#📜ಪ್ರಚಲಿತ ವಿದ್ಯಮಾನ📜
ಮನುಷ್ಯ ಪ್ರೀತಿಯ ಅನ್ವೇಷಣೆಯ ವಿಪುಲ ರೂಪ ಧಾರಿಣಿ
ಡಾ. ಜಿ.ಎಸ್ ಶಿವರುದ್ರಪ್ಪನವರ ಕವಿತೆಗಳು ರಂಗ ರೂಪವನ್ನು ಪಡೆದು ಸ್ವತಂತ್ರವಾಗಿ ವಿಹರಿಸಲು ಪ್ರಯತ್ನಿಸುವುದಕ್ಕೆ ಶುರು ಮಾಡಿದಾಗ, ನೋಡುಗರ ಮೈಮನಗಳಲ್ಲಿ ವಿದ್ಯುತ್ ಸಂಚಾರವಾಗ ತೊಡಗಿತು. ಕವಿತೆ ಬರಿ ಅಕ್ಷರಗಳಾಗಿದ್ದವು ಅದು ರಂಗಕ್ಕೆ ಬಂದಾಗ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವವರಂತೆ ನರ್ತಿಸುತ್ತಿತ್ತು. ಕಾವ್ಯ ಮಾತಾಡುತ್ತ, ಆಟವಾಡುತ್ತ, ವಾಚಿಸುತ್ತ, ಸಂಜ್ಞೆ ತೋರುತ್ತ ಹಲವು ಪ್ರಶ್ನೆಗಳನ್ನು ಸಮುದಾಯಕ್ಕೆ, ಓದುಗರಿಗೆ,ನೋಡುಗರಿಗೆ ಕೇಳುತ್ತಲಿದ್ದವು. ಆ ಪ್ರಶ್ನೆಗಳೆಂದರೆ ಮಹಿಳೆಯ ಸ್ವಾತಂತ್ರ್ಯ ಎಲ್ಲಿದೆ? ಪ್ರೀತಿ, ಕರುಣೆಗಳೆಲ್ಲಿವೆ? ದೇವರು ಎಲ್ಲಿದ್ದಾನೆ? ಮನುಷ್ಯರೆಲ್ಲಿದ್ದಾರೆ? ಧರ್ಮ ಎಲ್ಲಿದೆ? ನ್ಯಾಯ ಎಲ್ಲಿದೆ? ಎಂಬುವುದಕ್ಕೆ ಕುಪ್ಪಳಿಯ ಹೇಮಾಂಗಣ ವೇದಿಕೆ ಸಾಕ್ಷಿಯಾಯಿತು.
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು ಅವರು ಏರ್ಪಡಿಸಿದ 'ಸಾಹಿತ್ಯ ವಿಮರ್ಶೆ ತಾತ್ವಿಕತೆ ಮತ್ತು ಪ್ರಾಯೋಗಿಕತೆ' ಕಮ್ಮಟದಲ್ಲಿ 'ವಿಪುಲ ರೂಪ ಧಾರಿಣಿ' ನಾಟಕವು ಜಿ.ಎಸ್.ಎಸ್ ಕವಿತೆಗಳ ಕಾವ್ಯ ಅಭಿನಯದ ಒಂದು ನೋಟವನ್ನು ಶಿವಮೊಗ್ಗದ ಹೊಂಗಿರಣ ತಂಡ ಪ್ರದರ್ಶಿಸಿತು. ಮೂರು ದಶಕಗಳ ಕಾಲ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ತಂಡ ಅನೇಕ ಪ್ರಯೋಗಗಳನ್ನು ಮಾಡಿದೆ, ಮಾಡುತ್ತಿದೆ. ವಿಮರ್ಶೆಗಳನ್ನು, ಕಥನಗಳನ್ನು ನಾಟಕ ರೂಪದಲ್ಲಿ ರಂಗಕ್ಕೆ ತಂದ ಕೀರ್ತಿ ಹೊಂಗಿರಣದ ಪ್ರಾಯೋಗಿಕತೆಗೆ ಸಾಕ್ಷಿ.
ವಿಶಿಷ್ಟವಾಗಿ ಇಲ್ಲಿಯವರೆಗೆ ಜನಮಾನಸದಲ್ಲಿರುವ ಕವಿತೆಗಳನ್ನು ಬಳಸದೆ, ಕೇಳದೆ ಇರುವ ಕವನಗಳಿಗೆ ರಂಗ ರೂಪ ಕೊಡುವುದರ ಮೂಲಕ ರಂಗ ವಿನ್ಯಾಸವನ್ನು ರೂಪಿಸಿಕೊಂಡಿರುವ ರಂಗ ಪಠ್ಯ. ನಟರ ವಾಚಿಕ ಆಂಗಿಕ ಅಭಿನಯವೇ ನಾಟಕದ ಜೀವಾಳವಾಗಿದೆ.
ಅಸಹಾಯಕರಿಗೆ ಸಹಾಯ ಮಾಡುವ, ಪ್ರೀತಿಗಾಗಿ ಜೀವಿಸುವ, ಬಡವರಿಗೆ ಸಹಾಯ ಹಸ್ತ ಚಾಚುವ, ವಾತ್ಸಲ್ಯದ ಹೃದಯಗಳಾಗಿ ತಡಕಾಡುವ ಮನಸ್ಸುಗಳನ್ನು ಹುಡುಕಾಡುತ್ತಿದ್ದೇನೆ ಎಂದು ಜಿ.ಎಸ್.ಎಸ್ ಅವರ ಕವಿತೆಗಳು ಅಕ್ಷರಸ್ಥನನ್ನು, ಅಧಿಕಾರಿಶಾಹಿಗಳನ್ನು, ಬಂಡವಾಳ ಶಾಹಿಗಳನ್ನು ಕಗ್ಗಲಿನ ಹೃದಯಕ್ಕೂ ಪ್ರವೇಶಿಸಿ ಕೇಳುತ್ತಾರೆ. ಗುಡಿ,ಚರ್ಚ್, ಮಸೀದಿಗಳ ಹೆಸರಲ್ಲಿ ಜನರ ಮನಸ್ಸಿನಲ್ಲಿ ಬೆಂಕಿ ಹತ್ತಿಸುವವರು ಯಾರು? ಇದಕ್ಕೆಲ್ಲ ಯಾರು ಹೊಣೆ ಎಂದಾಗ ಕವಿ ಕೇಳುವ ಪ್ರಶ್ನೆ, ನಾವೇ ಇದಕ್ಕೆಲ್ಲ ಹೊಣೆ ಎಂದು ಹೇಳುವರು.
ಸಾಹಿತ್ಯದ ಜವಾಬ್ದಾರಿ, ಸಾಹಿತಿಗಳ ಔಚಿತ್ಯವೇನು? ಕಾವ್ಯ ಏನೆಂದು ಹೇಳಬೇಕು? ಏನನ್ನು ಹೇಳಬಾರದು, ಕಾವ್ಯ ಏನು ಹೇಳುತ್ತಿದೆ, ಅದರ ಅಂತರಾತ್ಮ ಗ್ರಹಿಸುವ ಬಗೆ ಹೇಗೆ, ಅದರ ಸ್ವರೂಪದ ವ್ಯಾಖ್ಯೆಗಳನ್ನು ಕಂಡುಕೊಳ್ಳುವುದು ನಿಜವಾದ ಸೃಜನಶೀಲತೆ ಎಂದು ಕವಿ ಮನಸ್ಸು ಪ್ರಶ್ನೆಸಿಕೊಳ್ಳುತ್ತಿದೆ. ಈ ಆಲೋಚನೆಗಳನ್ನು ಗ್ರಹಿಸಿದಾಗ
"ಮನುಷ್ಯನ ಹೃದಯದಷ್ಟು
ಫಲವತ್ತಾದ ಜಾಗ ಇನ್ನೊಂದಿಲ್ಲ,
ಅಲ್ಲಿ ಏನನ್ನು ಬೆಳೆಯಬೇಕು?
ಪ್ರೀತಿಯೋ? ದ್ವೇಷವೊ?
ಆಯ್ಕೆ ನಿಮ್ಮದು" ಎಂಬ ಪಿ. ಲಂಕೇಶ್ ಅವರ ಮಾತು ನೆನಪಿಸುತ್ತಿತ್ತು. ವಿಚಾರ ಮಡುಗಟ್ಟಿದರೆ ಪುರಾಣವಾಗಿ ಬಿಡುವ ಸಂಭವವೇ ಹೆಚ್ಚು, ವಿಚಾರಗಳು ಚಲನಶೀಲವಾದಾಗ ಚರಿತ್ರೆ ನಿರ್ಮಾಣವಾಗುವುದೆಂಬ ಕವಿತೆಗಳ ಆಶಯ ಮನಮುಟ್ಟುವಂತಿತ್ತು.
