#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 #ಆಧ್ಯಾತ್ಮ #varahi amma
ಶ್ರೀ ವಾರಾಹಿ ಗುಪ್ತ ನವರಾತ್ರಿ ಪೂಜೆ:-
ವರ್ಷ ಋತುವಿನ ಆರಂಭದ ಆಷಾಡ ಮಾಸದ ಈ ಕಾಲವನ್ನು ದಕ್ಷಿಣಾಯನ ಕಾಲ ಎಂದು ಕರೆಯುತ್ತಾರೆ. ಆಷಾಡ ಮಾಸವು ‘ಶಕ್ತಿ ದೇವತೆ’ ಆರಾಧನೆಗೆ ಶ್ರೇಷ್ಠವಾದ ಪರ್ವಕಾಲವಾಗಿದೆ. ಈ ಕಾಲದಲ್ಲಿ ದೇವತೆಗಳ ಆರಾಧನೆಗಳು ಜಾಸ್ತಿ ಇರುತ್ತದೆ. ಆಷಾಡ ಪಾಡ್ಯದಿಂದ ನವಮಿ ತನಕ “ಗುಪ್ತ ನವರಾತ್ರಿ”ಯ ಕಾಲ ಗುಪ್ತ ನವರಾತ್ರಿಯಲ್ಲಿ ಶಕ್ತಿ ದೇವತೆಯಾದ “ವಾರಾಹಿ” ದೇವಿಯನ್ನು ಆರಾಧನೆ ಮಾಡುತ್ತಾರೆ. ವಾರಾಹಿ ದೇವಿ ಯನ್ನು ಆರಾಧನೆ ಮಾಡುವುದರಿಂದ ಸದೃಢ ದೇಹಕ್ಕೆ ಅನ್ನ - ಮನಸ್ಸಿನ ಶಕ್ತಿ ಸಮೃದ್ಧಿಯಾಗಿರುತ್ತದೆ. ಕ್ಷುದ್ರ ಶಕ್ತಿಗಳು ನಿರ್ಮೂಲ ವಾಗಿ ಶಾರೀರಿಕವಾಗಿ ಬಲವೃದ್ಧಿ ಹೆಚ್ಚುತ್ತದೆ. ವಾರಾಹಿ ದೇವಿ ಭೂಮಿ ವಿವಾದ ಗಳನ್ನು ಬಗೆಹರಿಸುತ್ತಾಳೆ. ವಾರಾಹಿ (ನವರಾತ್ರಿ) ಆರಾಧನೆಯನ್ನು ರಾತ್ರಿ ಮಾಡಬೇಕು. ದೇವಿಯ ವ್ಯುತ್ಪತ್ತಿ ಕುರಿತು ಪುರಾಣಗಳಲ್ಲಿ ಹಲವು ಕಥೆಗಳಿವೆ.
ಲಲಿತೋಪಖ್ಯಾನದಲ್ಲಿ ಭಂಡಾಸುರನನ್ನು ವಧಿಸಲು ದೇವತೆಗಳಿಂದ ಆಗದೆ ನಿಸ್ತೇಜರಾದರು. ದೇವತೆಗಳೆಲ್ಲ ಶಿವನನ್ನು ಪ್ರಾರ್ಥಿಸುತ್ತಾರೆ. ಶಿವನು ಮಾಡಿದ ಮಹಾಯಾಗ ದಿಂದ “ಚಿದಗ್ನಿ - ಕುಂಡ- ಸಂಭೂತಾ- ದೇವಕಾರ್ಯ- ಸಮುದ್ಯತಾ” ದಿಂದ ಉದಿಸಿ ಬಂದವಳೇ ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ದೇವತೆಗಳ ಕಾರ್ಯವನ್ನು ಪೂರೈಸಲು, ದುಷ್ಟರಾಕ್ಷಸ ಸಂಹಾರ ಮಾಡಲು ಉದ್ಭವಿಸಿದಳು. ಲಲಿತಾ ದೇವಿ ಎಲ್ಲರ ದೇಹದಲ್ಲಿ ಶಕ್ತಿಯಾಗಿ ಇರುತ್ತಾಳೆ. ಶರೀರಕ್ಕೆ ಚೈತನ್ಯ ಶಕ್ತಿ ತುಂಬುವವಳು ಶ್ರೀ ಲಲಿತೆ, ಬುದ್ಧಿಶಕ್ತಿ ಕಾರಕ ಶ್ಯಾಮಲಾದೇವಿ, ಇಂದ್ರಿಯ ಶಕ್ತಿಗೆ ವಾರಾಹಿ ದೇವಿ. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ, ಸ್ವರೂಪಿಣಿಯರಾಗಿ ಈ ಮಾತೆಯರ ಅಂಶ ದೇಹದಲ್ಲಿ ಇರುತ್ತದೆ.
