಮಾವ ಎಂದು ಸಂಬೋಧಿಸಿ ಆಶೀರ್ವಾದ ಪಡೆದ ನಂತರ ದುಶ್ಯಾಸನನು ತನಗೆ ಹೆಚ್ಚು ಸಮಯವಿಲ್ಲವೆಂಬ ಪೀಠಿಕೆಯೊಡನೆ ಮಾತನ್ನು ಆರಂಭಿಸಿದ. 'ಮಾವ, ಪಾಂಡವರು ನಿನಗೆ ಸೋದರಳಿಯರು ನಿಜ. ಆದರೆ ನಾವೂ ಸೋದರಳಿಯರು ತಾನೆ. ಪಾಂಡುವಿಗೆ ಕೊಟ್ಟ ನಿನ್ನ ತಂಗಿ ಯಾವ ಸುಖಪಟ್ಟಳು ಹೇಳು. ಅವಳ ಸಾವಿಗೆ ನಾವು ಕಾರಣರಲ್ಲ, ಅವಳು ಕಾಡಿಗೆ ಹೋಗಲು ನಾವು ಕಾರಣರಲ್ಲ. ನಿನ್ನ ತಂಗಿಯ ಮಕ್ಕಳಿಗೆ ರಾಜ್ಯ ಬೇಕು ಅಂತ ನೀನು ಬಯಸಿದರೆ ಬೇರೆಯ ಮಾತು. ನಾವು ಅವರಿಗೆ ಅಂತ ಬಿಟ್ಟುಕೊಟ್ಟರೂ ಅವರಿಗೆ ಮಾತ್ರ ಕುದುರೆ ಉಜ್ಜುವ ಹಣೆಬರಹ ತಪ್ಪುವುದಿಲ್ಲ. ಹಿರಿ ಹೆಂಡತಿಯ ಮಕ್ಕಳು ಏರುವ ಕುದುರೆಯ ಲದ್ದಿ ಬಾಚುವುದು ಅವರ ಪಾಡಾಗಿರುವಾಗ ನೀನು ಆ ಹಿರಿ ಹೆಂಡತಿಯ ಮಕ್ಕಳಿಗೆ ಯಾಕೆ ಸಹಾಯ ಮಾಡಬೇಕು ? ಯುದ್ಧದಲ್ಲಿ ನಾವು ಗೆದ್ದರೆ ನಿನ್ನ ತಂಗಿಯ ಇಬ್ಬರು ಮಕ್ಕಳಿಗೂ ಖಂಡಿತ ಆ ರಾಜ್ಯವನ್ನು ಕೊಡುತ್ತೇವೆ. ಇದು ದುರ್ಯೋಧನನ ಆಣೆ ಮಾತು ಅಂತ ತಿಳಿದುಕೊ, ನಮಗೆ ಜಗಳವಿರುವುದು ಹಿರಿಯ ಮೂವರಲ್ಲಿ, ಕಿರಿಯ ಸಾಧು ಗಳೊಡನೆಯಲ್ಲ.'
ಶಲ್ಯರಾಜನಿಗೆ ಪಾಂಡವಪಂಚರೊಡನೆ ಇದ್ದ ಸಮಷ್ಟಿ ಸ್ನೇಹ ಒಡೆದಂತಾಯಿತು. ದುಶ್ಯಾಸನ ರುಕ್ಷ್ಮರಥನಿಗೆ ಹೇಳಿದ: 'ಯುದ್ಧ ಅಂದರೆ ಹಣ ಬೇಕು, ಸೈನಿಕರಿಗೆ ವಸ್ತ್ರ, ಆಹಾರ, ಇತರ ಸುಖಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಸುಮ್ಮಸುಮ್ಮನೆ ಜೀವ ಕೊಟ್ಟು ಕಾಯುತ್ತಾ ರೆಯೆ? ನನ್ನ ಸಂಗಡ ಸಾವಿರ ಕಂಬಳಿ, ಸಾವಿರ ಜೋಡಿ ಮೇಲ್ವಾಸು, ಒಂದು ತಪ್ಪಲೆ ನಿಷ್ಕ ಗಳನ್ನು ತಂದಿದ್ದೇನೆ. ನಿನ್ನ ಸೈನ್ಯಕ್ಕೆ ಬಹುಮಾನ ಅಂತ ಅಲ್ಲ. ಹಿರೀಕನಾದ ಮಾವನಿಗೆ ಸಲ್ಲಿಸ ಬೇಕಾದ ಕಪ್ಪ ಅಂತ. ನೀನು ಹೊರಟ ದಿನದಿಂದ ಅಲ್ಲಿಗೆ ತಲುಪಿ ಯುದ್ಧ ಮುಗಿದು ಹಿಂತಿರುಗಿ ಊರು ಸೇರುವ ತನಕ ನಿನ್ನ ಸಮಸ್ತ ಸೈನ್ಯಕ್ಕೂ ವಸತಿಯ ಚಪ್ಪರ, ಸುಗ್ರಾಸ ಭೋಜನ, ಆನೆ ಕುದುರೆಗಳ ಮೇವು ನಮ್ಮ ಹೊಣೆ. ಎಷ್ಟು ಹಾಲು, ತುಪ್ಪ, ಹಿಟ್ಟು, ಅಕ್ಕಿ ಬೇಕು ಈಗಲೇ ಹೇಳಿಬಿಡು. ಅದರ ಎರಡರಷ್ಟು ಸರಬರಾಜು ಆಗುತ್ತದೆ. ಹಸ್ತಿನಾಪುರದ ಅರಸರ ಪ್ರೀತಿ ದೊಡ್ಡದಾಗಿರುವಂತೆ ಅಡಿಗೆಯವರ ಕೈಯೂ ದೊಡ್ಡದು.'