ಮನುಷ್ಯ- ಪ್ರೀತಿ- ದೇವರು
ಪ್ರತಿಯೊಂದು ಧರ್ಮಗಳ ದೇವಸ್ಥಾನಗಳಲ್ಲಿರುವ ಅಂಧಕಾರ, ಆಡಂಬರದ ಪೂಜಾರಿಗಳ ಸಾಂಪ್ರದಾಯಿಕತೆಗೆ ಮನುಷ್ಯನು ಬೀಳದಿರಲಿ ಎಂಬ ಎಚ್ಚರದಿಂದಲೇ ನಾಟಕ ಸಿಡಿಲಬ್ಬರದಂತೆ ಶುರುವಾಗುತ್ತದೆ. 'ಈ ಪವಿತ್ರ ಭಾರತದಲ್ಲಿ ಹಿಂದುಗಳಿದ್ದಾರೆ ಮುಸ್ಲಿಮರಿದ್ದಾರೆ ಕ್ರೈಸ್ತರಿದ್ದಾರೆ, ಬುದ್ಧರಿದ್ದಾರೆ, ಜೈನರಿದ್ದಾರೆ, ಸಿಖ್ ರಿದ್ದಾರೆ, ಬ್ರಾಹ್ಮಣರಿದ್ದಾರೆ, ಒಕ್ಕಲಿಗರಿದ್ದಾರೆ ಅಸ್ಪೃಶ್ಯರಿದ್ದಾರೆ ಆದರೆ ನಾನು ಹುಡುಕುತ್ತಿರುವುದು ಮನುಷ್ಯನನ್ನು ದಯಮಾಡಿ ಹೇಳಿ ಅವರು ಎಲ್ಲಿದ್ದಾರೆ?'
'ಈ ದೇಶದ ಉದ್ದಗಲಕ್ಕೂ ಅಸಂಖ್ಯಾತ ಗುಡಿಗಳಿವೆ, ಮಸೀದಿಗಳಿವೆ, ಮಂದಿರಗಳಿವೆ, ಬಸದಿಗಳಿವೆ ದಯಮಾಡಿ ಹೇಳಿ. ಆದರೆ ನಾನು ಹುಡುಕುತ್ತಿರುವುದು ದೇವರನ್ನು ದಯಮಾಡಿ ಹೇಳಿ ಅವನು ಎಲ್ಲಿದ್ದಾನೆ?'
ಈ ದೇಶದ ಹಿಂದುಗಳಿಗೆ ಭಗವದ್ಗೀತೆ ಇದೆ. ಶಾಸ್ತ್ರ, ಪುರಾಣ ಆಗಮಗಳಿವೆ. ಮುಸ್ಲಿಮರಿಗೆ ಕುರಾನ್ ಇದೆ. ಕ್ರೈಸ್ತರಿಗೆ ಬೈಬಲ್ ಇದೆ. ಲಿಂಗಾಯಿತರಿಗೆ ವಚನಗಳಿಗವೆ. ಆದರೆ ನಾನು ಹುಡುಕುತ್ತಿರುವುದು ಪ್ರೀತಿಗಾಗಿ. ದಯಮಾಡಿ ಹೇಳಿ ಅದು ಎಲ್ಲಿದೆ? ನಾವು ಹುಡುಕುತ್ತಿರುವುದು ಪ್ರೀತಿಗಾಗಿ ದಯಮಾಡಿ ಹೇಳಿ ಅದು ಎಲ್ಲಿದೆ? ಎಂದು ಪಾತ್ರಗಳು ಮನುಷ್ಯರಿಗಾಗಿ, ಪ್ರೀತಿಗಾಗಿ, ದೇವರಿಗಾಗಿ ಅನ್ವೇಷಣೆ ನಡೆಸುತ್ತಿವೆ ಎಂಬುದು ಶಿವರುದ್ರಪ್ಪ ನವರ ಕವಿತೆಗಳ ಅನುರಣನ.
