#📜ಪ್ರಚಲಿತ ವಿದ್ಯಮಾನ📜
ಬಿಜೆಪಿ ನಾಯಕರು ಧೈರ್ಯವಿದ್ದರೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲಿ: ಎಂ ಬಿ ಪಾಟೀಲ್
ಬೆಂಗಳೂರು: ರಾಜ್ಯದ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ನೆರವು ಪಡೆಯುವ ದೃಷ್ಟಿಯಿಂದ ಬಿಜೆಪಿ ನಾಯಕರು ದೆಹಲಿಗೆ ಹೋಗುವ ಧೈರ್ಯ ತೋರುತ್ತಿಲ್ಲ. ಅವರಿಗೆ ಭಯ ಕಾಡುತ್ತಿದೆ ಎಂದು ಬೃಹತ್ ಕೈಗಾರಿಕೆ ಮಂತ್ರಿ ಎಂಬಿ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಹಲವಾರು ಬಣಗಳಿವೆ. ಹೀಗಾಗಿ ರಾಜ್ಯ ನಾಯಕರು ದೆಹಲಿಗೆ ಹೋಗಲು ಹೆದರುತ್ತಿದ್ದಾರೆ. ಬಣ ರಾಜಕೀಯದಿಂದ ಬೇಸತ್ತಿರುವ ಬಿಜೆಪಿ ವರಿಷ್ಠರು ತಮ್ಮನ್ನು ಬಯ್ಯುತ್ತಾರೆ ಎಂದು ಹೆದರಿ ಯಾವುದೇ ನಾಯಕರು ದೆಹಲಿಗೆ ಹೋಗುತ್ತಿಲ್ಲ ಎಂದರು.
ವರಿಷ್ಠರು ಬೈಯುತ್ತಾರೆ ಎಂಬ ಭಯದಿಂದ ದೆಹಲಿಗೆ ಹೋಗದೆ ಕರ್ನಾಟಕದಲ್ಲಿಯೇ ಸುತ್ತಾಡುತ್ತಾ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿರುವ ಬಿಜೆಪಿ ನಾಯಕರು ಧೈರ್ಯವಿದ್ದರೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲಿ ಎಂದು ಸವಾಲೆಸೆದರು.
ಕೇಂದ್ರದ 14ನೇ ಹಣಕಾಸು ಆಯೋಗದಿಂದ ನ್ಯಾಯಯುತವಾಗಿ ರಾಜ್ಯಕ್ಕೆ ಬರಬೇಕಾದ 60 ರಿಂದ 70 ಸಾವಿರ ಕೋಟಿ ರೂಪಾಯಿ ಬಂದಿಲ್ಲ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ ಇದರ ಅನ್ವಯ ಈ ಯೋಜನೆಗೆ ಘೋಷಣೆಯಾದ 5800 ಕೋಟಿ ರೂಪಾಯಿ ಕೂಡ ಬಂದಿಲ್ಲ ಎಂದರು.
ರಾಜ್ಯಕ್ಕೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಗೊತ್ತಿರುವ ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ಹೋಗಿ ಈ ಹಣ ತರುವ ಧೈರ್ಯ ತೋರಿಸಲಿ. ಬಿಜೆಪಿ ನಾಯಕರು ಮೊದಲು ಈ ಹಣವನ್ನು ರಾಜ್ಯಕ್ಕೆ ತರುವ ಕೆಲಸ ಮಾಡಬೇಕು. ಪ್ರಸ್ತುತ 8500 ರೂಪಾಯಿ ಇರುವ ಪರಿಹಾರವನ್ನು 20,000 ರೂಪಾಯಿಗೆ ಹೆಚ್ಚಿಸಲು ಅವರು ಪ್ರಯತ್ನಿಸಬೇಕು. ರಾಜ್ಯದ ಬಿಜೆಪಿಯವರಿಗೆ ದೆಹಲಿಗೆ ಹೋಗೋ ತಾಕತ್ತು ಇಲ್ಲ, ಧೈರ್ಯವೂ ಇಲ್ಲ. ದೆಹಲಿಗೆ ಹೋದರೆ ಬೈಯ್ಯುತ್ತಾರೆ ಎಂಬ ಭಯವಿದೆ. ಹಾಗಾಗಿ, ಇಲ್ಲೇ ಸುಮ್ಮನೇ ಸುತ್ತಾಡುತ್ತಾರೆ ಎಂದರು.
ನಾನು ಸಿದ್ದರಾಮಯ್ಯ ಈಗಾಗಲೇ ಪ್ರವಾಹ ಪ್ರದೇಶ ವೀಕ್ಷಣೆಮಾಡಿ ಪರಿಹಾರ ಕೊಡುತ್ತಿದ್ದೇವೆ. ಹೆಕ್ಟೇರ್‌ಗೆ 17,000 ರೂಪಾಯಿ ಘೋಷಣೆ ಮಾಡಿದ್ದೇವೆ. ಈಗ ಬಿಜೆಪಿಯವರು ಟ್ರೇನ್ ಹೋದ ಮೇಲೆ ಟಿಕೆಟ್ ತೆಗೆಸುತ್ತಿದ್ದಾರೆ ಎಂದರು.
#BJP #leaders #courage #Delhi #meet #highcommand #MBPatil #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸಿದ್ದರಾಮಯ್ಯ ಬೆಳಗಾವಿಗೆ ಭೇಟಿ ನೀಡುವ ಜೊತೆಗೆ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಲಿ: ಆರ್.ಅಶೋಕ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಗೆ ಭೇಟಿ ನೀಡುವ ಜೊತೆಗೆ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಲಿ. ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹವಾಗಿ ರೈತರಿಗೆ ಸಾಕಷ್ಟು ನಷ್ಟವಾಗಿದೆ. ರಸ್ತೆಯಲ್ಲೇ ಬರಬಹುದಾದ ಅವಕಾಶವಿದ್ದರೂ ವೈಮಾನಿಕ ಸಮೀಕ್ಷೆಗೆ ಮೊರೆಹೋಗಿದ್ದಾರೆ. ಈವರೆಗೆ ಪರಿಹಾರ ನೀಡಿಲ್ಲ. ಸಮೀಕ್ಷೆ ವರದಿ ಬಂದ ನಂತರ ಪರಿಹಾರ ನೀಡುತ್ತೇವೆ ಎಂದಿದ್ದಾರೆ. ಬಿಜೆಪಿ ಅವಧಿಯಲ್ಲಿ ಎನ್‌ಡಿಆರ್‌ಎಫ್ ನಿಯಮದಡಿ ಮಳೆಯಾಶ್ರಿತ ಜಮೀನಿಗೆ 6,200 ರೂ. ಪರಿಹಾರವಿದ್ದರೆ, 13,600 ರೂ, ನೀಡಲಾಗಿತ್ತು. ನೀರಾವರಿ ಜಮೀನಿಗೆ 13,500 ರೂ. ಬದಲು 25,000 ರೂ. ನೀಡಲಾಗಿತ್ತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಬದಲು 28,000 ರೂ. ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಪಾಪರ್ ಅಲ್ಲವಾದರೆ ಇದಕ್ಕಿಂತ ಹೆಚ್ಚು ಪರಿಹಾರ ನೀಡಲಿ ಎಂದರು.
ಈ ಭಾಗದಲ್ಲಿ ಸೋಯಾಬೀನ್ ಬೆಳೆಗೆ ಎಕರೆಗೆ ರೈತರಿಗೆ ತಲಾ 25,000 ರೂ. ಖರ್ಚಾಗಿದೆ. ಇಷ್ಟೇ ಮೊತ್ತದ ಪರಿಹಾರವನ್ನು ಸರ್ಕಾರ ನೀಡಬೇಕಿದೆ. ಆದರೆ ಈ ರೈತರ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ ಈವರೆಗೆ ಒಂದು ವರದಿಯನ್ನೂ ನೀಡಿಲ್ಲ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ 11,603 ಕೋಟಿ ರೂ. ನೀಡಿದೆ. ಯುಪಿಎ ಸರ್ಕಾರ ಕೇವಲ 3,000 ಕೋಟಿ ರೂ. ನೀಡಿತ್ತು. ಇಷ್ಟಾದರೂ ಕೇಂದ್ರ ಸರ್ಕಾರಕ್ಕೆ ಅಗೌರವ ತರುವ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದರು.
ಸರ್ಕಾರದ ಬಳಿ ಹಣವಿಲ್ಲವೆಂದೇ ಪರಿಹಾರ ನೀಡುತ್ತಿಲ್ಲ. ಎಸ್‌ಸಿ, ಎಸ್‌ಟಿಗೆ ಸೇರುವ ಹಣವನ್ನು ಗ್ಯಾರಂಟಿಗೆ ಬಳಸಿದ್ದಾರೆ. ಆದರೆ ಪರಿಹಾರ ನೀಡಲು ಮಾತ್ರ ಹಣವಿಲ್ಲ. ಸಿದ್ದರಾಮಯ್ಯ ಈಗ ಔಟ್‌ಗೋಯಿಂಗ್ ಮುಖ್ಯಮಂತ್ರಿ. ಅದಕ್ಕಾಗಿ ಮುಸ್ಲಿಮರನ್ನು ಕರೆಸಿ ದಸರಾ ಉದ್ಘಾಟನೆ ಮಾಡಿಸಿದ್ದಾರೆ. ಅಲ್ಲಿ ಮಾಡಿ ಪುಷ್ಪಾರ್ಚನೆಯೇ ಕೊನೆಯ ಪೂಜೆಯಾಗಿದೆ. ಕಾಂಗ್ರೆಸ್ ಶಾಸಕರೇ ಇವರು ಹೋಗುತ್ತಾರೆ ಎನ್ನುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದರು.
