#🌼 ಗಾಂಧಿ ಜಯಂತಿ 🌼
ಗಾಂಧೀಜಿಯವರು ದೇಶ ನೆನಪಿಡುವ ಐಕಾನ್: ಪ್ರಲ್ಹಾದ ಜೋಶಿ
ಧಾರವಾಡ: ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಸ್ವದೇಶಿ ಚಳುವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮಹಾತ್ಮಾ ಗಾಂಧೀಜಿಯವರು ಭಾಗವಹಿಸಿದ್ದರು. ಆಂದೋಲನವನ್ನು ಜನಾಂದೋಲವಾಗಿ ಪರಿವರ್ತಿಸಿದರು. ಜನ ಸಾಮಾನ್ಯರಿಂದ ಹೋರಾಟ ನಡೆಸಿದರು. ಅನೇಕ ಸತ್ಯಾಗ್ರಹಗಳನ್ನು ಜನಾಂದೋಲದಿಂದ ನಡೆಸಿದ ಕೀರ್ತಿ ಗಾಂಧೀಜಿ ಅವರಿಗೆ ಸಲ್ಲುತ್ತದೆ. ಗಾಂಧೀಜಿಯವರು ದೇಶ ನೆನಪಿಡುವ ಐಕಾನ್ ಆಗಿದ್ದಾರೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.
ಧಾರವಾಡ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ನೂತನ ಗಾಂಧಿ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿಯವರ 156ನೇ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 124ನೇ ಜಯಂತಿಯನ್ನು ಇಂದು ನಾವು ಆಚರಿಸುತ್ತಿದ್ದೇವೆ. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಪ್ರಧಾನ ಮಂತ್ರಿಗಳಾಗಿ ಉತ್ತಮ ಆಡಳಿತವನ್ನು ನೀಡಿದರು. ತಾಷ್ಕೆಂಟ್ ಒಪ್ಪಂದದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಶಾಸ್ತ್ರಿಯವರು ಜೀವನದ ನೈತಿಕತೆ ತಿಳಿದು ಜೀವನ ಸವೆಸಿದ್ದಾರೆ ಎಂದರು.
ಉತ್ತರ ಭಾರತದಲ್ಲಿ ಪೇಟಾ ಹಾಕುವುದು ಸಾಮಾನ್ಯವಾಗಿತ್ತು, ಅದನ್ನು ಬ್ರಿಟಿಷರು ತೆಗೆದುಹಾಕಿದರು. ಅನಂತರದಲ್ಲಿ ಗಾಂಧೀಜಿಯವರು ಟೋಪಿಗೆ ಹೆಚ್ಚಿನ ಮಹತ್ವ ತಂದುಕೊಟ್ಟರು. ನಂತರದ ದಿನಗಳಲ್ಲಿ ಗಾಂಧಿ ಟೋಪಿ ಎಂದು ಖ್ಯಾತಿ ಪಡೆದುಕೊಂಡಿತು ಎಂದರು.
ವಿವಿಧ ಧರ್ಮದ ಧರ್ಮಗುರುಗಳಾದ ಡೇವಿಡ್, ಹಫೀಜ್ ಖಾದ್ರಿ ಮತ್ತು ಮಹೇಶ ಭಟ್ ಅವರು ಸರ್ವಧರ್ಮ ಪ್ರಾರ್ಥನೆಯನ್ನು ಸಲ್ಲಿಸಿದರು.
ಗಣ್ಯರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿದರು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿಡಿಪಿಐ ಎಸ್.ಎಸ್.ಕೆಳದಿಮಠ, ಡಾ.ಸಂಜೀವ ಕುಲಕರ್ಣಿ, ಡಾ. ರಾಜೇಂದ್ರ ಪೊದ್ದಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ 3 ರ ವಲಯಸಹಾಯಕ ಆಯುಕ್ತ ಅರವಿಂದ ಜಮಖಂಡಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ (ಪ್ರ) ಡಾ. ಎಸ್.ಎಂ.ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರ್ಗವಿ ಕುಲಕರ್ಣಿ ಮತ್ತು ತಂಡದವರು ನಾಡಗೀತೆ, ಗಾಂಧಿ ಭಜನೆಯನ್ನು ಪ್ರಸ್ತುತ ಪಡಿಸಿದರು. ಶಶಿರೇಖಾ ಚಕ್ರಸಾಲಿ ಅವರು ಅತಿಥಿ ಪರಿಚಯಿಸಿದರು. ರವಿ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಾಪೂಜಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಪ್ರಮಾಣ ಪತ್ರ, ನಗದು ಪುರಸ್ಕಾರ ವಿತರಣೆ: ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕುಂದಗೋಳ ಪಟ್ಟಣದ ಎಸ್.ಎಸ್.ಬಾಲಿಕಾ ಪ್ರೌಢಶಾಲಾ ವಿದ್ಯಾರ್ಥಿನಿ ಪವಿತ್ರಾ ಹೂಗಾರ, ದ್ವಿತೀಯ ಸ್ಥಾನವನ್ನು ಅಂಚಟಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗರತ್ನ ಹಳೆಮನಿ ಮತ್ತು ತೃತೀಯ ಸ್ಥಾನವನ್ನು ಕಲಘಟಗಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ದಾನೇಶ್ವರ ಹುಬ್ಬಳ್ಳಿ ಅವರು ಪಡೆದಿದ್ದರು.
ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನಲವಡಿ ಎಸ್.ಕೆ.ಟಿ.ಎಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿಷೇಕ ಎ. ಅಡಾಡಿ, ದ್ವಿತೀಯ ಸ್ಥಾನವನ್ನು ಹುಬ್ಬಳ್ಳಿ ವಿದ್ಯಾನಗರದ ಜಿ.ಜಿ.ಕಾಲೇಜು ಆಫ್ ಕಾಮರ್ಸ್‍ನ ವಿದ್ಯಾರ್ಥಿನಿ ಶ್ರೇಯಾ ರಾಯಚೂರ ಮತ್ತು ತೃತೀಯ ಸ್ಥಾನವನ್ನು ಧಾರವಾಡ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿನ ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಅಂಗಡಿ ಪಡೆದುಕೊಂಡರು.
ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕಲಘಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಬಮ್ಮಿಗಟ್ಟಿ, ದ್ವಿತೀಯ ಸ್ಥಾನವನ್ನು ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ.ಬಿ. ಮತ್ತು ತೃತೀಯ ಸ್ಥಾನವನ್ನು ಧಾರವಾಡ ಎಸ್.ಸಿ.ಎಂ.ಎಸ್. ಪದವಿ ಕಾಲೇಜಿನ ವಿದ್ಯಾರ್ಥಿ ಸಾಯಿರಾಜ ನೇಸರೇಕರ ಅವರು ಪಡೆದಿದ್ದಾರೆ. ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಲಬಳಗ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಚರಕದಿಂದ ಹತ್ತಿಯ ನೂಲು ತಗೆಯುವ ಕಾರ್ಯಮಾಡಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಕಾರ್ಯಕ್ರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗಾಂಧಿವಾದಿಗಳು ಹಾಗೂ ಗಾಂಧಿ ಅನುಯಾಯಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು.
#Gandhiji #icon #country #remembers #PralhadJoshi #malgudiexpress #malgudinews #news #TopNews