ಮೈಗೆ ಗೊತ್ತಿರುವಷ್ಟು ಪ್ರೇಮದ ವಿಷಯ, ಅಕ್ಷರಗಳಿಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ
ಅಕ್ಷರಗಳಿಗೆ ಗೊತ್ತಿರುವಷ್ಟು ದ್ರೋಹದ ವಿಷಯ ಮೈಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ
ಮಾತು ತೀರಿದ ಮೇಲೆ ಮೌನ ಪಟ್ಟಕ್ಕೇರುತ್ತದೆ, ಸಹಜ ವಾರಸುದಾರ
ಮೌನ ಮಾತಾಡುವಷ್ಟು ಮಾತು, ಮಾತಿಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ.
ಧ್ಯಾನದಲ್ಲಿ ತನ್ನ ಹುಡುಕುವವರ ಕಂಡು, ಸ್ವತಃ ಆನಂದವೇ ಬೆಚ್ಚಿ ಬಿದ್ದಿದಿಯಂತೆ
ಶಿಸ್ತು ಅಲ್ಲ ಆನಂದ, ಲೀಲೆ, ಹುಡುಕಾಟ ಧ್ಯಾನಕ್ಕೆ, ಈ ಜನ್ಮದಲ್ಲಿ ಸಾಧ್ಯವಿಲ್ಲ.
ಅವಳ ಮುಂಗುರುಳಲ್ಲಿ ಬೆಳ್ಳಿ ಕಂಡ ಕವಿ ಮಿಂಚೆಂದು ಹಾಡಿದನಂತೆ
ಕಾರಕೂನ ಕಾಲಕ್ಕೆ ಇಂಥ ತಮಾಷೆ, ಈ ಜನ್ಮದಲ್ಲಿ ಸಾಧ್ಯವಿಲ್ಲ.
ಲಕ್ಷ ಹೆಜ್ಜೆಗಳ ನಡುವೆಯೂ ಅವಳ ಹೆಜ್ಜೆ ಗುರುತಿಸುತ್ತಾನೆ, ಪಕ್ಕಾ ಪ್ರೇಮಿ
ಈ ಸೂಕ್ಷ್ಮಕ್ಕೆ ಹೆಸರಿಡುವ ಜಾಣರಿಗೆ, ಕವಿತೆ ಈ ಜನ್ಮದಲ್ಲಿ ಸಾಧ್ಯವಿಲ್ಲ. #💓ಲವ್ ಸ್ಟೇಟಸ್ #💓ಲವ್ #💓 ಪ್ರೀತಿ #💕ಎರಡು ಹೃದಯಗಳು #💕ಪ್ರೀತಿಯ ತುಣುಕು