#📜ಪ್ರಚಲಿತ ವಿದ್ಯಮಾನ📜
ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗಾಗಿ ಅರ್ಜಿ ಆಹ್ವಾನ
ಚಿತ್ರದುರ್ಗ: ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ 2025-26ನೇ ಸಾಲಿನಲ್ಲಿ ಕೃಷಿಯಲ್ಲಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ಆಧಾರದಲ್ಲಿ ಒದಗಿಸುವಂತೆ ಹಾಗೂ ಜಿಲ್ಲೆಯಲ್ಲಿ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲ ಪಡಿಸಲು ವೈಯಕ್ತಿಕ ಫಲಾನುಭವಿಗಳಿಗೆ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿಯ ರೈತರಿಂದ ಕಂಬೈನ್ಸ್ ಹಾರ್ವೆಸ್ಟರ್ ಹಬ್ ಸ್ಥಾಪನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ. ಮಂಜುನಾಥ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಸಾಮಾನ್ಯ ಘಟಕದಡಿ ವೈಯಕ್ತಿಕ ಫಲಾನುಭವಿಗಳಿಗೆ (ಎರಡು). ವಿಶೇಷ ಘಟಕ ಯೋಜನೆ ವರ್ಗದ ರೈತರಿಗೆ (ಒಂದು) ಘಟಕ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಈ ಯಂತ್ರಗಳನ್ನು ಬಾಡಿಗೆಗೆ ನೀಡುವ ಮೂಲಕ ರೈತರು ಹೆಚ್ಚುವರಿ ಆದಾಯ ಪಡೆಯಬಹುದಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ಗಎಳನ್ನು ಬೆಳೆಯ ವಿಧ ಮತ್ತು ಕಟಾವು ಅವಧಿಯ ಆಧಾರದ ಮೇಲೆ ಕಾರಿಡರ್ ಮಾದರಿಯಲ್ಲಿ ಸ್ಥಾಪಿಸುವುದು. ಕೃಷಿ ಯಂತ್ರೋಪಕರಣವಾರು ನಿಗದಿಪಡಿಸಿದ ಗರಿಷ್ಠ ಸಹಾಯಧನವನ್ನು ಒದಗಿಸಲಾಗುವುದು. ಈ ಸಹಾಯಧನವನ್ನು ಕ್ರೆಡಿಟ್ ಲಿಂಕ್ಸ್ ಬ್ಯಾಕ್ ಎಂಡೆಡ್ ಸಬ್ಸಿಡಿ ಮೂಲಕ ಬಿಡುಗಡೆ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಗಳು ಕೃಷಿ ಮೂಲಭೂತ ಸೌಕರ್ಯ ನಿಧಿ ಸಾಲದ ನೆರವನ್ನು ಪಡೆಯಲು ಸಹ ಅವಕಾಶವಿದೆ.
ಅರ್ಜಿಗಳನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಕ್ಟೋಬರ್ 8 ರೊಳಗಾಗಿ ಸಲ್ಲಿಸುವುದು. ಸಹಾಯಕ ಕೃಷಿ ನಿರ್ದೇಶಕರು ಸ್ವೀಕೃತವಾಗುವ ಎಲ್ಲ ಅರ್ಜಿಗಳನ್ನು ಮೇಲ್ಕಂಡ ಎಲ್ಲ ಅಂಶಗಳನ್ವಯ ಪರಿಶೀಲಿಸಿ ಸಂಬಂಧಿಸಿದ ಉಪ ಕೃಷಿ ನಿರ್ದೇಶಕರ ಮುಖಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ. ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.
#Invitation #applications #establishment #HiTech #HarvesterHub #malgudiexpress #malgudinews #news #TopNews
#🌼 ಗಾಂಧಿ ಜಯಂತಿ 🌼
ಗಾಂಧೀಜಿ ಅವರ ತತ್ವದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೀವನ ಸವೆಸಿದ್ದಾರೆ: ಭುವನೇಶ ಪಾಟೀಲ
ಧಾರವಾಡ: ಗಾಂಧೀಜಿ ಅವರ ತತ್ವದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೀವನ ಸವೆಸಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.
