#📜ಪ್ರಚಲಿತ ವಿದ್ಯಮಾನ📜
ಚಿತ್ರದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ
100ಕ್ಕೂ ಹೆಚ್ಚು ಕಂಪನಿಗಳು ಭಾಗಿ
ಯುವನಿಧಿ ಫಲಾನುಭವಿಗಳ ಕಡ್ಡಾಯ ನೊಂದಣಿಗೆ ಸಿಇಓ ಡಾ.ಆಕಾಶ್ ಸೂಚನೆ
ಚಿತ್ರದುರ್ಗ: ಫೆಬ್ರವರಿ 01 ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಯುವನಿಧಿಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಜಿಲ್ಲೆಯ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ನೊಂದಣಿ ಮಾಡಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜರುಗಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಫೆ. 01 ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ಸುಮಾರು 1,800 ಅಭ್ಯರ್ಥಿಗಳು ಈಗಾಗಲೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಉದ್ಯೋಗ ಮೇಳದಲ್ಲಿ 7,500 ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಐಟಿ, ಬಿಟಿ, ಮೆಕ್ಯಾನಿಕಲ್, ಆಟೋಮೊಬೈಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 100 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಬಿ.ಇ ಪದವೀಧರರಿಗಾಗಿ ಪ್ರತಿಷ್ಠಿತ ಐಟಿ ಕಂಪನಿಗಳು ಸಹ ಈ ಬಾರಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ ಹಾಗೂ ಇತರೆ ಯಾವುದೇ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ಅಭ್ಯರ್ಥಿ ಕನಿಷ್ಠ 05 ರಿಂದ 06 ರೆಸ್ಯೂಮ್ ಪ್ರತಿ ಹಾಗೂ ಪೂರಕ ದಾಖಲೆಗಳೊಂದಿಗೆ ಹಾಜರಾಗಬೇಕು. ಈಗಾಗಲೇ ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದ 967ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನೊಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಡಿಪೆÇ್ಲಮೋ ಹಾಗೂ ಐಟಿಐ ಪೂರೈಸಿದ 1,500 ವಿದ್ಯಾರ್ಥಿಗಳು ಇದ್ದಾರೆ. ಇದರೊಂದಿಗೆ ಯುವನಿಧಿ ಯೋಜನೆಯಡಿ 5,034 ಫಲಾನುಭವಿಗಳು ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಕಡ್ಡಾಯವಾಗಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ಎಲ್ಲಾ ಅಧಿಕಾರಿಗಳು ಸಂಘಟಿತವಾಗಿ ಪ್ರಯತ್ನಿಸಿ ಪ್ರತಿ ಅಭ್ಯರ್ಥಿಗಳಿಗೂ ವೈಯಕ್ತಿಕವಾಗಿ ಕರೆ ಮಾಡಿ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಬೇಕು ಎಂದು ತಿಳಿಸಿದರು.
ನೆರೆ ಜಿಲ್ಲೆಗಳ ಕಂಪನಿಗಳಿಗೂ ಆಹ್ವಾನ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಗಡಿ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ಚಿತ್ರದುರ್ಗ ಮಾತ್ರವಲ್ಲದೆ ತುಮಕೂರು, ಶಿವಮೊಗ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಮೇಳದಲ್ಲಿ ಅಭ್ಯರ್ಥಿಗಳ ವಿದ್ಯಾರ್ಹತೆ ಆಧಾರಿಸಿ ಕಂಪನಿಗಳನ್ನು ಶಿಫಾರಸ್ಸು ಮಾಡಲು 8 ರಿಂದ 10 ಕೌಂಟರ್ ಗಳನ್ನು ತೆರೆಯಲಾಗುವುದು. ಸುಮಾರು 25 ಕೊಠಡಿಗಳಲ್ಲಿ ಉದ್ಯೋಗದಾತ ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಲಿಸಲಾಗುವುದು ಎಂದು ಹೇಳಿದರು.
ವ್ಯಾಪಕ ಪ್ರಚಾರಕ್ಕೆ ಸೂಚನೆ: ಉದ್ಯೋಗ ಮೇಳದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಪಾಲ್ಗೊಳ್ಳುವಂತೆ ಮಾಡಲು ಸರಳವಾದ ಆನ್ಲೈನ್ ನೊಂದಣಿ ಪ್ರಕ್ರಿಯೆ ಮಾಡಲಾಗಿದೆ. ಗೂಗಲ್ ಫಾರ್ಮ್ ನಲ್ಲಿ ನೊಂದಣಿಗೆ ಕ್ಯೂಆರ್ ಕೋಡ್ ರೂಪಿಸಿ, ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಮೇಳ ಕುರಿತು ಜಿಲ್ಲೆಯ ಎಲ್ಲ 189 ಗ್ರಾಮ ಪಂಚಾಯತಿಗಳೂ ಸೇರಿದಂತೆ ಎಲ್ಲ ನಗರ, ಪಟ್ಟಣ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವಚ್ಛ ವಾಹಿನಿ ವಾಹನಗಳಲ್ಲಿ ಜಿಂಗಲ್ ಪ್ರಸಾರ ಮಾಡುವ ಮೂಲಕ ಪ್ರಚಾರ ಕೈಗೊಳ್ಳಬೇಕು. ಎಲ್ಲ ಐಟಿಐ, ಡಿಪ್ಲೋಮಾ, ಪದವಿ, ಇಂಜಿನಿಯರಿಂಗ್ ಸೇರಿದಂತೆ ತಾಂತ್ರಿಕ ಶಿಕ್ಷಣದ ಕಾಲೇಜುಗಳ ಮುಖ್ಯಸ್ಥರ ಮೂಲಕ ವಿದ್ಯಾರ್ಥಿಗಳಿಗೆ ಸಂದೇಶ ತಲುಪಿಸುವ ಕಾರ್ಯ ಮಾಡಬೇಕು. ಉದ್ಯೋಗ ಮೇಳ ಸಂದರ್ಭದಲ್ಲಿ ಸರ್ಕಾರಿ ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜು ಸಿಬ್ಬಂದಿಗಳನ್ನು ಕಂಪನಿಗಳು ಸಂದರ್ಶನ ನಡೆಸುವ ಕೊಠಡಿಗಳಿಗೆ ಮೇಲ್ವಿಚಾರಣೆಗಾಗಿ ನಿಯೋಜಿಸಬೇಕು. ಹೆಚ್ಚು ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳು ಸಮನ್ವಯದೊಂದಿಗೆ ನೊಂದಣಿ ಮಾಡಿಸುವ ಕಾರ್ಯ ಮಾಡಬೇಕು. ಉದ್ಯೋಗ ಮೇಳ ನಡೆಯುವ ಸ್ಥಳದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಗೊಂದಲಕ್ಕೆ ಅವಕಾಶಗದ ರೀತಿಯಲ್ಲಿ ಅಚ್ಚುಕಟ್ಟಾಗಿ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದು ಜಿಪಂ ಸಿಇಒ ಆಕಾಶ್ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಉಪನಿರ್ದೇಶಕ ಮಂಜುನಾಥ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ, ಉದ್ಯೋಗಾಧಿಕಾರಿ ರವೀಂದ್ರ, ಜಿಟಿಟಿಸಿ ಪ್ರಾಂಶುಪಾಲ ಸುಹಾಸ್, ಕಾರ್ಮಿಕ ಅಧಿಕಾರಿ ಅನಿಲ್ ಬಗಟೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ, ಸಹಾಯಕ ಸಾಂಖ್ಯಿಕ ಅಧಿಕಾರಿ ವೇಮಣ್ಣ.ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
#Huge #job #fair #employment #Chitradurga #malgudiexpress #malgudinews #news #TopNews
#🙏ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ🇮🇳
ಅಹಿಂಸೆಯ ಹರಿಕಾರ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
ಸತ್ಯ, ಅಹಿಂಸೆ ಮತ್ತು ಸ್ವರಾಜ್ಯದ ತತ್ವಗಳ ಮೂಲಕ ವಿಶ್ವಕ್ಕೇ ಮಾದರಿಯಾದವರು ಮಹಾತ್ಮ ಗಾಂಧೀಜಿ. ಅವರ 'ಗ್ರಾಮ ಸ್ವರಾಜ್ಯ'ದ ಕನಸು ಕೇವಲ ಹಕ್ಕುಗಳ ಹೋರಾಟವಾಗಿರಲಿಲ್ಲ; ಅದು ನಮ್ಮ ಹಳ್ಳಿಗಳ ಸ್ವಾವಲಂಬನೆ ಮತ್ತು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯ ಸಂಕೇತವಾಗಿತ್ತು.
