#📜ಪ್ರಚಲಿತ ವಿದ್ಯಮಾನ📜
ರೈಲ್ವೆ ಮಾರ್ಗ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಕುಂಟುತ್ತಾ ಸಾಗಿರುವ ರೈಲ್ವೆ ಯೋಜನೆ ಕಾಮಗಾರಿಗಳಿಗೆ ಚುರುಕು ನೀಡಬೇಕು ಎಂದು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಮಂಡಳಿಗೆ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಡಚಿ- ಬಾಗಲಕೋಟೆ ಮತ್ತು ಬೆಳಗಾವಿ - ಧಾರವಾಡ ರೈಲ್ವೆ ಮಾರ್ಗ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆದೇಶಿಸಿದ್ದಾರೆ.
ರಾಜ್ಯದ ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತಂತೆ ಹಿರಿಯ ಅಧಿಕಾರಿಗಳು ಮತ್ತು ಮಂತ್ರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು ತುಮಕೂರು -ದಾವಣಗೆರೆ, ಬೇಲೂರು- ಹಾಸನ ಮತ್ತು ಶಿವಮೊಗ್ಗ- ರಾಣೇಬೆನ್ನೂರು ರೈಲ್ವೆ ಮಾರ್ಗಗಳ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ರೈಲ್ವೆ ಯೋಜನೆಗಳ ಕಾಮಗಾರಿಗೆ ಅಗತ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆಯಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಇದಕ್ಕಾಗಿ ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಅನುಮೋದನೆಗೊಂಡಿರುವ ಎಲ್ಲ ರೈಲು ಯೋಜನೆಗಳಿಗೆ 16, 554 ಎಕರೆ ಭೂಮಿ ಅಗತ್ಯವಿದೆ ಈ ಪೈಕಿ ಈಗಾಗಲೇ ಶೇಕಡ 84% ರಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ.ಇನ್ನೂ ಅಂದಾಜು 2685 ಎಕರೆಗಳಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ರಾಜ್ಯದಲ್ಲಿ ಪ್ರಗತಿಯಲ್ಲಿರುವ ವಿವಿಧ ರೇಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ನಿರ್ಮಾಣ ಕಾಮಗಾರಿಗಳಿಗೆ ರೂ. 2581.67 ಕೋಟಿ ರೂಪಾಯಿ ಭೂಸ್ವಾಧೀನ ಪ್ರಕ್ರಿಯೆಗೆ ರೂ. 2950.22 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ರಾಜ್ಯದಲ್ಲಿ ಒಟ್ಟು 6 ವಿಮಾನ ನಿಲ್ದಾಣಗಳ ಕಾಮಗಾರಿಗಳು ಅನುಷ್ಠಾನದ ವಿವಿಧ ಹಂತದಲ್ಲಿವೆ. ಹಾಸನ ವಿಮಾನ ನಿಲ್ದಾಣ ಭೂಸ್ವಾಧೀನ ಪರಿಹಾರವನ್ನು ರೈತರಿಗೆ ಆದಷ್ಟು ಬೇಗನೆ ವಿತರಿಸಬೇಕು. ಎಲ್ಲಾ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು ಎಂದು ಆದೇಶಿಸಿದರು.
#Railway #line #works #completed #quickly #Siddaramaiah #malgudiexpress #malgudinews #news #TopNews


