ShareChat
click to see wallet page
search
ಕುರಾನ್, ಸೂಫಿ ಮತ್ತು ಧರ್ಮಾಚರಣೆಯ ಧೈರ್ಯ.... ಬಗ್ದಾದಿನಲ್ಲೊಬ್ಬ ದರವೇಶಿ ಇದ್ದ. ಪ್ರೇಮದ ಪ್ರತಿರೂಪದಂತಿದ್ದ ಅವನನ್ನ ಕಂಡ್ರೆ ಇಡೀ ಊರಮಂದಿಗೆ ಖುಷಿ. ಅವ ಸುಮ್ನೆ ರಸ್ತೇಲಿ ನಡ್ಕೊಂಡು ಹೋಗ್ತಿದ್ರೂ ಸಾಕು, ಅವನ ಹಿಂದೋಡಿ, ನಿಲ್ಲಿಸಿ, ಏನಾದ್ರೂ ತಿನ್ನೋಕೆ – ಕುಡಿಯೋಕೆ ಕೊಡ್ತಿದ್ರು. ಅವನೂ ಅದನ್ನೆಲ್ಲ ಅಷ್ಟೇ ಪ್ರೀತಿಯಿಂದ ಇಸ್ಕೊಂಡು, ನವಿಲುಗರಿ ಅವರ ತಲೆ ಸೋಕಿಸಿ ಆಶೀರ್ವಾದ ಮಾಡ್ತಿದ್ದ. ಈ ದರವೇಶಿ, ಯಾರು ಏನು ಕೇಳಿದ್ರೂ “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ” ಅನ್ತ ಉತ್ತರಿಸ್ತಿದ್ದ. “ಅದು ಹೇಗೆ ನೀನು ಯಾವಾಗ್ಲೂ ಇಷ್ಟು ಖುಷಿಯಾಗಿರ್ತೀಯ?” “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ. ಅದಕ್ಕೆ” “ಅದು ಹೇಗೆ ನಿಂಗೆ ಎಲ್ರನ್ನೂ ಪ್ರೀತ್ಸೋಕೆ ಸಾಧ್ಯ ಆಗತ್ತೆ?” “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ. ಅದಕ್ಕೆ” “ಅದ್ಯಾಕೆ ನಿನ್ಗೆ ಸಿಟ್ಟೇ ಬರೋದಿಲ್ಲ!?” “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ. ಅದಕ್ಕೆ” ಹಿಂಗೆ… ಒಂದ್ ಸಲ ದರವೇಶಿ ಸಂತೆ ಬೀದಿಯ ಮಧ್ಯದಲ್ಲಿರೋ ಬೆಂಚ್ ಮೇಲೆ ಕೂತ್ಕೊಂಡು, ದಫ್ ಬಡೀತಾ ಏನೋ ಹಾಡ್ತಿದ್ದ. ಒಬ್ಬ ಚಿಕ್ಕ ಹುಡುಗ ಅವನ ವೇಷಭೂಷಣ ನೋಡಿ ಕುತೂಹಲದಿಂದ ಅವನ ಹತ್ರ ಹೋಗಿ ನಿಂತ. ಕಣ್ತೆರೆದ ದರವೇಶಿ ಅವನ ಮುಂದೆ ದಫ್ ಹಿಡೀತಾ, “ನೀನೂ ಬಡೀತೀಯಾ?” ಅಂತ ಕೇಳ್ದ. ಹುಡುಗ ತಲೆ ಅಡ್ಡಡ್ಡ ಅಲ್ಲಾಡಿಸ್ತಾ, “ನಂಗ್ ಬರಲ್ಲ. ನೀನು ಇಷ್ಟ್ ಚೆನಾಗಿ ದಫ್ ಬಡೀತಿಯಲ್ಲ, ಅದ್ ಹೇಗೆ?” ಅಂದ. ದರವೇಶಿ ಯಾವತ್ತಿನಂತೆ “ಕುರಾನಲ್ಲೇನಿದೆ ಅಂತ ನಂಗ್ ಗೊತ್ತಿದೆ. ಅದಕ್ಕೆ” ಅನ್ನುತ್ತಾ ಹುಡುಗನ ತಲೆಯನ್ನ ಪ್ರೀತಿಯಿಂದ ಸವರಿದ. ಹುಡುಗ ಅಷ್ಟಕ್ಕೆ ಸುಮ್ನಾಗ್ಲಿಲ್ಲ. “ಕುರಾನಲ್ಲೇನಿದೆ?” ಕೇಳೇಬಿಟ್ಟ! ಒಂದು ಕ್ಷಣ ಸಂತೆಗೆ ಸಂತೆಯೇ ಸ್ತಬ್ಧವಾಗಿಬಿಡ್ತು. ಎಲ್ರೂ ಅಚ್ಚರಿಯಿಂದ ಉತ್ತರಕ್ಕಾಗಿ ದರವೇಶಿಯ ಕಡೆ ತಿರುಗಿದ್ರು. ಅವನ ಮುಖದಲ್ಲೇನೂ ವ್ಯತ್ಯಾಸ ಕಾಣಲಿಲ್ಲ. “ಕುರಾನಲ್ಲಿ… ಒಣಗಿದ ಎರಡು ಹೂಗಳು, ನನ್ನ ಗೆಳೆಯನ ಪತ್ರ ಇದಾವೆ” ಅನ್ನುತ್ತಾ ತನ್ನ ಜೋಳಿಗೆಯಿಂದ ಹೊರತೆಗೆದು ಹುಡುಗನ ಮುಂದೆ ಹಿಡಿದ. ಇದೊಂದು ಸೂಫಿ ಕತೆ. ಎಷ್ಟು ಚೆಂದದ ಕತೆ ಇದು! ಯಾವುದೇ ಧರ್ಮಗ್ರಂಥದಲ್ಲಿ ಇರಬೇಕಾದ್ದು ಇಷ್ಟೇ ತಾನೆ? ಮನಸ್ಸಿಗೆ ಉಲ್ಲಾಸ ಕೊಡುವ ಸುಂದರ ನೆನಪು, ಒಂದು ಹಿಡಿ ಪ್ರೀತಿ? ಜೀವನಕ್ಕೆ ಬೇಕಿರೋದು ಇವಿಷ್ಟೇ ಆದ್ರೂ ನಾವು ಹುಡುಕೋದು ಬೇರೇನೇ. ಕಳೆದೋಗಿದ್ದು ಕಿವಿಯೋಲೆ, ಹುಡುಕೋದು ಕೈಬಳೆ! ಹೀಗಿದೆ ನಮ್ಮ ಪರಿಸ್ಥಿತಿ. ಬೇಕಿರೋದು ಪ್ರೀತಿ, ಬೇಕಿರೋದು ಶಾಂತಿ. ಆದ್ರೆ ಧರ್ಮಗಳಲ್ಲಿ ನಾವು ಹುಡುಕೋದು ಪ್ರತಿಷ್ಠೆ, ಮೇಲಾಟ, ಅಧಿಕಾರ ಮತ್ತು ಅಹಂಕಾರಕ್ಕೆ ಪುಷ್ಟಿ ಕೊಡೋ ವಿಚಾರ. ಆ ಕಾರಣಕ್ಕೇ ಅಷ್ಟೂ ವರ್ಷ ದರವೇಶಿ “ಕುರಾನಲ್ಲೇನಿದೆ ಅಂತ ನಂಗ್ ಗೊತ್ತು” ಅಂದಾಗ ಯಾರೂ ಮರುಪ್ರಶ್ನೆ ಮಾಡದೇ ಇದ್ದುದು. ಯಾಕಂದ್ರೆ ಅವರೆಲ್ರೂ ಕುರಾನಲ್ಲೇನಿದೆ ಅಂತ ನಮಗೂ ಗೊತ್ತು ಅಂದುಕೊಂಡುಬಿಟ್ಟಿದ್ರು! ಆ ಚಿಕ್ಕ ಹುಡುಗನಿಗೆ ಮಾತ್ರ, ಇನ್ನೂ ಅಹಂಕಾರ ಬಲಿತಿರದ ಮುಗ್ಧ ಮನಸ್ಸಿಗೆ ಮಾತ್ರ ಆ ಪ್ರಶ್ನೆ ಕೇಳಬೇಕನಿಸ್ತು. ಆ ಹುಡುಗನಿಗೆ ಧರ್ಮಗ್ರಂಥದಲ್ಲೇನಿದೆ ಅಂತ ತಿಳಿಯುವ ಪ್ರಾಮಾಣಿಕ ಕುತೂಹಲವಿತ್ತು. ಅದರಲ್ಲೇನಿದೆ ಅಂತ ಗೊತ್ತಾದ್ರೆ ಆ ದರವೇಶಿಗಿರೋ ಕೌಶಲ್ಯ ತಾನೂ ಪಡ್ಕೋಬಹುದು ಅನ್ನುವ ಆಲೋಚನೆ ಅವನಿಗೆ ಬಂದಿತ್ತೇನೋ. ಅದಕ್ಕೇ ಅವ ಮರುಪ್ರಶ್ನೆ ಹಾಕಿದ್ದು. ಆದ್ರೆ ಆ ಊರಿನ ಜನಕ್ಕೆ ಅಂಥಾ ಬಯಕೆ ಇದ್ದಂತಿರಲಿಲ್ಲ. ದರವೇಶಿ ಯಾವಾಗ್ಲೂ ಖುಷಿಯಿಂದ ಇರ್ತಾನೆ, ಎಲ್ಲರನ್ನೂ ಪ್ರೀತಿಸ್ತಾನೆ, ನೆಮ್ಮದಿಯಾಗಿದಾನೆ ಅನ್ನೋದು ಅವರಿಗೆ ಗೊತ್ತಿತ್ತು. ಅದಕ್ಕೆಲ್ಲ ಕಾರಣ ಅವನೇ ಸ್ಪಷ್ಟವಾಗಿ ಹೇಳಿದ್ದ. ಅವರೂ ಅದನ್ನು ನಂಬಿದ್ರು. ಆ ಜನರೂ ಕುರಾನ್ ಓದಿದ್ದವರೇ. ಆದರೂ ದರವೇಶಿಗಿರೋ ಖುಷಿ, ಅವನಿಗಿರೋ ನೆಮ್ಮದಿ ನಮಗಿಲ್ಲವಲ್ಲ, ನಮಗೆ ಗೊತ್ತಿಲ್ಲದ ಅಂಥದೇನು ಅವನಿಗೆ ಗೊತ್ತಿದೆ- ಅನ್ನೋ ಪ್ರಶ್ನೆ ಅವರನ್ನು ಕಾಡಿರಲೇ ಇಲ್ಲ. ಅಥವಾ ಕಾಡಿತ್ತೇನೋ. ಕೇಳುವ ಧೈರ್ಯ ಮಾಡಿರಲಿಲ್ಲ ಅನ್ನಿಸುತ್ತೆ! ಧರ್ಮವನ್ನ ಅರಿಯೋದಕ್ಕೆ ಬೇಕಿರೋದು ಶ್ರದ್ಧೆಯಲ್ಲ, ಧೈರ್ಯ. ಯಾಕಂದ್ರೆ ಧರ್ಮ ನಮ್ಗೆ ಸತ್ಯ ಹೇಳುತ್ತೆ. ‘ಎಲ್ಲಾ ಜೀವಿಗಳೂ ಒಂದೇ. ಯಾರೂ ಮೇಲಲ್ಲ, ಯಾರೂ ಕೀಳಲ್ಲ’ ಅನ್ನೋದೇ ಆ ಸತ್ಯ. ನಮ್ಮ ಅಹಂಕಾರಕ್ಕೆ ಸವಾಲಾಗಿರೋ ಈ ಸತ್ಯಾನ ಅರಗಿಸ್ಕೊಳ್ಳೋದು ಸುಲಭ ಅಲ್ಲ. ಅದಕ್ಕೆ ಧೀರತನ ಬೇಕಾಗುತ್ತೆ. ಧರ್ಮದ ದಲ್ಲಾಳಿಗಳು ಮಾಡಿಟ್ಟ ನೀತಿ – ನಿಯಮ – ಶಾಸ್ತ್ರ ಸಾವಿರ ಇರ್ಬೋದು. ಹರಮ್ – ಹರಬ್, ಪ್ರಾಮಿಸ್ಡ್ ಲ್ಯಾಂಡ್ – ಹೋಲಿ ಲ್ಯಾಂಡ್, ಜನ್ಮಭೂಮಿ – ದೇವಭೂಮಿ… ದೇವ್ರು ಅಂದ್ರೇನು, ಧರ್ಮ ಅಂದ್ರೇನು ಅಂತ ಗೊತ್ತಿರೋರು ಇಂಥಾ ಮೂರ್ಖತನಕ್ಕೆಲ್ಲ ಟೈಂ ವೇಸ್ಟ್ ಮಾಡ್ಕೊಳಲ್ಲ. ಆ ದರವೇಶಿ ಹಾಗೆ ಯಾವ್ದು ಸಂತೋಷ ಕೊಡತ್ತೋ, ಯಾವ್ದು ಪ್ರೀತಿ ಕೊಡತ್ತೋ, ನಮ್ಮನ್ನ ಕಾಪಾಡುತ್ತೋ ಅದನ್ನಷ್ಟೆ ಮಾಡ್ತಾ ಹೋಗ್ತಾರೆ. ಧರ್ಮ ಹೇಳೋದು ಅದನ್ನೇ. ‘ಸಂತೋಷವಾಗಿರಿ, ಪ್ರೀತಿಯಿಂದಿರಿ…’ ಮತ್ತೇನು ಬೇಕು? ಧರ್ಮ – ಉಳಿಸುವ ಸಾಧ್ಯತೆ ಇರುವಾಗ ಯಾರನ್ನೂ ಸಾಯಲು ಬಿಡಬೇಡ ಅನ್ನುತ್ತೆ. ‘ಕ್ಷಮಿಸುವ ಸಾಧ್ಯತೆ ಇರುವಾಗ ಶಿಕ್ಷಿಸಬೇಡ, ಪ್ರೀತಿಸುವ ಚಿಕ್ಕ ಸಾಧ್ಯತೆಯನ್ನೂ ಬಿಟ್ಟುಕೊಡ್ಬೇಡ, ಸಂಧಾನ ಸಾಧ್ಯವಿದ್ದಾಗ ಯುದ್ಧದ ಆಲೋಚನೆ ಬೇಡ’ ಅನ್ನುತ್ತೆ ಧರ್ಮ. ಇವನ್ನೆಲ್ಲ ಪಾಲಿಸೋ ಧೈರ್ಯ ನಮಗಿದ್ರೆ ಮಾತ್ರ ನಾವು ಧಾರ್ಮಿಕರಾಗ್ತೀವಿ. ಇಲ್ಲದಿದ್ರೆ ನಮ್ಮದು ಬರೀ ಡಂಬಾಚಾರ ಅಷ್ಟೇ. ಬಗ್ದಾದಿನ ದರವೇಶಿಗೆ ಅಂಥ ಧೀರತನವಿತ್ತು. ಅವ ಕುರಾನ್ ಸಾರಿದ್ದ ಸತ್ಯವನ್ನ ಮನದಟ್ಟು ಮಾಡ್ಕೊಂಡಿದ್ದ. ಆ ಸತ್ಯ, ಧರ್ಮಗ್ರಂಥದ ಪ್ರತಿಯೊಳಗೆ ಒಣಗಿದ ಹೂ ಮತ್ತು ಗೆಳೆಯನ ಪತ್ರದ ರೂಪದಲ್ಲಿ ಭದ್ರವಾಗಿದ್ದು ಸದಾ ಅವನನ್ನ ಎಚ್ಚರಿಸ್ತಿತ್ತು. ಆ ಎಚ್ಚರವೇ ಅವನನ್ನು ದಾರಿ ತಪ್ಪದಂತೆ ಮಾಡಿದ್ದು. ಅದರಿಂದಾಗೇ ಅವನಿಗೆ ಎಲ್ಲರನ್ನೂ ಪ್ರೀತಿಸೋಕೆ, ಖುಷಿಯಾಗಿರೋಕೆ ಸಾಧ್ಯವಾಗಿದ್ದು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
👦🏻 Bad Boyz ಸ್ಟೇಟಸ್ - ShareChat