ಇಂದು ನಾವು ಕೈಗೆತ್ತಿಕೊಂಡಿರುವ 'ಸ್ವರಾಜ್' ಅಭಿಯಾನದ ಮೂಲಕ ಅವರ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಊರಿನ ಸ್ವಚ್ಛತೆ, ಸ್ಥಳೀಯ ಸಂಪನ್ಮೂಲಗಳ ಬಳಕೆ ಮತ್ತು ಸಮುದಾಯದ ಸಹಭಾಗಿತ್ವವೇ ಗಾಂಧೀಜಿಯವರಿಗೆ ನಾವು ಸಲ್ಲಿಸುವ ನಿಜವಾದ ಗೌರವ.
ಬನ್ನಿ, ಗಾಂಧೀಜಿಯವರ ತತ್ವಗಳ ಹಾದಿಯಲ್ಲಿ ಸಾಗುತ್ತಾ, ಸುಂದರ ಮತ್ತು ಸ್ವಾವಲಂಬಿ ಸಮಾಜವನ್ನು ಕಟ್ಟೋಣ.
- ದರ್ಶನ್ ಪುಟ್ಟಣ್ಣಯ್ಯ, ಶಾಸಕ
#MahatmaGandhi #MartyrsDay #Swarajya #DarshanPuttannaiah #Melukote #Gramaswarajya #NonViolence #Peace #India #malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
ಪೊಲೀಸರ ಅತಿಥಿಯಾದ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಕಳ್ಳ
ಬೆಂಗಳೂರು: ತಮ್ಮ ಹೆಂಡತಿಯನ್ನು ಅಕ್ಕ ಎಂದು ಪರಿಚಯಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಐನಾತಿ ಕಳ್ಳ ಇದೀಗ ಪೊಲೀಸರ ಅತಿಥಿಯಾಗಿದ್ದು ವಿಚಾರಣೆ ವೇಳೆ ಅನೇಕ ವಿಷಯ ತಿಳಿಸಿದ್ದಾನೆ.
ಮಾಜಿ ಸಂಸದ ಡಿ ಕೆ ಸುರೇಶ್ ಅವರ ಸಂಬಂಧಿ ಹಾಗೂ ಆಪ್ತ ಎಂದು ನಂಬಿಸಿ ಕೋಟ್ಯಾಂತರ ರೂಪಾಯಿ ವಂಚಿಸಿ ಪರಾರಿ ಆಗುತ್ತಿದ್ದ ಈತ ವಿಚಾರಣೆ ವೇಳೆ ನೀಡಿದ ಮಾಹಿತಿ ಕೇಳಿ ಪೊಲೀಸರೇ ಆಶ್ಚರ್ಯಪಟ್ಟಿದ್ದಾರೆ.
ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬರು ನೀಡಿದ ದೂರಿನ ಅನ್ವಯ ಕೆಲವು ದಿನಗಳ ಹಿಂದೆ ಕಾಡುಗೋಡಿ ಠಾಣೆಯಲ್ಲಿ ವಿಜಯ್ ರಾಜ್ ಗೌಡ ಸೇರಿ ಆತನ ಇಡೀ ಕುಟುಂಬದ ವಿರುದ್ಧ ಕೇಸ್ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಆಸಾಮಿ ಮ್ಯಾಟ್ರಿಮೋನಿಯಲ್ಲಿ ಮೋಸ ಮಾಡಿರುವುದು ಇದೇ ಮೊದಲಲ್ಲ ಎಂಬುದು ಗೊತ್ತಾಗಿದೆ. ಕಳೆದ 2019 ರಿಂದಲೂ 2026 ರ ವರೆಗೆ ಹಲವಾರು ಯುವತಿಯರಿಗೆ ಮೋಸ ಮಾಡಿದ್ದು, ಕಂಡುಬಂದಿದೆ.
2019 ರಲ್ಲಿ ಕುಣಿಗಲ್ನಲ್ಲಿ, 2022 ರಲ್ಲಿ ಅತ್ತಿಬೆಲೆಯಲ್ಲಿ 2023 ರಲ್ಲಿ ಶಿವಮೊಗ್ಗ, 2025 ರಲ್ಲಿ ಬೆಂಗಳೂರು, 2026 ರಲ್ಲಿ ಕಾಡುಗೋಡಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಆದ ನಂತರ, ‘ನಾನು ದೊಡ್ಡ ಉದ್ಯಮಿ, ಇಡಿಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ನನಗೆ ಸೇರಿದ ಅಪಾರ ಪ್ರಮಾಣದ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಹಣವನ್ನು ಬಿಡಿಸಲು ಸ್ವಲ್ಪ ಹಣ ಬೇಕಾಗಿದೆ’ ಎಂದು ಹೇಳಿ ಮದುವೆಯಾಗಲು ಬಯಸುತ್ತಿದ್ದ ಯುವತಿಯರನ್ನು ನಂಬಿಸುತ್ತಿದ್ದ.
ಲಕ್ಷ ಲಕ್ಷ ಹಣ ಬ್ಯಾಂಕ್ನಲ್ಲಿ ಫ್ರೀಜ್ ಆಗಿರುವುದಕ್ಕೆ ಬೇಕಾದ ನಕಲಿ ದಾಖಲೆಗಳನ್ನು, ಕೋರ್ಟ್ ಪ್ರತಿಗಳನ್ನು ತೋರಿಸಿ ಹಣ ಪಡೆದುಕೊಂಡು ನಂತರ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ.
ಹೀಗೆ ಒಬ್ಬೊಬರಿಂದ 10 ಲಕ್ಷ, 30 ಲಕ್ಷ, 13 ಲಕ್ಷ ಪಡೆದಿದ್ದಾನೆ. ಕೆಂಗೇರಿಯಲ್ಲಿ 1.53 ಕೋಟಿ ರೂ. ಹಣ ಪಡೆದುಕೊಂಡು ಹೆಂಡತಿಯನ್ನು ಅಕ್ಕ ಎಂದು ಪರಿಚಯ ಮಾಡಿಕೊಟ್ಟಿದ್ದ. ಈ ಆರೋಪಿ ಟೆಂಡರ್ ಕೊಡಿಸುವ ಡೀಲ್ನಲ್ಲಿ ಕುಣಿಗಲ್ನಲ್ಲಿ ಮಾಜಿ ಸಂಸದ ಡಿ ಕೆ ಸುರೇಶ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಇದೆ. ಡಿ ಕೆ ಸುರೇಶ್ ನನಗೆ ಆಪ್ತರು ಎಂದು ಹೇಳಿಕೊಂಡು ಟೆಂಡರ್ ಕೊಡಿಸುವುದಾಗಿ ನಂಬಿಸಿದ್ದ.
