#📜ಪ್ರಚಲಿತ ವಿದ್ಯಮಾನ📜
ಜಾರಿಗೊಂಡ ಸಂಹಿತೆಗಳು ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಲಿವೆ: ಮೀನಾಕ್ಷಿ ಸುಂದರಂ
ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ವಿರೋಧಿ ಸಂಹಿತೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳಲು ಸಂಚು ರೂಪಿಸಿದೆ. ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡಲು ಶ್ರಮಜೀವಿಗಳ ರಕ್ತ ಹೀರಲು ಸನ್ನದ್ದವಾಗಿದೆ. ಈ ಹಿನ್ನೆಲೆಯಲ್ಲಿ ಜಾರಿಗೊಂಡ 4 ಸಂಹಿತೆಗಳು ಕಾರ್ಮಿಕರ ಪಾಲಿಗಂತೂ ಮರಣ ಶಾಸನವಾಗಲಿವೆ ಎಂದು CITU ಕರ್ನಾಟಕ ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕ ಸಂಹಿತೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಕಳೆದ 4 ದಿನಗಳಿಂದ ದ.ಕ.ಜಿಲ್ಲೆಯಾದ್ಯಂತ ಸಂಚರಿಸಿದ ಪಾದಯಾತ್ರೆಗಳು ಇಂದು ಮಂಗಳೂರಿನ ಹೃದಯಭಾಗದಲ್ಲಿ ಸಮಾಪನಗೊಂಡಿದ್ದು,ಅದರ ಭಾಗವಾಗಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಜನದ್ರೋಹಿ ಸಂಹಿತೆಗಳನ್ನು ಜಾರಿಗೊಳಿಸಿದರೆ, ರಾಜ್ಯದ ಕಾಂಗ್ರೆಸ್ ಸರಕಾರ ಕೂಡ ಅದಕ್ಕೆ ಪೂರಕವಾಗಿ ಕರಡು ನಿಯಮಾವಳಿಗಳನ್ನು ರೂಪಿಸಲು ಹೊರಟಿರುವ ಮೂಲಕ ಕಾರ್ಮಿಕ ವರ್ಗದ ವಿರುದ್ದ ದ್ವೇಷ ಸಾಧಿಸುವುದರಲ್ಲಿ ಬಿಜೆಪಿ ಕಾಂಗ್ರೆಸ್ ಒಂದೇ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ ಎಂದರು.
ಬೀಜ ಮಸೂದೆ,ವಿದ್ಯುತ್ ಮಸೂದೆಗಳಂತಹ ಕರಾಳ ಶಾಸನಗಳನ್ನು ಜಾರಿಗೆ ತರುವ ಮೂಲಕ ರೈತಾಪಿ ಜನತೆಯ ಬದುಕನ್ನು ಕೂಡ ದುಸ್ತರಗೊಳಿಸಿದೆ.ಉದ್ಯೋಗ ಖಾತ್ರಿ ಯೋಜನೆಯ ಹಣಕಾಸಿನ ಹೊರೆಯನ್ನು ರಾಜ್ಯ ಸರಕಾರಗಳ ಮೇಲೆ ವರ್ಗಾಯಿಸುವ ಮೂಲಕ ಗ್ರಾಮೀಣ ಜನತೆಯ ಉಸಿರಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನೇ ಕತ್ತು ಹಿಸುಕಿ ಸಾಯಿಸಲು ಹೊರಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶದ ಕಾರ್ಮಿಕ ವರ್ಗಕ್ಕೆ ಭಾರೀ ದ್ರೋಹವೆಸಗಿದೆ.ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನದ ಮೂಲಕ ಸಮರಶೀಲ ಹೋರಾಟ ನಡೆಸಿದ ದೇಶದ ಕಾರ್ಮಿಕ ವರ್ಗ ಇಂದು ಮತ್ತೆ ದೇಶದ ಉಳಿವಿಗಾಗಿ, ಜನತೆಯ ಬದುಕಿನ ರಕ್ಷಣೆಗಾಗಿ ಆಳುವ ವರ್ಗದ ಆಕ್ರಮಣಕಾರಿ ನೀತಿಗಳನ್ನು ರೈತಾಪಿ ಜನತೆಯ ಜೊತೆಗೂಡಿ ಹಿಮ್ಮೆಟ್ಟಿಸಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ CITU ದ.