ShareChat
click to see wallet page
search
#ಹೈಕಮಾಂಡ್ ಮುಂದೆ ಡಿಕೆಶಿ ಅಸಮಾಧಾನ ಹೈಕಮಾಂಡ್ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿ ಕೆ ಶಿವಕುಮಾರ್ ಬೆಂಗಳೂರು: ಅಧಿಕಾರ ಹಸ್ತಾಂತರ ಕುರಿತಂತೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ ಕೆ ಶಿವಕುಮಾರ್ ಈ ವಿಚಾರವಾಗಿ ಹೈಕಮಾಂಡ್ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತಗಳ್ಳತನ ಕುರಿತು ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿರುವ ಆಂದೋಲನದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿರುವ ಡಿ ಕೆ ಶಿವಕುಮಾರ್ ನಾಯಕತ್ವ ಕುರಿತಾಗಿ ಹಲವು ಮಹತ್ವದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಅಧಿಕಾರ ಹಂಚಿಕೆ ಕುರಿತಾಗಿ ಒಪ್ಪಂದ ಏರ್ಪಟ್ಟಿದೆ. ಅದರ ಅನ್ವಯ ಮೊದಲ ಎರಡೂವರೆ ವರ್ಷಗಳ ಅವಧಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಉಳಿದ ಎರಡೂವರೆ ವರ್ಷಕ್ಕೆ ಡಿ ಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ನೇಮಿಸಲಿದೆ ಎಂಬ ವಿಷಯ ಚರ್ಚೆಯಲ್ಲಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಅವರು ತಾವೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತೇನೆ. ಈ ರೀತಿಯ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ. ಇದರ ನಡುವೆ ಅಧಿಕಾರ ಹಂಚಿಕೆ ಕುರಿತಾಗಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಕಟ್ಟಪ್ಪಣೆ ವಿಧಿಸಿದೆ. ಆದರೂ ಡಿಸಿಎಂ ಅವರ ಪರವಾಗಿ ಕೆಲವು ಶಾಸಕರು ಮತ್ತು ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಲವು ಸಚಿವರು ಸಿದ್ದರಾಮಯ್ಯ ಅವರ ಪರ ಹೇಳಿಕೆ ನೀಡುತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ. ಇದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕತ್ವ ಕುರಿತು ಮಾತನಾಡಿದವರಿಗೆ ನೋಟಿಸ್ ಜಾರಿಗೊಳಿಸಿದೆ. ಈ ವಿಚಾರವಾಗಿ ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರೊಂದಿಗೆ ಮಾತುಕತೆ ನಡೆಸಿದ ಡಿ ಕೆ ಶಿವಕುಮಾರ್ ಅಧಿಕಾರ ಹಸ್ತಾಂತರ ಮತ್ತು ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಬೇಕು. ಈ ಬಗ್ಗೆ ಮುಖಂಡರು ಹೈಕಮಾಂಡ್ ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ. ಪಕ್ಷದ ಸಂಘಟನಾ ಕಾರ್ಯದರ್ಶಿಗಳಾಗಿರುವ ವೇಣುಗೋಪಾಲ್ ಅವರಾಗಲಿ ಅಥವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಸುರ್ಜೆವಾಲ ಅವರಾಗಲಿ ಸ್ಪಷ್ಟವಾಗಿ ಮಾತನಾಡಿ ನಾಯಕತ್ವ ಬದಲಾವಣೆ ಇದೆ ಅಥವಾ ಇಲ್ಲಾ ಎನ್ನುವುದನ್ನು ತಿಳಿಸಬೇಕು. ಅದನ್ನು ಬಿಟ್ಟು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಗೊಂದಲಕ್ಕೆ ಕಾರಣವಾಗುತ್ತಿದೆ. ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುವ ಬದಲಿಗೆ ಸ್ಪಷ್ಟವಾಗಿ ನಿರ್ಧಾರ ಪ್ರಕಟಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಮನವಿ ಮಾಡಿರುವುದಾಗಿ ತಿಳಿದು ಬಂದಿದೆ. ಇನ್ನು ನಾಯಕತ್ವ ವಿಚಾರವಾಗಿ ಮಾತನಾಡಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಹೈಕಮಾಂಡ್ ಹೇಳಿದೆ. ತಮ್ಮ ಪರವಾಗಿ ಮಾತನಾಡುವ ಶಾಸಕರು ಮತ್ತು ಮುಖಂಡರಿಗೆ ಶಿಸ್ತು ಸಮಿತಿ ನೋಟಿಸ್ ನೀಡುತ್ತಿದೆ. ಆದರೆ ಮುಖ್ಯಮಂತ್ರಿ ಪರವಾಗಿ ಮಾತನಾಡುವ ಯಾವುದೇ ನಾಯಕರಿಗೆ ನೋಟಿಸ್ ನೀಡುತ್ತಿಲ್ಲ. ಇದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಉಪಮುಖ್ಯಮಂತ್ರಿ ಪರವಾಗಿ ಮಾತನಾಡಿದರೆ ಅಶಿಸ್ತು ಮುಖ್ಯಮಂತ್ರಿ ಪರವಾಗಿ ಮಾತನಾಡಿದರೆ ಶಿಸ್ತಿನ ಉಲ್ಲಂಘನೆ ಆಗುವುದಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಉತ್ತರ ನೀಡಬೇಕು ಎಂದು ಸುರ್ಜೇವಾಲಾ ಅವರಲ್ಲಿ ಕೇಳಿರುವುದಾಗಿ ಡಿಸಿಎಂ ಆಪ್ತ ಮೂಲಗಳು ತಿಳಿಸಿವೆ. ಶಿವಕುಮಾರ್ ಅವರ ಎಲ್ಲ ಮಾತುಗಳನ್ನು ಸಮಾಧಾನ ಚಿತ್ತದಿಂದ ಆಲಿಸಿದ ಇಬ್ಬರೂ ನಾಯಕರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದು, ಅವರು ಹಿಂತಿರುಗಿದ ಬಳಿಕ ಈ ಬಗ್ಗೆ ಚರ್ಚೆ ನಡೆಸಿ ಸ್ಪಷ್ಟ ಉತ್ತರ ನೀಡುವುದಾಗಿ ಸಮಾಧಾನಪಡಿಸಿದರು ಎಂದು ಗೊತ್ತಾಗಿದೆ. #DKShivakumar #expressed #deep #dissatisfaction #highcommand #stance #malgudiexpress #malgudinews #news #TopNews
ಹೈಕಮಾಂಡ್ ಮುಂದೆ ಡಿಕೆಶಿ ಅಸಮಾಧಾನ - ShareChat