ಟಾಟಾ ಪವರ್ ಡಿಡಿಎಲ್ ಕಂಪನಿಗೆ ವಾಹನದ ಗುತ್ತಿಗೆ ಕೊಡಿಸುವುದಾಗಿ ಕೂಡ ಹೇಳಿದ್ದ. 2019ರಲ್ಲಿ ಕುಣಿಗಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಾಜೆಕ್ಟ್ ಕೊಡಿಸುವುದಕ್ಕೆ ನಕಲಿ ಸಹಿ ಸೀಲ್ ರೆಡಿ ಉಪಯೋಗಿಸಿಕೊಂಡು ವಂಚಿಸಿದ್ದ.
ಆನೇಕಲ್ನಲ್ಲಿ ಸಿಮೆಂಟ್ ಫ್ಯಾಕ್ಟರಿಯನ್ನು ಮಾರಾಟ ಮಾಡಿ ಹಣ ಪಾವಸ್ ಕೊಡುತ್ತೇನೆ ಎಂದು ನಂಬಿಸಿ ಯುವತಿಗೆ ಮೋಸ ಮಾಡಿದ್ದ. ಆರೋಪಿ ವಿರುದ್ಧ ಶಿವಮೊಗ್ಗ, ಆನೇಕಲ್, ಅತ್ತಿಬೆಲೆ, ಬೆಂಗಳೂರು ಉತ್ತರ ವಿಭಾಗದ ಸೆನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹೀಗೆ ಕಳೆದ ಕೆಲವು ವರ್ಷಗಳಿಂದ ಮೋಸ, ವಂಚನೆ ಮಾಡಿಕೊಂಡು ಜೀವನ ನಡೆಸುತ್ತಿರುವ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
#Thief #stole #crores #rupees #become #police #guest #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸೂರು ಕೊಟ್ಟ ಸಿದ್ದರಾಮಯ್ಯನವರ ಸರ್ಕಾರ
ಕಾಂಗ್ರೆಸ್ ಪಕ್ಷ ಬಡವರ ಬಗ್ಗೆ ಕೇವಲ ಮಾತನಾಡುವುದಿಲ್ಲ, ಕೆಲಸವನ್ನ ಮಾಡಿ ತೋರಿಸುತ್ತೇವೆ ಎನ್ನುವುದಕ್ಕೆ ಹುಬ್ಬಳ್ಳಿಯಲ್ಲಿ 42,000ಕ್ಕೂ ಹೆಚ್ಚು ಮನೆಗಳನ್ನ ಹಂಚಿಕೆ ಮಾಡಿದ ಕಾರ್ಯಕ್ರಮವೇ ಸಾಕ್ಷಿಯಾಗಿದೆ.
ಪ್ರಧಾನ ಮಂತ್ರಿ ಅವಾಜ್ ಯೋಜನೆ ಅಡಿಯಲ್ಲಿ ಕೇವಲ 1,50,000 ಕೊಟ್ಟು ದೇಶದ ಎಲ್ಲರಿಗೂ ನಾನು ವಸತಿ ಕೊಟ್ಟೆನೆಂದು ವೇದಿಕೆಗಳ ಮೇಲೆ ಅಬ್ಬರಿಸಿ ಮಾತನಾಡುವಾಗ ಬಿಜೆಪಿಯವರಿಗೆ ಹುಬ್ಬಳ್ಳಿಯ ಕಾರ್ಯಕ್ರಮ ಸಹಿಸಿಕೊಳ್ಳಲಾಗದ ಕಾರ್ಯಕ್ರಮವಾಗಿದೆ.
ಕೇಂದ್ರ ಸರ್ಕಾರ ಒಂದುವರೆ ಲಕ್ಷ ರೂಪಾಯಿ ನೀಡಿದರೆ ರಾಜ್ಯ ಸರ್ಕಾರ ಸಾಮಾನ್ಯ ಜನರಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಎರಡು ಲಕ್ಷ ರೂಪಾಯಿಗಳನ್ನು ಈ ಮನೆಗಳಿಗೆ ನೀಡುತ್ತಿದ್ದರು ಕೊಟ್ಟು ಏಳು ಲಕ್ಷ ರೂಪಾಯಿಗಳ ಮೊತ್ತದ ಈ ಮನೆಗಳಿಗೆ ಫಲಾನುಭವಿಗಳು ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಂಡು ಅದನ್ನು ತೀರಿಸಬೇಕಾಗಿತ್ತು.
ಬಡವರ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಸರ್ಕಾರ ಶ್ರೀ ಸಿದ್ದರಾಮಯ್ಯನವರು ಮತ್ತು ಡಿ ಕೆ ಶಿವಕುಮಾರ್ ಅವರು ಸಂಪುಟದಲ್ಲಿ ನಿರ್ಧಾರವನ್ನು ಮಾಡಿ ವಸತಿ ಸಚಿವರಾದ ಜಮೀರ್ ಅಹ್ಮದ್ ರವರ ಬಯಕೆಯಂತೆ ಬಡವರಿಗೆ ಕೊಡುವಂತಹ ಈ ಮನೆಗಳಿಗೆ ಸರ್ಕಾರವೇ ಸಂಪೂರ್ಣವಾಗಿ ಹಣವನ್ನು ಪಾವತಿಸಿ ಇದರ ಹೊರೆಯನ್ನು ಸರ್ಕಾರವೇ ಹೊತ್ತುಕೊಂಡು ಬಡವರಿಗೆ ಸೂರು ನೀಡಿದ್ದಾರೆ. ಈ ಹಿಂದೆ 33,000 ಮನೆಗಳನ್ನು ಮೊದಲ ಹಂತದಲ್ಲಿ ಇದೀಗ 42,000ಕ್ಕೂ ಹೆಚ್ಚು ಮನೆಗಳನ್ನು ಎರಡನೇ ಹಂತದಲ್ಲಿ ನೀಡುವುದರ ಮೂಲಕ ಕರ್ನಾಟಕದಲ್ಲಿ ವಸತಿ ಕ್ರಾಂತಿಯನ್ನು ಮಾಡಿರುತ್ತಾರೆ.
ಐದು ಗ್ಯಾರೆಂಟಿಗಳಿಗೆ ಪ್ರತಿ ವರ್ಷ ಸುಮಾರು 55,000 ಕೋಟಿ ರೂಪಾಯಿಗಳ ನೀಡಿ ಜೊತೆಗೆ ಬಡವರ ಈ ಮನೆಗಳಿಗೆ ಏಳು ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರದಿಂದ ನೀಡಿ ಬಡವರಿಗೆ ಮನೆಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ವಸತಿ ಸಚಿವರಾದ ಜಮೀರ್ ರವರಿಗೆ ಬಡವರ ಬಗ್ಗೆ ಕಾಳಜಿ ಇದೆಯೋ ಅಥವಾ ಧರ್ಮ ಧರ್ಮಗಳ ನಡುವೆ ಸಂಘರ್ಷದ ಮಾತುಗಳನ್ನ ಆಡುತ್ತಾ ಸದಾ ಅಬ್ಬರಿಸಿ ಮಾತನಾಡುವ ಬಿಜೆಪಿಯವರ ಮಾತುಗಳಲ್ಲಿ ಬಡವರ ಬಗ್ಗೆ ಬದ್ಧತೆ ಇದೆಯೋ ಎನ್ನುವುದನ್ನು ಜನರು ಆಲೋಚಿಸಬೇಕಾಗಿದೆ.