ಬುದ್ಧ, ಅಲ್ಲಮರು ಇಹಲೋಕವನ್ನು ಕುರಿತು ವಿಚಾರಿಸುತ್ತಾರೆ, ತರ್ಕಿಸುತ್ತಾರೆ. ಕೊನೆಗೆ 'ನಾನೆಷ್ಟು ಎತ್ತರನೋ ನಮ್ಮ ದೇವರು ಕೂಡ ಅಷ್ಟೇ ಎತ್ತರ 'ಎಂಬ ನಿಲುವಿಗೆ ಬಂದು ನಿಲ್ಲುತ್ತಾರೆ. ಇಲ್ಲಿ ದೇವರೆಂದರೆ ವಿಚಾರವಷ್ಟೇ. ಯಾವುದೇ ರೀತಿಯ ಮೂರ್ತ ಸ್ವರೂಪದ ವಿಗ್ರಹಗಳಲ್ಲ. ಪ್ರೀತಿ, ಸ್ನೇಹ, ಕರುಣೆ, ಮರುಕ ಇವೇ ನಮ್ಮ ದೇವರು ಎಂಬ ಆಶಯ ರಂಗದಲ್ಲಿ ಪ್ರತಿಧ್ವನಿಸುತ್ತಿತ್ತು.
ಅಪರಾಧಿ ಸ್ಥಾನದಲ್ಲಿ ಕವಿತೆ
ಇಂದಿನ ಭಾರತದಲ್ಲಿ ಅದೆಷ್ಟು ಅನಾಥ ಮಕ್ಕಳು ಬೀದಿ ಬೀದಿಗಳಲ್ಲಿ ಚಿಂದಿ ಆಯುವ, ಬಿಕ್ಷಾಟನೆ ಮಾಡುವ ಮಕ್ಕಳನ್ನು ನೋಡುತ್ತೇವೆ. ಅವರಿಗೆ ಒಂದು ಸೂರು ಒದಗಿಸುವ ಯೋಗ್ಯತೆಯೂ ನಮಗಿಲ್ಲ. ಇದಕ್ಕೆ ಕಾರಣ ಯಾರೆಂದರೆ ನಾನು ಎಂದು ಕವಿ ಸ್ವವಿಮರ್ಶೆಗೊಳಪಡಿಸಿಕೊಳ್ಳುತ್ತಾರೆ. ಬೇರೆಯವರನ್ನು ಬೆರಳು ಮಾಡಿ ತೋರಿಸುವುದಕ್ಕಿಂತ ನನ್ನ ಕಡೆಗೆ ನಾನು ಮೊದಲು ತಪ್ಪಿತಸ್ಥನೆಂದು ಒಪ್ಪಿಕೊಳ್ಳಬೇಕೆಂಬ ರೀತಿಯಲ್ಲಿ ಕವಿ ಮಾತಾಡುತ್ತಾರೆ. ನಾನು ಚಳಿ ಇದೆ ಎಂದು ಬೆಚ್ಚನೆ ಉಡುಪನ್ನು ಧರಿಸಿರುವೆ. ಆದರೆ ಬೀದಿಯಲ್ಲಿರುವ ಮನುಷ್ಯ ಚಳಿಯಿಂದ ನಡುಗುತ್ತಿದ್ದಾನೆ. ಇದಕ್ಕಾರು ಹೊಣೆ ಎಂದು ಮತ್ತೆ ಕವಿ ನೊಂದುಕೊಳ್ಳುತ್ತಾರೆ, ಇದಕ್ಕೆ ನಾನು ಹೊಣೆ ಎಂದು ಮರುಗುತ್ತಾರೆ. ಕೊಳಗೇರಿಗಳಲ್ಲಿ ಇರುವ ಜನರನ್ನು ನೋಡಿ, ಬೆಚ್ಚಗಿರುವ ಮನೆಯಲ್ಲಿ ನಾನಿದ್ದೇನೆ ಇದಕ್ಕೆ ಯಾರು ಹೊಣೆ ಎಂದು ಕವಿ ಮತ್ತೆ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾರೆ. ಇವುಗಳಿಗೆಲ್ಲ ನಾನೇ ಹೊಣೆ ಎಂದು ಕವಿ ಅಪರಾಧಿ ಸ್ಥಾನದಲ್ಲಿ ನಿಲ್ಲಲು ಬಯಸುತ್ತಾರೆ. ಈ ತರಹದ ಮನೋಭೂಮಿಕೆ ಇರುವವರು ಮಾತ್ರ ಮನುಷ್ಯತ್ವವನ್ನು ಬಯಸುತ್ತಾರೆ, ಹುಡುಕುತ್ತಾರೆ.
