"ರಾಜಕುಮಾರ್ ಅವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ ವಲಯದಿಂದ ಬಂದವರು. ಶೈಕ್ಷಣಿಕವಾಗಿ ಹಿಂದುಳಿದವರು ಮೂರನೇ ತರಗತಿಯನ್ನೂ ಪೂರೈಸದ ಇವರು ಕಲಿತದ್ದು ಕಲೆಯ ಮೂಲಕ, ಬದುಕಿನ ಮೂಲಕ. ಜಾತಿ ಮತ್ತು ವರ್ಗ ವ್ಯವಸ್ಥೆಯ ಕರಾಳತೆ ಪ್ರಖರವಾಗಿರುವ ನಮ್ಮ ಸಾಮಾಜಿಕ ಸಂದರ್ಭದಲ್ಲಿ ನಿರ್ಲಕ್ಷಿತ ಸಾಮಾಜಿಕ-ಆರ್ಥಿಕ ವಲಯದಿಂದ ಬಂದವರೂ ಮೂರನೇ ತರಗತಿಯನ್ನು ಮುಗಿಸದೆ ಇರುವವರೂ ಆದ ರಾಜಕುಮಾರ್ ದೇಶದ ದೊಡ್ಡ ಪ್ರತಿಭೆಯಾಗಿ ಬೆಳೆದದ್ದು ಒಂದು ಅನನ್ಯ ಸಾಧನೆ. 'ದೊಡ್ಡ' ಜಾತಿಯ ಹಿನ್ನೆಲೆಯಿಲ್ಲ; ಶ್ರೀಮಂತಿಕೆಯ ಬೆಂಬಲವಿಲ್ಲ, ಶಿಕ್ಷಣದ ಒತ್ತಾಸೆಯಿಲ್ಲ, ಪ್ರತಿಭೆ; ಕೇವಲ ಪ್ರತಿಭೆ. ಅದಕ್ಕೆ ತಕ್ಕುದಾದ ಶ್ರದ್ಧೆ, ಶ್ರಮ; ಸಂಕಲ್ಪ; ಇವುಗಳಿಂದ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಕರಾಳ ಕಟ್ಟಳೆಗಳನ್ನು ಮೀರಿ ಬೆಳೆದದ್ದು ರಾಜಕುಮಾರ್ ಅವರ ಅಸಾಧಾರಣ ಸಾಧನೆ.
ರಾಜಕುಮಾರ್ ಕಲೆಯನ್ನು ಕಸುಬು ಎಂದುಕೊಂಡರು. 'ಕಲಾ ಸೇವೆ ಮಾಡ್ತೇನೆ ಅನ್ನೋದೆಲ್ಲ ಬರೀ ಮಾತು, ಹೊಟ್ಟೆಪಾಡಿಗಾಗಿ ಅಭಿನಯ ಮಾಡ್ತಾ ಬಂದೆ. ಅಭಿನಯ ಕಲೆ ನನ್ನ ಕಸುಬು. ಆಮೇಲೆ ಹಾಡಿದೆ. ಅದೂ ನನ್ನ ಕಸುಬು. ಹೀಗಾಗಿ ಕಲೆ ಅನ್ನೋದು ನನ್ನ ಪಾಲಿಗೆ ಕಸುಬು. ನನಗೆ ಗೊತ್ತಿರೋದು ಅದೊಂದೇ. ಅದನ್ನ ಮಾಡ್ತಾ ಬಂದೆ. ಮೊದಲು ರಂಗಭೂಮೀಲಿ, ಆಮೇಲೆ ಚಿತ್ರರಂಗದಲ್ಲಿ'- ಇದು ಡಾ. ರಾಜಕುಮಾರ್ ಅವರ ಅಂತರಾಳದ ಮಾತು. ಕಲೆಯನ್ನು ಕಸುಬು ಎಂದುಕೊಂಡು ಬಾಳಿದವರು ಶ್ರಮಜೀವಿ ವಲಯದಿಂದ ಬಂದ ಜನಪದ ಕಲಾವಿದರು. ರಾಜಕುಮಾರ್ ಅವರು ಸಹ ಶ್ರಮಜೀವಿ ವಲಯದಿಂದ ಬಂದವರು; ಒಪ್ಪೊತ್ತಿನ ಊಟಕ್ಕಾಗಿ ಕಡುಕಷ್ಟಗಳನ್ನು ಅನುಭವಿಸಿದರು; ಕಲೆಯನ್ನು ನಂಬಿ ಹಸಿವಿಗೆ ಉತ್ತರ ಹುಡುಕಿದವರು. ಕಲೆಯನ್ನು ಕಸುಬು ಎಂದು ಭಾವಿಸಿದರು. ಕಸುಬು ಎನ್ನುವುದು ಶ್ರಮಜೀವಿಗಳ ಪರಿಭಾಷೆ.
ಈ ಎಲ್ಲ ಕಾರಣಗಳಿಂದ ಅವರನ್ನು ನಾನು 'ಬಂಗಾರದ ಮನುಷ್ಯ' ಎನ್ನುವ ಬದಲು 'ಬೆವರಿನ ಮನುಷ್ಯ' ಎಂದು ಕರೆಯುತ್ತಾ ಬಂದಿದ್ದೇನೆ. ಅವರಿಗೆ ಬೆವರಿನ ಬೆಲೆ ಗೊತ್ತಿತ್ತು. ಬಡತನದ ಬೇಗೆಯು ಅವರ ಭಾವನೆಗಳ ಭಾಗವಾಗಿತ್ತು. ಹೀಗಾಗಿ ಅವರಲ್ಲಿದ್ದ 'ಭಕ್ತಿ'ಗೂ ಬೆವರಿನ ಆಯಾಮ ಲಭ್ಯವಾಗಿತ್ತು."
#💚mohan #ಧರ್ಮ ಶಾಸ್ತ🌍 #😍ನನ್ನ ನೆಚ್ಚಿನ ಸೆಲೆಬ್ರಿಟಿ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್