40 ಪರ್ಸೆಂಟ್ ಕಮಿಶನ್ ಎಂದು ಆರೋಪಿಸಿ ಅಧಿಕಾರಕ್ಕೆ ಬಂದು ಈಗ 80 ಪರ್ಸೆಂಟ್ ಲಂಚ ವಸೂಲಿ ಮಾಡುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಜನರೇ ಅಧಿಕಾರದಿಂದ ಕೆಳಕ್ಕೆ ಇಳಿಸುತ್ತಾರೆ ಎಂದರು.
#Siddaramaiah #visit #villages #addition #visiting #Belagavi #RAshoka #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನೂತನ ವಾರ್ಡ್ ಗಳಿಗೆ ಸಾಹಿತಿ, ರಾಜಕೀಯ ಮುತ್ಸದ್ಧಿಗಳ ಹೆಸರಿಡಿ
ನೂತನವಾಗಿ ವಿಂಗಡಿಸಿರುವ ವಾರ್ಡ್ ಗಳಲ್ಲಿ ಅ ನ ಕೃಷ್ಣರಾಯರು, ಮಾ ರಾಮಮೂರ್ತಿ, ಜಿ ನಾರಾಯಣ್, ಪುಟ್ಟಣ್ಣ ಶೆಟ್ಟರು, ಶ್ರೀ ರಾಮಕೃಷ್ಣ ಹೆಗಡೆ ಇವರ ಹೆಸರುಗಳು ನಾಮಕರಣ ಮಾಡಬೇಕು.
ಕರ್ನಾಟಕದಲ್ಲಿ ಕನ್ನಡ ಚಳವಳಿಯನ್ನು ಹುಟ್ಟು ಹಾಕಿದಂತಹ ಅ ನ ಕೃಷ್ಣರಾಯ, ಕನ್ನಡದ ಬಾವುಟವನ್ನು ಕೊಟ್ಟಂತಹ ಮ ರಾಮಮೂರ್ತಿ, ಬೆಂಗಳೂರು ನಗರದ ಪುರಸಭೆಯ ಅಧ್ಯಕ್ಷರಾಗಿ ಬೆಂಗಳೂರು ನಗರದ ಪ್ರಗತಿಗೆ ಕಾರಣಕರ್ತರಾದ ಪುಟ್ಟಣ್ಣ ಶೆಟ್ಟರು, ಬೆಂಗಳೂರು ನಗರದ ಮಹಾಪೌರರಾಗಿ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆಯನ್ನ ಅನಾವರಣ ಮಾಡಿ, ಬೆಂಗಳೂರು ನಗರದ ಜನರಿಗೆ ಕಾವೇರಿ ಮೊದಲ ಹಂತದ ಕುಡಿಯುವ ನೀರಿನ ಯೋಜನೆಗೆ ಚಾಲನೆಯನ್ನು ನೀಡಿದವರು ಮತ್ತು ನಗರ ಪಾಲಿಕೆಯಲ್ಲಿ ಕನ್ನಡದಲ್ಲಿ ಆಡಳಿತದ ನಡೆಸಲು ಬದ್ಧತೆಯನ್ನು ತೋರಿದಂತಹ ಹಿರಿಯ ಗಾಂಧಿ ವಾದಿ ಜಿ ನಾರಾಯಣ್ ರವರು ಹಾಗೂ 1972 ರಲ್ಲಿ ಸೂಪರ್ ಸೀಡ್ ಆಗಿದ್ದ ಬೆಂಗಳೂರು ನಗರ ಪಾಲಿಕೆಗೆ 1983ರಲ್ಲಿ ಚುನಾವಣೆಯನ್ನು ನಡೆಸಿ ಅಧಿಕಾರ ವಿಕೇಂದ್ರೀಕರಣಕ್ಕೆ ಮಹತ್ವವನ್ನು ಕೊಟ್ಟವರು, ಬೆಂಗಳೂರು ನಗರದ ಅಭಿವೃದ್ಧಿಗೆ ನೀಲಿ ನಕ್ಷೆಯನ್ನ ನೀಡಿದವರು ಮತ್ತು ಬೆಂಗಳೂರು ನಗರದಲ್ಲಿ ಲಕ್ಷಾಂತರ ಸಸಿಗಳನ್ನು ನಡೆಸಿ ಉದ್ಯಾನಗಳ ನಗರವೆಂಬ ಬೆಂಗಳೂರಿನ ಹೆಸರನ್ನು ಉಳಿಸುವಂತೆ ಶ್ರಮ ಪಟ್ಟವರು, ಪ್ರತಿ ಶನಿವಾರ ಬೆಂಗಳೂರು ನಗರದ ವಿವಿಧ ಬಡಾವಣೆಗಳಿಗೆ ಅನಿರೀಕ್ಷಿತವಾಗಿ ಭೇಟಿಯನ್ನು ನೀಡಿ ಜನರ ಸಮಸ್ಯೆಗಳನ್ನ ಕೇಳುತ್ತಿದ್ದವರು ಹಾಗೂ ಬೆಂಗಳೂರು ನಗರದಲ್ಲಿ ಮೆರೆಯುತ್ತಿದ್ದ ಗೂಂಡ ಸಂಸ್ಕೃತಿಯನ್ನು ಮಟ್ಟ ಹಾಕಿ ಜನರಿಗೆ ನೆಮ್ಮದಿಯ ಬದುಕನ್ನು ಕೊಟ್ಟವರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಯೋಜನಾ ಆಯೋಗದ ಉಪಾಧ್ಯಕ್ಷರು, ಮಾಜಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ರಾಮಕೃಷ್ಣ ಹೆಗಡೆಯವರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ನೂತನವಾಗಿ ವಿಂಗಡಿಸಿರುವ ವಾರ್ಡ್ ಗಳಲ್ಲಿ ಇವರ ಹೆಸರುಗಳನ್ನು ನಾಮಕರಣ ಮಾಡಿ ಇವರ ಸೇವೆಗೆ ಮನ್ನಣೆ ನೀಡಬೇಕೆಂದು ಕೋರಿಕೊಳ್ಳುತ್ತೇವೆ.
ಈಗಾಗಲೇ ಕೆಲವು ಮಹನೀಯರ ಹೆಸರುಗಳನ್ನ ವಾರ್ಡ್ ಗಳಿಗೆ ನಾಮಕರಣ ಮಾಡಿ ಕನ್ನಡಿಗರು ಮತ್ತು ನಾಡಿನ ಜನರಿಗೆ ಸಂತೋಷವನ್ನುಂಟು ಮಾಡಿರುತ್ತೀರಿ ಅದೇ ರೀತಿಯಲ್ಲಿ ಉಳಿದಿರುವ ಇವರು ಹೆಸರುಗಳನ್ನು ಸೂಕ್ತವೆನಿಸುವ ವಾರ್ಡ್ ಗಳಿಗೆ ನಾಮಕರಣ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರು ನಗರ ಪಾಲಿಕೆಗಳು ಕನ್ನಡ ಮಯದ ವಾತಾವರಣವಿರುವಂತೆ ಬದಲಾಗಲಿ ಎನ್ನುವುದು ನಮ್ಮೆಲ್ಲರ ಆಶಯ.
- ಕೆ ಎಸ್ ನಾಗರಾಜ್, ಬೆಂಗಳೂರು
#Name #new #wards #literary #figures #politicians #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸಮೀಕ್ಷೆ ನಡೆಸಿ ಸಂತ್ರಸ್ತ ಜನರಿಗೆ ಧೈರ್ಯ ತುಂಬುತ್ತೇನೆ: ಎಚ್ ಡಿ ದೇವೇಗೌಡ
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಪ್ರದೇಶದಲ್ಲಿ ತಾವು ಸಮೀಕ್ಷೆ ನಡೆಸಿ ಸಂತ್ರಸ್ತ ಜನರಿಗೆ ಧೈರ್ಯ ತುಂಬುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಹಿರಿಯ ನಾಯಕ ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತ ಜನರ ಅಹವಾಲು ಕೇಳುವುದು ನಾಯಕರ ಕರ್ತವ್ಯವಾಗಬೇಕು. ಹೀಗಾಗಿ ಸಮೀಕ್ಷೆ ನಡೆಸಿ ಹಾನಿಯ ಬಗ್ಗೆ ಅಂದಾಜು ವರದಿ ತಯಾರಿಸಿ ಪ್ರಧಾನಿಗೆ ಸಲ್ಲಿಸುತ್ತೇನೆ. ಆ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿ ಹೆಚ್ಚಿನ ಪರಿಹಾರ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.
ನೆರೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಯಾವೆಲ್ಲಾ ಪರಿಹಾರ ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. 48 ಗಂಟೆಗಳಲ್ಲಿ ಆ ಮಾಹಿತಿ ಬಹಿರಂಗಪಡಿಸಬೇಕು ಎಂದರು.
ಮೂರು ಅಥವಾ ನಾಲ್ಕು ದಿನಗಳ ನಂತರ ನಾನೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಸಾಧ್ಯವಿರುವ ಕಡೆಯಲ್ಲಿ ರಸ್ತೆ ಮೂಲಕವೇ ಪ್ರವಾಸ ಕೈಗೊಳ್ಳುತ್ತೇನೆ. ನಷ್ಟದ ಪ್ರಮಾಣ, ಪರಿಹಾರ ಸಿಕ್ಕಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ವರದಿ ಸಿದ್ಧಪಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಿಸುತ್ತೇನೆ ಎಂದರು.
ಕೇಂದ್ರ ಸರ್ಕಾರ ನೆರೆ ಪೀಡಿತ ಇತರ ರಾಜ್ಯಗಳಿಗೆ ಪರಿಹಾರ ಘೋಷಿಸಿದೆ. ಕರ್ನಾಟಕಕ್ಕೆ ಘೋಷಿಸಿಲ್ಲ. ಈ ಬಗ್ಗೆ ಪ್ರಧಾನಿ ಅವರ ಬಳಿ ಮಾತನಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 'ಈ ಬಗ್ಗೆ ರಾಜಕೀಯ ಮಾತನಾಡಲು ಬಯಸುವುದಿಲ್ಲ' ಎಂದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿರುವ ಕಾರಣ, ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಿಸಲು ಹಣವಿಲ್ಲ ಎಂದು ಆ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದರು.