2013ರಿಂದ ಎರಡು ಸಾವಿರದ ಹದಿನೆಂಟರ ಅವಧಿಯಲ್ಲಿ ಸುಮಾರು 14 ಲಕ್ಷ ಮನೆಗಳನ್ನು ವಸತಿ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ನೀಡಿದ್ದ ನಮ್ಮ ಸರ್ಕಾರ ಈಗ 1,80,000 ಮನೆಗಳನ್ನು ಬಡವರಿಗೆ ನೀಡಲು ನಿರ್ಧರಿಸಿ ಹಂತ ಹಂತವಾಗಿ ಯೋಜನೆಗಳನ್ನ ಪೂರೈಸಿ ಈಗ ಸುಮಾರು 75,000 ಮನೆಗಳನ್ನು ಹಂಚುವುದರ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡು ಬಡವರ ಬದುಕಿಗೆ ಸೂರನ್ನು ನೀಡಿ ಸಿದ್ದರಾಮಯ್ಯನವರು ಸೂರಪ್ಪ ನಾಗಿದ್ದಾರೆ.
ಕೆಲಸ ಮಾಡುವ ವ್ಯಕ್ತಿ ಯಾವ ಧರ್ಮದವರಾದರೇನು ಮಾನವೀಯತೆಯಿಂದ ದುಡಿಯುವ ವ್ಯಕ್ತಿ ಯಾವ ಬಣ್ಣದವರಾದರೇನು ಎನ್ನುವುದಕ್ಕೆ ಜಮೀರ್ ಅಹ್ಮದ್ ರವರು ಕಾರಣರಾಗಿದ್ದಾರೆ. ಅವರು ತಮ್ಮ ಇಲಾಖೆಯನ್ನು ಅತ್ಯಂತ ಚುರುಕುತನದಿಂದ ನಿರ್ವಹಿಸುತ್ತಾ ಬಡವರ ವಿಚಾರದಲ್ಲಿ ಕಾಳಜಿಯಿಂದ ದುಡಿಯುತ್ತಿದ್ದಾರೆ. ಅದಕ್ಕಾಗಿ ಅವರಿಗೆ ವಿಶೇಷವಾದ ಕೃತಜ್ಞತೆಗಳು. ಜೊತೆಗೆ ಕೊಳಚೆ ಅಭಿವೃದ್ಧಿ ಮಂಡಳಿ ಎಂಬ ಒಂದು ಸಂಸ್ಥೆ ಇದೆ ಎನ್ನುವುದನ್ನು ಇದರ ಅಧ್ಯಕ್ಷರಾಗಿರುವ ಪ್ರಸಾದ್ ಅಬ್ಬಯ್ಯ ರವರು ತೋರಿಸಿಕೊಟ್ಟಿದ್ದಾರೆ. ಅವರಿಗೂ ಅಭಿನಂದನೆಗಳು.
- ಕೆ ಎಸ್ ನಾಗರಾಜ್, ಬೆಂಗಳೂರು
#Siddaramaiah #govt #provide #house #ksnagaraj #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಜಾರಿಗೊಂಡ ಸಂಹಿತೆಗಳು ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಲಿವೆ: ಮೀನಾಕ್ಷಿ ಸುಂದರಂ
ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ವಿರೋಧಿ ಸಂಹಿತೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳಲು ಸಂಚು ರೂಪಿಸಿದೆ. ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡಲು ಶ್ರಮಜೀವಿಗಳ ರಕ್ತ ಹೀರಲು ಸನ್ನದ್ದವಾಗಿದೆ. ಈ ಹಿನ್ನೆಲೆಯಲ್ಲಿ ಜಾರಿಗೊಂಡ 4 ಸಂಹಿತೆಗಳು ಕಾರ್ಮಿಕರ ಪಾಲಿಗಂತೂ ಮರಣ ಶಾಸನವಾಗಲಿವೆ ಎಂದು CITU ಕರ್ನಾಟಕ ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕ ಸಂಹಿತೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಕಳೆದ 4 ದಿನಗಳಿಂದ ದ.ಕ.ಜಿಲ್ಲೆಯಾದ್ಯಂತ ಸಂಚರಿಸಿದ ಪಾದಯಾತ್ರೆಗಳು ಇಂದು ಮಂಗಳೂರಿನ ಹೃದಯಭಾಗದಲ್ಲಿ ಸಮಾಪನಗೊಂಡಿದ್ದು,ಅದರ ಭಾಗವಾಗಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಜನದ್ರೋಹಿ ಸಂಹಿತೆಗಳನ್ನು ಜಾರಿಗೊಳಿಸಿದರೆ, ರಾಜ್ಯದ ಕಾಂಗ್ರೆಸ್ ಸರಕಾರ ಕೂಡ ಅದಕ್ಕೆ ಪೂರಕವಾಗಿ ಕರಡು ನಿಯಮಾವಳಿಗಳನ್ನು ರೂಪಿಸಲು ಹೊರಟಿರುವ ಮೂಲಕ ಕಾರ್ಮಿಕ ವರ್ಗದ ವಿರುದ್ದ ದ್ವೇಷ ಸಾಧಿಸುವುದರಲ್ಲಿ ಬಿಜೆಪಿ ಕಾಂಗ್ರೆಸ್ ಒಂದೇ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ ಎಂದರು.
ಬೀಜ ಮಸೂದೆ,ವಿದ್ಯುತ್ ಮಸೂದೆಗಳಂತಹ ಕರಾಳ ಶಾಸನಗಳನ್ನು ಜಾರಿಗೆ ತರುವ ಮೂಲಕ ರೈತಾಪಿ ಜನತೆಯ ಬದುಕನ್ನು ಕೂಡ ದುಸ್ತರಗೊಳಿಸಿದೆ.ಉದ್ಯೋಗ ಖಾತ್ರಿ ಯೋಜನೆಯ ಹಣಕಾಸಿನ ಹೊರೆಯನ್ನು ರಾಜ್ಯ ಸರಕಾರಗಳ ಮೇಲೆ ವರ್ಗಾಯಿಸುವ ಮೂಲಕ ಗ್ರಾಮೀಣ ಜನತೆಯ ಉಸಿರಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನೇ ಕತ್ತು ಹಿಸುಕಿ ಸಾಯಿಸಲು ಹೊರಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶದ ಕಾರ್ಮಿಕ ವರ್ಗಕ್ಕೆ ಭಾರೀ ದ್ರೋಹವೆಸಗಿದೆ.ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನದ ಮೂಲಕ ಸಮರಶೀಲ ಹೋರಾಟ ನಡೆಸಿದ ದೇಶದ ಕಾರ್ಮಿಕ ವರ್ಗ ಇಂದು ಮತ್ತೆ ದೇಶದ ಉಳಿವಿಗಾಗಿ, ಜನತೆಯ ಬದುಕಿನ ರಕ್ಷಣೆಗಾಗಿ ಆಳುವ ವರ್ಗದ ಆಕ್ರಮಣಕಾರಿ ನೀತಿಗಳನ್ನು ರೈತಾಪಿ ಜನತೆಯ ಜೊತೆಗೂಡಿ ಹಿಮ್ಮೆಟ್ಟಿಸಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ CITU ದ.ಕ.ಜಿಲ್ಲಾಧ್ಯಕ್ಷ ಬಿ ಎಂ ಭಟ್ ಮಾತನಾಡಿ, ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ಸಂಪೂರ್ಣವಾಗಿ ಲೂಟಿ ಮಾಡಿ ಎಲ್ಲಾ ಕ್ಷೇತ್ರವನ್ನು ಕಾರ್ಪೊರೇಟ್ ಕಂಪೆನಿಗಳಿಗೊಪ್ಪಿಸಿದ ನರೇಂದ್ರ ಮೋದಿ ಸರಕಾರವು ಈಗ ಮತ್ತೆ ಜಾತಿ ಧರ್ಮದ ರಾಜಕಾರಣ ನಡೆಸಿ ದೇಶದ ಜನತೆಯನ್ನು ವಿಭಜಿಸುವ ಹುನ್ನಾರ ನಡೆಸುತ್ತಿದೆ. ಜನತೆ ತಮ್ಮ ಬದುಕಿನ ಬಗ್ಗೆ ಚಿಂತಿಸುವ ಬದಲು ಅನಾವಶ್ಯಕ ವಿಚಾರಗಳನ್ನು ಚರ್ಚಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ.ಸಂಹಿತೆಗಳ ಜಾರಿಯ ಮೂಲಕ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ ಎಂದರು.