ಭಂಡಾಸುರನನ್ನು ವಧಿಸಲು ಇಚ್ಛಾಶಕ್ತಿಯಾದ ಶ್ರೀ ಲಲಿತಾ ದೇವಿ ತನ್ನ ಸಹಾಯಕ್ಕಾಗಿ ಅವಳೊಳಗಿಂದ ಎರಡು ಶಕ್ತಿಗಳನ್ನು ಹೊರಗೆ ತರುತ್ತಾಳೆ. ಆ ಶಕ್ತಿ ದೇವತೆಗಳೇ ಶ್ಯಾಮಲಾದೇವಿ- ವಾರಾಹಿದೇವಿ. ಇವರು ಸಪ್ತಮಾತ್ರಿಕೆಯರಲ್ಲಿ ಪ್ರಮುಖರು. ಇಚ್ಛಾಶಕ್ತಿ ಮತ್ತು ಚೈತನ್ಯ ಶಕ್ತಿ ಆದ ಶ್ರೀ ಲಲಿತಾ ದೇವಿಯಿಂದ ಹೊರಬಂದ ಜ್ಞಾನ ಶಕ್ತಿ ಶ್ಯಾಮಲಾ ದೇವಿ. ಇವಳು ಮಹಾಕವಿ ಕಾಳಿದಾಸನಿಗೆ ಅನುಗ್ರಹ ಮಾಡಿದ “ಮಾತಂಗಿ” ದೇವಿ. ಲಲಿತಾದೇವಿ ತನ್ನ ಶ್ರೀಮನ್ನಗರ ಸಾಮ್ರಾಜ್ಯದ ಪ್ರಧಾನ ಮಂತ್ರಿ ಪದವಿ ಮುದ್ರಿಕೆಯನ್ನು ಶ್ಯಾಮಲ ದೇವಿಗೆ ಕೊಟ್ಟು, ಜೊತೆಗೆ ಏಳು ಆವರಣಗಳುಳ್ಳ ರಥವನ್ನು ( “ಗೇಯಚಕ್ರ - ರಥಾರೂಢ- ಸರ್ವಾಯುಧ -ಪರಿಷ್ಕೃತಾ- ಮಂತ್ರಿಣೀ- ಪರಿಸವಿತಾ”) ಅನುಗ್ರಹಿಸುತ್ತಾಳೆ.
ಶ್ರೀ ಲಲಿತೆ ಕ್ರಿಯಾಶಕ್ತಿ ವಾರಾಹಿ ದೇವಿಯನ್ನು ತನ್ನ ಸೇನಾ ದಂಡನಾಯಕಳನ್ನಾ ಗಿ ಮಾಡಿ, ಆಜ್ಞಾ ಚಕ್ರದಿಂದ ಐದು ಆವರಣಗಳ ರಥವನ್ನು, ಹಲ ( ನೇಗಿಲು) ಮತ್ತು ಮುಸಲ (ಒನಕೆ) ಎಂಬ ಆಯುಧಗಳನ್ನು “ಕಿರಿಚಕ್ರ- ರಥಾರೂಢ -ದಂಡ ನಾಥಾ- ಪುರಸ್ಕೃತಾ” ಈ ರೀತಿ ವಾರಾಹಿ ದೇವಿಯನ್ನು ಸ್ತುತಿ ಮಾಡುತ್ತಾರೆ. ನಂತರ ಶ್ಯಾಮಲ ದೇವಿ ಮತ್ತು ವಾರಾಹಿ ದೇವಿಯರು ಭಂಡಾಸುರನ ಪುತ್ರ ವಿಷಂಗ
( ಮಮಕಾರ) ಮಂತ್ರಿಯಾದ ವಿಶುಕ್ರ ನ( ಅಹಂಕಾರ) ಪ್ರಾಣಹರಣವನ್ನು ಮಾಡಿದರು. ಕಾಮ ಎಂಬ ಅವಿದ್ಯೆ ಗೆ ಮೂಲ ಶಕ್ತಿಯಾದ ಭಂಡಾ ಸುರನನ್ನು ಶ್ರೀ ಲಲಿತಾ ದೇವಿ ವಧಿಸಿದಳು. (“ಭಂಡಪುತ್ರ ವಧೋದ್ಯುಕ್ತ ಬಾಲಾ ವಿಕ್ರಮ ನಂದಿತಾ! ಮಂತ್ರಿಣ್ಯಂಭಾ ವಿರಚಿತ ವಿಷಂಗ ವಧ ತೋಷಿತಾ! ವಿಷುಕ್ರ ಪ್ರಾಣ ಹರಣ ವಾರಾಹಿ ವೀರ್ಯ ನಂದಿತಾ”) ಅವಿದ್ಯೆಯ ಮೂಲವಾದ ರಾಕ್ಷಸ ಭಂಡಾ ಸುರನನ್ನು ಲಲಿತಾದೇವಿ ವಧಿಸಿದಳು. ಇಂಥ ಇಚ್ಚಾ ಶಕ್ತಿ ಲಲಿತೆಯಿಂದ ಕ್ರಿಯಾಶಕ್ತಿ ವಾರಾಹಿ ದೇವಿ ಉಗಮವಾಗಿದ್ದು. ಈಕೆಯನ್ನು ಆರಾಧಿಸುವುದು ಆಷಾಡ ಮಾಸ 9 ದಿನಗಳು ಗುಪ್ತನವರಾತ್ರಿ ಆದ್ದರಿಂದ ರಾತ್ರಿ ಸಮಯ ಆರಾಧನೆ ಮಾಡಬೇಕು.