ಜೆಡಿಎಸ್ ರಾಷ್ಟ್ರೀಯ ಮಟ್ಟದಲ್ಲಿ ಎನ್ ಡಿ ಎ ಮೈತ್ರಿಕೂಟದ ಭಾಗವಾಗಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಈ ಮೈತ್ರಿ ಅಬಾಧಿತ. ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರೆಯಲಿದೆ ಎಂದರು.
ರಾಜ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಯುವ ನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸದಸ್ಯತ್ವ ನೋಂದಣಿ ಆಂದೋಲನ ನಡೆಸಿರುವುದು ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿಸುವ ಜೊತೆಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ ನಡೆಸುವ ದೃಷ್ಟಿಯಿಂದ ಅಕ್ಟೋಬರ್ 12ರಂದು ಬೆಂಗಳೂರಿನಲ್ಲಿ ಜೆಡಿಎಸ್ ಮಹಿಳಾ ಸಮಾವೇಶ ಆಯೋಜಿಸಲಾಗಿದೆ ಎಂದರು.
ಪಕ್ಷದ ಮಹಿಳಾ ಘಕಟದ ವತಿಯಿಂದ ನಡೆಸುತ್ತಿರುವ ಈ ಸಮಾವೇಶದಲ್ಲಿ 50,000ದಿಂದ 60,000 ಜನರನ್ನು ಸೇರಿಸಲಾಗುತ್ತದೆ. ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗೆ ನಡೆಯಲಿರುವ ಚುನಾವಣೆಗೆ ಇದರಿಂದ ನೆರವಾಗಲಿದೆ. ಜಿಬಿಎಗೆ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಪಕ್ಷ 50-60 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
#conduct #survey #reassure #affected #people #HDDeveGowda #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಚಿಕ್ಕಮಕ್ಕಳು ಮೊಬೈಲ್ ಬಿಡಬೇಕೆಂದರೆ ಹೀಗೆ ಮಾಡಿ....
ಈತ ವೀರೇಶ. ನನ್ನ ತಮ್ಮನ ಮಗ. ಮೊಬೈಲ್ ಎಂದರೆ ಎಲ್ಲರಂತೆ ಈತನಿಗೂ ಪ್ರೀತಿ ಮತ್ತು ಅದಕ್ಕಾಗಿ ಹಠ. ಮೊಬೈಲ್ ಅನುಕೂಲಕ್ಕಿಂತ ಅನಾನುಕೂಲ ಮಾಡಿದ್ದೆ ಹೆಚ್ಚು. ಅದಕ್ಕಾಗಿ ಒಂದು ಐಡಿಯಾ ಮಾಡಿದೆ.
ಚುಕ್ಕಿ ಚಿಕ್ಕವಳಿದ್ದಾಗ ಅವಳಲ್ಲಿ ಸೃಜನಶೀಲ ಆಸಕ್ತಿ ಬೆಳೆಸಬೇಕೆಂಬ ಇಚ್ಛೆಯಿಂದ ಈ ಐಡಿಯಾ ಮಾಡಿದ್ದೆ. ಅದು ಸಂಪೂರ್ಣ ಯಶಸ್ಸು ಕೊಟ್ಟಿತ್ತು. ಆ ಐಡಿಯಾವನ್ನ ನಮ್ಮ ವೀರೇಶನಿಗೂ ಬಳಸಿದೆ.
ಸುಮ್ಮನೆ ಒಂದು ಗೋಡೆಯ ಮೇಲೆ ಒಂದು ಕಾರ್ಡ್ ಶೀಟನ್ನು ಅಂಟಿಸಿ. ಅದರ ಪಕ್ಕದಲ್ಲೇ ಕೆಲವು ಬಣ್ಣದ ಸ್ಕೆಚ್ ಪೆನ್ ಗಳನ್ನ ಇಟ್ಟಿದ್ದೆ.
ವೀರೇಶ ಬಂದವನೇ ಆ ಕಾರ್ಡ್ ಶೀಟನ್ನ ಖುಷಿಯಿಂದ ನೋಡಿದ. ಸ್ಕೆಚ್ ಪೆನ್ ಕೈಯಲ್ಲಿ ಹಿಡಿದು "ದೊಡ್ಡಪ್ಪ ಏನ್ ಬರೀಲಿ?" ಎಂದ. ನಾನು "ಏನಾದರೂ ಬರೀ ಮಗು, ನಿನಗೆ ಇಷ್ಟಬಂದಿದ್ದು, ಏನಾದರೂ ಬರೀ... ಇಷ್ಟಾದರೂ ಬರೀ " ಎಂದೆ. ಖುಷಿಗೊಂಡ.
ಬರೀತಾ ಬರೀತಾ ಅವನು ಅದರಲ್ಲಿ ತಲ್ಲೀನನಾದ... ದೊಡ್ಡಪ್ಪ ಇದು ಅಜ್ಜ, ಇದು ಮನಿ, ಇದು ಟಿವಿ, ಇದು ನಾಯಿ, ಇದು ಮನಿ... ಅವನು ಬರೀತಾ ಬರೀತಾ ಮಾತಾಡುತ್ತಾ ಹೇಳುತ್ತಾ ಬರೆಯುತ್ತಾ ಹೋದ... ಸುಮಾರು ಹೊತ್ತು ಬರೆಯುತ್ತಲೇ ಇದ್ದ.
ಈ ಚಟುವಟಿಕೆ ತುಂಬಾ ಮಹತ್ವದ್ದು. ಮಕ್ಕಳ ಮಾನಸಿಕ, ಭಾವನಾತ್ಮಕ ಮತ್ತು ಸರ್ವತೋಮುಖ ವಿಕಾಸಕ್ಕೆ ಮುಖ್ಯ ವಾದದ್ದು. ಈ ಬಗ್ಗೆ M S Murthy ಸರ್ ತುಂಬಾ ವಿಚಾರಗಳನ್ನ ಬರೆದಿದ್ದಾರೆ. ಆ ವಿಚಾರಗಳಿಂದ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಮಕ್ಕಳಿಗೆ ಕಲಿಸಿದ್ದೇನೆ. ಚುಕ್ಕಿಯ ಮೇಲೂ ಪ್ರಯೋಗಮಾಡಿ ಯಶಸ್ಸು ಕಂಡಿದ್ದೇನೆ, ನಮ್ಮ ಶಾಲಾ ಮಕ್ಕಳಿಗೂ ಇದರ ಪ್ರಯೋಜನ ನೀಡಿದ್ದೇನೆ. ಮೂರ್ತಿ ಸರ್ ರವರ ತಾತ್ವಿಕ ಕಲಾ ವಿಚಾರಗಳೇ ನನ್ನ ಈ ಪ್ರಯೋಗಕ್ಕೆ ಸ್ಫೂರ್ತಿ ಮತ್ತು ದಾರಿ.
ಮಕ್ಕಳಿಗೆ ಹೀಗೆ ಒಂದು ಕಾರ್ಡ್ ಶೀಟನ್ನು ಗೋಡೆಯ ಮೇಲೆ ಅಂಟಿಸಿ ಅಲ್ಲಿ ಕೆಲವು ಬಣ್ಣದ ಪೆನ್ಸಿಲ್ ಸ್ಕೆಚ್ ಪೆನ್ ಅಥವಾ ಕ್ರೇಯಾನ್ ಗಳನ್ನ ಅಲ್ಲೇ ಹತ್ತಿರದಲ್ಲಿಡಿ. ಯಾವುದೇ ಕಾರಣಕ್ಕೂ ಮಗುವಿಗೆ ಬರೀ ಎಂದು ಒತ್ತಾಯ ಮಾಡಬೇಡಿ. ಮಗು ತಾನಾಗಿಯೇ ಕುತೂಹಲದಿಂದ ಅಲ್ಲಿಗೆ ಬರುತ್ತದೆ. ಮಗು ಬರೆಯುವಾಗ ಯಾವುದೇ ಕಾರಣಕ್ಕೂ ಗೈಡ್ ಮಾಡಬೇಡಿ. ಅದು ಏನಾದರೂ ಬರೆಯಲಿ, ತನಗೆ ಇಷ್ಟಬಂದದ್ದು. ಈ ಸ್ಕ್ರಿಬಲಿಂಗ್ ನಿಂದ ಮಗುವಿನ ಲೋಕೋಮೋಟಾರ್ ಸ್ಕಿಲ್ ಗಳು ಬೆಳವಣಿಗೆ ಹೊಂದುತ್ತವೆ. ಸಂಪೂರ್ಣ ವ್ಯಕ್ತಿತ್ವಕ್ಕೆ ಕಾಲಾಂತರದಲ್ಲಿ ಬಹಳ ದೊಡ್ಡ ಶಕ್ತಿ ಇದರಿಂದ ಸಿಕ್ಕುತ್ತದೆ.
ಮಗು ಹೀಗೆಯೇ ತನಗಿಷ್ಟ ಬಂದದ್ದನ್ನ ಬರೆಯುತ್ತಲಿರಲಿ. ಪೂರ್ಣ ಕಾರ್ಡ್ ಶೀಟ್ ತುಂಬಿದ ಮೇಲೆ ಅದನ್ನ ನಿಧಾನವಾಗಿ ಜಾಗರೂಕತೆಯಿಂದ ತೆಗೆದು ನಂತರ ಹೊಸದನ್ನು ಅಂಟಿಸಿ. ಅದು ಮುಗಿದ ನಂತರ ಮತ್ತೊಂದು. ಬರೆದವುಗಳನ್ನ ಜೋಪಾನವಾಗಿ ಸಂಗ್ರಹಿಸಿಡಿ. ಆ ಮಗು ಬೆಳೆದ ಮೇಲೆ ಆತ ಹೇಗೆ ಮೊದಲು ಕಲಿಯಲು ಶುರು ಮಾಡಿದ ಎಂಬುದರ ನೆನಪಿನ ಅದ್ಭುತ ಉಡುಗೊರೆಯಾಗಿ ಉಳಿಯುತ್ತದೆ ಅದು.