ನಿಸರ್ಗದ ರೆಂಬೆಕೊಂಬೆಗಳನ್ನು ಕಡಿದು ಮರುಭೂಮಿ ಮಾಡಲು ಹೊರಟ ಮಾನವನಿಗೆ ನೀತಿ ಹೇಳುವುದಾದರೂ ಹೇಗೆ ಎಂದು ಕವಿ ಪರಿತಪಿಸುತ್ತಾರೆ. ಆಧುನಿಕತೆಯ ಭರಾಟೆಯಲ್ಲಿ ಮರಗಳ ಮಾರಣಹೋಮ ನಡೆದಿದೆ. ಇದಕ್ಕಾರು ಹೊಣೆ ಎಂದು ಕೇಳಿದರೆ ಮತ್ತೆ ಕವಿ ತನ್ನನ್ನೇ ಹೊಣೆಗಾರರನ್ನಾಗಿ ಮಾಡಿಕೊಳ್ಳುತ್ತಾರೆ. ಇನ್ನೊಬ್ಬರನ್ನು ದೂರುವ ವ್ಯವಧಾನ ಕವಿತೆಯದಲ್ಲ, ನಾವು ಪಡೆಯುತ್ತಿರುವ ಶಿಕ್ಷಣ ನಮ್ಮನ್ನು ಹೇಗೆ ನಡೆಸುತ್ತಿದೆ ಎಂಬುದೇ ನಮ್ಮನ್ನು ನಾವು ಕೇಳುವ ಪ್ರಶ್ನೆಯಾಗಬೇಕು. ಕವಿ, ಕವಿತೆ ಕೇಳುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬಹುದೇ , ಅದಕ್ಕೆ ಉತ್ತರಿಸಲು ಸಾಧ್ಯವೇ?ಗೊತ್ತಿಲ್ಲ.
ಖಾದಿ ಕಾವಿಯಂತೆ ಸಾಹಿತ್ಯ
ಇಂದಿನ ರಾಜಕೀಯ, ಸಾಮಾಜಿಕ ಪರಿಸ್ಥಿತಿಯನ್ನು ಕೂಡ ಕವಿತೆ ಮಾರ್ಮಿಕವಾಗಿ ವಿಮರ್ಶೆಗೊಳಪಡಿಸುತ್ತದೆ. 'ದೊಡ್ಡ ಪೀಠದ ಮೇಲೆ ಸಣ್ಣ ಜನ ಇಲಿ ಹೆಗ್ಗಣಗಳು ಹರಿದಾಡುತ್ತಿದ್ದದ್ದನ್ನು ಕಂಡೆ' ಏನು ಬಾರದ ವ್ಯಕ್ತಿ ಒಬ್ಬ ರಾಜಕೀಯ ಸ್ಥಾನಮಾನವನ್ನು ಪಡೆದು ಇಡೀ ವ್ಯವಸ್ಥೆಗೆ ಸಂಚುರೂಪಿಸುತ್ತಿದ್ದಾನೆ ಎಂಬ ಅಳಲಿದೆ. ಇಂತಹ ಅಪ್ರಯೋಜಕರಿಂದ ದೀನ ದಲಿತರ ಬಾಳಲ್ಲಿ ಕನಸುಗಳು ನೆರವೇರಲು ಸಾಧ್ಯವೇ? ಕುರ್ಚಿಗಾಗಿ ಬಡಿದಾಡುವ ರಾಜಕಾರಣಿ ಜನರ ನೋವುಗಳನ್ನು ಅರಿಯಲು ಸಾಧ್ಯವೇ? ಜನರ ತೆರಿಗೆ ದುಡ್ಡಿನಲ್ಲಿ ಜಾಹೀರಾತುಗಳನ್ನು ಪ್ರಚಾರ ಮಾಡುವ ಸರ್ಕಾರ ತನ್ನ ಯಶೋಗಾಥೆಯನ್ನು ಬಿಂಬಿಸಿ ದುಂದು ವೆಚ್ಚ ಮಾಡುವುದಕ್ಕೆ ಮುಂದಾಗಿರುವವರು ಆರ್ಥಿಕ ಭದ್ರತೆಯ ನೀತಿ ರೂಪಿಸಲು ಸಾಧ್ಯವೇ? ಎಂಬ ಅಳಲು ಕವಿತೆಗಳದು.
'ಕಾವಿಯೊಳಗೆ ಕೋವಿ ಎದ್ದು ತನ್ನೊಳಗೆ ತಾನು ಸುಟ್ಟುಕೊಂಡಿದ್ದ ಕಂಡೆ ' ಎಂಬ ಸಾಲುಗಳು ಪ್ರಸ್ತುತ ಧಾರ್ಮಿಕ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಕಾಪಾಡಬೇಕಾದ ಕಾವಿ ತಾನೇ ಬಂದೂಕಾಗಿ ತನ್ನ ಜನರ ನಡುವೆ ಜಾತಿ ಪ್ರತಿಷ್ಠೆಯನ್ನು ಬೆಳೆಸುತ್ತಿದೆ, ತನ್ನ ಕ್ಷೇತ್ರವಲ್ಲದ ರಾಜಕೀಯಕ್ಕೂ ಕೂಡ ಕಾಲಿಟ್ಟಿದೆ. ವೈಶ್ಯಮ್ಯ ವಾತಾವರಣವನ್ನು ಸೃಷ್ಟಿಸಿ ಕಾವಿ ನಗುತ್ತಲಿದೆ.
ವಿದ್ಯಾವಂತರು ಬುದ್ಧಿವಂತರು ತಮ್ಮ ಸ್ವವಿ ಮರ್ಶೆಯನ್ನು ಕಳೆದುಕೊಂಡು, ಸ್ವಆಲೋಚನೆಯನ್ನು ಮಾರಿಕೊಂಡು, ಪುಂಡ ರಾಜಕಾರಣಿಗಳ ಮನೆಯ ಕಸದ ಪೊರಕೆಯಾಗಿದ್ದಾರೆ ಎಂದು ಕವಿತೆ ನಮ್ಮ ಸಮಾಜದ ಅವಿವೇಕತನವನ್ನು ಪ್ರತಿನಿಧಿಸುತ್ತದೆ.
ಸಾಹಿತಿಗಳಾದವರು ಸಾಮಾಜಿಕ ಜವಾಬ್ದಾರಿಯನ್ನು ಮರೆತು ಅಸಂವಿಧಾನಿಕವಾಗಿ ನಡೆದುಕೊಂಡು ಅವರ ಒಂದು ರೀತಿಯಲ್ಲಿ ಸಮಾಜಕ್ಕೆ ಬೆಂಕಿಯ ಅಣುಬಾಂಬುಗಳಾಗಿ ನಡೆದಾಡುತ್ತಿದ್ದಾರೆ ಎಂದು ಕವಿತೆ ನೊಂದುಕೊಳ್ಳುತ್ತದೆ. ಯಾವುದೇ ಉದ್ದೇಶವಿಲ್ಲದೆ ಹುಟ್ಟಿಕೊಂಡಿರುವಂತಹ ಸಾಹಿತ್ಯ ಗುಂಪುಗಳ ಸಮಾಜ ವಿರೋಧಿ ಘಟನೆಗಳ ಆಲೋಚನೆಗೆ ಮನುಷ್ಯ ಬಲಿಯಾಗುತ್ತಿದ್ದಾನೆ ಎಂಬ ಕೊರಗು ರಂಗ ರೂಪ ಪ್ರಸ್ತುತಪಡಿಸಿತು. 'ಹಠಕ್ಕಾಗಿ ಮಠ ಕಟ್ಟಿದ ಸಾಹಿತಿಗಳ ಕಂಡೆ ಕಂಡು ಎಚ್ಚರಗೊಂಡೆ ಎಚ್ಚರವಾದಾಗ ನಿಗಿನಿಗಿ ಕೆಂಡ ಉರಿಯುವುದ ಕಂಡೆ' ಎಂಬ ಸಾಲುಗಳು ಕವಿಯನ್ನು ಆತಂಕದಲ್ಲಿ ದೂಡಿವೆ.