ವೇದಿಕೆಯಲ್ಲಿ ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ವಸಂತ ಆಚಾರಿ, ಯಾದವ ಶೆಟ್ಟಿ, ಪದ್ಮಾವತಿ ಶೆಟ್ಟಿ, ರಮಣಿ ಮೂಡಬಿದ್ರೆ, CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ನೋಣಯ್ಯ ಗೌಡ ಹಾಜರಿದ್ದರು.
ಪ್ರಾರಂಭದಲ್ಲಿ ಅಗಲಿದ ಕಾರ್ಮಿಕ ಚಳುವಳಿಯ ಹಿರಿಯ ಚೇತನ, AITUC ರಾಜ್ಯ ನಾಯಕ ಅನಂತ ಸುಬ್ಬರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲೆಯಾದ್ಯಂತ 175 ಕಿ ಮೀ.ನಷ್ಟು ಕ್ರಮಿಸಿದ 4 ಪಾದಯಾತ್ರೆಗಳ ಪ್ರಮುಖ ನಾಯಕರಾದ ರಾಧಾ ಮೂಡಬಿದ್ರೆ, ನೋಣಯ್ಯ ಗೌಡ, ಬಿ ಕೆ ಇಮ್ತಿಯಾಜ್, ಈಶ್ವರಿ ಪದ್ಮುಂಜ, ರೋಹಿದಾಸ್, ರಮೇಶ್ ಉಳ್ಳಾಲ, ರವಿಚಂದ್ರ ಕೊಂಚಾಡಿ, ಜಯಶ್ರೀ, ಲೋಲಾಕ್ಷಿ ಬಂಟ್ವಾಳ, ಶ್ಯಾಮರಾಜ ಪಟ್ರಾಮೆ, ಪ್ರಮೋದಿನಿ ಕಲ್ಲಾಪು, ರಜಾಕ್ ಮುಡಿಪು, ಜಯಲಕ್ಷ್ಮಿ, ತಯ್ಯುಬ್ ಬೆಂಗರೆ, ಸಾಧಿಕ್ ಮುಲ್ಕಿ, ಶ್ರೀನಾಥ್ ಕಾಟಿಪಳ್ಳ, ಪ್ರಮೀಳಾ ಶಕ್ತಿನಗರರವರನ್ನು ಕೆಂಪು ಗುಲಾಬಿ ನೀಡುವ ಮೂಲಕ ಗೌರವಿಸಲಾಯಿತು. 4 ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಸಮಾಪನಗೊಂಡು,ಬಳಿಕ ಮೆರವಣಿಗೆಯ ಮೂಲಕ ಕ್ಲಾಕ್ ಟವರ್ ಬಳಿಯತ್ತ ಸಾಗಿತು.
#implemented #codes #deathsentence #workers #MeenakshiSundaram #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ರಾಹುಲ್ ಗಾಂಧಿ ಹೇಳಿರುವುದನ್ನು ಗಾಂಧೀಜಿ ಹೇಳಿದಂತೆ ಬಿಂಬಿಸಲಾಗಿದೆ: ಆರ್.ಅಶೋಕ
ಜನರ ತೆರಿಗೆ ಹಣ ದುರ್ಬಳಕೆ ಮಾಡಿದ ಕಾಂಗ್ರೆಸ್ ಸರ್ಕಾರ,
ಮಹಾತ್ಮ ಗಾಂಧೀಜಿಗೆ ಅಪಮಾನ: ವಿಪಕ್ಷ ನಾಯಕ ಆಕ್ರೋಶ
ಬೆಂಗಳೂರು: ವಿಬಿ ಜಿ ರಾಮ್ ಜಿ ಯೋಜನೆಗೆ ಸಂಬಂಧಿಸಿದಂತೆ ಮಹಾತ್ಮ ಗಾಂಧೀಜಿ ಹೇಳದೇ ಇರುವುದನ್ನು ಜಾಹೀರಾತಿನಲ್ಲಿ ಸೇರಿಸಿರುವ ಕಾಂಗ್ರೆಸ್ ಸರ್ಕಾರ, ಅವರ ಹೆಸರಿನಲ್ಲೇ ಪತ್ರಿಕೆಗಳಲ್ಲಿ ಪ್ರಕಟ ಮಾಡಿಸಿದೆ. ಇದಕ್ಕಾಗಿ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ತೆರಿಗೆ ಹಣದಲ್ಲಿ ಪಕ್ಷಕ್ಕೆ ಸಂಬಂಧಿಸಿದ ಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧವಾಗಿ ಮಾತಾಡುವ ಅಧಿಕಾರ ಯಾರಿಗೂ ಇಲ್ಲ. ಕಾಯ್ದೆಯ ಚರ್ಚೆಯ ಸಮಯದಲ್ಲಿ ಅದರ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬಹುದು. ಕಾಯ್ದೆ ಜಾರಿಯ ನಂತರ ಅದನ್ನು ಹೀಗೆ ಟೀಕೆ ಮಾಡುವ ನೈತಿಕತೆ ಇರುವುದಿಲ್ಲ. ಇದರಲ್ಲಿ ಮಹಾತ್ಮ ಗಾಂಧೀಜಿಯ ಪಾತ್ರವಿಲ್ಲದಿದ್ದರೂ, ಅವರ ಚಿತ್ರ ಬಳಸಿ ಜಾಹೀರಾತಿನಲ್ಲಿ ಅವರೇ ಮಾತನಾಡುವಂತೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ರಚಿಸಿದ್ದು, ಇನ್ನು ರದ್ದು ಮಾಡಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಇನ್ನು ಮುಂದೆ ಮನೆಹಾಳು ಕಾಂಗ್ರೆಸ್ಸಿಗರು ಬರಲಿದ್ದಾರೆ ಎಂದು ಅವರಿಗೆ ಮೊದಲೇ ಗೊತ್ತಿತ್ತು ಎಂದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಂಗ್ರೆಸ್ ಮುಖಂಡರು ಲೂಟಿ ಮಾಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಇದರಲ್ಲಿ ಲೂಟಿ ನಡೆಯುತ್ತಿದೆ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಅದನ್ನೇ ಹೇಳಿದ್ದರು. ಸಾವಿರಾರು ಕೋಟಿ ರೂ. ಬೋಗಸ್ ಬಿಲ್ ಮಾಡಿ ಲೂಟಿ ಮಾಡಿದ್ದಾರೆ ಎಂದು ಸಿಎಜಿ ವರದಿಯಲ್ಲೂ ಇದೆ. ಇದನ್ನು ತಡೆಯಲು ಪಾರದರ್ಶಕವಾದ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ರಾಹುಲ್ ಗಾಂಧಿ ಮಾತು ಕೇಳಿಕೊಂಡು ಜಾಹೀರಾತು ಪ್ರಕಟಿಸಿದೆ. ಜಾಹೀರಾತಿನಲ್ಲಿರುವ ಮಾತುಗಳನ್ನು ಗಾಂಧೀಜಿ ಎಂದೂ ಹೇಳಿಲ್ಲ. ಅದನ್ನು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಗಾಂಧೀಜಿಗೂ ಅಪಮಾನ ಮಾಡಲಾಗಿದೆ ಎಂದು ದೂರಿದರು.
