#📜ಪ್ರಚಲಿತ ವಿದ್ಯಮಾನ📜
ಮನಸೂರೆಗೊಂಡ ಪಿ.ಬಿ.ಶ್ರೀನಿವಾಸ್ ನೆನಪಿನ ಗೀತಗಾಯನ
ಡಾ. ಪಿ.ಬಿ ಶ್ರೀನಿವಾಸ್ ಮಧುರಗಾನ ಬೆಂಗಳೂರು ಮತ್ತು ಡಾ. ಪಿ. ಬಿ ಶ್ರೀನಿವಾಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ "ಇನಿದನಿಯರಸ, ಕಲೈಮಾಮಣಿ, ಸಂಗೀತ ಕಲಾನಿಧಿ ಡಾ. ಪಿ.ಬಿ ಶ್ರೀನಿವಾಸ್ ಭಾವ ಕುಸುಮ" ವಿವಿಧ ಕಲಾವಿದರಿಂದ ಗೀತಗಾಯನ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿ ಡಿ.ವಿ.ಜಿ ರಸ್ತೆಯ ಅಬಲಾಶ್ರಮದಲ್ಲಿ ಆಯೋಜನೆಗೊಂಡಿತ್ತು.
ಮೋಹನ್ ಶ್ರೀಗಿರಿಪುರ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಲಕ್ಷ್ಮಿ, ಅನುರಾಧ ಹಾಗೂ ಸಹನಾ ಸುಬ್ರಹ್ಮಣ್ಯಂ ಅವರು ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಬೆಳಗ್ಗೆ ಏಳು ಗಂಟೆಗೆಲ್ಲ ಗೀತಗಾಯನ ಕಾರ್ಯಕ್ರಮ ಆರಂಭಗೊಂಡಿತು.
ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರದಲ್ಲಿ (ಎಂ.ಎ)ಸ್ನಾತಕೋತ್ತರ ಪದವಿ, ಕುಂಡಲಿನಿ ಯೋಗ ಸಾಧಕ, ಸಿ.ಎ ಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ, ಕುಂಡಲಿನಿ ಯೋಗ ವಿಷಯ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವಿಕೆ, ವೀಣೆ ನುಡಿಸುವ ನೈಪುಣ್ಯತೆ ಹಾಗೂ ಈಗಲೂ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಡಾ. ಪಿ. ಬಿ ಶ್ರೀನಿವಾಸನ್ ಅವರ ಸುಪುತ್ರ ಡಾ. ಪಿ.ಬಿ ಫಣೀಂದ್ರ ಅವರು ಗೌರವಾಧ್ಯಕ್ಷರಾಗಿ ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲೈಂಗನರ್ ದೂರದರ್ಶನದ ಸಹಾಯಕ ನಿರ್ದೇಶಕ, ಒಂದು ಸಾಲಿನ ಬರಹಗಾರ, ಚಿತ್ರಕಥೆ ಬರಹಗಾರ, ಸಂಭಾಷಣೆ ಬರಹಗಾರ, ಧಾರಾವಾಹಿಗಳಿಗೆ ಹಿನ್ನೆಲೆ ಸಂಗೀತ ಸಂಯೋಜಕ, ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ, ಅನಿಮೇಷನ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿರುವ ಪಿ. ಸೀತಾರಾಮನ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು.
ಸುಮಾರು 11 ಗಂಟೆಗೆ ಉದ್ಘಾಟನಾ ಸಮಾರಂಭ ಪ್ರಾರಂಭವಾಯಿತು. ಅತಿಥಿಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಕಾರ್ಯಾಧ್ಯಕ್ಷ ಮೋಹನ್ ಶ್ರೀಗಿರಿಪುರ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಮೋಹನ್ ಶ್ರೀಗಿರಿಪುರ ಹಾಗೂ ಸುದರ್ಶನ್ ಅವರು ಅತಿಥಿಗಳ ಪರಿಚಯವನ್ನು ಮಾಡಿದರು.