ಕ.ಜಿಲ್ಲಾಧ್ಯಕ್ಷ ಬಿ ಎಂ ಭಟ್ ಮಾತನಾಡಿ, ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ಸಂಪೂರ್ಣವಾಗಿ ಲೂಟಿ ಮಾಡಿ ಎಲ್ಲಾ ಕ್ಷೇತ್ರವನ್ನು ಕಾರ್ಪೊರೇಟ್ ಕಂಪೆನಿಗಳಿಗೊಪ್ಪಿಸಿದ ನರೇಂದ್ರ ಮೋದಿ ಸರಕಾರವು ಈಗ ಮತ್ತೆ ಜಾತಿ ಧರ್ಮದ ರಾಜಕಾರಣ ನಡೆಸಿ ದೇಶದ ಜನತೆಯನ್ನು ವಿಭಜಿಸುವ ಹುನ್ನಾರ ನಡೆಸುತ್ತಿದೆ. ಜನತೆ ತಮ್ಮ ಬದುಕಿನ ಬಗ್ಗೆ ಚಿಂತಿಸುವ ಬದಲು ಅನಾವಶ್ಯಕ ವಿಚಾರಗಳನ್ನು ಚರ್ಚಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ.ಸಂಹಿತೆಗಳ ಜಾರಿಯ ಮೂಲಕ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದರು.
ವೇದಿಕೆಯಲ್ಲಿ ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ವಸಂತ ಆಚಾರಿ, ಯಾದವ ಶೆಟ್ಟಿ, ಪದ್ಮಾವತಿ ಶೆಟ್ಟಿ, ರಮಣಿ ಮೂಡಬಿದ್ರೆ, CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ನೋಣಯ್ಯ ಗೌಡ ಹಾಜರಿದ್ದರು.
ಪ್ರಾರಂಭದಲ್ಲಿ ಅಗಲಿದ ಕಾರ್ಮಿಕ ಚಳುವಳಿಯ ಹಿರಿಯ ಚೇತನ, AITUC ರಾಜ್ಯ ನಾಯಕ ಅನಂತ ಸುಬ್ಬರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲೆಯಾದ್ಯಂತ 175 ಕಿ ಮೀ.ನಷ್ಟು ಕ್ರಮಿಸಿದ 4 ಪಾದಯಾತ್ರೆಗಳ ಪ್ರಮುಖ ನಾಯಕರಾದ ರಾಧಾ ಮೂಡಬಿದ್ರೆ, ನೋಣಯ್ಯ ಗೌಡ, ಬಿ ಕೆ ಇಮ್ತಿಯಾಜ್, ಈಶ್ವರಿ ಪದ್ಮುಂಜ, ರೋಹಿದಾಸ್, ರಮೇಶ್ ಉಳ್ಳಾಲ, ರವಿಚಂದ್ರ ಕೊಂಚಾಡಿ, ಜಯಶ್ರೀ, ಲೋಲಾಕ್ಷಿ ಬಂಟ್ವಾಳ, ಶ್ಯಾಮರಾಜ ಪಟ್ರಾಮೆ, ಪ್ರಮೋದಿನಿ ಕಲ್ಲಾಪು, ರಜಾಕ್ ಮುಡಿಪು, ಜಯಲಕ್ಷ್ಮಿ, ತಯ್ಯುಬ್ ಬೆಂಗರೆ, ಸಾಧಿಕ್ ಮುಲ್ಕಿ, ಶ್ರೀನಾಥ್ ಕಾಟಿಪಳ್ಳ, ಪ್ರಮೀಳಾ ಶಕ್ತಿನಗರರವರನ್ನು ಕೆಂಪು ಗುಲಾಬಿ ನೀಡುವ ಮೂಲಕ ಗೌರವಿಸಲಾಯಿತು. 4 ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಸಮಾಪನಗೊಂಡು,ಬಳಿಕ ಮೆರವಣಿಗೆಯ ಮೂಲಕ ಕ್ಲಾಕ್ ಟವರ್ ಬಳಿಯತ್ತ ಸಾಗಿತು.
#implemented #codes #deathsentence #workers #MeenakshiSundaram #malgudiexpress #malgudinews #news #TopNews