ಪಾಡ್ಯದ ಮೊದಲ ದಿನ ಸ್ನಾನ ಮಾಡಿ ವಸ್ತ್ರ ಧರಿಸಿ, ದೇವರ ಮುಂದೆ ನಿಂತು ಪ್ರಾರ್ಥಿಸಿ 9 ದಿನಗಳು ಗುಪ್ತ ನವರಾತ್ರಿ ಪೂಜೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು. ವ್ರತ ಸಂಕಲ್ಪ ಮಾಡಿದ ಮೇಲೆ ಹೊರಗಿನ ಆಹಾರ ಸೇವನೆ ಮಾಡಬಾರದು. ಸಾಯಂಕಾಲ ಮತ್ತೆ ಸ್ನಾನ ಮಾಡಿ ವಸ್ತ್ರ ಧರಿಸಿ ಪೂಜಾ ಸ್ಥಳ ವನ್ನು ಶುದ್ದಿ ಮಾಡಿ ರಂಗೋಲಿ ಬರೆದು, ವಾರಾಹಿ ದೇವಿಯ ವಿಗ್ರಹ ಅಥವಾ ಫೋಟೋ ಇದ್ದರೆ ಪೂಜೆ ಮಾಡಬೇಕು ಇಲ್ಲದಿದ್ದರೆ ಕಳಶವನ್ನು ಪ್ರತಿಷ್ಠಾಪಿಸಿ, ಅಥವಾ ಲಕ್ಷ್ಮಿ- ದುರ್ಗೆಯರ ಫೋಟೋ ಇಟ್ಟುಕೊಳ್ಳ ಬಹುದು ಪೂಜೆಗೆ ಸಲಕರಣೆಗಳು ಅರಿಶಿನ- ಕುಂಕುಮ- ಅಕ್ಷತೆ -ಹೂವು- ಹಣ್ಣು -ವೀಳ್ಯದೆಲೆ ಅಡಿಕೆ, ಗಂಧ, ಚಂದನ ಧೂಪ( ವಾರಾಹಿ ಮಾತೆಗೆ ಧೂಪ ಶ್ರೇಷ್ಠ) ದೀಪ ಮಂಗಳಾರತಿ, ಎಲ್ಲಾ ವ್ರತ -ಕತೆ ಪೂಜಾದಿಗಳನ್ನು ಮಾಡುವಂತೆ ಅನುಕೂಲಗಳನ್ನು ಜೋಡಿಸಿ ಕೊಂಡು ಪೂಜೆಗೆ ಕೊರಬೇಕು.