ಕಾರ್ಯಕ್ರಮವನ್ನು ನಡೆಸಲು ಸಹಾಯ ಹಸ್ತ ಚಾಚಿದವರೆಲ್ಲರಿಗೂ ಅತಿಥಿ ಗಣ್ಯರ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ಅತೀ ಧೀರ್ಘವಲ್ಲದ ಉದ್ಘಾಟಕರ ಭಾಷಣ, ಮುಖ್ಯ ಅತಿಥಿಗಳ ನುಡಿಗಳು ಮತ್ತು ಅಧ್ಯಕ್ಷರ ನುಡಿಗಳು ಅರ್ಥಪೂರ್ಣವಾಗಿದ್ದವು. ಎಲ್ಲರೂ ಡಾ. ಪಿ.ಬಿ ಶ್ರೀನಿವಾಸ್ ರವರ ಬಗ್ಗೆ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಗಳಾದ ಪಿ. ಸೀತಾರಾಮನ್ ಮಾತನಾಡಿ, ಒಬ್ಬ ಅತ್ಯುತ್ತಮ ಧ್ವನಿ ಅನುಕರಣೆ ಕಲಾವಿದರು. ಅವರು ವೇದಿಕೆಯಲ್ಲಿ ಪ್ರದರ್ಶಿಸಿದ ಹಲವು ಅದ್ಭುತವಾದ ಧ್ವನಿ ಅನುಕರಣೆಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರೇಕ್ಷಕರ ಮನದಲ್ಲಿ ಅಚ್ಚರಿ ಮೂಡುವಂತೆ ಮಾಡಿದವು. ಪ್ರೇಕ್ಷಕರಿಂದ ಕರತಾಡನ ಹಾಗೂ ಹರ್ಷೋದ್ಗಾರಗಳು ಮೊಳಗಿದವು.
ಗೀತಗಾಯನದಲ್ಲಿ ಹಲವಾರು ಕಲಾವಿದರು ಪಾಲ್ಗೊಂಡಿದ್ದರು. ವಿಶೇಷವೆಂದರೆ ಎಲ್ಲರೂ ಸಂಗೀತ ಕಲಾನಿಧಿ ಡಾ. ಪಿ ಬಿ ಶ್ರೀನಿವಾಸ್ ರವರು ಹಾಡಿದಂತಹ ಅತ್ಯುತ್ತಮ ಗಾನಗಳನ್ನು ಆರಿಸಿ ಹಾಡಿದ್ದರು. ವಿಶೇಷವೆಂದರೆ ಮೋಹನ್ ಶ್ರೀಗಿರಿಪುರ ಅವರು ಪಿ. ಬಿ ಶ್ರೀನಿವಾಸ್ ಅವರನ್ನು ಹೋಲುವ ಧ್ವನಿಯನ್ನು ಹೊಂದಿದ್ದಾರೆ. ಅವರೂ ಕೂಡ ಸುಮಧುರ ಗೀತೆಗಳನ್ನು ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಗೀತಗಾಯನ ಕಾರ್ಯಕ್ರಮದಲ್ಲಿ ಯುಗಳ ಗೀತೆಗಳು ಹಾಗೂ ಏಕವ್ಯಕ್ತಿ ಗೀತೆಗಳು ಒಳಗೊಂಡಿದ್ದವು.