ಸಂವೇದನಾ ರಹಿತ ಪ್ರಜಾ ಸಮುದಾಯ
ದಿನಪತ್ರಿಕೆಗಳಲ್ಲಿನ ಆಲೋಚನೆಗಳು, ವಿಚಾರಗಳು ಆಳುವ ವರ್ಗಕ್ಕೆ ಮುಟ್ಟುವುದೇ ಇಲ್ಲ. ಏಕೆಂದರೆ ಅಧಿಕಾರಿಶಾಹಿಗಳಿಗೆ ಕಿವಿಗಳಿಲ್ಲ, ಕಣ್ಣುಗಳಿಲ್ಲ. ಅದು ಸಂವೇದನಶೀಲರಹಿತವಾಗಿದೆ ಎಂಬುದಕ್ಕೆ ನರಿ, ಕುರಿಗಳ ಪ್ರತಿಮೆ, ಕಪ್ಪೆ ಆಮೆಗಳ ಸಂಭಾಷಣೆ ನಾಟಕದ ಪ್ರಾಮುಖ್ಯತೆಯನ್ನು ಹೆಚ್ಚಿಸಿವೆ. ಮಹಿಳೆಗೆ ಯಾವ ಧರ್ಮಗಳಲ್ಲಿಯೂ ಕೂಡ ಸ್ವಾತಂತ್ರ್ಯವೇ ಇಲ್ಲ. ಆಕೆ ಬರಿ ಭೋಗದ ವಸ್ತು. ಆಕೆ ವಿಚಾರ ಮಾಡುವಂತೆ ಇಲ್ಲ. ಗಂಡಿನ ಅಡಿಯಾಳಾಗಿ ಕೆಲಸ ಮಾಡುವುದಕ್ಕೆ ಸೀಮಿತವಾಗಿದ್ದಾಳೆ. ಆಕೆ ಸೀಮಾತೀತಳಾಗಿ ಬೆಳೆಯುವುದಕ್ಕೆ ಕವಿಯ ಮನಸ್ಸು ಇಚ್ಚಿಸುತ್ತದೆ. 'ಸ್ತ್ರೀ ಅಂದರೆ ಅಷ್ಟೇ ಸಾಕೆ?' ಎಂಬ ಅವರ ಆಲೋಚನೆ ಕ್ರಮವೇ ವಿಭಿನ್ನ.
ಕೃತಕ ಬುದ್ಧಿಮತ್ತೆಯ ಪರಿಣಾಮ
ಇಂದಿನ ಆಧುನಿಕ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯಲ್ಲಿ ನಿಸರ್ಗದ ಚೈತನ್ಯವನ್ನು ನೋಡುವುದನ್ನು ಮರೆತುಬಿಟ್ಟಿದ್ದೇವೆ. ಗುಬ್ಬಿ ಗೂಡು ಕಟ್ಟುವುದನ್ನು, ಸೂರ್ಯೋದಯ ಚಂದ್ರೋದಯಗಳ ನಯನ ಮನೋಹರ ದೃಶ್ಯವನ್ನು, ಕರು ಆಕಳ ಕೆಚ್ಚಲನ್ನು ಹುಡುಕುವ ಹೊತ್ತನ್ನು ಮರೆತುಬಿಟ್ಟಿದ್ದೇವೆ. ಆಕಾಶದಿಂದ ಜಾರುವ ಮಳೆ, ಕಾಮನಬಿಲ್ಲು,ಇಬ್ಬನಿಯ ರೂಪ, ಪ್ರೀತಿ -ವಿರಹಗಳ ನಡುವಿನ ಬಾಂಧವ್ಯ,ಮೌನ ರಹಸ್ಯಗಳ ನಡುವಿನ ವಿಸ್ಮಯ. ಇವುಗಳ ನಡುವಿನ ಪ್ರೀತಿಯನ್ನು ಗಳಿಸುವ, ಬೆಳೆಸುವ, ಉಳಿಸುವ ದಾಹ ನಮ್ಮದಾಗಲಿ ಎಂಬ ಆಶಯ ವಿಪುಲ ರೂಪ ಧಾರಣಿಯದು. ಏಕೆಂದರೆ 'ದಾರಿ ನೂರಾರಿವೆ ಬಿಡುಗಡೆಯ ಬೆಳಕಿನ ಅರಮನೆಗೆ' ಎಂಬ ಸಾಲುಗಳು ನಮ್ಮಲ್ಲಿ ಪ್ರೀತಿಯ ಬುಗ್ಗೆ ಚಿಮ್ಮುವಂತಾಗಲಿ.
