BREAKINGNEWS #RTO #BIS #ISIMARKHELMET
2 Posts • 138 views
manmohan
743 views 3 months ago
ದೇಶಾದ್ಯಂತ BIS ಪ್ರಮಾಣೀಕೃತ ಹೆಲ್ಮೆಟ್‌ ಮಾತ್ರ ಬಳಸಲು ಸರ್ಕಾರ ಆದೇಶ!! ದೇಶದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಕಳಪೆ ಗುಣಮಟ್ಟದ ಹೆಲ್ಮೆಟ್‌ ಮಾರಾಟ ಮತ್ತು ಬಳಕೆಗೆ ತಡೆಯೊಡ್ಡಿದೆ. ಕಳಪೆ ಗುಣಮಟ್ಟದ ಹೆಲ್ಮೆಟ್ (Helmet) ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ, ರಸ್ತೆ ಬದಿಗಳಲ್ಲಿ ಮಾರಾಟ ಆಗುತ್ತಿರುವ ಕಳಪೆ ಹೆಲ್ಮೆಟ್ ಗಳಿಗೆ ಬ್ರೇಕ್‌ ಹಾಕುವ ಜತೆಗೆ ವಾಹನ ಸವಾರರಿಗೆ ಬಿಐಎಸ್ (BIS) ಪ್ರಮಾಣೀಕರಿಸಿದ ಐಎಸ್ಐ (ISI) ಗುರುತುಳ್ಳ ಹೆಲ್ಮೆಟ್‌ ಬಳಕೆಯನ್ನೇ ಕಡ್ಡಾಯ ಎಂದು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಸೂಚಿಸಿದ್ದಾರೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಭಾರತೀಯ ಮಾನದಂಡಗಳ ಬ್ಯೂರೋ (BIS) ಕಳಪೆ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ದೆಹಲಿಯಲ್ಲಿ ಈಗಾಗಲೇ 2500ಕ್ಕೂ ಹೆಚ್ಚು ಕಳಪೆ ಹೆಲ್ಮೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ BIS ದೆಹಲಿಯಲ್ಲಿ 30ಕ್ಕೂ ಹೆಚ್ಚು ಹೆಲ್ಮೆಟ್‌ ತಯಾರಕ ಘಟಕಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪರವಾನಗಿ ರದ್ದಾದ ಹಾಗೂ ಅವಧಿ ಮುಗಿದ 9 ತಯಾರಕರು ಕಂಡುಬಂದಿದ್ದು, ಇವರಿಂದ 2,500ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿದೆ. ದೆಹಲಿಯ 17 ಅಂಗಡಿಗಳು ಮತ್ತು ರಸ್ತೆ ಬದಿ ವ್ಯಾಪಾರಸ್ಥರಲ್ಲೂ ಶೋಧ ನಡೆಸಿ, 500ಕ್ಕೂ ಹೆಚ್ಚು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡ BIS ಅಧಿಕಾರಿಗಳ ತಂಡ, ವರ್ತಕರು ಮತ್ತು ತಯಾರಕರ ವಿರುದ್ಧ ಕಾನೂನು ಕ್ರಮ ಜರುಗಿಸಿದೆ. 176 ತಯಾರಕರಿಗೆ BIS ಮಾನ್ಯತೆ: 2025ರ ಜೂನ್ ವೇಳೆಗೆ ದೇಶಾದ್ಯಂತ 176 ಹೆಲ್ಮೆಟ್‌ ತಯಾರಕರು ಮಾತ್ರ ರಕ್ಷಣಾತ್ಮಕ ಹೆಲ್ಮೆಟ್‌ ಉತ್ಪಾದನೆಗೆ ಮಾನ್ಯವಾದ BIS ಪರವಾನಗಿ ಹೊಂದಿದ್ದಾರೆ. ರಸ್ತೆ ಬದಿಗಳಲ್ಲಿ ಮಾರಾಟವಾಗುತ್ತಿರುವ ಅನೇಕ ಹೆಲ್ಮೆಟ್‌ಗಳು BIS ಪ್ರಮಾಣೀಕರಣ ಹೊಂದಿರುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ. ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್‌ ಇಲ್ಲದೆ ಮತ್ತು ಹೆಲ್ಮೆಟ್‌ ಧರಿಸಿದ್ದರೂ ಕಳಪೆ ಗುಣಮಟ್ಟದ್ದಾಗಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು BIS ಅನೇಕ ಪ್ರಕರಣಗಳಲ್ಲಿ ಇದನ್ನು ಗಮನಿಸಿದ್ದು, ಬೈಕ್‌ ಸವಾರರ ಸುರಕ್ಷತೆ ದೃಷ್ಟಿಯಿಂದ ಕಳಪೆ ಗುಣಮಟ್ಟದ ಹೆಲ್ಮೆಟ್‌ ತಯಾರಕರು ಮತ್ತು ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. BIS, ನಿಯಮಿತ ಕಾರ್ಖಾನೆ ಮತ್ತು ಮಾರುಕಟ್ಟೆ ಮೇಲೆ ಕಣ್ಗಾವಲಿರಿಸಿದ್ದು, 500ಕ್ಕೂ ಹೆಚ್ಚು ಹೆಲ್ಮೆಟ್ ಮಾದರಿಗಳನ್ನು ಪರೀಕ್ಷಿಸಿದೆ. 