ಮಹಾತ್ಮ ಗಾಂಧೀಜಿ ಹೇಳದೇ ಇರುವುದನ್ನು ಪ್ರಕಟ ಮಾಡಿದರೆ ಅದು ದೊಡ್ಡ ತಪ್ಪು. ಗಾಂಧೀಜಿ ಚಿತ್ರ ಬಳಸಲು ಅವರ ಕುಟುಂಬದವರು ಅಧಿಕಾರ ನೀಡಿಲ್ಲ. ಕಾನೂನು ಪ್ರಕಾರ ಗಾಂಧೀಜಿಯ ಚಿತ್ರ ಬಳಸಲು ಅವಕಾಶವೇ ಇಲ್ಲ. ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಮೋಜು ಮಸ್ತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸಿ ಹೋರಾಟ ಮಾಡುತ್ತದೆ ಎಂದರು.
#RahulGandhi #Speech #presented #Gandhiji #Statement #RAshoka #VBGRamG #MNREGA #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಮಾರುತಿ ಅಷ್ಟಗಿಯವರಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಬಹಿರಂಗ ಸವಾಲು
ಬನ್ನಿ 2028 ರ ಚುನಾವಣೆಗೆ…! ಎಂದು ಸವಾಲೆಸೆದ ಅರವಿಂದ್ ಕಾರ್ಚಿ
ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಮಾರುತಿ ಅಷ್ಟಗಿಗೆ ಬಹಿರಂಗ ಸವಾಲು
ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಅನಾವಶ್ಯಕ ಹೇಳಿಕೆಗಳನ್ನು ನೀಡುತ್ತಿರುವ ಮಾರುತಿ ಅಷ್ಟಗಿ ಅವರಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಸ್ಪಷ್ಟ ಮತ್ತು ನೇರ ಸವಾಲು ಒಡ್ಡಿದ್ದಾರೆ.
ಮೂರು ಬಾರಿ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಎದುರು ನಿಂತು ಜನರ ವಿಶ್ವಾಸ ಗಳಿಸಲು ವಿಫಲರಾದ ನೀವು, ಈಗಲೂ ಹಗುರ ಮಾತುಗಳಿಂದ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿರುವುದು ಕ್ಷೇತ್ರದ ಜನರಿಗೆ ಚೆನ್ನಾಗಿ ತಿಳಿದಿದೆ. ಮಾತಿನಲ್ಲಿ ಗೆಲ್ಲಬಹುದು ಅನ್ನೋ ಭ್ರಮೆ ಇದ್ದರೆ, ನೆಲಮಟ್ಟದ ಕೆಲಸ, ಜನಸೇವೆಯ ಸಾಧನೆಗಳೇನು ಎಂಬುದನ್ನೂ ಒಮ್ಮೆ ನೆನಪಿಸಿಕೊಳ್ಳಿ ಎಂದು ಅರವಿಂದ್ ಕಾರ್ಚಿ ಅವರು ಮಾರುತಿ ಅಷ್ಟಗಿ ಅವರಿಗೆ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಹೆಸರು, ಹುದ್ದೆ ಅಥವಾ ಪ್ರಚಾರದ ಆರ್ಭಟದಿಂದಲ್ಲ; ಜನರ ಬದುಕಿನ ಜೊತೆ ನಿಂತು, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣದಿಂದ ಕ್ಷೇತ್ರದ ಹೃದಯ ಗೆದ್ದ ನಾಯಕ. ಅದಕ್ಕೇ ಪ್ರತಿ ಚುನಾವಣೆಯಲ್ಲೂ ಜನರು ಸ್ಪಷ್ಟ ತೀರ್ಪು ನೀಡಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ ಹೇಳಿಕೆಗಳಲ್ಲೇ ರಾಜಕೀಯ ಮಾಡುವುದನ್ನು ಬಿಟ್ಟು, ಧೈರ್ಯವಿದ್ದರೆ 2028ರ ಚುನಾವಣೆಗೆ ಬನ್ನಿ. ಜನರ ನ್ಯಾಯಾಲಯದಲ್ಲಿ ಯಾರು ಬೇಕು, ಯಾರು ಬೇಡ ಅನ್ನೋದನ್ನು ಯಮಕನಮರಡಿಯ ಜನ ತೀರ್ಮಾನಿಸುತ್ತಾರೆ. ಮಾತಲ್ಲ, ಮತದಲ್ಲಿ ಉತ್ತರ ಸಿಗುತ್ತದೆ – 2028ಕ್ಕೆ ಕಾಯೋಣ! ಎಂದು ಮಾರ್ಮಿಕವಾಗಿ ಅರವಿಂದ ಕಾರ್ಚಿ ಕರೆನೀಡಿದ್ದಾರೆ.
#Open #challenge #MarutiAshtagi #SatishJarkiholi #fans #AravindKarchi #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ನೇಕಾರ ಸಮ್ಮಾನ್ ಯೋಜನೆಯ ನೆರವಿನ ಪ್ರಮಾಣ ಹೆಚ್ಚಳ ಪರಿಶೀಲನೆಯಲ್ಲಿದೆ: ಶಿವಾನಂದ ಪಾಟೀಲ
ಬೆಂಗಳೂರು: ನೇಕಾರ ಸಮ್ಮಾನ್ ಯೋಜನೆಯ ನೆರವಿನ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನೆರೆಯ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರ ನೀಡುತ್ತಿರುವ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದ ಯೋಜನೆಗಳು ಮಾದರಿಯಾಗಿವೆ ಎಂದರು.
ನೇಕಾರರಿಗೆ 2008-13ರ ಅವಧಿಯಲ್ಲಿ 145 ಕೋಟಿ ರೂ. , 2013-18ರ ಅವಧಿಯಲ್ಲಿ 691 ಕೋಟಿ ರೂ. ಸಬ್ಸಿಡಿ ನೀಡಲಾಗಿತ್ತು. ಈ ಅವಧಿಯಲ್ಲಿ 824 ಕೋಟಿ ರೂ. ನೆರವು ನೀಡಲಾಗಿದೆ ಎಂದು ವಿವರಿಸಿದರು.ಜವಳಿ ಕ್ಷೇತ್ರದ ಉದ್ದಿಮೆದಾರರು, ನೇಕಾರರು ಹಾಗೂ ನೇಕಾರರ ಸಾಂದ್ರತೆ ಹೆಚ್ಚಾಗಿರುವ ಪ್ರದೇಶಗಳ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಮಾಡಿ 2025-30ರ ಅವಧಿಗೆ ನೂತನ ಜವಳಿ ನೀತಿ ಕರಡು ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.
