#📜ಪ್ರಚಲಿತ ವಿದ್ಯಮಾನ📜
ಬಜೆಟ್ ನಂತರ ಬೃಹತ್ ಸಮಾವೇಶಕ್ಕೆ ಸಿದ್ದರಾಮಯ್ಯ ಸಿದ್ಧತೆ
ಬೆಂಗಳೂರು: ಅಧಿಕಾರ ಹಸ್ತಾಂತರ ವಿಚಾರ ರಾಜ್ಯ ಕಾಂಗ್ರೆಸ್ಸಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿ ಒಂದು ಸಾವಿರ ದಿನ ಪೂರೈಸಿದ ಸಂಭ್ರಮಾಚರಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಬರುವ ಫೆಬ್ರವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ಸಾವಿರ ದಿನ ಪೂರ್ಣವಾಗಲಿದೆ. ಅದೇ ದಿನ ರಾಜ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿರುವ ಸಿದ್ದರಾಮಯ್ಯ ಬಜೆಟ್ ಮಂಡನೆ ನಂತರ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸುವ ಮೂಲಕ ರಾಜ್ಯ ಸರ್ಕಾರದ ಒಂದು ಸಾವಿರ ದಿನಗಳ ಸಾಧನೆಯ ಸಂಭ್ರಮಾಚರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ಅವರನ್ನು ಈ ಸಮಾವೇಶಕ್ಕೆ ಆಹ್ವಾನಿಸಲು ಚಿಂತನೆ ನಡೆಸಿದ್ದಾರೆ. ಈ ಇಬ್ಬರು ನಾಯಕರು ಚುನಾವಣೆ ಸಮಯದಲ್ಲಿ ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಪ್ರಕಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಸಾವಿರ ದಿನದ ಸಮಾವೇಶಕ್ಕೆ ಆಹ್ವಾನಿಸಿ ರಾಜ್ಯದ ಜನತೆಯ ಪರವಾಗಿ ಸನ್ಮಾನ ಮಾಡಲು ತೀರ್ಮಾನಿಸಿದ್ದಾರೆ.
ಅದೇ ರೀತಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದ ರಾಜ್ಯದ ಜನರಿಗೆ ಕೃತಜ್ಞತೆ ಅರ್ಪಿಸುವುದು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಯಾವ ಯೋಜನೆಗಳನ್ನು ಜಾರಿಗೆ ತರಲಿದೆ ಎಂಬ ವಿಷಯಗಳನ್ನು ಪ್ರಕಟಿಸಲಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೃತಜ್ಞತಾ ಸಮಾವೇಶ ಏರ್ಪಡಿಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದರು. ಆದರೆ ಅದಕ್ಕೆ ಸಮಯ ಮತ್ತು ಕೆಲವಾರು ವಿಷಯಗಳು ಅಡ್ಡಿ ಬಂದ ಹಿನ್ನೆಲೆಯಲ್ಲಿ ಅದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾವಿರ ದಿನ ಪೂರ್ಣಗೊಳಿಸಿರುವ ಸಮಯವನ್ನು ಬಳಸಿಕೊಂಡು ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದ್ದು, ಸಮಾವೇಶದ ರೂಪುರೇಷೆಗಳ ಬಗ್ಗೆ ಸಿದ್ದರಾಮಯ್ಯ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ಜೊತೆ ಚರ್ಚೆ ನಡೆಸಿದ್ದಾರೆ.
ಕೇರಳಕ್ಕೆ ಆಗಮಿಸಿದ್ದ ವೇಣುಗೋಪಾಲ್ ಅವರೊಂದಿಗೆ ತಿರುವನಂತಪುರದಲ್ಲಿ ಈ ಕುರಿತಂತೆ ಸುದೀರ್ಘ ಸಮಾಲೋಚನೆ ನಡೆಸಿರುವ ಅವರು, ಫೆಬ್ರವರಿಯಲ್ಲಿ ಸಾವಿರ ದಿನದ ಸಂಭ್ರಮಾಚರಣೆಯ ಸಮಾವೇಶ ನಡೆಸುವ ಮೂಲಕ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷದ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡುವ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಡಿಸಿಎಂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದ್ದು, ಅದಕ್ಕಾಗಿ ಪ್ರತ್ಯೇಕ ಕಾರ್ಯತಂತ್ರ ರೂಪಿಸುತ್ತಿರುವ ನಡುವೆ ಸಿದ್ದರಾಮಯ್ಯ ಹಾಕಿರುವ ಹೊಸ ಪಟ್ಟು ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಆಗಿ ಐದು ವರ್ಷ ಪೂರ್ಣಗೊಳಿಸುತ್ತೇನೆ ಎಂದು ಈಗಾಗಲೇ ಘೋಷಿಸಿರುವ ಅವರು, ಇದೀಗ ಸಾವಿರ ದಿನದ ಸಂಭ್ರಮಾಚರಣೆಯ ಮೂಲಕ ತಮ್ಮ ಕುರ್ಚಿಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಪ್ರತಿಪಕ್ಷಗಳು ಮಾಡಿರುವ ಆರೋಪಕ್ಕೆ ಸಾವಿರ ದಿನದ ಬಜೆಟ್ ನಲ್ಲಿ ಉತ್ತರ ನೀಡಲಿರುವ ಮುಖ್ಯಮಂತ್ರಿ ಆ ನಂತರ ಅದನ್ನು ರಾಹುಲ್ ಗಾಂಧಿ ಅವರ ಮೂಲಕ ಹೇಳಿಸಲು ತಯಾರಿ ನಡೆಸಿದ್ದಾರೆ.
ಉನ್ನತ ಮೂಲಗಳ ಪ್ರಕಾರ ಅಧಿಕಾರ ಹಸ್ತಾಂತರ ಸೂತ್ರಕ್ಕೆ ರಾಹುಲ್ ಗಾಂಧಿ ಅವರ ಅನುಮತಿ ಇಲ್ಲ ಹೀಗಾಗಿಯೇ ಅವರನ್ನೇ ಮುಂದಿಟ್ಟುಕೊಂಡು ಸಾವಿರ ದಿನದ ಸಂಭ್ರಮಾಚರಣೆ ಮೂಲಕ ತಾವೇ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತೇನೆ ಎಂಬ ಸಂದೇಶ ನೀಡಲು ಮುಂದಾಗಿದ್ದಾರೆ.
#Siddaramaiah #prepares #huge #rally #budget #malgudiexpress #malgudinews #news #TopNews