ಧಾರವಾಡ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ನೂತನ ಗಾಂಧಿ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಅಹಿಂಸೆ ತತ್ವ ನಮಗೆ ದಾರಿದೀಪವಾಗಿದೆ. ಅದೇ ಮಾರ್ಗದಲ್ಲಿ ನಾವು ನಡೆಯಬೇಕು. ದಸರಾ ಹಬ್ಬವನ್ನು ರಾಮನು ರಾವಣನ ಮೇಲೆ ಜಯ ಸಾಧಿಸಿದ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಗಾಂಧೀಜಿಯವರ ತತ್ವದಾರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. "ಮೈ ಎಕ್ಸಪೀರಿಮೆಂಟ್ ವಿಥ್ ಟ್ರುಥ್" ಎಂಬ ಗ್ರಂಥವನ್ನು ರಚಿಸಿದ್ದಾರೆ. ಶಾಲಾ ದಿನದಲ್ಲಿ ಮಾಡಿದ ತಪ್ಪನ್ನು ಜೀವನದಲ್ಲಿ ಎಂದಿಗೂ ಮಾಡುವುದಿಲ್ಲ ಎಂದು ಶಪಥ ಮಾಡಿದ್ದರು. ತಮ್ಮ ಜೀವನದುದ್ದಕ್ಕೂ ಸತ್ಯದ ದಾರಿಯಲ್ಲಿ ಅವರು ನಡೆದರು. ಅವರಂತೆ ನಾವು ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಜೀವನದಲ್ಲಿ ತ್ಯಾಗವನ್ನು ಸಹ ಅಳವಡಿಸಿಕೊಳ್ಳಬೇಕಾಗುತ್ತದೆ. ಒಳ್ಳೆಯ ನಾಗರಿಕರಾಗಲು ಮುಂದಾಗಬೇಕು. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಘೋಷವಾಕ್ಯ ನೀಡಿದರು. ಪಾಕಿಸ್ತಾನ ವಿರುದ್ಧ ಯುದ್ಧ ಸಂದರ್ಭದಲ್ಲಿ ಬಹಳ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನಾವು ಸಹ ಸಮಾಜಕ್ಕೆ ಕೊಡುಗೆ ನೀಡಲು ಅಣಿಯಾಗಬೇಕು. ದೇಶದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದರು.
#LalBahadurShastri #lived #life #based #Gandhiji #principles #BhuvaneshPatil #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ವಿಕಲಚೇತನರಿಂದ ಅರ್ಜಿ ಆಹ್ವಾನ
ಚಿತ್ರದುರ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳನ್ನು 2025-26ನೇ ಸಾಲಿನಲ್ಲಿ ನೇರ ನಗದು ವರ್ಗಾವಣೆ ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಿ, ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.
ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ನಿರುದ್ಯೋಗ ಭತ್ಯೆ, ಶಿಶುಪಾಲನಾ ಭತ್ಯೆ, ಮರಣ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ಯೋಜನೆ, ದೃಷ್ಠಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್‍ಕಿಟ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆಯಂತ್ರ ಯೋಜನೆ, ಸಾಧನ ಸಲಕರಣೆ ಯೋಜನೆ, ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್‍ಚೇರ್ ಯೋಜನೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಮೇಲ್ಕಂಡ ಯೋಜನೆಗಳಿಗೆ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಸೇವಾಸಿಂಧು ಪೋರ್ಟಲ್‍ನಡಿ (https://sevasindhu.karnataka.gov.in/sevasindhu/kannada) ಆನ್‍ಲೈನ್ ಮೂಲಕ ವಿಕಲಚೇತನರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಸ್ವೀಕೃತಿಯೊಂದಿಗೆ ಎಲ್ಲ ಪೂರಕ ದಾಖಲಾತಿಗಳ ಹಾರ್ಡ್ ಪ್ರತಿಯನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು ಎಂ.ಆರ್.ಡಬ್ಲ್ಯೂಗಳಿಗೆ ಸಲ್ಲಿಸುವುದು.
ಮಾಹಿತಿಗಾಗಿ ಎಂಆರ್‍ಡಬ್ಲ್ಯೂಗಳ ದೂರವಾಣಿ ಸಂಖ್ಯೆ ಚಿತ್ರದುರ್ಗ-9880821934, ಚಳ್ಳಕೆರೆ-9611266930, ಹಿರಿಯೂರು-9902888901, 9902898901, ಹೊಳಲ್ಕೆರೆ-9740030227, ಹೊಸದುರ್ಗ-9741829990, ಮೊಳಕಾಲ್ಮುರು-9742725576 ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08194-235284 ಅನ್ನು ಸಂಪರ್ಕಿಸಬಹುದು.
#Applications #invited #persons #disabilities #malgudiexpress #malgudinews #news #TopNews
#🌼 ಗಾಂಧಿ ಜಯಂತಿ 🌼 #📜ಪ್ರಚಲಿತ ವಿದ್ಯಮಾನ📜
ಗಾಂಧೀಜಿ ರಾಷ್ಟ್ರಕ್ಕೆ ಸಿಮೀತವಾದ ವ್ಯಕ್ತಿ ಅಲ್ಲ: ನಿತಿನ್‍ಚಂದ್ರ ಹತ್ತೀಕಾಳ
ಧಾರವಾಡ: ಗಾಂಧೀಜಿ ರಾಷ್ಟ್ರಕ್ಕೆ ಸಿಮೀತವಾದ ವ್ಯಕ್ತಿ ಅಲ್ಲ. ಅವರು ವಿಶ್ವಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಮಹಾತ್ಮರು ಹಾಗೂ ಶರಣರು ಇಡೀ ನಾಡಿಗೆ ವಿಶೇಷ ಕೊಡುಗೆಗಳನ್ನು ನೀಡಿರುತ್ತಾರೆ. ನಮ್ಮ ಸಿದ್ಧವೀರ ಸತ್ಸಂಗದಿಂದ 1981 ಅಕ್ಟೋಬರ್ 2 ರಿಂದ ಗಾಂಧೀಜಿಯವರ ಜಯಂತಿಯನ್ನು ಆಚರಿಸುತ್ತಿದ್ದು, ಇಂದು 45 ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಧಾರವಾಡ ಸಿದ್ಧವೀರ ಸತ್ಸಂಗದ ಅಧ್ಯಕ್ಷ ಹಾಗೂ ಗಾಂಧಿ ಚಿಂತಕ ಡಾ. ನಿತಿನ್‍ಚಂದ್ರ ಹತ್ತೀಕಾಳ ಹೇಳಿದರು.
ಧಾರವಾಡ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ನೂತನ ಗಾಂಧಿ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಕ್ಷಿಣ ಆಫ್ರಿಕಾದಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಡಿ ಜಯಸಿದರು. ಅಲ್ಲಿಂದ ಮರಳಿ ಭಾರತಕ್ಕೆ ಹಿಂತಿರುಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮಕಿದರು. ಮಹಾತ್ಮಾ ಎಂಬ ಹೆಸರು ಪಡೆದುಕೊಂಡರು. ಕ್ವಿಟ್ ಇಂಡಿಯಾ, ಚಲೇಜಾವ್ ಚಳುವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗಿಯಾದರು ಎಂದರು.
ಆದರ್ಶ ನಾಯಕತ್ವದ ಗುಣಗಳನ್ನು ಗಾಂಧೀಜಿಯವರಲ್ಲಿ ನಾವು ಕಂಡೆವು. ಆಲ್ಬರ್ಟ್ ಐನಸ್ಟೀನ್ ಅವರು ಗಾಂಧೀಜಿಯವರನ್ನು ಹಾಡಿಹೊಗಳಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಅವರು ನನಗೆ ಇಬ್ಬರೂ ದೇವರು ಎಂದು ಹೇಳಿದ್ದಾರೆ. ಜೀಸಸ್ ಯೇಸುಕ್ರಿಸ್ತ ಮೊದಲನೇ ದೇವರಾದರೆ, ಮಹಾತ್ಮಾ ಗಾಂಧಿ ನನಗೆ ಬದುಕುವ ಕಲೆ ಕಲಿಸಿದ ಎರಡನೇ ದೇವರಾಗಿದ್ದಾರೆ ಎಂದರು.
ವಿರೋಧಿಸುವಿಕೆ, ಸ್ವೀಕಾರ ಮನೋಭಾವ, ರಿಯಲೈಜೇಷನ್ ಜೀವನದಲ್ಲಿ ಬಹುಮುಖ್ಯವಾಗಿವೆ. ಮಹಾತ್ಮಾ ಗಾಂಧಿಯವರ ಹತ್ಯೆ ನಡೆದ ದಿನ ವಿಶ್ವಸಂಸ್ಥೆಯ ಗೊತ್ತುವಳಿಯಿಂದ ಎಲ್ಲ ರಾಷ್ಟ್ರಗಳ ಧ್ವಜಗಳನ್ನು ಅರ್ಧಕ್ಕೆ ಹಾರಿಸಲಾಯಿತು ಎಂದು ತಮ್ಮ ವಿಶೇಷ ಉಪನ್ಯಾಸದಲ್ಲಿ ಅವರು ವಿವರಿಸಿದರು.