#Increase #NekaraSamman #Yojana #assistance #amount #under #review #ShivanandPatil #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಕೇಂದ್ರ ಸರ್ಕಾರ ವಿಬಿರಾಮ್ಜಿ ಯೋಜನೆ ಹಿಂಪಡೆಯುವವರೆಗೂ ಹೋರಾಟ: ಡಿ ಕೆ ಶಿವಕುಮಾರ್
ಬೆಂಗಳೂರು: ಕೇಂದ್ರ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟರೂ ಜನರ ಮನಸ್ಸಿನಲ್ಲಿರುವ ಅವರ ಹೆಸರು ಅಳಿಸಲಾಗದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಆಯೋಜಿಸಿದ್ದ ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರಿಡಲಾಗುವುದು. ಗ್ರಾಮ ಪಂಚಾಯಿತಿ ಕಚೇರಿಗೆ ಮಹಾತ್ಮ ಗಾಂಧಿ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ಹಾಗೂ ಪಕ್ಷದ ಇತರೆ ಪದಾಧಿಕಾರಿಗಳು ಈ ವಿಚಾರವಾಗಿ ನಮಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ, ಪಂಚಾಯ್ತಿ ಇರಬೇಕು ಎಂಬುದು ಗಾಂಧೀಜಿ ಅವರ ಸಂಕಲ್ಪ ಎಂದರು.
ಬಡ ಜನರ ಉದ್ಯೋಗದ ಹಕ್ಕಿನ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡಿದ್ದು, ಸೋನಿಯಾ ಗಾಂಧಿ ಅವರ ನೇತೃತ್ವದ ಮನಮೋಹನ್ ಸಿಂಗ್ ಅವರ ಸರ್ಕಾರ. ನಮ್ಮ ಉದ್ಯೋಗ ಖಾತರಿ ಯೋಜನೆಯನ್ನು ವಿಶ್ವವೇ ಗಮನಿಸಿತ್ತು. ಈ ಯೋಜನೆ ಬಹಳ ಅತ್ಯುತ್ತಮ ಯೋಜನೆ ಎಂದು ವಿಶ್ವಬ್ಯಾಂಕ್ 2013ರಲ್ಲಿ ಶ್ಲಾಘಿಸಿತ್ತು. 5700 ಪಂಚಾಯ್ತಿಗಳಿದ್ದು, ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ ಈ ಯೋಜನೆಯಿಂದ 6 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿತ್ತು ಎಂದರು.
ಯಾವ ಕಾಮಗಾರಿ, ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಾಯ್ತಿಗಳು ತೀರ್ಮಾನ ಮಾಡುತ್ತಿದ್ದವು. ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗಲು ಹಿಂಜರಿಯುವವರಿಗೆ ತಮ್ಮ ಜಮೀನಿನಲ್ಲೇ ಕೆಲಸ ಮಾಡಿ ಕೂಲಿ ಪಡೆಯುವ ಅವಕಾಶವನ್ನು ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಕೇಂದ್ರ ಸಚಿವ ಸಿ.ಪಿ. ಜೋಷಿ ಅವರು ಈ ಯೋಜನೆ ರೂಪಿಸಿದ್ದರು. ಇಂತಹ ಐತಿಹಾಸಿಕ ತೀರ್ಮಾನವನ್ನು ಯುಪಿಎ ಸರ್ಕಾರ ತೆಗೆದುಕೊಂಡಿತ್ತು ಎಂದರು.
ಆಶ್ರಯ ಮನೆ, ಇಂದಿರಾ ಆವಾಸ್ ಮನೆ ನಿರ್ಮಾಣ, ದನಗಳ ಕೊಟ್ಟಿಗೆ, ವ್ಯವಸಾಯ ಸಂಬಂಧಿ ಕೆಲಸ ಮಾಡಲು ಕೂಲಿ ನೀಡಲಾಗುತ್ತಿತ್ತು” ಎಂದು ವಿವರಿಸಿದರು.ಈ ಯೋಜನೆ ಆಂದೋಲನವಾಗಿ ನಡೆಯುತ್ತಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ. 90 ರಷ್ಟು ಅನುದಾನ ನೀಡುತ್ತಿತ್ತು. ಇದರಲ್ಲಿ ಕಬ್ಬಿಣ, ಸಿಮೆಂಟ್ ನಂತಹ ಸಾಮಾಗ್ರಿಗಳ ಬಳಕೆಯ ಕಾಮಗಾರಿಗಳಿದ್ದರೆ, ಅವುಗಳಿಗೆ ರಾಜ್ಯ ಸರ್ಕಾರ ಶೇಕಡಾ 25 ರಷ್ಟು ಅನುದಾನ ನೀಡಬೇಕಾಗಿತ್ತು. ಇದರಲ್ಲಿ 7 ಸಾವಿರ ಜನ ಇದರ ಉಸ್ತುವಾರಿ ಜವಾಬ್ದಾರಿಯ ಉದ್ಯೋಗ ಸೃಷ್ಟಿಯಾಗಿದ್ದವು ಎಂದರು.
ಈ ಯೋಜನೆಗೆ ಇಟ್ಟಿದ್ದ ಮಹಾತ್ಮ ಗಾಂಧಿ ಅವರ ಹೆಸರನ್ನು ಬದಲಿಸಿ ಈ ಕಾಯ್ದೆಗೆ ಹೊಸ ರೂಪ ನೀಡಿದ್ದಾರೆ. ನೂತನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಶೇ.60 ರಾಜ್ಯ ಸರ್ಕಾರ ಶೇ.40 ಅನುದಾನ ಭರಿಸಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ನಡೆಸುತ್ತಿದ್ದೇವೆ. 2 ದಿನಗಳ ಕಾಲ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಬಿಜೆಪಿ ನಾಯಕರು ಏನು ಮಾತನಾಡುತ್ತಾರೆ ನೋಡೋಣ ಎಂದರು.
ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಬಿಜೆಪಿಯವರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕನ್ನು ಕಳೆದುಕೊಂಡಿದ್ದೀರಿ. ಇನ್ನುಮುಂದೆ ನಿಮ್ಮ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆ ನಿಮಗಿಲ್ಲ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಲ್ಲದೇ, ಬಿಜೆಪಿ ಹಾಗೂ ಎನ್ ಡಿಎ ಸರ್ಕಾರ ಈಗ ಮತ್ತೆ ಅವರನ್ನು ಹತ್ಯೆ ಮಾಡುತ್ತಿದ್ದೀರಿ. ಅವರ ಹೆಸರನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದರು.