ಎಲ್ಲಾ ಗಾಯಕ ಗಾಯಕಿಯರ ಹಾಡುಗಳು ಸುಶ್ರಾವ್ಯ ಹಾಗೂ ಸುಮಧುರವಾಗಿದ್ದವು. ಯುವ ಕಲಾವಿದರು ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಇಂದಿನ ಯುವ ಜನತೆ ಅಂದಿನ ಕಾಲದ ಕ್ಲಿಷ್ಟಕರವಾದ ಗೀತೆಗಳನ್ನು ಕಲಿತು ಸೊಗಸಾಗಿ, ಮಧುರವಾಗಿ ಹಾಡಿದ್ದು ಪ್ರಶಂಸನೀಯವಾಗಿತ್ತು. ಬಹುಶಃ ನೂರಕ್ಕಿಂತ ಹೆಚ್ಚು ಹಾಡುಗಳನ್ನು ಕಲಾವಿದರು ಹಾಡಿದ್ದಾರೆ. ಗೀತಗಾಯನವನ್ನು ಆಲಿಸುತ್ತಿದ್ದ ಪ್ರತಿಯೊಬ್ಬರೂ ಕರತಾಡನದ ಮೂಲಕ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಿ ಉತ್ಸಾಹವನ್ನು ತುಂಬುತ್ತಿದ್ದರು.
ಬಿ. ಆರ್ ಉಮೇಶ್ ಅವರು ಧ್ವನಿವರ್ಧಕ ಉಪಕರಣಗಳ ಸಂಪೂರ್ಣ ಮೇಲುಸ್ತುವಾರಿಯನ್ನು ವಹಿಸಿ, ಉತ್ತಮ ರೀತಿಯಲ್ಲಿ ಉಪಕರಣಗಳ ನಿರ್ವಹಣೆಯನ್ನು ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗಾಯಕಿ ಮಮತಾ ಭಾಸ್ಕರ್ ಅವರು ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರವಾಗಿ ನಡೆದ ಗೀತಗಾಯನ ಕಾರ್ಯಕ್ರಮದ ಹಾಗೂ ಗೀತಗಾಯನಗಳ ಅಷ್ಟೂ ವಿಡಿಯೋಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಗೀತಗಾಯನ ಕಾರ್ಯಕ್ರಮದ ನಡುವೆ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಾಯನದಲ್ಲಿ ನುರಿತ ಹಿರಿಯ ಕಲಾವಿದರು ಹಾಗೂ ಮುಖ್ಯ ಅತಿಥಿಗಳ ಮುಖಾಂತರ ಅವರಿಗೆ ಹಾರ ಹಾಕಿಸಿ, ಶಾಲು ಹೊದಿಸಿ, ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಗೌರವ ಸನ್ಮಾನವನ್ನು ಮಾಡಲಾಯಿತು. ಸಂಜೆ ಕಾರ್ಯಕ್ರಮ ಮುಗಿಯುವವರೆಗೂ ಗಾನಾಲಾಪನ ಮುಂದುವರೆದಿತ್ತು.
ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ಹೊತ್ತ ಎಲ್ಲರಿಂದಲೂ ಸಮರ್ಪಕವಾದ ಕಾರ್ಯನಿರ್ವಹಣೆ ನಡೆದಿತ್ತು. ಕಾರ್ಯಕ್ರಮದ ಅಂತಿಮದಲ್ಲಿ ಹಲವು ಉತ್ತಮ ಗಾಯಕ/ಗಾಯಕಿಯರಿಗೆ ಸನ್ಮಾನ ಪುರಸ್ಕಾರವನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ತಿಂಡಿ, ಕಾಫಿ, ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಡಾ. ರಾಜಕುಮಾರ್ ಸೌಹಾರ್ದ ಪ್ರಶಸ್ತಿ, ಕಲೈವನರ್ ಹೀಗೆ ಈ ಮೇಲ್ಕಂಡ ಪ್ರಶಸ್ತಿಗಳನ್ನು ಪಡೆದ ಡಾ. ಪಿ. ಬಿ ಶ್ರೀನಿವಾಸ್ ರವರು ಜನಮನದಲ್ಲಿ ಅಚ್ಚಳಿಯದೆ ಉಳಿದಂತಹ ಒಬ್ಬ ಅಪೂರ್ವ ಹಾಗೂ ಅಪ್ರತಿಮ ಗಾಯಕರಾಗಿದ್ದಾರೆ.