#Gandhiji #person #limited #nation #NitinchandraHattikala #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ದಸರಾ ಯಾವುದೇ ಅಡಚಣೆಗಳಿಲ್ಲದೇ ನಡೆದಿರುವುದು ಸಂತಸ ತಂದಿದೆ: ಸಿದ್ದರಾಮಯ್ಯ
ಮೈಸೂರು: ಈ ಬಾರಿ ದಸರಾ ಹಬ್ಬವು ಹನ್ನೊಂದು ದಿನಗಳ ಕಾಲ ನಡೆದಿದ್ದು, ನಾಡಿನ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳನ್ನು ಕೋರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ವಿಶ್ವವಿಖ್ಯಾತವಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ, ಎಲ್ಲ ದಸರಾ ಉತ್ಸವಗಳಲ್ಲಿ ಭಾಗಿಯಾಗಿದ್ದೇನೆ. ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ 8 ಬಾರಿ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದ್ದು, ಅತ್ಯಂತ ಸಂತೋಷವನ್ನು ತಂದಿದೆ ಎಂದರು.
ದಸರಾ ಜನರ ಹಬ್ಬ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ. ದಸರಾ ಉತ್ಸವವನ್ನು ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳು, ದಸರಾ ಉತ್ಸವ ಯಾವುದೇ ಅಡಚಣೆಗಳಿಲ್ಲದೇ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ. ಇದಕ್ಕಾಗಿ ಶ್ರಮಿಸಿದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು ಎಂದರು.
ಈ ವರ್ಷ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಎಲ್ಲ ಜಲಾಶಯಗಳು ತುಂಬಿ, ಉತ್ತಮ ಬೆಳೆಯೂ ಆಗುತ್ತಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ ಎಂದರು.
ರೈತರಿಗೆ ಸಮೀಕ್ಷೆ ನಡೆಸಿ ಬೆಳೆಪರಿಹಾರ ನೀಡುವುದಾಗಿ ಕಲಬುರಗಿಯ ಭೇಟಿ ಸಂದರ್ಭದಲ್ಲಿ ತಿಳಿಸಿದ್ದು, ಸರ್ಕಾರ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ಖುಷ್ಕಿ ಜಮೀನಿನ ತಲಾ ಹೆಕ್ಟೇರ್ ಗೆ 17,000 ರೂ., ನೀರಾವರಿ ಜಮೀನಿಗೆ 17,500 ರೂ. ಮತ್ತು ಬಹುಬೆಳೆ ಬೆಳೆಯುವ ಜಮೀನಿಗೆ 31,000 ರೂ.ಗಳ ಪರಿಹಾರ ನೀಡುವುದಾಗಿ ತಿಳಿಸಲಾಗಿದೆ. ಆದರೆ ಹೆಚ್ಚಿನ ಮಳೆಯಿರುವುದರಿಂದ ಬೆಳೆಹಾನಿಯ ಜಂಟಿಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯ ನಂತರ ಬೆಳೆಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಪರಿಹಾರ ನೀಡಲಾಗುವುದು ಎಂದರು.
#Happy #Dasara #tookplace #disruptions #Siddaramaiah #Dasara2025 #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನೇರಗುತ್ತಿಗೆ ಆಧಾರದ ಮೇಲೆ ಖಾಲಿ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನ
ಬೆಂಗಳೂರು: ಕೃಷಿ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ ನೇರಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ (BTM) ಹುದ್ದೆ-1 ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM) - 02 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ ಆತ್ಮ ಯೋಜನಾ ನಿರ್ದೇಶಕರು ಹಾಗೂ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ (BTM) ಹುದ್ದೆಗೆ MSC. Agri / Allied Subject ಪದವಿಯೊಂದಿಗೆ ಕನಿಷ್ಠ 02 ವರ್ಷಗಳ ಕೃಷಿ ಅಥವಾ ಕೃಷಿ ಸಂಬಂಧಿತ ವಿಭಾಗದಲ್ಲಿ ಕರ್ತವ್ಯ ನಿರ್ವಹಹಿಸಿದ ಅನುಭವ ಹೊಂದಿರಬೇಕು. ಸಹಾಯಕ ತಾಂತ್ರಿಕ ವ್ಯವಸ್ಥಾಪಕರು (ATM) - ಹುದ್ದೆಗೆ BSC. Agri / Allied Subject ಪದವಿಯೊಂದಿಗೆ ಕನಿಷ್ಠ01 ವರ್ಷಗಳ ಕೃಷಿ ಅಥವಾ ಕೃಷಿ ಸಂಬಂಧಿತ ವಿಭಾಗದಲ್ಲಿ ಕರ್ತವ್ಯ ನಿರ್ವಹಹಿಸಿದ ಅನುಭವ ಹೊಂದಿರಬೇಕು.
ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಸೂಕ್ತ ದಾಖಲೆಗಳನ್ನು ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೃಷಿ ಸಂಕೀರ್ಣ, ಎಸ್.ಕರಿಯಪ್ಪ ರಸ್ತೆ (ಕನಕಪುರ ರಸ್ತೆ) ಬನಶಂಕರಿ, ಬೆಂಗಳೂರು -560 070 ಇಲ್ಲಿ ಅಕ್ಟೋಬರ್ 24, 2025 ರೊಳಗೆ ಕಚೇರಿಯ ಅವಧಿಯೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-26711594 ಗೆ ಸಂಪರ್ಕಿಸಬಹುದು.
#Applications #invited #fillingup #vacant #posts #direct #contractbasis #malgudiexpress #malgudinews #news #TopNews
#🌼 ಗಾಂಧಿ ಜಯಂತಿ 🌼
ಗಾಂಧೀಜಿಯವರು ದೇಶ ನೆನಪಿಡುವ ಐಕಾನ್: ಪ್ರಲ್ಹಾದ ಜೋಶಿ
ಧಾರವಾಡ: ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಸ್ವದೇಶಿ ಚಳುವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮಹಾತ್ಮಾ ಗಾಂಧೀಜಿಯವರು ಭಾಗವಹಿಸಿದ್ದರು. ಆಂದೋಲನವನ್ನು ಜನಾಂದೋಲವಾಗಿ ಪರಿವರ್ತಿಸಿದರು. ಜನ ಸಾಮಾನ್ಯರಿಂದ ಹೋರಾಟ ನಡೆಸಿದರು. ಅನೇಕ ಸತ್ಯಾಗ್ರಹಗಳನ್ನು ಜನಾಂದೋಲದಿಂದ ನಡೆಸಿದ ಕೀರ್ತಿ ಗಾಂಧೀಜಿ ಅವರಿಗೆ ಸಲ್ಲುತ್ತದೆ. ಗಾಂಧೀಜಿಯವರು ದೇಶ ನೆನಪಿಡುವ ಐಕಾನ್ ಆಗಿದ್ದಾರೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.
ಧಾರವಾಡ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ನೂತನ ಗಾಂಧಿ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿಯವರ 156ನೇ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 124ನೇ ಜಯಂತಿಯನ್ನು ಇಂದು ನಾವು ಆಚರಿಸುತ್ತಿದ್ದೇವೆ. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಪ್ರಧಾನ ಮಂತ್ರಿಗಳಾಗಿ ಉತ್ತಮ ಆಡಳಿತವನ್ನು ನೀಡಿದರು. ತಾಷ್ಕೆಂಟ್ ಒಪ್ಪಂದದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಶಾಸ್ತ್ರಿಯವರು ಜೀವನದ ನೈತಿಕತೆ ತಿಳಿದು ಜೀವನ ಸವೆಸಿದ್ದಾರೆ ಎಂದರು.
ಉತ್ತರ ಭಾರತದಲ್ಲಿ ಪೇಟಾ ಹಾಕುವುದು ಸಾಮಾನ್ಯವಾಗಿತ್ತು, ಅದನ್ನು ಬ್ರಿಟಿಷರು ತೆಗೆದುಹಾಕಿದರು. ಅನಂತರದಲ್ಲಿ ಗಾಂಧೀಜಿಯವರು ಟೋಪಿಗೆ ಹೆಚ್ಚಿನ ಮಹತ್ವ ತಂದುಕೊಟ್ಟರು. ನಂತರದ ದಿನಗಳಲ್ಲಿ ಗಾಂಧಿ ಟೋಪಿ ಎಂದು ಖ್ಯಾತಿ ಪಡೆದುಕೊಂಡಿತು ಎಂದರು.