ಈ ಒಂದು ಕಾಗದ ಮತ್ತು ಕೆಲವು ಸ್ಕೆಚ್ ಪೆನ್ ಅಥವಾ ಬಣ್ಣದ ಪೆನ್ಸಿಲ್ ನಿಂದ ಏನೆಲ್ಲ ಬದಲಾವಣೆಯಾಗುತ್ತದೆ ಎಂಬುದನ್ನ ಕಾದು ನೋಡಿ, ನೀವು ಅಚ್ಚರಿಪಡುತ್ತೀರಿ...
ಈ ಪ್ರಯೋಗ ಮಾಡಿ ಒಂದು ಫೋಟೊ ತೆಗೆದು ನಾಲ್ಕು ಸಾಲು ನಿಮ್ಮ ಅನುಭವ ನನಗೆ ಬರೆಯಿರಿ...
- ವೀರಣ್ಣ ಮಡಿವಾಳರ, 9972120570
#you #want #your #children #giveup #mobile #phones #do #veerannamadivalara #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಮಳೆ ಹಾನಿ ಪ್ರದೇಶಗಳಿಗೆ ಸಚಿವರು, ಅಧಿಕಾರಿಗಳು ಭೇಟಿ ನೀಡುತ್ತಿಲ್ಲ: ಆರ್.ಅಶೋಕ
ಬೆಳಗಾವಿ: ಮಳೆ ಹಾನಿ ಪ್ರದೇಶಗಳಿಗೆ ಸಚಿವರು, ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಎಲ್ಲರೂ ಜಾತಿ ಸಮೀಕ್ಷೆಯಲ್ಲಿ ಹಾಗೂ ಸಿಎಂ ಬದಲಾವಣೆಯ ಕ್ರಾಂತಿಯಲ್ಲಿ ನಿರತರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ವಿವಿಧೆಡೆ ಮಳೆ ಹಾನಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಷ್ಕಿಗೆ ಎಕರೆಗೆ 25,000 ರೂ. ನೀರಾವರಿ ಜಮೀನಿಗೆ ಎಕರೆಗೆ 50,000 ರೂ. ಪರಿಹಾರ ನೀಡಬೇಕು. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ನೀಡಿದರೂ. ರೈತರು ಖರ್ಚು ಮಾಡಿದಷ್ಟಾದರೂ ನೀಡಲಿ. ಸರ್ಕಾರವೇ ಕಳಪೆ ಬೀಜ ನೀಡಿದೆ ಎಂದು ರೈತರು ಹೇಳಿದ್ದಾರೆ. ನಾನೂ ಸೇರಿದಂತೆ ಬಿಜೆಪಿ ನಾಯಕರು ಪ್ರವಾಹವಾದ ಕಡೆಗಳಲ್ಲಿ ಪ್ರವಾಸ ಮಾಡಿದ್ದೇವೆ. ಆದರೆ ಸರ್ಕಾರದ ವತಿಯಿಂದ ಯಾರೂ ಪ್ರವಾಸ ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ ಹಾನಿಯಾದಾಗ, ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಬೆಳೆ ಪರಿಹಾರ ಹಾಗೂ ಮನೆ ಹಾನಿ ಪರಿಹಾರವನ್ನು ಡಬಲ್ ಮಾಡಲಾಗಿತ್ತು. ಮನೆ ಬಾಗಿಲಿಗೆ ನೀರು ಬಂದರೂ 24 ಗಂಟೆಯೊಳಗೆ ಪರಿಹಾರ ನೀಡಲಾಗಿತ್ತು. ಜೊತೆಗೆ ಪ್ರತಿ ಮನೆಗೆ ಆಹಾರ ಕಿಟ್‌ಗಳನ್ನು ನೀಡಲಾಗಿತ್ತು. ಕೇಂದ್ರ ಸರ್ಕಾರಕ್ಕೆ ಕಾಯದೆ ರಾಜ್ಯ ಸರ್ಕಾರದಿಂದಲೇ ಪರಿಹಾರ ವಿತರಣೆ ಮಾಡಲಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಇನ್ನೂ ಮಳೆ ಹಾನಿ ಸಮೀಕ್ಷೆಗೆ ಕಾಯುತ್ತಿದ್ದಾರೆ ಎಂದರು.
ಸರ್ಕಾರವೀಗ ಜಾತಿ ಸಮೀಕ್ಷೆಯಲ್ಲಿ ನಿರತವಾಗಿದೆ. ಅಧಿಕಾರಿಗಳು ಅದರಲ್ಲೇ ಇದ್ದಾರೆ. ಹಾಗಾಗಿ ಯಾರೂ ಪ್ರವಾಹ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ. ಬೆಳೆ ಹಾನಿಯಾದ ಕೂಡಲೇ ನವದೆಹಲಿಗೆ ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದೆವು. ಈಗ ಕಾಂಗ್ರೆಸ್‌ನ ಯಾವುದೇ ಸಚಿವರು ದೆಹಲಿಗೆ ಹೋಗಿ ಭೇಟಿ ಮಾಡುತ್ತಿಲ್ಲ. ಸಿಎಂ ಬದಲಾವಣೆ ಯಾವಾಗ ಎಂದು ಚರ್ಚೆಯಾಗುತ್ತಿದೆ. ಶಾಸಕರು ನಾನೇ ಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ವತಿಯಿಂದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ. ಮನೆ ಹಾನಿ, ರಸ್ತೆ ಹಾನಿ, ಬೆಳೆ ಹಾನಿ ಮೊದಲಾದವನ್ನು ಪರಿಶೀಲಿಸಲಾಗಿದೆ. ಜನರು ಬೀದಿಗೆ ಬಂದು ನಿಲ್ಲುವ ಸ್ಥಿತಿ ಬಂದಿದೆ. ಈ ಸರ್ಕಾರಕ್ಕೆ ಜನರ ಸಂಕಷ್ಟ ಅರಿವಿಗೆ ಬರುತ್ತಿಲ್ಲ. ಮಳೆ ಹಾನಿಯಾದಾಗ ಅದರ ವರದಿ ಪಡೆಯಬೇಕು. ಎಲ್ಲಿ ಎಷ್ಟು ಹಾನಿಯಾಗಿದೆ ಎಂದು ತಿಳಿದು, ಮುಖ್ಯಮಂತ್ರಿಗಳು ಸಚಿವರ ಜೊತೆ ಚರ್ಚಿಸಿ ತಂಡಗಳನ್ನು ಪ್ರತಿ ಜಿಲ್ಲೆಗಳಿಗೆ ಕಳುಹಿಸಬೇಕು. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡಕ್ಕೆ, ರಾಜ್ಯಕ್ಕೆ ಭೇಟಿ ಮಾಡಲು ಹೇಳಬೇಕು. ಸಚಿವರಿಗೆ ಕೆಲಸ ಕೊಡದೆ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ತೋರಿದ್ದಾರೆ. ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆಯೇ ಹೊರತು, ಯಾವ ಕ್ರಮ ಕೈಗೊಂಡಿದ್ದೇನೆ ಎನ್ನುತ್ತಿಲ್ಲ ಎಂದರು.
ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಯಾಬೀನ್ ಬೆಳೆ ಹಾನಿ ವೀಕ್ಷಿಸಲಾಗಿದೆ. ಸರ್ಕಾರ ಬದುಕಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗಿ ಚರ್ಚಿಸಬೇಕಿತ್ತು. ಮೊದಲು ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದ ಬಳಿಕ, ಕೇಂದ್ರ ಸರ್ಕಾರ ಪರಿಹಾರ ನೀಡುತ್ತದೆ. ಇದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದರೂ ಪ್ರಯೋಜನವಿಲ್ಲ. ರೈತರ ಜೊತೆ ನಿಂತು ಹೆಚ್ಚು ಪರಿಹಾರ ನೀಡುತ್ತೇನೆ ಎನ್ನಬೇಕಿತ್ತು. ಗ್ಯಾರಂಟಿಯೂ ಕೊಡಲ್ಲ, ಪರಿಹಾರವೂ ಇಲ್ಲ ಎಂಬಂತಾಗಿದೆ ಎಂದರು.
ನವೆಂಬರ್‌ನಲ್ಲಿ ಸಿಎಂ ಬದಲಾವಣೆಯಾಗಲಿದೆ ಎಂದು ನಾನು ಹೇಳಿದ್ದೆ. ಕ್ರಾಂತಿಯಾಗಲಿದೆ ಎಂದಿದ್ದ ರಾಜಣ್ಣ ಮನೆಗೆ ಹೋಗಿದ್ದಾರೆ. ಸಿಎಂ ಬದಲಾವಣೆ ಒಪ್ಪಂದ ಆಗಿರುವುದು ನೂರಕ್ಕೆ ನೂರು ನಿಜ. ಸಿಎಂ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವುದಿಲ್ಲ, ಡಿಸಿಎಂ ಡಿ.ಕೆ.ಶಿವಕುಮಾರ್ ಹಠ ಬಿಡುವುದಿಲ್ಲ. ಆದರೆ ಬಿಜೆಪಿಯಿಂದ ಸರ್ಕಾರ ರಚನೆ ಮಾಡುವುದಿಲ್ಲ. ಚುನಾವಣೆ ನಡೆಯುವುದೇ ಸೂಕ್ತ ಎನ್ನುವುದು ನಮ್ಮೆಲ್ಲರ ಅಭಿಪ್ರಾಯ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಸ್ತೆಗಳು ಗುಂಡಿ ಬಿದ್ದಿವೆ. ಬೆಂಗಳೂರಿನಲ್ಲಿ ಹಳ್ಳ ಇಲ್ಲದ ರಸ್ತೆಯೇ ಇಲ್ಲ. ಇಂತಹ ಪರಿಸ್ಥಿತಿ ಈಗ ಇದೆ ಎಂದರು.