ಪಿ.ಬಿ.ಎಸ್ ರವರ ಅಭಿಮಾನಿಗಳು ಅವರ ಹೆಸರಿನಲ್ಲಿ ಗೀತಗಾಯನ ಕಾರ್ಯಕ್ರಮಗಳನ್ನು ಮಾಡುತ್ತಾ ಅಪೂರ್ವವಾದ ಗೀತೆಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿರುವುದು ವಿಶೇಷ. ಕಳೆದ ಮೂರು ವರ್ಷಗಳಿಂದ ಡಾ. ಪಿ.ಬಿ ಶ್ರೀನಿವಾಸ್ ಎಂಬ ಗಾನಮಾಂತ್ರಿಕನ ಸವಿ ನೆನಪಿನಲ್ಲಿ ಮೋಹನ್ ಶ್ರೀ ಗಿರಿಪುರ ರವರ ಕಲಾವಿದರ ಬೆಳಗವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದು ಬಳಗವು ನಡೆಸುತ್ತಿರುವ ಒಂಭತ್ತನೇ ಗೀತಗಾಯನ ಕಾರ್ಯಕ್ರಮವಾಗಿದೆ. ಇದುವರೆಗೂ ನಡೆಸಿದ ಕಾರ್ಯಕ್ರಮಗಳ ಪ್ರಮುಖ ಹೆಸರುಗಳು ಇಂತಿವೆ.
1. ಮೋಹಕ ಗಾನ ಮೋಹನ ಯಾನ
(ಸಿಂಗ್ ವಿತ್ ದ ಸ್ಟಾರ್)
2. ಪಿ.ಬಿ.ಎಸ್ ಹಾಡುಹಬ್ಬ ಹಾಗೂ
3. ಡಾ. ಪಿ. ಬಿ. ಶ್ರೀನಿವಾಸ್ ಭಾವಕುಸುಮ.
ಅಜರಾಮರರಾದ ಗಾಯಕ ಡಾ. ಪಿ. ಬಿ ಶ್ರೀನಿವಾಸ್ ರವರ ಹೆಸರಿನಲ್ಲಿ ಸಂಸ್ಥೆಗಳು ಜಂಟಿ ಆಯೋಜನೆಯಲ್ಲಿ ಮಾಡುತ್ತಿರುವ ಸಂಗೀತ ಸೇವೆಯು ಅನುಕರಣೀಯ. ತಮ್ಮ ಮೆಚ್ಚಿನ ಗಾಯಕನ ಗಾಯನದ ಗೀತೆಗಳನ್ನು ಚಿರಸ್ಮರಣೀಯವಾಗಿರಿಸುವ ನಿಟ್ಟಿನಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಗಾಯಕ ಪುತ್ರ ಡಾ. ಪಿ. ಬಿ ಫಣೀಂದ್ರ ಹಾಗೂ ಮೋಹನ್ ಶ್ರೀಗಿರಿಪುರ ಮತ್ತು ಎಲ್ಲಾ ಕಲಾವಿದರ ಪರಿಶ್ರಮ ಶ್ಲಾಘನೀಯ. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಸುದರ್ಶನ್ ಅವರು ಸೊಗಸಾಗಿ ನಿರ್ವಹಿಸಿದರು. ಅಂತಿಮವಾಗಿ ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಯುತ ಮೋಹನ್ ಶ್ರೀಗಿರಿಪುರರವರು ಮಾಡಿದರು. ಡಾ. ಪಿ. ಬಿ ಶ್ರೀನಿವಾಸ್ ರವರ ಸ್ಮರಣಾರ್ಥವಾಗಿ ಪ್ರಾರಂಭಗೊಂಡ ಗೀತಗಾಯನ ಕಾರ್ಯಕ್ರಮವು ಚಿರಕಾಲ ಹೀಗೆಯೇ ಮುಂದುವರೆಯುವಂತಾಗಲಿ.
- ರುಕ್ಮಿಣಿ ಎಸ್ ನಾಯರ್, ಬೆಂಗಳೂರು
#PBSrinivas #memorable #song #singing #RukminiSNair #malgudiexpress #malgudinews #news #TopNews
