*ಗುರು ಪೂರ್ಣಿಮೆ*
ಇಂದು ಗುರುಪೂರ್ಣಿಮೆ. ನಮಗೆ ಜ್ಞಾನವನ್ನು ಕೊಟ್ಟ ಎಲ್ಲ ಗುರುಗಳನ್ನೂ ಇಂದು ನೆನೆಸಿ, ಕೊನೆಯ ಪಕ್ಷ ಮನದಲ್ಲಾದರೂ ಗೌರವ ಸಲ್ಲಿಸಬೇಕು. ತಂದೆ, ತಾಯಿಯರೇ. ಎಲ್ಲರಿಗೂ ಮೊದಲ ಗುರುಗಳು. ನಂತರ ಪ್ರಾಥಮಿಕ ಶಾಲೆಯ, ಪ್ರೌಢಶಾಲೆಯ ಗುರುಗಳು, ಕಾಲೇಜಿನ ಪ್ರಾಚಾರ್ಯರು ಎಲ್ಲರೂ ಗುರುಗಳೇ. ಇದಲ್ಲದೇ ವೈಯ್ಯಕ್ತಿಕ ಜೀವನದಲ್ಲಿ ನಮ್ಮ ಬಾಳಿಗೆ ದಿಕ್ಕು ತೋರಿ, ಅದರಲ್ಲೂ ಒಂದು ಘಟ್ಟದಲ್ಲಿ ತೀವ್ರ ಸಮಸ್ಯೆಗಳು ತಲೆದೋರಿದಾಗ, ನಮ್ಮನ್ನು ಸಮಾಧಾನಪಡಿಸಿ, ಧೈರ್ಯ ಹೇಳಿ, ದಾರಿ ತೋರಿದವರೂ ಗುರುಗಳೇ. ಎಷ್ಟೋ ಬಾರಿ ಅವರು ನಮ್ಮ ಸ್ಪೇಹಿತರೂ ಆಗಿರುತ್ತಾರೆ. ಈಗ ನಾವು ಉಪಯೋಗಿಸುವ ವಾಟ್ಸಾಪ್, ಫೇಸ್ಬುಕ್ನಲ್ಲಿ ಕೂಡ ನಮಗೆ ಅನೇಕ ಜನರ ಪರಿಚಯವಾಗಿ ಅವರಿಂದ ಕೂಡ ನಮಗೆ ಒಳ್ಳೆಯ ವಿಚಾರಗಳ ಮೂಲಕ ಜ್ಞಾನ ಸಂಪಾದನೆ ಆಗಿರಬಹುದು. ಅವರೆಲ್ಲರಿಗೂ ಈ ಗುರುಪೂರ್ಣಿಮೆಯ ದಿನದಂದು ನಾವು ನಮಿಸೋಣ.
ಈ ದಿನವನ್ನು ವ್ಯಾಸಪೂರ್ಣಿಮೆಯೆಂದೂ ಆಚರಿಸುತ್ತಾರೆ. ಮಹಾಭಾರತ, ಭಾಗವತ, ಭಗವದ್ಗೀತೆಗಳಂಥ ಉತ್ಕೃಷ್ಟ ಗ್ರಂಥಗಳನ್ನು ನೀಡಿದ ವೇದವ್ಯಾಸರಿಗೆ ನಾವು ನಮ್ಮ ಮೊದಲ ನಮನವನ್ನು ಸಲ್ಲಿಸಬೇಕು.
ರಾಮಾಯಣವನ್ನು ರಚಿಸಿ, ಶ್ರೀ ರಾಮಚಂದ್ರ ಸೀತಾಮಾತೆಯರ ಕಥೆಯನ್ನು ನಮಗೆಲ್ಲ ತಿಳಿಸಿಕೊಟ್ಟ ಆದಿಕವಿ ವಾಲ್ಮೀಕಿ ಲೋಕಕ್ಕೇ ಗುರು ಅಲ್ಲವೇ? ಅವರನ್ನು ಇಂದು ಭಕ್ತಿಯಿಂದ ನಮಿಸೋಣ.
ವೇದ ಮಂತ್ರಗಳನ್ನು ಪ್ರತ್ಯಕ್ಷ ಮಾಡಿಕೊಂಡ ಋಷಿಗಳು ನಮ್ಮ ಗುರುಗಳೇ. ಅವನ್ನು ಶ್ರುತಿ ಎನ್ನುತ್ತಾರೆ. ಅಂದರೆ, ಕಿವಿಯಿಂದ ಕೇಳಿ, ಮನನ ಮಾಡಿ, ಪರಂಪರೆಯಿಂದ ಅದನ್ನು ಕಾಪಾಡಿಕೊಟ್ಟ ಎಲ್ಲರೂ ಗುರುಗಳೇ. ಗಾಯತ್ರೀ ಮಂತ್ರದ ದ್ರಷ್ಟಾರರಾದ ವಿಶ್ವಾಮಿತ್ರರು ಎಂಥಾ ಗುರುಗಳು? ಅವರನ್ನು ದಿನವೂ ನೆನೆಯಬೇಕು. ಗಾಯತ್ರೀ ಜಪ ಮಾಡುವಾಗಲೆಲ್ಲ ಅವರ ನೆನಪು ತಂತಾನೇ ನಮ್ಮ ಮನದಲ್ಲಿ ಮೂಡಬೇಕು.
