#😏ಇದೇ ಪ್ರಪಂಚ ಬದುಕನ್ನು ಇಡಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲವಂತೆ. ತಾಯಿಯ ಗರ್ಭದಿಂದ ಧರೆಗೆ ಬಿದ್ದಾಗ ಪ್ರಾರಂಭವಾಗುವ ಬದುಕು ಮುಂದೆ ಬಾಲ್ಯ, ಯೌವನ, ಮುಪ್ಪುಗಳನ್ನು ದಾಟುವ ಪ್ರಕ್ರಿಯೆಯಲ್ಲಿ ಅನೇಕ ವಿಸ್ಮಯಗಳನ್ನು, ಪಾಠಗಳನ್ನು ಕಲಿಸಿರುತ್ತದೆ.
ಬದುಕೆನ್ನುವುದು ಒಂದು ರೀತಿಯಲ್ಲಿ ಡ್ರೆೃವಿಂಗ್‌ನ ದಾರಿ ಇದ್ದಂತೆ ! ಇಲ್ಲಿ ಹಸಿರು ದೀಪ ಇದೆ, ಕೆಂಪು ದೀಪ ಇದೆ, ತಿರುವುಗಳಿವೆ, ದಿನ್ನೆಗಳೂ ಇವೆ. ಜೀವನದಲ್ಲಿ ಬರುವ ಸಂತಸದ ಕ್ಷಣಗಳನ್ನು ಹಸಿರು ದೀಪಕ್ಕೆ ಹೊಲಿಸಿದರೆ, ದುಃಖದ, ಮರೆಯಬೇಕೆನ್ನುವ ಕ್ಷಣಗಳನ್ನು ಕೆಂಪು ದೀಪಕ್ಕೆ ಹೋಲಿಸಬಹುದು. ಡ್ರೆೃವಿಂಗ್ ಮಾಡುವಾಗ ಹೇಗೆ ಬರೀ ಹಸಿರು ದೀಪಗಳೇ ಬರುವುದಿಲ್ಲವೊ, ಅದೇ ರೀತಿ ಬದುಕಿನಲ್ಲಿ ಬರೀ ಸಂತಸದ ಕ್ಷಣಗಳೇ ತುಂಬಿರುವುದಿಲ್ಲ. ಬದುಕಿನಲ್ಲಿ ಸಂತಸದ ಕ್ಷಣಗಳಾಗಲಿ (ಹಸಿರು ದೀಪ), ದುಃದ ಕ್ಷಣಗಳಾಗಲಿ (ಕೆಂಪು ದೀಪ), ಯಾವುದೂ ಶಾಶ್ವತವಲ್ಲ . ಬಹಳ ವೇಳೆಯವರೆಗೆ ಇರುವುದಿಲ್ಲ. ದುಃಖ ಬಂದಾಗ, ಒಂದು ಕ್ಷಣ ವಿರಮಿಸಿ ಹೆಚ್ಚಿನ ಉತ್ಸಾಹದಿಂದ ಮುಂದೆ ನಡೆಯುವುದೇ ಬದುಕು.
ಒಟ್ಟಿನಲ್ಲಿ ಬದುಕಿನ ಮೇಲೆ ನಮ್ಮ ಹಿಡಿತ ಏನೂ ಇಲ್ಲ, ಎಲ್ಲವೂ ವಿಧಿಯಾಟ. ಇಲ್ಲಿ ಬದುಕಿನ ಪಥವನ್ನು, ಬದುಕಿನ ತಿರುವುಗಳನ್ನು ನಿರ್ಧರಿಸುವುದು ವಿಧಿ ಮಾತ್ರ. ನಾವೇನಿದ್ದರೂ ಅದರ ಅಡಿಯಾಳುಗಳು ಎಂಬುದನ್ನು ಕವಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಜೀವನದಲ್ಲಿ ಬರುವ ಸುಖದುಃಖಗಳು ವಿಧಿಯನ್ನು ಅವಲಂಬಿಸಿವೆ. ಜಟಕಾಬಂಡಿ ಅದರ ಸಾಹೇಬನ ಹಿಡಿತದಲ್ಲಿ ಮುಂದೆ ಸಾಗುವಂತೆ, ನಮ್ಮ ಬದುಕು ವಿಧಿಯ ಹಿಡಿತದಲ್ಲಿದೆ. ಅದರಂತೆ, ಬದುಕಿನಲ್ಲಿ ಬಂದದ್ದನ್ನು, ಸ್ವೀಕಾರ ಮಾಡುವ ಮನೋಭಾವ ಇರಬೇಕು, ಸುಖದುಃಖ ಎರಡನ್ನೂ ಒಂದೇ ರೀತಿಯಾಗಿ ಸ್ವೀಕರಿಸಬೇಕು ಎಂಬ ಸಂದೇಶವೂ ಇದರಲ್ಲಿದೆ.