#Ministers #officials #notvisiting #rain #damaged #areas #RAshoka #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಆನ್ಲೈನ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿ 2.28 ಕೋಟಿ ರೂ. ಕಳೆದುಕೊಂಡ ಟೆಕ್ಕಿ
ಬೆಂಗಳೂರು: ವಾಟ್ಸಾಪ್ ನಲ್ಲಿ ಬಂದ ಆಕರ್ಷಕ ಸಂದೇಶ ನಂಬಿ ಸುಲಭವಾಗಿ ವಂಚಕರ ಜಾಲಕ್ಕೆ ಬಿದ್ದ ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿ ಸೇರಿ ಇಬ್ಬರು ಕೊಟ್ಯಾಂತರ ರೂಪಾಯಿ ಹಣ ಕಳೆದುಕೊಂಡು ಇಂಗು ತಿಂದ ಮಂಗನಂತೆ ಆಗಿದ್ದಾರೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಭಾರಿ ಮೊತ್ತದ ಹಣ ಸಂಪಾದಿಸಬಹುದು ಎಂದು ಹೇಳಿದ ವಾಟ್ಸಾಪ್ ಸಂದೇಶ ನಂಬಿದ ಈ ಇಬ್ಬರೂ ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿ 2.28 ಕೋಟಿ ರೂ.ಗಳನ್ನು ಕಳೆದುಕೊಂಡು ನಗರ ಪೊಲೀಸರು ಮೊರೆ ಹೋಗಿದ್ದಾರೆ. ಕಳೆದ 2 ವಾರಗಳಲ್ಲಿ ಪೂರ್ವ ಸೈಬರ್ ಕ್ರೈಮ್ ಪೊಲೀಸರು ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ರಾಮಮೂರ್ತಿ ನಗರದ ರಾಮನಾಥ್ ಎಸ್ (45) ಸೈಬರ್ ಅಪರಾಧ ಪ್ರಕರಣದಲ್ಲಿ 1.40 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ವರ್ಷದ ರಾಮನಾಥ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 10 ವರ್ಷದಿಂದ ಒಂದು ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು. ಆದರೆ ಈಗ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಕಳೆದ 2024 ಡಿಸೆಂಬರ್ನಲ್ಲಿ ವಾಟ್ಸಾಪ್ ಮೂಲಕ ರಾಣಿ ಸಾಹ ಎಂಬ ಮಹಿಳೆಯ ಪರಿಚಯವಾಗಿತ್ತು.
ಆಕೆ ತಾನು ಆನ್ಲೈನ್ ಹೂಡಿಕೆಗಳ ಮೂಲಕ ಕೊಟ್ಯಾಧಿಪತಿಯಾಗಿದ್ದೇನೆ ಎಂದು ಮೆಸೇಜ್ನಲ್ಲಿ ತಿಳಿಸಿದ್ದಳು. ಆನಂತರ ರಾಮನಾಥರನ್ನು ಒಂದು ವಾಟ್ಸಾಪ್ ಗ್ರೂಪ್ನಲ್ಲಿ ಸೇರಿಸಲಾಯಿತು. ಅಲ್ಲಿಂದ ರವಿಕುಮಾರ್ ಎನ್ನುವವರ ಪರಿಚಯವಾಗಿತ್ತು. ಕೆಲಸದ ಮೇಲೆ ಯು.ಕೆಗೆ ಹೋದಾಗ ಕುಮಾರ್ ಇವರ ಮನವೊಲಿಸಿ 10 ಸಾವಿರ ರೂ.ಗಳ ಹೂಡಿಕೆ ಮಾಡಿಸಿದ್ದರಿಂದ ಅದರಿಂದ ಸಣ್ಣ ಸಣ್ಣ ಲಾಭಗಳು ಸಿಗಲು ಶುರುವಾದ ಮೇಲೆ ಈ ಯೋಜನೆಯನ್ನು ರಾಮನಾಥ ಸಂಪೂರ್ಣವಾಗಿ ನಂಬಿದ್ದರು.
ನಂತರ ಕ್ಯಾಂಬ್ರಿಡ್ಜ್ ಯೂನಿವರ್ಸಿಟಿಯ ದಿವಾಕರ್ ಎನ್ನುವವರನ್ನು ಇವರಿಗೆ ಪರಿಚಯಿಸಲಾಯಿತು. ಹೀಗೆ ಅವರು 10 ತಿಂಗಳ ಕಾಲ ಅವರ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದರು. ಇದರಿಂದ ಬರೋಬ್ಬರಿ 1,40,14,197 ರೂ.ಗಳನ್ನು ವರ್ಗಾಯಿಸಿದ್ದರು. ಹೂಡಿಕೆಯ ಲಾಭ ಪಡೆಯಲು ಹೋದಾಗಲೆಲ್ಲ ಸರ್ವಿಸ್ ಚಾರ್ಜ್ ಹೆಸರಿನಲ್ಲಿ 5% ಹಣವನ್ನು ಪಾವತಿಸಲು ಹೇಳುತ್ತಿದ್ದರು. ಇದರಿಂದ ಶಂಕೆಗೊಳಗಾದ ರಾಮನಾಥ್ ತಮ್ಮ ಸ್ನೇಹಿತರೊಂದಿಗೆ ಮಾತನಾಡಿ ತಾನು ಎಷ್ಟು ದೊಡ್ಡ ಹಗರಣದಲ್ಲಿ ಸಿಲುಕಿದ್ದೇನೆ ಎಂದು ತಿಳಿದುಕೊಂಡರು.
ಖಾಸಗಿ ಸಂಸ್ಥೆಯ ಉದ್ಯೋಗಿ ಸನತ್ ಪಿ (ಹೆಸರು ಬದಲಾಯಿಸಲಾಗಿದೆ) ಬಾಣಸವಾಡಿಯ ನಿವಾಸಿ. 2025 ರ ಜೂನ್ನಿಂದ ಸೆಪ್ಟೆಂಬರ್ ತಿಂಗಳಿನ ಅಂತರದಲ್ಲಿ 88.36 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ತಾನು ಒಂದು ಸೆಬಿ- ರಿಜಿಸ್ಟರ್ಡ್ ಕಂಪನಿಯಾದ ಓಡೊಮ್ಯಾಕ್ಸ್/ಒಪೆನಹೈಮರ್ ಎಂಬಲ್ಲಿ ಹೂಡಿಕೆ ಮಾಡುತ್ತಿದ್ದೇನೆಂದು ಭಾವಿಸಿ ಮೋಸಹೋಗಿದ್ದಾರೆ.
ಸೈಬರ್ ಅಪರಾಧಿಗಳು ಇವರೊಂದಿಗೆ ಒಂದು ನಕಲಿ ಟ್ರೇಡಿಂಗ್ ಆ್ಯಪ್ ಒಂದನ್ನು ಹಂಚಿಕೊಂಡಿದ್ದರು. ಅದನ್ನು ಡೌನ್ಲೊಡ್ ಮಾಡಿಕೊಂಡ ಸನತ್, ನಿರಂತರ ಹೂಡಿಕೆ ಮಾಡಿದ್ದಾರೆ. ಅವರ ಕಣ್ಣು ಕಟ್ಟಲು ಅವರ ಹೂಡಿಕೆಯು ಬೆಳೆಯುತ್ತಿರುವುದನ್ನೂ ಆ ನಕಲಿ ಆ್ಯಪ್ನಲ್ಲಿ ತೋರಿಸಲಾಗಿತ್ತು. 8.40 ಲಕ್ಷ ಹಣವನ್ನು ತನ್ನ ಸಂಬಂಧಿಯೊಬ್ಬರಿಂದ ಪಡೆದು ಹೂಡಿಕೆಮಾಡಿ ಕೇವಲ 50 ಸಾವಿರ ರೂ.ಗಳನ್ನಷ್ಟೇ ಹಿಂಪಡೆದಿದ್ದರು. ಹಲವಾರು ಬಾರಿ ಹಣ ಹಿಂಪಡೆಯುವಲ್ಲಿ ವಿಫಲರಾದಾಗ ಇದು ಸೈಬರ್ ವಂಚನೆಯೆಂದು ತಿಳಿದುಬಂದಿದೆ. ರಾಮನಾಥ್ ಮತ್ತು ಸನತ್ ಇಬ್ಬರೂ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಇಬ್ಬರ ಬ್ಯಾಂಕ್ ಖಾತೆಗಳ ಮೇಲೆ ಕಣ್ಣಿಟ್ಟಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
#Techie #loses #crore #investing #online #trading #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಬಿಹಾರ ವಿಧಾನಸಭಾ ಚುನಾವಣೆ ಕಾರಣಕ್ಕೆ ಜಿ ಎಸ್ ಟಿ ಸರಳೀಕರಣ: ಸಿದ್ದರಾಮಯ್ಯ
ಬೆಂಗಳೂರು: ಆರ್ ಎಸ್ ಎಸ್ ಹೇಳಿಕೊಟ್ಟಿದ್ದನ್ನು ಚಾಚೂ ತಪ್ಪದೆ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ಸ್ವಂತ ಬುದ್ಧಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ಇವರಿಗೆ ನಿಜವಾಗಿ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿ ಎಂದು ಆಗ್ರಹಿಸಿದ್ದಾರೆ.