ಇಲ್ಲಿಯವರೆಗೆ ನನ್ನ ಕವಿತೆಗಳು ಅಕ್ಷರರೂಪ ಪಡೆದಿದ್ದು, ಅವು ರಂಗ ರೂಪದಿಂದ ರೆಕ್ಕೆಯನ್ನು ಪಡೆದು ಹಾರಾಡಿ, ಸಮಾನತೆಯ ತತ್ವವನ್ನು ಸಾರಲು ಪಯಣ ಬೆಳೆಸಿದವು ಎಂದು ಕವಿ ಖುಷಿಪಟ್ಟರು. ರಂಗದ ಮೇಲೆ ಜಿ.ಎಸ್ ಶಿವರುದ್ರಪ್ಪನವರ ಭಾವಚಿತ್ರ ಹಾಗೂ ಹಣತೆ ಇದೆಲ್ಲವನ್ನು ಗಮನಿಸುತ್ತಾ ಮೌನದಿಂದಲೇ ನಮ್ಮೊಂದಿಗೆ ಸಂಭಾಷಣೆ ನಡೆಸುತ್ತಿತ್ತು. ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ? ಎಂಬ ನುಡಿಯು ರಂಗಕ್ಕೆ ಪರಿಪೂರಕವಾಗಿ ಹಿಮ್ಮೇಳದಂತೆ ನುಡಿಯುತ್ತಿತ್ತು. ಜಿಎಸ್ಎಸ್ ಅವರ ಕವನಗಳ ಕಾವ್ಯಾಭಿನಯ ಮನದಲ್ಲಿ ಉಳಿಯುವಂತೆ ರಂಗ ಪಠ್ಯವನ್ನಾಗಿಸಿದ ಶ್ರೀಪಾದ ಭಟ್, ಸಾಸಿವೆಹಳ್ಳಿ ಸತೀಶ್ ಹಾಗೂ ಹೊಂಗಿರಣ ತಂಡಕ್ಕೆ ಸಾವಿರದ ಶರಣು ಶರಣಾರ್ಥಿಗಳು.
- ಡಾ. ರಾಜೇಂದ್ರಕುಮಾರ್ ಕೆ., ಮುದ್ನಾಳ್, ಯಾದಗಿರಿ
#VipulaRoopaDharini #search #pursuit #love #Drama #Theatre #RajendraKumarMudnal #malgudiexpress #malgudinews #news #TopNews
![📜ಪ್ರಚಲಿತ ವಿದ್ಯಮಾನ📜 - ರಂಗಭೂಮಿ ~४ & నల/ ಮನುಷ್ಯ ಪ್ರೀತಿಯ EXPRESS {లదెరెT] UNAI AL CEH ಅನ್ವೇಷಣೆಯ ವಿಪುಲ KuPPr DqTE 291 ರೂಪಧಾರಿಣಿ ರಂಗಭೂಮಿ ~४ & నల/ ಮನುಷ್ಯ ಪ್ರೀತಿಯ EXPRESS {లదెరెT] UNAI AL CEH ಅನ್ವೇಷಣೆಯ ವಿಪುಲ KuPPr DqTE 291 ರೂಪಧಾರಿಣಿ - ShareChat 📜ಪ್ರಚಲಿತ ವಿದ್ಯಮಾನ📜 - ರಂಗಭೂಮಿ ~४ & నల/ ಮನುಷ್ಯ ಪ್ರೀತಿಯ EXPRESS {లదెరెT] UNAI AL CEH ಅನ್ವೇಷಣೆಯ ವಿಪುಲ KuPPr DqTE 291 ರೂಪಧಾರಿಣಿ ರಂಗಭೂಮಿ ~४ & నల/ ಮನುಷ್ಯ ಪ್ರೀತಿಯ EXPRESS {లదెరెT] UNAI AL CEH ಅನ್ವೇಷಣೆಯ ವಿಪುಲ KuPPr DqTE 291 ರೂಪಧಾರಿಣಿ - ShareChat](https://cdn4.sharechat.com/bd5223f_s1w/compressed_gm_40_img_857020_1764c509_1768992855295_sc.jpg?tenant=sc&referrer=pwa-sharechat-service&f=295_sc.jpg)