30ಕ್ಕೂ ಹೆಚ್ಚು ಶೋಧ ಕಾರ್ಯಾಚರಣೆ ನಡೆಸಿ ಗುಣಮಟ್ಟದ ಮಾನದಂಡಗಳನ್ನು ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಸಹ ಗ್ರಾಹಕರ ರಕ್ಷಣೆ ಮತ್ತು ಸುರಕ್ಷಿತ ವಾಹನ ಸಂಚಾರಕ್ಕಾಗಿ ಕಳಪೆ-ಗುಣಮಟ್ಟದ ಹೆಲ್ಮೆಟ್‌ ಮಾರಾಟದ ವಿರುದ್ಧ ಸಮರ ಸಾರಿದೆ. ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವು-ನೋವು ತಡೆಯುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಮಾರಾಟ-ಖರೀದಿಗೆ ಆದ್ಯತೆ ನೀಡುತ್ತಿದೆ. ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ: ವಾಹನ ಸವಾರರ ಸುರಕ್ಷತೆ ಹಾಗೂ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳಿಂದ ಗ್ರಾಹಕರನ್ನು ರಕ್ಷಿಸುವ ಪ್ರಯತ್ನವಾಗಿ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ನಡೆಸುತ್ತಿದೆ. ಎಲ್ಲಾ ಜಿಲ್ಲಾ ಅಧಿಕಾರಿಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಪತ್ರ ಬರೆದು ಮಾರುಕಟ್ಟೆಯಲ್ಲಿ ಹೆಲ್ಮೆಟ್‌ಗಳ ಗುಣಮಟ್ಟ ಪರಿಶೀಲನೆಗೆ ಸೂಚನೆ ನೀಡಿದೆ. ದೆಹಲಿಯಲ್ಲಿ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದು, ದೇಶದ ಇತರೆಡೆಯೂ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಅಭಿಯಾನ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಐಎಸ್ ಕೇರ್ ಅಪ್ಲಿಕೇಶನ್‌: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ BIS ಪ್ರಾಮಾಣಿತ ಹೆಲ್ಮೆಟ್‌ಗಳನ್ನೇ ಧರಿಸಬೇಕು ಹಾಗೂ ಪ್ರಮಾಣೀಕರಣವಿಲ್ಲದ ಹೆಲ್ಮೆಟ್‌ಗಳ ತಯಾರಿಕೆ ಅಥವಾ ಮಾರಾಟ ಕಂಡುಬಂದರೆ ಗ್ರಾಹಕ ವ್ಯವಹಾರಗಳ ಇಲಾಖೆ ಅಥವಾ BIS ಗಮನಕ್ಕೆ ತರಬೇಕು. ಇದಕ್ಕಾಗಿ 'ಬಿಐಎಸ್ ಕೇರ್ ಅಪ್ಲಿಕೇಶನ್‌ʼ ಮತ್ತು 'ಬಿಐಎಸ್ ಪೋರ್ಟಲ್‌ʼನಲ್ಲಿ ದೂರು ದಾಖಲಿಸಲು ಅವಕಾಶ ಕಲ್ಪಿಸಿದೆ. ರಾಷ್ಟ್ರವ್ಯಾಪಿ ಗ್ರಾಹಕರ ಜಾಗೃತಿಗಾಗಿ ಬಿಐಎಸ್ ಕ್ವಾಲಿಟಿ ಕನೆಕ್ಟ್ ಅಭಿಯಾನ ಸಹ ಆಯೋಜಿಸುತ್ತಿದೆ. ‘ಮನಕ್ ಮಿತ್ರ’ ಸ್ವಯಂ ಸೇವಕರು ಹೆಲ್ಮೆಟ್‌ ಮತ್ತಿತರ ಉತ್ಪನ್ನಗಳ ಕಡ್ಡಾಯ ಪ್ರಮಾಣೀಕರಣ ಬಗ್ಗೆ ಗ್ರಾಹಕರಿಗೆ ಅಗತ್ಯ ಮಾಹಿತಿ ಒದಗಿಸುತ್ತಾರೆ ಎಂದಿದೆ BIS. ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಿಷ್ಟು: ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು,ದೇಶದಲ್ಲಿ 21 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಸವಾರರ ಸುರಕ್ಷತೆ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಮೋಟಾರು ವಾಹನ ಕಾಯ್ದೆ, 1988 ರಡಿ ಹೆಲ್ಮೆಟ್ ಕಡ್ಡಾಯವಾಗಿದ್ದು, ಅದರ ಗುಣಮಟ್ಟಕ್ಕೂ ಆದ್ಯತೆ ಕೊಡಬೇಕಿದೆ. ಹಾಗಾಗಿ 2021ರಿಂದ ಗುಣಮಟ್ಟ ನಿಯಂತ್ರಣ ಆದೇಶ ಜಾರಿಯಲ್ಲಿದೆ. ಕಳಪೆ ಗುಣಮಟ್ಟದ ಹೆಲ್ಮೆಟ್‌ಗೆ ಅವಕಾಶವಿಲ್ಲ. ಎಲ್ಲಾ ದ್ವಿಚಕ್ರ ವಾಹನ ಸವಾರರಿಗೆ BIS ಮಾನದಂಡದಂತೆ (IS 4151:2015) ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್‌ಗಳನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಕಡ್ಡಾಯಗೊಳಿಸುತ್ತದೆ ಎಂದು ತಿಳಿಸಿದ್ದಾರೆ. #BREAKINGNEWS #RTO #BIS #ISIMARKHELMET
5 likes
1 comment 6 shares