ಹೀಗೇ ಹೇಳುತ್ತ ಹೋದರೆ, ಪ್ರತಿಯೊಬ್ಬರ ಜೀವನದಲ್ಲೂ ಇರುವ ಗುರುಗಳ ಪಟ್ಟಿ ಬಹಳ ಉದ್ದವಾಗುತ್ತದೆ. ಆದ್ದರಿಂದ ಕೆಲವರನ್ನಾದರೂ ನೆನೆಯೋಣ.
ಎಲ್ಲರಿಗೂ ಅವರವರ ಸಂಪ್ರದಾಯದಂತೆ ಒಂದು ಮಠ, ಒಬ್ಬ ಗುರುಗಳು ಉಂಟು ಅವರಿಗೆಲ್ಲ ಇಂದು ನಮಿಸೋಣ.
ಶ್ರೀ ವೈಷ್ಣವ ಸಂಪ್ರದಾಯದಲ್ಲಿ ಸಮಾಶ್ರಯಣ ಅಂದರೆ ಗುರುಗಳ ಪಾದವನ್ನು ಆಶ್ರಯಿಸಿ, ಅವರಿಂದ ಪಂಚಸಂಸ್ಕಾರಗಳನ್ನು ಪಡೆಯುವುದು ಒಂದು ಸಂಪ್ರದಾಯ ಹಾಗೂ ಕರ್ತವ್ಯ. ಅದೇ ಗುರುಗಳ ದಿವ್ಯ ಚರಣಗಳ ಮೂಲಕ ಭಗವಂತನಲ್ಲಿ ಶರಣಾಗತಿ ಮಾಡುವುದೂ ಒಂದು ಕರ್ತವ್ಯ.
ಅದನ್ನು ಭರಣ್ಯಾಸವೆಂದೂ ಹೇಳುತ್ತಾರೆ. ಇಂಥ ಗುರುಗಳನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ.
ಇದೇ ರೀತಿಯಲ್ಲಿ ಆದಿ ಶಂಕರರ ಪರಂಪರೆಯವರೂ, ಶ್ರೀಮನ್ಮಧ್ವಾಚಾರ್ಯರ ಪರಂಪರೆಯವರೂ, ಬಸವಣ್ಣನವರ ಅನುಯಾಯಿಗಳಾದ ವೀರಶೈವರೂ ಹಾಗೂ ಮಿಕ್ಕೆಲ್ಲರೂ ಅವರವರ ಗುರುಗಳನ್ನು ಭಕ್ತಿ, ಶ್ರದ್ಧೆಗಳಿಂದ ನಮಿಸಬೇಕು.
ಮುಖ್ಯವಾಗಿ, ಅರ್ಜುನನ್ನು ನೆಪವಾಗಿಟ್ಟುಕೊಂಡು, ನಮಗೆಲ್ಲಾ ಭಗವದ್ಗೀತೆ ಎಂಬ ಅಮೃತದಂಥ ಉಪದೇಶವನ್ನು ನೀಡಿದ ಶ್ರೀ ಕೃಷ್ಣನನ್ನು ನಾವೆಲ್ಲರೂ ಇಂದು ಭಕ್ತಿಯಿಂದ ವಂದಿಸೋಣ. ಆ ಗೀತಾಮೃತವನ್ನು ಮತತ್ರಯದ ಆಚಾರ್ಯರುಗಳ ಭಾಷ್ಯಗಳ ಆಧಾರದಿಂದ ವಿಶದವಾಗಿ ನಮಗೆಲ್ಲಾ ಉಣಬಡಿಸಿದ ಪೂಜ್ಯ ಶ್ರೀ ನಾರಾಯಣಾಚಾರ್ಯ ಗುರುಗಳಿಗೂ ನಾವೆಲ್ಲ ಭಕ್ತಿಯಿಂದ ವಂದಿಸೋಣ.
ಕೃಷ್ಣಂ ವಂದೇ ಜಗದ್ಗುರುಂ.
#🙏ಗುರು ಪೂರ್ಣಿಮಾ ಸ್ಟೇಟಸ್ 🔯 #🙏ಗುರು ಪೂರ್ಣಿಮಾ ಶುಭಾಶಯಗಳು🔯 #🎵ಗುರು ಪೂರ್ಣಿಮಾ ಭಜನೆ ಮತ್ತು ಮಂತ್ರಗಳು📿 #😇ಗುರುಮಹಿಮೆ😍