ವಿವಿಧ ಧರ್ಮದ ಧರ್ಮಗುರುಗಳಾದ ಡೇವಿಡ್, ಹಫೀಜ್ ಖಾದ್ರಿ ಮತ್ತು ಮಹೇಶ ಭಟ್ ಅವರು ಸರ್ವಧರ್ಮ ಪ್ರಾರ್ಥನೆಯನ್ನು ಸಲ್ಲಿಸಿದರು.
ಗಣ್ಯರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿದರು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿಡಿಪಿಐ ಎಸ್.ಎಸ್.ಕೆಳದಿಮಠ, ಡಾ.ಸಂಜೀವ ಕುಲಕರ್ಣಿ, ಡಾ. ರಾಜೇಂದ್ರ ಪೊದ್ದಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ 3 ರ ವಲಯಸಹಾಯಕ ಆಯುಕ್ತ ಅರವಿಂದ ಜಮಖಂಡಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ (ಪ್ರ) ಡಾ. ಎಸ್.ಎಂ.ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರ್ಗವಿ ಕುಲಕರ್ಣಿ ಮತ್ತು ತಂಡದವರು ನಾಡಗೀತೆ, ಗಾಂಧಿ ಭಜನೆಯನ್ನು ಪ್ರಸ್ತುತ ಪಡಿಸಿದರು. ಶಶಿರೇಖಾ ಚಕ್ರಸಾಲಿ ಅವರು ಅತಿಥಿ ಪರಿಚಯಿಸಿದರು. ರವಿ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಾಪೂಜಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಪ್ರಮಾಣ ಪತ್ರ, ನಗದು ಪುರಸ್ಕಾರ ವಿತರಣೆ: ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕುಂದಗೋಳ ಪಟ್ಟಣದ ಎಸ್.ಎಸ್.ಬಾಲಿಕಾ ಪ್ರೌಢಶಾಲಾ ವಿದ್ಯಾರ್ಥಿನಿ ಪವಿತ್ರಾ ಹೂಗಾರ, ದ್ವಿತೀಯ ಸ್ಥಾನವನ್ನು ಅಂಚಟಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗರತ್ನ ಹಳೆಮನಿ ಮತ್ತು ತೃತೀಯ ಸ್ಥಾನವನ್ನು ಕಲಘಟಗಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ದಾನೇಶ್ವರ ಹುಬ್ಬಳ್ಳಿ ಅವರು ಪಡೆದಿದ್ದರು.
ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನಲವಡಿ ಎಸ್.ಕೆ.ಟಿ.ಎಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿಷೇಕ ಎ. ಅಡಾಡಿ, ದ್ವಿತೀಯ ಸ್ಥಾನವನ್ನು ಹುಬ್ಬಳ್ಳಿ ವಿದ್ಯಾನಗರದ ಜಿ.ಜಿ.ಕಾಲೇಜು ಆಫ್ ಕಾಮರ್ಸ್‍ನ ವಿದ್ಯಾರ್ಥಿನಿ ಶ್ರೇಯಾ ರಾಯಚೂರ ಮತ್ತು ತೃತೀಯ ಸ್ಥಾನವನ್ನು ಧಾರವಾಡ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿನ ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಅಂಗಡಿ ಪಡೆದುಕೊಂಡರು.
ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕಲಘಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಬಮ್ಮಿಗಟ್ಟಿ, ದ್ವಿತೀಯ ಸ್ಥಾನವನ್ನು ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ.ಬಿ. ಮತ್ತು ತೃತೀಯ ಸ್ಥಾನವನ್ನು ಧಾರವಾಡ ಎಸ್.ಸಿ.ಎಂ.ಎಸ್. ಪದವಿ ಕಾಲೇಜಿನ ವಿದ್ಯಾರ್ಥಿ ಸಾಯಿರಾಜ ನೇಸರೇಕರ ಅವರು ಪಡೆದಿದ್ದಾರೆ. ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಲಬಳಗ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಚರಕದಿಂದ ಹತ್ತಿಯ ನೂಲು ತಗೆಯುವ ಕಾರ್ಯಮಾಡಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಕಾರ್ಯಕ್ರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗಾಂಧಿವಾದಿಗಳು ಹಾಗೂ ಗಾಂಧಿ ಅನುಯಾಯಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು.