ಇನ್ನೊಂದು ಮಗ್ಗುಲು ನೋಡುವದಾದರೆ ನಮ್ಮ ಬದುಕೇ ಒಂದು ಜಟಕಾ ಬಂಡಿ, ಅದನ್ನೆಳೆದುಕೊಂಡು ಹೋಗುವ ನಾವೇ ಕುದುರೆಗಳು. ಈ ಬದುಕೆಂಬ ಜಟಕಾ ಬಂಡಿಯನ್ನು ಓಡಿಸುವವನೇ ವಿಧಿ, ಎಂದರೆ ಪರಮಾತ್ಮ. ಬಂಡಿಗೆ ಕಟ್ಟಿದ ಕುದುರೆಗೆ ಆ ಬಂಡಿ ಓಡಿಸುವವನು ಹೇಳಿದಲ್ಲಿಗೆ ಹೋಗಬೇಕು. ಅದು ಮದುವೆಗಾದರೂ ಆಗಬಹುದು ಅಥವಾ ಸ್ಮಶಾನಕ್ಕಾದರೂ ಆಗಬಹುದು. ಬದುಕೆಂಬ ಜಟಕಾ ಬಂಡಿಯನ್ನು ಎಳೆಯುವ ಕುದುರೆಗಳಾದ ನಮಗೆ, ಬದುಕ ಬಂಡಿಯನ್ನು ಎಳೆದೂ ಎಳೆದೂ ಸುಸ್ತಾಗಿ ಕಾಲು ಸೋತು ಕುಸಿದರೆ ವಿಶ್ರಮಿಸಿಕೊಳ್ಳಲು ನೆಲವುಂಟು ಎಂದು ಬದುಕಿನ ಓಟದ ಸತ್ಯವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
ಬರೆದಷ್ಟು ಮುಗಿಯದ, ಚಿಂತಿಸಿದಷ್ಟೂ ಹೊಳೆಯದ ಬದುಕು ಇನ್ನೊಂದು ದೃಷ್ಟಿಯಲ್ಲಿ ತುಂಬಾ ಅತ್ಯಮೂಲ್ಯ. ಇದರ ನಶ್ವರತೆಯ ಬಗ್ಗೆ ಎಷ್ಟೇ ಮಾತನಾಡಿದರೂ ಇದರ ಚೆಲುವು ನಮ್ಮನ್ನು ಮುದಗೊಳಿಸುತ್ತದೆ. ಎಷ್ಟೇ ಕಷ್ಟವಿದ್ದರೂ, ಕಿರಿ ಕಿರಿಯಿದ್ದರೂ, ವಸಂತದಲ್ಲಿ ಬಿರಿಯುವ ಹೂಗಳು, ಹುಟ್ಟುವ ಗರಿಕೆ, ಹುಣ್ಣಿಮೆಯ ಚಂದ್ರ ಇವುಗಳಿಂದ ಅರಳದ ಮನಸ್ಸು ಯಾವುದೂ ಇಲ್ಲ.
ತಿಮ್ಮಗುರು ಡಿ.ವಿ.ಜಿ. ಒಂದು ಕಡೆ ಬರೆಯುತ್ತಾರೆ "ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ಈಯವನಿಯೊಲೆಯೊಳೆಮ್ಮಯ ಬಾಳ- ನಟ್ಟು ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ" ಎಷ್ಟೊಂದು ಅರ್ಥಪೂರ್ಣ ಮಾತು.
ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ ಅಂತ ಭಾವಿಸುವೆ.