ಜಿ ಎಸ್ ಟಿ ಉತ್ಸವ ಆಚರಿಸುವಂತೆ ಕೇಂದ್ರ ಸರಕಾರ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, 2017ರಲ್ಲಿ ಕೇಂದ್ರ ಸರಕಾರವೇ ಜಿ ಎಸ್ ಟಿ ಯನ್ನು ಜಾರಿಗೆ ತಂದು ಅವೈಜ್ಞಾನಿಕವಾಗಿ ಜಿ ಎಸ್ ಟಿ ದರ ನಿಗದಿಪಡಿಸಿದರು. ಈಗ ಅದನ್ನು ಸರಿಪಡಿಸಿ ಸುಧಾರಣೆ ಎಂಬ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅವೈಜ್ಞಾನಿಕ ಜಿಎಸ್ಟಿ ಪದ್ಧತಿ ಮೂಲಕ ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ ಪಡೆದಿರುವ ಕೇಂದ್ರ ಸರಕಾರ, ಆ ಹಣವನ್ನು ಮರಳಿ ನೀಡುವರೇ? ತಾವೇ ಹೆಚ್ಚಿಸಿದ ಜಿಎಸ್ ಟಿ ದರವನ್ನು ತಾವೇ ಕಡಿಮೆ ಮಾಡಿ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸದಲ್ಲಿ ಕೇಂದ್ರ ತೊಡಗಿದೆ. ಬಿಹಾರದ ಚುನಾವಣೆಯಿರುವ ಕಾರಣ, ಜಿ ಎಸ್ ಟಿ ಯನ್ನು ಸರಳೀಕರಣಗೊಳಿಸಿ, ಕಡಿತಗೊಳಿಸಿದ್ದೇವೆ ಎಂದು ಹೇಳಿಕೊಳ್ಳುವ ಅವಶ್ಯಕತೆಯಿಲ್ಲ ಎಂದರು.
ಕೇಂದ್ರದಿಂದ ತೆರಿಗೆ ಹಣವಾಗಿ ಕೇವಲ 3200 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಉತ್ತರಪ್ರದೇಶಕ್ಕೆ ಶೇ.18 ರಷ್ಟು ನೀಡುತ್ತಿದ್ದು, ರಾಜ್ಯಕ್ಕೆ ಕೇವಲ ಶೇ. 3.5 ರಷ್ಟು ನೀಡುತ್ತಿರುವುದು ಅನ್ಯಾಯ. ಕರ್ನಾಟಕ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡಿದರೆ, ನಮಗೆ ರೂಪಾಯಿಗೆ ಕೇವಲ 14 ಪೈಸೆ ಮಾತ್ರ ರಾಜ್ಯ ದೊರೆಯುತ್ತದೆ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಅನುದಾನವನ್ನು ಕೇಂದ್ರ ವಿತ್ತಸಚಿವರು ರದ್ದುಪಡಿಸಿದರು. ಆಯೋಗದ ಶಿಫಾರಸ್ಸಿನಂತೆ 5490 ಕೋಟಿ ಹಾಗೂ ಕೆರೆಗಳ ಅಭಿವೃದ್ದಿ 3000 ಕೋಟಿ, ರಸ್ತೆ ನಿರ್ಮಾಣಕ್ಕೆ 3000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೊಟಿ ರೂ.ಗಳ ಅನುದಾನವನ್ನು ನಮಗೆ ನೀಡಲಾಗಿಲ್ಲ. ಒಟ್ಟಾರೆ 17000 ಕೋಟಿ ರೂ. ಬರಬೇಕಾಗಿದ್ದ ಅನುದಾನ ಖೋತಾ ಆಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅಗತ್ಯಬಿದ್ದರೆ ನ್ಯಾಯಾಲಯದ ನೆರವು ಪಡೆದು ಕೇಂದ್ರದ ಅನುದಾನ ಪಡೆಯಲಾಗುವುದು ಎಂದರು.
ಕೇಂದ್ರದ ಕಡಿಮೆ ಅನುದಾನದ ನಡುವೆ ಗ್ಯಾರಂಟಿಗಳ ವೆಚ್ಚವನ್ನು ಭರಿಸುವುದು ಸರಕಾರಕ್ಕೆ ಸವಾಲಾಗಿದ್ದರೂ, ಸವಾಲನ್ನು ದಿಟ್ಟತನದಿಂದ ಎದುರಿಸಲಾಗುವುದು. ಜಿ ಎಸ್ ಟಿ ಸರಳೀಕರಣದಿಂದ ರಾಜ್ಯ ಸರಕಾರಗಳು ಹೆಚ್ಚು ನಷ್ಟ ಎದುರಿಸಲಿವೆ. ಕರ್ನಾಟಕಕ್ಕೆ ಇದರಿಂದ ವಾರ್ಷಿಕ ಅಂದಾಜು 15 ಸಾವಿರ ಕೋಟಿ ನಷ್ಟವಾಗಲಿದೆ. ಕೇಂದ್ರ ಸರಕಾರ , ಎನ್ ಡಿ ಎ ಗೆ ಬರುವ ರಾಜ್ಯಗಳ ಅನುಕೂಲಕ್ಕೆ ತಕ್ಕಂತೆ ಜಿಎಸ್ ಟಿ ಪರಿಹಾರವನ್ನು ನೀಡುತ್ತಿದೆ. ಕರ್ನಾಟಕದ ಬಿಜೆಪಿ ಸಂಸದರಿಗೆ ಮೋದಿಯವರನ್ನು ಹೊಗಳುವುದೇ ಕೆಲಸವಾಗಿದ್ದು, ರಾಜ್ಯದ ಹಿತಚಿಂತನೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆಸುತ್ತಿರುವ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಪ್ರಗತಿ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮತಾಂತರ ಹಾಗೂ ಜಾತಿ ಒಡೆಯುವ ದೃಷ್ಟಿಯಿಂದ ಸಮೀಕ್ಷೆಯನ್ನು ಸರಕಾರ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರಹ್ಲಾದ್ ಜೋಷಿಯವರು ಕೇಂದ್ರ ಸಚಿವರಾಗಿದ್ದು, ಕೇಂದ್ರ ನಡೆಸಲಿರುವ ಜಾತಿಸಮೀಕ್ಷೆಯ ಉದ್ದೇಶವನ್ನು ತಿಳಿಸಬೇಕು. ಕೇಂದ್ರ ಸರಕಾರಕ್ಕೆ ಜಾತಿ, ಧರ್ಮ ಒಡೆಯುವ ಉದ್ದೇಶವಿದೆಯೇ? ಕರ್ನಾಟಕದಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಜನರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುವ ಉದ್ದೇಶವಿದೆ ಎಂದರು.
ಕಾಂತರಾಜು ವರದಿಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್ ಎಂಬಿತ್ಯಾದಿ ಜಾತಿಗಳನ್ನು ನಮೂದಿಸಲಾಗಿತ್ತು. ಜನರು ತಮ್ಮ ಜಾತಿಯನ್ನು ಸ್ವಯಂಪ್ರೇರಿತರಾಗಿ ನಮೂದಿಸಿದರೆ ಅದಕ್ಕೆ ಸರಕಾರ ಜವಾಬ್ದಾರವಾಗುವುದಿಲ್ಲ. ಆದರೆ ಆಯೋಗ, ಈ ಜಾತಿಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಆದ್ದರಿಂದ ಜನರು ಸ್ವಯಂಪ್ರೇರಿತವಾಗಿ ಹೇಳುವ ಜಾತಿಯ ಮಾಹಿತಿಯನ್ನು ಆಯೋಗ ಪಡೆಯಲಿದೆ. ಇದರಲ್ಲಿ ಜಾತಿ ಒಡೆಯುವ ಪ್ರಶ್ನೆಯಿಲ್ಲ. ಜನರನ್ನು ರಾಜಕೀಯ ಉದ್ದೇಶದಿಂದ ದಾರಿತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.
#Simplification #GST #due #Bihar #assembly #elections #Siddaramaiah #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಮನಸೂರೆಗೊಂಡ ಪಿ.ಬಿ.ಶ್ರೀನಿವಾಸ್ ನೆನಪಿನ ಗೀತಗಾಯನ
ಡಾ. ಪಿ.ಬಿ ಶ್ರೀನಿವಾಸ್ ಮಧುರಗಾನ ಬೆಂಗಳೂರು ಮತ್ತು ಡಾ. ಪಿ. ಬಿ ಶ್ರೀನಿವಾಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ "ಇನಿದನಿಯರಸ, ಕಲೈಮಾಮಣಿ, ಸಂಗೀತ ಕಲಾನಿಧಿ ಡಾ. ಪಿ.ಬಿ ಶ್ರೀನಿವಾಸ್ ಭಾವ ಕುಸುಮ" ವಿವಿಧ ಕಲಾವಿದರಿಂದ ಗೀತಗಾಯನ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿ ಡಿ.ವಿ.ಜಿ ರಸ್ತೆಯ ಅಬಲಾಶ್ರಮದಲ್ಲಿ ಆಯೋಜನೆಗೊಂಡಿತ್ತು.
ಮೋಹನ್ ಶ್ರೀಗಿರಿಪುರ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಲಕ್ಷ್ಮಿ, ಅನುರಾಧ ಹಾಗೂ ಸಹನಾ ಸುಬ್ರಹ್ಮಣ್ಯಂ ಅವರು ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಬೆಳಗ್ಗೆ ಏಳು ಗಂಟೆಗೆಲ್ಲ ಗೀತಗಾಯನ ಕಾರ್ಯಕ್ರಮ ಆರಂಭಗೊಂಡಿತು.
ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರದಲ್ಲಿ (ಎಂ.ಎ)ಸ್ನಾತಕೋತ್ತರ ಪದವಿ, ಕುಂಡಲಿನಿ ಯೋಗ ಸಾಧಕ, ಸಿ.ಎ ಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ, ಕುಂಡಲಿನಿ ಯೋಗ ವಿಷಯ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವಿಕೆ, ವೀಣೆ ನುಡಿಸುವ ನೈಪುಣ್ಯತೆ ಹಾಗೂ ಈಗಲೂ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಡಾ. ಪಿ. ಬಿ ಶ್ರೀನಿವಾಸನ್ ಅವರ ಸುಪುತ್ರ ಡಾ. ಪಿ.ಬಿ ಫಣೀಂದ್ರ ಅವರು ಗೌರವಾಧ್ಯಕ್ಷರಾಗಿ ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲೈಂಗನರ್ ದೂರದರ್ಶನದ ಸಹಾಯಕ ನಿರ್ದೇಶಕ, ಒಂದು ಸಾಲಿನ ಬರಹಗಾರ, ಚಿತ್ರಕಥೆ ಬರಹಗಾರ, ಸಂಭಾಷಣೆ ಬರಹಗಾರ, ಧಾರಾವಾಹಿಗಳಿಗೆ ಹಿನ್ನೆಲೆ ಸಂಗೀತ ಸಂಯೋಜಕ, ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ, ಅನಿಮೇಷನ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿರುವ ಪಿ. ಸೀತಾರಾಮನ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು.
ಸುಮಾರು 11 ಗಂಟೆಗೆ ಉದ್ಘಾಟನಾ ಸಮಾರಂಭ ಪ್ರಾರಂಭವಾಯಿತು. ಅತಿಥಿಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಕಾರ್ಯಾಧ್ಯಕ್ಷ ಮೋಹನ್ ಶ್ರೀಗಿರಿಪುರ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಮೋಹನ್ ಶ್ರೀಗಿರಿಪುರ ಹಾಗೂ ಸುದರ್ಶನ್ ಅವರು ಅತಿಥಿಗಳ ಪರಿಚಯವನ್ನು ಮಾಡಿದರು.
ಕಾರ್ಯಕ್ರಮವನ್ನು ನಡೆಸಲು ಸಹಾಯ ಹಸ್ತ ಚಾಚಿದವರೆಲ್ಲರಿಗೂ ಅತಿಥಿ ಗಣ್ಯರ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ಅತೀ ಧೀರ್ಘವಲ್ಲದ ಉದ್ಘಾಟಕರ ಭಾಷಣ, ಮುಖ್ಯ ಅತಿಥಿಗಳ ನುಡಿಗಳು ಮತ್ತು ಅಧ್ಯಕ್ಷರ ನುಡಿಗಳು ಅರ್ಥಪೂರ್ಣವಾಗಿದ್ದವು. ಎಲ್ಲರೂ ಡಾ. ಪಿ.ಬಿ ಶ್ರೀನಿವಾಸ್ ರವರ ಬಗ್ಗೆ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಗಳಾದ ಪಿ. ಸೀತಾರಾಮನ್ ಮಾತನಾಡಿ, ಒಬ್ಬ ಅತ್ಯುತ್ತಮ ಧ್ವನಿ ಅನುಕರಣೆ ಕಲಾವಿದರು. ಅವರು ವೇದಿಕೆಯಲ್ಲಿ ಪ್ರದರ್ಶಿಸಿದ ಹಲವು ಅದ್ಭುತವಾದ ಧ್ವನಿ ಅನುಕರಣೆಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರೇಕ್ಷಕರ ಮನದಲ್ಲಿ ಅಚ್ಚರಿ ಮೂಡುವಂತೆ ಮಾಡಿದವು. ಪ್ರೇಕ್ಷಕರಿಂದ ಕರತಾಡನ ಹಾಗೂ ಹರ್ಷೋದ್ಗಾರಗಳು ಮೊಳಗಿದವು.
ಗೀತಗಾಯನದಲ್ಲಿ ಹಲವಾರು ಕಲಾವಿದರು ಪಾಲ್ಗೊಂಡಿದ್ದರು. ವಿಶೇಷವೆಂದರೆ ಎಲ್ಲರೂ ಸಂಗೀತ ಕಲಾನಿಧಿ ಡಾ. ಪಿ ಬಿ ಶ್ರೀನಿವಾಸ್ ರವರು ಹಾಡಿದಂತಹ ಅತ್ಯುತ್ತಮ ಗಾನಗಳನ್ನು ಆರಿಸಿ ಹಾಡಿದ್ದರು. ವಿಶೇಷವೆಂದರೆ ಮೋಹನ್ ಶ್ರೀಗಿರಿಪುರ ಅವರು ಪಿ. ಬಿ ಶ್ರೀನಿವಾಸ್ ಅವರನ್ನು ಹೋಲುವ ಧ್ವನಿಯನ್ನು ಹೊಂದಿದ್ದಾರೆ. ಅವರೂ ಕೂಡ ಸುಮಧುರ ಗೀತೆಗಳನ್ನು ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಗೀತಗಾಯನ ಕಾರ್ಯಕ್ರಮದಲ್ಲಿ ಯುಗಳ ಗೀತೆಗಳು ಹಾಗೂ ಏಕವ್ಯಕ್ತಿ ಗೀತೆಗಳು ಒಳಗೊಂಡಿದ್ದವು.
ಎಲ್ಲಾ ಗಾಯಕ ಗಾಯಕಿಯರ ಹಾಡುಗಳು ಸುಶ್ರಾವ್ಯ ಹಾಗೂ ಸುಮಧುರವಾಗಿದ್ದವು. ಯುವ ಕಲಾವಿದರು ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಇಂದಿನ ಯುವ ಜನತೆ ಅಂದಿನ ಕಾಲದ ಕ್ಲಿಷ್ಟಕರವಾದ ಗೀತೆಗಳನ್ನು ಕಲಿತು ಸೊಗಸಾಗಿ, ಮಧುರವಾಗಿ ಹಾಡಿದ್ದು ಪ್ರಶಂಸನೀಯವಾಗಿತ್ತು. ಬಹುಶಃ ನೂರಕ್ಕಿಂತ ಹೆಚ್ಚು ಹಾಡುಗಳನ್ನು ಕಲಾವಿದರು ಹಾಡಿದ್ದಾರೆ. ಗೀತಗಾಯನವನ್ನು ಆಲಿಸುತ್ತಿದ್ದ ಪ್ರತಿಯೊಬ್ಬರೂ ಕರತಾಡನದ ಮೂಲಕ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಿ ಉತ್ಸಾಹವನ್ನು ತುಂಬುತ್ತಿದ್ದರು.
ಬಿ. ಆರ್ ಉಮೇಶ್ ಅವರು ಧ್ವನಿವರ್ಧಕ ಉಪಕರಣಗಳ ಸಂಪೂರ್ಣ ಮೇಲುಸ್ತುವಾರಿಯನ್ನು ವಹಿಸಿ, ಉತ್ತಮ ರೀತಿಯಲ್ಲಿ ಉಪಕರಣಗಳ ನಿರ್ವಹಣೆಯನ್ನು ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗಾಯಕಿ ಮಮತಾ ಭಾಸ್ಕರ್ ಅವರು ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರವಾಗಿ ನಡೆದ ಗೀತಗಾಯನ ಕಾರ್ಯಕ್ರಮದ ಹಾಗೂ ಗೀತಗಾಯನಗಳ ಅಷ್ಟೂ ವಿಡಿಯೋಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಗೀತಗಾಯನ ಕಾರ್ಯಕ್ರಮದ ನಡುವೆ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಾಯನದಲ್ಲಿ ನುರಿತ ಹಿರಿಯ ಕಲಾವಿದರು ಹಾಗೂ ಮುಖ್ಯ ಅತಿಥಿಗಳ ಮುಖಾಂತರ ಅವರಿಗೆ ಹಾರ ಹಾಕಿಸಿ, ಶಾಲು ಹೊದಿಸಿ, ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಗೌರವ ಸನ್ಮಾನವನ್ನು ಮಾಡಲಾಯಿತು. ಸಂಜೆ ಕಾರ್ಯಕ್ರಮ ಮುಗಿಯುವವರೆಗೂ ಗಾನಾಲಾಪನ ಮುಂದುವರೆದಿತ್ತು.
ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ಹೊತ್ತ ಎಲ್ಲರಿಂದಲೂ ಸಮರ್ಪಕವಾದ ಕಾರ್ಯನಿರ್ವಹಣೆ ನಡೆದಿತ್ತು. ಕಾರ್ಯಕ್ರಮದ ಅಂತಿಮದಲ್ಲಿ ಹಲವು ಉತ್ತಮ ಗಾಯಕ/ಗಾಯಕಿಯರಿಗೆ ಸನ್ಮಾನ ಪುರಸ್ಕಾರವನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ತಿಂಡಿ, ಕಾಫಿ, ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಡಾ. ರಾಜಕುಮಾರ್ ಸೌಹಾರ್ದ ಪ್ರಶಸ್ತಿ, ಕಲೈವನರ್ ಹೀಗೆ ಈ ಮೇಲ್ಕಂಡ ಪ್ರಶಸ್ತಿಗಳನ್ನು ಪಡೆದ ಡಾ. ಪಿ. ಬಿ ಶ್ರೀನಿವಾಸ್ ರವರು ಜನಮನದಲ್ಲಿ ಅಚ್ಚಳಿಯದೆ ಉಳಿದಂತಹ ಒಬ್ಬ ಅಪೂರ್ವ ಹಾಗೂ ಅಪ್ರತಿಮ ಗಾಯಕರಾಗಿದ್ದಾರೆ.