#Gandhiji #icon #country #remembers #PralhadJoshi #malgudiexpress #malgudinews #news #TopNews
#🌼 ಗಾಂಧಿ ಜಯಂತಿ 🌼
ಗಾಂಧೀಜಿಯವರ ಧೈರ್ಯ ಎಲ್ಲರಿಗೂ ಮಾದರಿ: ಲಕ್ಷ್ಮಿ ಪ್ರಿಯಾ
ಕಾರವಾರ: ಮಹಾತ್ಮ ಗಾಂಧೀಜಿಯವರು ಬ್ರಿಟೀಷರ ವಿರುದ್ಧ ಧೈರ್ಯವಾಗಿ ಎದುರು ನಿಂತು ಇಡೀ ಭಾರತವನ್ನು ಒಂದುಗೂಡಿಸಿ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು, ಅನ್ಯಾಯದ ವಿರುದ್ಧ ಏಕಾಂಗಿಯಾಗಿ ದನಿಯೆತ್ತುವ ಅವರ ಧೈರ್ಯದ ಗುಣ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಹೇಳಿದರು.
ನಗರಸಭೆಯ ಮಹಾತ್ಮ ಗಾಂಧೀ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಗರಸಭೆ ಕಾರವಾರ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರಲ್ಲಿದ್ದ ಪ್ರಾಮಾಣಿಕತೆಯ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಹಿಂಸೆಯ ಮೂಲಕ ಏನು ಬೇಕಾದರು ಸಾಧಿಸಬಹುದು ಎಂದು ಇಡೀ ಜಗತ್ತಿಗೆ ತಿಳಿಸಿದ ಮಹಾನ್ ಚೇತನ ಗಾಂಧೀಜಿ. ಅವರ ಅಹಿಂಸೆಯ ತತ್ವದ ಪಾಲನೆ ಇಂದು ಇಡೀ ವಿಶ್ವಕ್ಕೆ ಅಗತ್ಯವಿದೆ. ಸರಳ ವ್ಯಕ್ತಿತ್ವ ಹೊಂದಿದ್ದ ಗಾಂಧೀಜಿ ಅವರ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ತಿಳಿಸಬೇಕು, ಸಮಾಜದಲ್ಲಿ ಬದಲಾವಣೆ ಮಾಡಲು ದೊಡ್ಡ ಕೆಲಸಗಳನ್ನು ಮಾತ್ರ ಮಾಡಬೇಕಾದ ಅಗತ್ಯವಿಲ್ಲ ಬದಲಾಗಿ ಸಮಾಜಮುಖಿಯಾದ ಸಣ್ಣ ಸಣ್ಣ ಕಾರ್ಯಗಳ ಮೂಲಕ ಕೂಡ ಉತ್ತಮ ಬದಲಾವಣೆ ತರಲು ಸಾಧ್ಯ ಎಂಬುದನ್ನು ಗಾಂಧೀಜಿ ತಿಳಿಸಿದ್ದು, ಅವರ ತತ್ವ ಮತ್ತು ಸಂದೇಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ದೀಲಿಷ್ ಶಶಿ ಮಾತನಾಡಿ, ಗಾಂಧೀಜಿ ಅವರು ನನ್ನ ಜೀವನವೇ ನನ್ನ ಸಂದೇಶ ಎಂಬುದಕ್ಕೆ ಪೂರಕವಾಗಿ ಅವರ ತತ್ವಗಳನ್ನು ಜೀವನ ಪರ್ಯಾಂತ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸರಳ ವ್ಯಕ್ತಿತ್ವದ ನಾಯಕ. ದೇಶದ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಲಿಪ್ ಎಂ. ಎನ್ ಮಾತನಾಡಿ, ಗಾಂಧೀಜಿ ಅವರು ರಾಜಕೀಯ, ಧಾರ್ಮಿಕ ವಿಷಯಗಳು ಹಾಗೂ ಪರಿಸರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅವರ ಅಚಾರ ವಿಚಾರಗಳು ಎಲ್ಲ ಕಾಲ ಘಟ್ಟಗಳಿಗೂ ಪ್ರಸ್ತುತ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ ಅಕೋಲೇಕರ ಮಾತನಾಡಿ, ಗಾಂಧೀಜಿ ಅವರ ಬಗ್ಗೆ ತಿಳಿಯಬೇಕಾದ ಸಾಕಷ್ಟು ವಿಷಯಗಳಿದ್ದು, ಅವರು ಪ್ರತಿಪಾದಿಸಿದ ಜೀವನ ಮೌಲ್ಯಗಳು, ಸತ್ಯ, ಅಹಿಂಸೆ ಹಾಗೂ ಆತ್ಮಬಲದ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಿರುವುದು ಬಹಳಷ್ಟು ಇದೆ . ಸತ್ಯ, ಅಹಿಂಸೆ ಮತ್ತು ಶಾಂತಿ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕ ಗಾಂಧೀಜಿ ಅವರು ಎಂದರು.