ಶಲ್ಯ ಮಾತನಾಡಲಿಲ್ಲ. ರುಕ್ಷ್ಮರಥನ ಮುಖ ನೋಡಿಯೇ ಅವನ ಮನಸ್ಸನ್ನು ದುಶ್ಯಾಸನ ಗ್ರಹಿಸಿದ. ತಾನೇ ಎಂದ: 'ಇನ್ನೂ ಒಂದು ಮಾತು. ಈ ಯುದ್ಧ ಆಗಿಯೇ ಆಗುತ್ತೆ ಅಂತ ತಿಳಿಯಬೇಡ. ಪಾಂಡವರು ಆ ಕೃಷ್ಣನ ಮಾತು ಕೇಳಿಕೊಂಡು ನಮ್ಮನ್ನು ಬೆದರಿಸಿದರು. ನಮಗೆ ಅವರ ಬೆಂಬಲವಿದೆ ಇವರ ಬೆಂಬಲವಿದೆ ಅಂತ ಜೋರು ಮಾಡಿದರು. ನಮಗೂ ಬೆಂಬಲಿಗರಿದ್ದಾರೆ ತೋರಿಸ್‌ತೀವಿ ಬನ್ನಿ ಅಂದೆವು. ಈಗ ಅವರ ಕಡೆಯವರು ಬರುತ್ತಾರಂತೆ. ನಾವೆಲ್ಲ ಒಂದು ಕಡೆ ಸೇರಿ ಅವರ ಎದುರುಗೊಳ್ಳೋಣ. ಬಲವನ್ನು ಪ್ರಯೋಗಿಸುವ ಬದಲು ಪ್ರದರ್ಶಿಸೋಣ. ಆಗ ಅವರು ನ್ಯಾಯಕ್ಕೆ ಬರುತ್ತಾರೆ. ಧರ್ಮ ಇದ್ದಂತೆ ತೀಲ್ಮಾನ ವಾಗಲಿ, ರಾಜಪೀಠದಲ್ಲಿ ನಾವು ಮುಂದುವರಿಯುವುದು, ಬಿಡುವುದು ಮುಖ್ಯವಲ್ಲ. ಧರ್ಮ ಗೆಲ್ಲುವುದು ಮುಖ್ಯ. ಧರ್ಮ ಸೋತರೆ ಪ್ರಜೆಗಳ ಹಿತ ಸಾಧನೆಯಾಗುತ್ತೆಯೆ? ದುರ್ಯೋಧನ ರಾಜ್ಯ ಆಳುತ್ತಿರುವುದು ಪ್ರಜೆಗಳಿಗಾಗಿ. ನೀನೇ ಹಸ್ತಿನಾವತಿಗೆ ಬಂದು ನೋಡು.'
ಮುಂದುವರೆಯುತ್ತದೆ...
( 📑 26 ರಿಂದ 32 📌 ಒಟ್ಟು ಪುಟಗಳು 657 )
💛 ಫೇಸ್ಬುಕ್ ಗ್ರೂಪ್ ಲಿಂಕ್...
https://www.facebook.com/groups/822079466827754/?ref=share&mibextid=NSMWBT
❤️ ನನ್ನ ಟೆಲಿಗ್ರಾಂ ಪೇಜ್ ನಲ್ಲಿಯು ಸಹ ಇರುತ್ತದೆ !
https://t.me/krishnachetanaloka1/26323
📙 *ಪರ್ವ* 📖
✒️ `ಎಸ್.ಎಲ್. ಭೈರಪ್ಪ```
🏹 ~ಕೃಷ್ಣ ಚೇತನ~ 📒
#ನಿಮ್ಮ ಗಮನಕ್ಕೆ ❗✔️
