#📜ಪ್ರಚಲಿತ ವಿದ್ಯಮಾನ📜
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದೆ ತೆರಳಿದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ ನಡುವೆ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ 7 ದಿನಗಳ ಕಾಲ ನಡೆಯಲಿದೆ. ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದೆ ತೆರಳಿದರು. ಇದಕ್ಕೆ ಕೆರಳಿ ಕೆಂಡಾಮಂಡಲವಾದ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು.
ಈ ವರ್ಷದ ಮೊದಲ ಅಧಿವೇಶನ ಇದಾಗಿದ್ದು, 11ಗಂಟೆಗೆ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ವಿಧಾನಸಭೆ ಸಭಾಂಗಣದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಬೇಕಿತ್ತು. ಆದರೆ ರಾಷ್ಟ್ರಗೀತೆ ಗಾಯನದ ವೇಳೆ ತಾವರ್ ಚಂದ್ ಗೆಹ್ಲೋಟ್ ಅಧಿವೇಶನದಿಂದ ಹೊರನಡೆದರು. ಈ ವೇಳೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಯನ್ನು ವಿರೋಧಿಸುವ ದೃಷ್ಟಿಯಿಂದ ಆಯೋಜಿಸಲಾಗಿರುವ ಈ ವಿಶೇಷ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಇದುವರೆಗಿನ ಸಾಧನೆಯ ಬಣ್ಣನೆ ಹಾಗೂ ಸರ್ಕಾರದ ಮುನ್ನೋಟದ ಯೋಜನೆ, ಕಾರ್ಯಕ್ರಮಗಳನ್ನು ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಬೇಕಿತ್ತು.
ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ರಾಜ ಸರ್ಕಾರ ರಾಜ್ಯಪಾಲರ ಭಾಷಣವನ್ನು ಸಿದ್ಧಪಡಿಸಿದೆ. ಪ್ರಮುಖವಾಗಿ ಮನರೇಗಾ ಯೋಜನೆ ರದ್ದು ಪಡಿಸಿರುವ ಕೇಂದ್ರ ಸರ್ಕಾರವನ್ನು ಈ ಭಾಷಣದಲ್ಲಿ ಟೀಕಿಸಲಾಗುತ್ತದೆ. ಅಲ್ಲದೇ ಅನುದಾನ ಬಿಡುಗಡೆಯಲ್ಲಿ ರಾಜ್ಯಕ್ಕೆ ಆಗಿರುವ ತಾರತಮ್ಯ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ನೀರಾವರಿ ಯೋಜನೆಗಳಿಗೆ ನೆರವು ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಲಾಗುತ್ತದೆ. ಹೀಗಾಗಿ ರಾಜ್ಯಪಾಲರು ಅಧಿವೇಶನದಲ್ಲಿ ಪೂರ್ಣ ಭಾಷಣ ಓದಿ ಕೇಂದ್ರ ಸರ್ಕಾರ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಜುಗರ ಉಂಟುಮಾಡುವುದನ್ನು ತಪ್ಪಿಸುವ ಸಲುವಾಗಿ ಭಾಷಣ ಮಾಡದೆ ತೆರಳಿದರು.
ಕರ್ನಾಟಕದಲ್ಲಿ ಇಲ್ಲಿಯವರೆಗೆ ಗಮನಿಸಿದಾಗ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಅಂತಹ ದೊಡ್ಡ ಪ್ರಮಾಣದ ಸಂಘರ್ಷ ನಡೆದಿರಲಿಲ್ಲ. ಕೆಲವು ವಿವಾದಾಸ್ಪದ ಮಸೂದೆಗಳಿಗೆ ಸ್ಪಷ್ಟನೆ ಕೇಳಿ ಆನಂತರದಲ್ಲಿ ಅನುಮೋದನೆ ನೀಡಿದ್ದರು.
ಉಳಿದಂತೆ ವರ್ಷದ ಮೊದಲ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಅಬಕಾರಿ ಇಲಾಖೆಯಲ್ಲಿ ಕೇಳಬಂದಿರುವ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ, ಬಳ್ಳಾರಿ, ಶಿಡ್ಲಘಟ್ಟದಲ್ಲಿ ನಡೆದ ಫ್ಲೆಕ್ಸ್ ಸಂಘರ್ಷ ಸೇರಿದಂತೆ ಹಲವು ವಿಚಾರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಡುವೆ ಕಾವೇರಿದ ಚರ್ಚೆಗಳಾಗುವ ಸಾಧ್ಯತೆಗಳಿವೆ.
ಗ್ಯಾರಂಟಿ ಯೋಜನೆಗಳು ಸಕಾಲಕ್ಕೆ ಫಲಾನುಭವಿಗಳಿಗೆ ತಲುಪದಿರುವ ವಿಚಾರ, ನೆರೆ ಹಾವಳಿ ಸೇರಿದಂತೆ ಹಲವು ರೀತಿಯ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪವೂ ಪ್ರತಿಧ್ವನಿಸಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಆಪ್ತರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಬಣ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಯತ್ನಿಸುತ್ತಿರುವ ವಿಚಾರ, ಇದರಿಂದ ಆಡಳಿತ ಮೇಲೆ ಉಂಟಾಗಿರುವ ಪರಿಣಾಮದ ವಿಚಾರವೂ ಸದನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಒಟ್ಟಾರೆ ಜಂಟಿ ಅಧಿವೇಶನಲ್ಲಿ ನರೇಗಾ ಬದಲಾವಣೆ, ಕಾನೂನು ಮತ್ತು ಸುವವ್ಯವಸ್ಥೆ ವಿಚಾರಗಳೇ ಪ್ರಮುಖವಾಗಿ ಚರ್ಚೆಗೆ ಒಳಗಾಗುವ ಸಾಧ್ಯತೆಗಳಿವೆ.
#Governor #ThawarChandGehlot #leaves #without #addressing #jointsession #malgudiexpress #malgudinews #news #TopNews


