#📜ಪ್ರಚಲಿತ ವಿದ್ಯಮಾನ📜
ಗ್ಯಾರಂಟಿಗಳನ್ನು ವಿರೋಧಿಸಲು ಎಚ್.ಡಿ. ದೇವೇಗೌಡರನ್ನೇ ಬಿಜೆಪಿ ಕಣಕ್ಕಿಳಿಸಿದೆ: ಸುರ್ಜೇವಾಲ
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಹೆಚ್ಚಿಸಿವೆ. ಸರ್ಕಾರ ಮತ್ತು ಪಕ್ಷಕ್ಕೆ ಸಿಕ್ಕಿರುವ ಜನ ಮನ್ನಣೆಯನ್ನು ಸಹಿಸಲಾಗದೆ ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಲು ಈಗ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಕಣಕ್ಕಿಳಿಸಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಕೇವಲ ಜನಪರ ಯೋಜನೆಗಳಲ್ಲ. ಬದಲಿಗೆ ಇವು 'ಸಾಮಾಜಿಕ ನ್ಯಾಯ'ವನ್ನು ಎತ್ತಿ ಹಿಡಿದು ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆಯನ್ನು ತಂದಿವೆ. ಆದರೆ, ಈ ಬದಲಾವಣೆಯನ್ನು ಸಹಿಸದ ಬಿಜೆಪಿ ಈಗ ಗ್ಯಾರಂಟಿಗಳನ್ನು ವಿರೋಧಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನೇ ಬಿಜೆಪಿ ಕಣಕ್ಕಿಳಿಸಿದೆ ಎಂದರು.
ಗ್ಯಾರಂಟಿ ಯೋಜನೆಗಳು ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಬಿಜೆಪಿ-ಜೆಡಿಎಸ್ ಮೈತ್ರಿಯ ದ್ವೇಷಕ್ಕೆ ಮಿತಿಯೇ ಇಲ್ಲ. ಜನರ ಬದುಕಿಗೆ ಬೆಳಕಾಗಿರುವ ಈ ಯೋಜನೆಗಳನ್ನು ವಿರೋಧಿಸಲು ದೇವೇಗೌಡರನ್ನೇ ಬಿಜೆಪಿ ಮುಂದೆ ಬಿಟ್ಟಿದೆ. ಇಂತಹ 'ಕುರುಡು ದೃಷ್ಟಿಯುಳ್ಳ ಪಕ್ಷಗಳು' ನಾಚಿಕೆಪಡಬೇಕು ಎಂದರು.
ಗ್ಯಾರಂಟಿಗಳಿಂದ ಆದ ಪರಿವರ್ತನೆ ಮತ್ತು ಪ್ರಯೋಜನೆಗಳ ಯಶಸ್ಸು ಜನಸಾಮಾನ್ಯರ ಬದುಕಿನ ಮೇಲೆ ಆಗಿರುವ ಪರಿಣಾಮಗಳನ್ನು ವಿವರಿಸಿದ ಅವರು ,ಶಕ್ತಿ ಯೋಜನೆ ಮಹಿಳೆಯರ ಓಡಾಟ, ಸ್ವಾತಂತ್ರ್ಯ ಮತ್ತು ದುಡಿಯುವ ಸಾಮರ್ಥ್ಯವನ್ನು ಹೆಚ್ಚಿಸಿ 'ಹೊಸ ವಿಶ್ವ ದಾಖಲೆ' ಸೃಷ್ಟಿಸಿದೆ. ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೆ 50,005 ಕೋಟಿ ರೂ. ಹಣ ವ್ಯಯಿಸಿದೆ ಎಂದರು.
ಗೃಹ ಜ್ಯೋತಿ ಮೂಲಕ 1.64 ಕೋಟಿ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿದ್ದರಿಂದ ಶೇ. 90ರಷ್ಟು ಕುಟುಂಬಗಳು ಹಣ ಉಳಿಸಿ, ಅದನ್ನು 'ಮನೆಯ ಇತರ ಅಗತ್ಯಗಳಿಗೆ' ಬಳಸುತ್ತಿವೆ. ಈ ಯೋಜನೆಗಾಗಿ 18,139 ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ವ್ಯಯಿಸಿದೆ.ಪಂಚಗ್ಯಾರಂಟಿ ಯೋಜನೆಗಳಿಗಾಗಿಯೇ ರಾಜ್ಯ ಸರ್ಕಾರ 97 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ವ್ಯಯಿಸುತ್ತಿರುವಾಗ ಆರ್ಥಿಕ ಪರಿಸ್ಥಿತಿ ಹೇಗೆ ಹದಗೆಟ್ಟಿದೆ ಎಂದರು.
ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ಉದ್ದೇಶವನ್ನು ಹತ್ತಿಕ್ಕುವ ಮೂಲಕ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲು ಬಿಜೆಪಿ-ಜೆಡಿಎಸ್ ಬಯಸುತ್ತಿವೆ ಎಂಬುದು ಪ್ರತಿ ಕನ್ನಡಿಗನಿಗೂ ತಿಳಿದಿದೆ. ಆದರೆ ನಮ್ಮ ಸರ್ಕಾರ ಕರ್ನಾಟಕದ ಪ್ರತಿಯೊಬ್ಬ ನಾಗರಿಕರ ಪರವಾಗಿದ್ದು, ಇಂತಹ ದುಷ್ಟ ಯತ್ನವನ್ನು ತಡೆಯುತ್ತೇವೆ ಎಂದರು.
#BJP #fielded #HDDeveGowda #oppose #guarantees #RSSurjewala #malgudiexpress #malgudinews #news #TopNews