ಗಾಂಧೀಜಿ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದ ಅಂಕೋಲಾದ ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಮೋಹನ್ ಹಬ್ಬು , ಗಾಂಧೀಜಿ ಅವರು ಏರಿದ ಎತ್ತರಕ್ಕೆ ಯಾವ ನಾಯಕರೂ ಇದುವರೆಗೆ ಏರಿಲ್ಲ, ಏರಲೂ ಆಗುವುದಿಲ್ಲ, ನನ್ನ ಜೀವನವೇ ನನ್ನ ಸಂದೇಶ ಎನ್ನುವ ಅರ್ಹತೆ ಇದ್ದ ಏಕೈಕ ವ್ಯಕ್ತಿ ಅವರು ಎಂದರು.
ಪ್ರಪಂಚದ 175 ದೇಶಗಳು ಅಂಚೆ ಚೀಟಿ ಹೊರ ತಂದಿವೆ, ಮರಣೋತ್ತರ ಗೌರವವಾಗಿ ವಿಶ್ವ ಸಂಸ್ಥೆ ತನ್ನೆಲ್ಲಾ ದೇಶಗಳ ಧ್ವಜಗಳನ್ನು ಅರ್ಧಕ್ಕಿಳಿಸಿದ ಜಗತ್ತಿನ ಏಕೈಕ ನಾಯಕರಾಗಿದ್ದಾರೆ. ಅಹಿಂಸಾ ತತ್ವವನ್ನು ಪಾಲಿಸಿದ ಗಾಂಧೀಜಿ ಯಾರನ್ನೂ ದ್ವೇಷಿಸಲಿಲ್ಲ, ಸ್ವಾವಲಂಬನೆಗೆ ಒತ್ತು ನೀಡಿದ್ದ ಅವರು ಒಬ್ಬ ಸಂತರಾಗಿದ್ದರು, ಆಧ್ಯಾತ್ಮಿಕ ಸಾಧಕರಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿಲಾದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ದಿಶಾ. ಜೆ, ದೀಕ್ಷಾ ಮಂಜುನಾಥ ನಾಯ್ಕ, ಅಲೇಖಾ ಎಂ ನಾಯ್ಕ, ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ಸೃಷ್ಟಿ ಆರ್ ಪಟಗಾರ, ನಯನಾ ಕೃಷ್ಣಾ ಗೌಡ, ಸಂಜನಾ ಭಾಸ್ಕರ ನಾಯ್ಕ, ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಕಿರಣ ಧುಮಾಲಿ, ಅಂಕಿತಾ ಡಿ ದಳವಿ, ರಕ್ಷಿತಾ ಆರ್ ಗೌಡ, ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ತರಬೇತಿ ನಿರತ ಐಎಎಸ್ ಅಧಿಕಾರಿ, ಝೂಪೀಶನ್ ಹಕ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ನಗರಸಭೆಯ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ಹಿರಿಯ ಆರೋಗ್ಯ ನಿರೀಕ್ಷ ಯಾಕುಬ್ ಶೇಖ್, ನಗರಸಭೆ ವ್ಯವಸ್ಥಾಪಕ ಎನ್.ಎಂ ಮೆಸ್ತ ಹಾಗೂ ನಗರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಗಾಂಧೀ ಭಜನೆಗಳ ಕಾರ್ಯಕ್ರಮ ನಡೆಯಿತು, ನಂತರ ಎಂಜಿ ರಸ್ತೆಯಲ್ಲಿ ಶ್ರಮದಾನ ನಡೆಸಲಾಯಿತು.
#Gandhiji #courage #example #everyone #LakshmiPriya #malgudiexpress #malgudinews #news #TopNews