ಪಿ.ಬಿ.ಎಸ್ ರವರ ಅಭಿಮಾನಿಗಳು ಅವರ ಹೆಸರಿನಲ್ಲಿ ಗೀತಗಾಯನ ಕಾರ್ಯಕ್ರಮಗಳನ್ನು ಮಾಡುತ್ತಾ ಅಪೂರ್ವವಾದ ಗೀತೆಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿರುವುದು ವಿಶೇಷ. ಕಳೆದ ಮೂರು ವರ್ಷಗಳಿಂದ ಡಾ. ಪಿ.ಬಿ ಶ್ರೀನಿವಾಸ್ ಎಂಬ ಗಾನಮಾಂತ್ರಿಕನ ಸವಿ ನೆನಪಿನಲ್ಲಿ ಮೋಹನ್ ಶ್ರೀ ಗಿರಿಪುರ ರವರ ಕಲಾವಿದರ ಬೆಳಗವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದು ಬಳಗವು ನಡೆಸುತ್ತಿರುವ ಒಂಭತ್ತನೇ ಗೀತಗಾಯನ ಕಾರ್ಯಕ್ರಮವಾಗಿದೆ. ಇದುವರೆಗೂ ನಡೆಸಿದ ಕಾರ್ಯಕ್ರಮಗಳ ಪ್ರಮುಖ ಹೆಸರುಗಳು ಇಂತಿವೆ.
1. ಮೋಹಕ ಗಾನ ಮೋಹನ ಯಾನ
(ಸಿಂಗ್ ವಿತ್ ದ ಸ್ಟಾರ್)
2. ಪಿ.ಬಿ.ಎಸ್ ಹಾಡುಹಬ್ಬ ಹಾಗೂ
3. ಡಾ. ಪಿ. ಬಿ. ಶ್ರೀನಿವಾಸ್ ಭಾವಕುಸುಮ.
ಅಜರಾಮರರಾದ ಗಾಯಕ ಡಾ. ಪಿ. ಬಿ ಶ್ರೀನಿವಾಸ್ ರವರ ಹೆಸರಿನಲ್ಲಿ ಸಂಸ್ಥೆಗಳು ಜಂಟಿ ಆಯೋಜನೆಯಲ್ಲಿ ಮಾಡುತ್ತಿರುವ ಸಂಗೀತ ಸೇವೆಯು ಅನುಕರಣೀಯ. ತಮ್ಮ ಮೆಚ್ಚಿನ ಗಾಯಕನ ಗಾಯನದ ಗೀತೆಗಳನ್ನು ಚಿರಸ್ಮರಣೀಯವಾಗಿರಿಸುವ ನಿಟ್ಟಿನಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಗಾಯಕ ಪುತ್ರ ಡಾ. ಪಿ. ಬಿ ಫಣೀಂದ್ರ ಹಾಗೂ ಮೋಹನ್ ಶ್ರೀಗಿರಿಪುರ ಮತ್ತು ಎಲ್ಲಾ ಕಲಾವಿದರ ಪರಿಶ್ರಮ ಶ್ಲಾಘನೀಯ. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಸುದರ್ಶನ್ ಅವರು ಸೊಗಸಾಗಿ ನಿರ್ವಹಿಸಿದರು. ಅಂತಿಮವಾಗಿ ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಯುತ ಮೋಹನ್ ಶ್ರೀಗಿರಿಪುರರವರು ಮಾಡಿದರು. ಡಾ. ಪಿ. ಬಿ ಶ್ರೀನಿವಾಸ್ ರವರ ಸ್ಮರಣಾರ್ಥವಾಗಿ ಪ್ರಾರಂಭಗೊಂಡ ಗೀತಗಾಯನ ಕಾರ್ಯಕ್ರಮವು ಚಿರಕಾಲ ಹೀಗೆಯೇ ಮುಂದುವರೆಯುವಂತಾಗಲಿ.
- ರುಕ್ಮಿಣಿ ಎಸ್ ನಾಯರ್, ಬೆಂಗಳೂರು
#PBSrinivas #memorable #song #singing #RukminiSNair #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಅಧಿಕಾರ ಹಸ್ತಾಂತರ ವಿಚಾರ
ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಸ್ತಾಂತರ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಮುಂದಿನ ಎರಡೂವರೆ ವರ್ಷಗಳ ಕಾಲ ತಾವೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಿಸಿದ್ದು, ಅವರ ಬೆಂಬಲಕ್ಕೆ ಅನೇಕ ಮಂದಿ ಮಂತ್ರಿಗಳು ಧಾವಿಸಿದ್ದಾರೆ.
ಮತ್ತೊಂದೆಡೆ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಮನವಿ ಮಾಡಿದ್ದು, ಶಿಸ್ತು ಉಲ್ಲಂಘನೆ ಆರೋಪದ ಹೆಸರಿನಲ್ಲಿ ಇವರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ಜಾರಿಗೊಳಿಸಿದೆ.
ವಿಜಯದಶಮಿ ವೇಳೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದಿಲ್ಲ ಎಂದು ಬಿಜೆಪಿ ನಾಯಕರು ಈ ಹಿಂದೆ ಮಾಡಿದ್ದ ಆರೋಪಗಳಿಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಈ ವಿಜಯದಶಮಿ ಮಾತ್ರವಲ್ಲ ಮುಂದಿನ ವಿಜಯದಶಮಿಗೂ ತಾವೇ ಮುಖ್ಯಮಂತ್ರಿಯಾಗಿದ್ದು ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುವುದಾಗಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್ ಅವರ ಆಪ್ತ ಶಾಸಕ ಡಾ. ರಂಗನಾಥ್ ಮತ್ತು ಮಾಜಿ ಸಂಸದ ಶಿವರಾಮೇಗೌಡ ಅವರು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಡಿ ಕೆ ಶಿವಕುಮಾರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ಹೈಕಮಾಂಡ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದರು.
ನಾಯಕತ್ವ ವಿಚಾರ ಕುರಿತಂತೆ ಯಾರೂ ಕೂಡ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಹೈಕಮಾಂಡ್ ಕಟ್ಟಾಜ್ಞೆ ವಿಧಿಸಿದ್ದರೂ ಈ ಇಬ್ಬರೂ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇಬ್ಬರ ಹೇಳಿಕೆಯ ನಂತರ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಸಚಿವರ ದಂಡೇ ನಿಂತಿದೆ. ಸಿದ್ದರಾಮಯ್ಯ ಆಪ್ತರಾದ ಜಮೀರ್ ಅಹ್ಮದ್ ಖಾನ್, ಡಾ. ಜಿ ಪರಮೇಶ್ವರ್, ಎಚ್ ಸಿ ಮಹದೇವಪ್ಪ, ಎಂ ಬಿ ಪಾಟೀಲ್ ದಿನೇಶ್ ಗುಂಡೂರಾವ್ ಮಾತ್ರವಲ್ಲ, ಯಾವುದೇ ಬಣಗಳಲ್ಲಿ ಗುರುತಿಸಿಕೊಳ್ಳದ ರಾಮಲಿಂಗಾ ರೆಡ್ಡಿ ಕೂಡಾ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಈ ಮೊದಲಿನಿಂದಲೂ ಯಾವುದೇ ಬಹಿರಂಗ ಹೇಳಿಕೆ ನೀಡದೆ ಅಂತರ ಕಾಯ್ದುಕೊಂಡು ಬಂದಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇದೇ ಮೊದಲ ಬಾರಿಗೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ನವೆಂಬರ್ ಕ್ರಾಂತಿ ಎಂಬುದು ಭ್ರಾಂತಿ. ಅಧಿಕಾರ ಹಂಚಿಕೆ ಮಾತು ಪಕ್ಷ ವಿರೋಧಿ. ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ.
ಇವರಷ್ಟೇ ಅಲ್ಲ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡಾ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ಕ್ರಾಂತಿ ಇಲ್ಲ. ಕೇವಲ ಶಾಂತಿ. ಸಿಎಂ ಬದಲಾವಣೆ ಚರ್ಚೆಯೇ ಇಲ್ಲ. ಇದನ್ನು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ಎರಡುವರೆ ವರ್ಷಗಳ ಕಾಲ ಅವರೇ ಸಿಎಂ ಆಗಿ ಇರುತ್ತಾರೆ ಎಂದು ಅಂದುಕೊಂಡಿದ್ದೇವೆ ಎನ್ನುವ ಮೂಲಕ ನಾಯಕತ್ವ ಬದಲಾವಣೆ ಅಲ್ಲಗಳೆದಿದ್ದಾರೆ.
ಮಂತ್ರಿಗಳಾದ ಎಂ ಬಿ ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ವಿಷಯ ಚರ್ಚೆ ಮಾಡುವಂತಿಲ್ಲ. ಈ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ನಾಯಕತ್ವ ಬದಲಾವಣೆ ಕುರಿತ ಹೇಳಿಕೆ ನೀಡಿದ ಉಪ ಮುಖ್ಯಮಂತ್ರಿ ಆಪ್ತರಿಗೆ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಶಾಸಕ ಡಾ. ರಂಗನಾಥ್ ಅವರು ಡಿ ಕೆ ಶಿವಕುಮಾರ್ ಅವರು ಸಿಎಂ ಆಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಕಾರಕ್ಕೆ ಬರುವಲ್ಲಿ ಡಿಕೆ ಪಾತ್ರ ಇದೆ. ಹಾಗಾಗಿ ಅವರು ಇಂದಲ್ಲ ನಾಳೆ ಸಿಎಂ ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ಅವರಷ್ಟೇ ಅಲ್ಲ, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಕೂಡಾ ಡಿ ಕೆ ಶಿವಕುಮಾರ್ ಪರವಾಗಿ ಹೇಳಿಕೆ ನೀಡಿದ್ದರು. ಡಿಕೆಶಿ ರಾಜ್ಯದ ಸಿಎಂ ಆಗಬೇಕು ಎಂದು ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ಅವರಿಗೆ ಕೂಡಾ ನೋಟಿಸ್ ನೀಡಲಾಗಿದೆ. ಒಂದು ವಾರದೊಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಿಲಾಗಿದೆ.
#transfer #power #issue #once #again #made #big #splash #malgudiexpress #malgudinews #news #TopNews