ಮೊದಲು ಗಣಪತಿ ಪೂಜೆ ಮಾಡಿ ನಂತರ ವಾರಾಹಿ ದೇವಿಗೆ ಗಂಧ ಚಂದನ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಹೂವು ಅಲಂಕಾರ ಮಾಡಿ, ಕುಂಕುಮಾರ್ಚನೆ, ಅಷ್ಟೋತ್ತರ, ಮಾಡಿಕೊಂಡು ಧೂಪ - ದೀಪ ತೋರಿಸಿ, ಸಿಹಿ ಪದಾರ್ಥ ನೈವೇದ್ಯ (9 ದಿನವೂ ಬೆಲ್ಲ ಏಲಕ್ಕಿ ಹಾಕಿದ ಪಾನಕ ನೈವೇದ್ಯ ಮಾಡಬೇಕು) ಮಂಗಳಾರತಿ ಮಾಡಿ ಪ್ರಾರ್ಥಿಸಿ ಕೊಂಡು ನಮಸ್ಕಾರ ಮಾಡಬೇಕು. ಎಂಟು ದಿನದ ಪೂಜೆ ನಂತರ ಒಂಬತ್ತನೇ ದಿನ ನೆರೆಹೊರೆಯವರನ್ನು ಅರಿಶಿನ ಕುಂಕುಮಕ್ಕೆ ಕರೆದು ಹೂವು ದಕ್ಷಿಣೆ ತಾಂಬೂಲಾದಿಗಳ ಸಹಿತ ಸತ್ಕರಿಸಬೇಕು. ಹತ್ತನೇ ದಿನ ಉದ್ಯಾಪನೆ ಮಾಡಿ ಒಬ್ಬ ಬ್ರಾಹ್ಮಣನಿಗೆ ದವಸ- ಧಾನ್ಯಗಳನ್ನು ತಾಂಬೂಲ ದಕ್ಷಿಣ ಸಹಿತ ಕೊಟ್ಟು ಆಶೀರ್ವಾದ ಪಡೆಯಬೇಕು. ಯಾರೂ ಸಿಗದಿದ್ದರೆ ದೇವಸ್ಥಾನದ ಅರ್ಚಕರಿಗೆ ಕೊಡಬಹುದು. ಇವೆಲ್ಲವೂ ವಾರಾಹಿ ದೇವಿಗೆ ಬಹಳ ಪ್ರಿಯವಾದ ಆರಾಧನೆ ಆಗಿದೆ.
ಯಜ್ಞಸ್ವರೂಪ ನಾರಾಯಣನಿಂದ ಸ್ತ್ರೀ ರೂಪದ ತತ್ವ ‘ವಾರಾಹಿ ದೇವಿ’ ಭೂ ತತ್ವ ದೇವತೆಯಾಗಿ ಬಂದಳು. ಇವಳ ಕೈಯಲ್ಲಿ ಹಲ ಮತ್ತು ಮುಸಲವಿದೆ. ಇದರ ಸಂಕೇತ ಭೂಮಿ ಉಳುವುದಕ್ಕಾಗಿ ನೇಗಿಲು (ಹಲ) ಮತ್ತು ಬೆಳೆಯನ್ನು ಧಾನ್ಯ ಮಾಡಿಕೊಳ್ಳಲು ಒನಕೆ ( ಮುಸಲ) ಕೈಯಲ್ಲಿ ಹಿಡಿದಿದ್ದಾಳೆ. ಭೂ ತತ್ವವಾದ ವಾರಾಹಿ ದೇವಿಯನ್ನು ಭೂ ವಿವಾದ ಬಗೆಹರಿಸಲು, ಜಗಳ, ವ್ಯಾಪಾರಿ ಸಂಬಂಧ ತೊಂದರೆ, ಹಾಗೂ ಮಾಟ ಮಂತ್ರ ಪ್ರಯೋಗ ನಿಗ್ರಹಿಸಲು ಆರಾಧಿಸುತ್ತಾರೆ.
ಈ ವ್ರತವನ್ನು ಮಾಡುವವರು 9 ದಿನಗಳು ಸಾತ್ವಿಕ ಆಹಾರ ಸೇವಿಸಬೇಕು.
ಚಾಪೆ ಮೇಲೆ (ಒಬ್ಬರೇ) ಮಲಗಬೇಕು. ಅನವಶ್ಯಕವಾಗಿ ಮಾತನಾಡಬಾರದು.
ಕೋಪ - ತಾಪಗಳು ಇರಬಾರದು. ಲಲಿತಾ ಸಹಸ್ರನಾಮ ಓದಬೇಕು. ಎಷ್ಟು ಸಾಧ್ಯವೋ ಅಷ್ಟು ಸಮಾಧಾನ ಚಿತ್ತದಿಂದ ಪೂಜೆಯನ್ನು ನೆರವೇರಿಸಿ ವಾರಾಹಿ
ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ವಾರಾಹಿ ತ್ವಮಶೇಷಜಂತುಷು ಪುನಃ
ಪ್ರಾಣಾತ್ಮಿಕಾ ಸ್ಪಂದಸೇ
ಶಕ್ತಿ ವ್ಯಾಪ್ತ ಚರಾಚರಾ ಖಲು
ಯತಸ್ತ್ವಾಮೇತದಭ್ಯರ್ಥಯೇ!
ತ್ವತ್ಪಾದಾಂಬುಜಸಂಗಿನೋ
ಮಾಮಾ ಸಕೃತ್ಪಾಪಂ
ಚಿಕಿರ್ಷಂತಿ ಯೇ
ತೇಷಾ ಮಾ ಕುರು
ಶಂಕರ ಪ್ರಿಯತಮೇ
ದೇಹಾಂತರಾವಸ್ಥಿತಿಮ್
ಇತಿ ವಾರಾಹಿ ನಿಗ್ರಹಾಷ್ಟಕಂ ಸ್ತೋತ್ರ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