ಹಳ್ಳಿಗಳ ಉದ್ಧಾರಕ್ಕೆ ನೀಡಿದ ಯೋಜನೆ ನರೇಗಾ. ಬಿಜೆಪಿಯಿಂದ ದೇಶಕ್ಕೆ ಹರಡುತ್ತಿದೆ ನಿರುದ್ಯೋಗದ ರೋಗ. ಬಿಜೆಪಿ ಗಾಂಧಿ ದ್ವೇಷಕ್ಕೆ ಧಿಕ್ಕಾರ. ನರೇಗಾ ರದ್ದಾಗಲು ಎಂದಿಗೂ ಬಿಡುವುದಿಲ್ಲ. ಬೇಡ ನಮಗೆ ವಿಬಿ ಗ್ರಾಮ್ ಜೀ. ಬೇಕೆ ಬೇಕು ನಮಗೆ ಗಾಂಧಿ. ಇವತ್ತು ಪೊಲೀಸರು ನಮ್ಮನ್ನು ಬಂಧಿಸಿದರೂ ನಾವು ಹಿಂಜರಿಯುವುದಿಲ್ಲ, ಸರ್ಕಾರ ಇದ್ದರೂ ನಾವು ಜೈಲಿಗೆ ಹೋದರೂ ಸರಿ, ನರೇಗಾ ಯೋಜನೆ ಮರುಜಾರಿಗೆ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕರಾಳ ಕಾಯ್ದೆಯನ್ನು ಹಿಂಪಡೆದಂತೆ ಇದನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದರು.
ನನ್ನ ಕ್ಷೇತ್ರ ಕನಕಪುರದಲ್ಲಿ ವರ್ಷಕ್ಕೆ 200 ಕೋಟಿ ರೂ. ಅನುದಾನ ಬಳಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆಮೂಲಕ ಈ ಯೋಜನೆ ಪರಿಣಾಮಕಾರಿ ಜಾರಿಗೊಳಿಸಿದ ತಾಲ್ಲೂಕಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಯೋಜನೆಯಲ್ಲಿ ಡಿ.ಕೆ. ಶಿವಕುಮಾರ್ ಹಣ ಹೊಡೆದಿದ್ದಾನೆ ಎಂಬ ಅನುಮಾನದ ಮೇಲೆ ಕೇಂದ್ರ ಸರ್ಕಾರ ತನಿಖೆ ಮಾಡಿಸಿತು. ನಂತರ ಅವರೇ ನಮ್ಮ ಕೆಲಸ ನೋಡಿ ಪ್ರಶಸ್ತಿ ನೀಡಿದರು ಎಂದರು.
ಕುಮಾರಸ್ವಾಮಿ, ಬಿಜೆಪಿ ನಾಯಕರು ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಈ ಯೋಜನೆ ಜಾರಿಯಾಗಿ 20 ವರ್ಷಗಳಿವೆ. ಕಳೆದ 11 ವರ್ಷಗಳಿಂದ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಈ ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ನೀವು ಏನು ಮಾಡುತ್ತಿದ್ದಿರಿ? ನಮ್ಮ ಪಂಚಾಯ್ತಿಗಳಲ್ಲಿ ಅಕ್ರಮ ನಡೆದ ಪ್ರಕರಣಗಳಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಯಾರೋ ಕೆಲವರು ತಪ್ಪು ಮಾಡಿದರೆ ಇಡೀ ಯೋಜನೆಯನ್ನೇ ಬದಲಿಸುವುದೇ? ಆಮೂಲಕ ಮೂಗು ಕತ್ತರಿಸಿಕೊಳ್ಳುವ ಕೆಲಸ ಮಾಡುವುದು ಸರಿಯೇ? ಎಂದರು.
ಕೇಂದ್ರ ಬಿಜೆಪಿ ಸರ್ಕಾರ ನರೇಗಾ ಯೋಜನೆ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ನೂತನ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಎನ್ ಡಿಎ ಮೈತ್ರಿ ನಾಯಕ ಚಂದ್ರಬಾಬು ನಾಯ್ಡು ಅವರೇ ಈ ಯೋಜನೆಗೆ ಅಪಸ್ವರ ಎತ್ತಿದ್ದು, ಇದನ್ನು ಜಾರಿ ಸಾಧ್ಯವಿಲ್ಲ ಎಂದಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ನೂತನ ಕಾಯ್ದೆ ಹಿಂಪಡೆಯದಿದ್ದರೆ ಸರ್ಕಾರಕ್ಕೆ ಆಪತ್ತು ಎದುರಾಗಲಿದೆ. ಚಂದ್ರಬಾಬು ನಾಯ್ಡು ಅವರು ಎಚ್ಚರಿಕೆ ಗಂಟೆ ರವಾನಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ರೈತರ, ಕಾರ್ಮಿಕರ ಹಕ್ಕು, ಪಂಚಾಯ್ತಿ ಅಧಿಕಾರ ಕಸಿಯುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯ್ತಿಯಲ್ಲಿ ನರೇಗಾ ಕಾರ್ಮಿಕರನ್ನು ಒಳಗೊಂಡು ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಬೇಕಿದೆ ಎಂದರು.
#Fight #continue #until #central #govt #withdraws #VBGRamG #scheme #DKShivakumar #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಭೀಕರ ಅಪಘಾತದಲ್ಲಿ ಮೂವರು ಸಾಫ್ಟ್ವೇರ್ ಇಂಜಿನಿಯರ್ ಗಳು ಸಾವು
ತುಮಕೂರು: ವೇಗವಾಗಿ ಬಂದ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾಫ್ಟ್ವೇರ್ ಇಂಜಿನಿಯರ್ ಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಹಾಳ್ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಅನಿಕೇತ್ (42), ಅಭೀರ್ (44) ಹಾಗೂ ಆಂಧ್ರ ಪ್ರದೇಶ ಮೂಲದ ಸನ್ಮೋಕ್ತಿ (35) ಮೃತ ಸಾಫ್ಟ್ವೇರ್ ಎಂಜಿನಿಯರ್ ಗಳಾಗಿದ್ದಾರೆ, ಅಪಘಾತದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೃತರೆಲ್ಲರೂ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದರು. ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗೋಕರ್ಣ, ಮುರುಡೇಶ್ವರ, ಉಡುಪಿ ಕಡೆಗೆ ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ.
ಮಾರುತಿ ಎರಿಟಿಗಾ ಕಾರಿನಲ್ಲಿದ್ದ 6 ಪ್ರಯಾಣಿಕರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ ಎಂದು ತುಮಕೂರು ಎಸ್ಪಿ ಅಶೋಕ್ ಕೆವಿ ಮಾಹಿತಿ ನೀಡಿದರು.
ಏರಿ ಇದ್ದರಿಂದ ಲಾರಿ ನಿಧಾನವಾಗಿ ಚಲಿಸುತ್ತಿತ್ತು. ಆಗ ಹಿಂದಿನಿಂದ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದಿದೆ. ಚಾಲಕ ಮಲಗಿದ್ದರಾ ಅಥವಾ ಅಜಾಗರೂಕತೆಯಿಂದ ಅಪಘಾತವಾಗಿದೆಯಾ ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಮೃತರು ಎಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದರು.
ಲಾರಿ ಕೆಳಗೆ ಕಾರು ಸಿಕ್ಕಿಕೊಂಡಿತ್ತು. ಬಳಿಕ ಕ್ರೇನ್ ಮೂಲಕ ಕಾರು ತೆರವುಗೊಳಿಸಿ, ಕಾರಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರು ಮತ್ತು ಲಾರಿ ತೆರವುಗೊಳಿಸಿದ ಪೊಲೀಸರು, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
#software #engineers #die #horrific #accident #malgudiexpress #malgudinews #news #TopNews













